• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ತೀವ್ರ ವಿಷಾದ, ಕೆನ್ನೆಯ ಮೇಲೆ ಕಂಬನಿ…!

ಚಿತ್ರ ಆರಂಭಗೊಳ್ಳುವುದೇ ಅಂತ್ಯದಿಂದ. ನಂತರ ಪಾತ್ರಗಳ ವಿವರದ  ಸುರುಳಿ  ಬಿಚ್ಚಿಕೊಳ್ಳುತ್ತಾ   ಭೂತ-ವರ್ತಮಾನಗಳ ನಡುವೆ  ಚಲಿಸುತ್ತದೆ. ಪ್ರಕ್ರಿಯೆಗಳನ್ನೆಲ್ಲ   ಪ್ರತ್ಯಕ್ಷದರ್ಶಿಯಾಗಿ ನೋಡಿದ ಗಾಢ ಅನುಭವ ಆಗುತ್ತದೆ. ಇದು ಮನವನ್ನು ಕಲಕಿ….ವಿಷಾದದ ಭಾವ ಉಳಿಸುತ್ತದೆ. ಹೊಸತನದ ನಿರೂಪಣೆಯ ಸಿನಿಮಾ ತಮಿಳಿನಎಂಗೆಯುಂ..ಎಂಪ್ಪೋದಮ್..ಅಂದರೆ ಎಲ್ಲಿಯೂ..ಯಾವಾಗಲೂ
ಪಾತ್ರಗಳಾದ ಮಣಿ ಮೇಘಮಾಲೆ (ಅಂಜಲಿ) ಮತ್ತು ಕದಿರೇಶ (ಜೈ)
 ತಾನು ಪ್ರೀತಿಸಿದವನ ಪಡೆಯಲು ತಿರುಚ್ಚಿಯಿಂದ ಚೆನ್ನೈಗೆ ಬಸ್ಸಿನಲಿ ಸಾಗುವ ಯುವತಿ ಅಮುದ, ಇದೇ ಭಾವದಿಂದ ಚೆನ್ನೈಯಿಂದ ತಿರುಚ್ಚಿಗೆ ಸಾಗುವ ಯುವಕ ಗೌತಮ್. ಈತ ಕುಳಿತ ಬಸ್ಸನ್ನೇ ಮತ್ತೊಂದು ಜೋಡಿ ಏರುತ್ತದೆ. ತಾನು ತೀವ್ರವಾಗಿ ಪ್ರೀತಿಸಿದ ಮಣಿ ಮೇಘಮಾಲೆಯನ್ನು ತನ್ನ ಕುಟುಂಬದವರಿಗೆ ಪರಿಚಯಿಸುವುದಕ್ಕಾಗಿ ಕರೆದುಕೊಂಡು ಹೋಗುತ್ತಿರುವ ಕದಿರೇಶ. ದುಬೈನಲ್ಲಿದ್ದು ಐದು ವರ್ಷದಿಂದ ನೋಡಿರದ ಪುಟ್ಟ ಮಗಳನ್ನು ಕಾಣುವ ತವಕದಿಂದ ಊರಿಗೆ ಮರಳುತ್ತಿರುವ ವ್ಯಕ್ತಿ. ತವರಿಗೆ ತೆರಳುತ್ತಿರುವ ಪತ್ನಿಯನ್ನು ಅಗಲಿರಲಾರದೇ ತಾನೂ ಒಂದಷ್ಟು ದೂರ ಜೊತೆಗೆ ಬರುತ್ತೇನೆಂದು ಸಾಗುವ ಪತಿ. ಬಸ್ಸಿನಲಿ ಪಯಣಿಸುತ್ತಿರುವಾಗಲೇ ಪರಸ್ಪರ ಪ್ರೇಮದ ಸೆಳೆತಕ್ಕೆ ಸಿಲುಕುವ ಜೋಡಿ. ಹೀಗೆ ವಿವಿಧ ಪಾತ್ರಗಳ ವಿವರಗಳನ್ನು ಹೊತ್ತ ಬಸ್ಸುಗಳು ಗಮ್ಯದೆಡೆಗೆ ವೇಗದಿಂದ ಚಲಿಸುತ್ತವೆ.
ಪಾತ್ರಗಳಾದ ಅಮುದ (ಅನನ್ಯ) ಮತ್ತು ಗೌತಮ್ (ಶರವಣಾನಂದ)
  ಇಡೀ ಸಿನಿಮಾ ಪೋಕಸ್ ಆಗಿರುವುದು ಅಮುದ-ಗೌತಮ್, ಮಣಿ ಮೇಘಮಾಲೆ-ಕದಿರೇಶ ಪಾತ್ರಗಳ ಮೇಲೆ. ಆದರೆ ಉಳಿದ ಪಾತ್ರಗಳು ಪೋಷಣೆಯಿಲ್ಲದೇ ಸೊರಗಿವೆ ಎಂದು ಅನಿಸುವುದೇ ಇಲ್ಲ. ಕೆಲವೇ ಸಂಭಾಷಣೆಗಳ ಮೂಲಕ ಪಾತ್ರಗಳ ವಿವರಗಳನ್ನು ಸದೃಢವಾಗಿ ಕಟ್ಟಿಕೊಡಲಾಗಿದೆ. ಎರಡು ಜೋಡಿಗಳ ನಡುವೆ ಪ್ರೇಮ ಮೊಳಕೆಯೊಡೆಯುವ ಮತ್ತು ಗಟ್ಟಿಯಾಗುವ ಪರಿ ಅತ್ಯಂತ ಸಹಜವಾಗಿ ಮೂಡಿದೆ.
 ಉದ್ಯೋಗದ ಸಂದರ್ಶನ ಮತ್ತು ಅಕ್ಕನ ಮನೆಗೆ ತೆರಳುವ ಉದ್ದೇಶದಿಂದ ಅಪರಿಚಿತ ಚೆನ್ನೈಗೆ ಬಂದಿಳಿಯುವ ಅಮುದ ಇದಕ್ಕಾಗಿ ಎಂದೂ ನೋಡಿರದ ಯುವಕನ ನೆರವು ಕೇಳಬೇಕಾಗುತ್ತದೆ. ಇದರಿಂದ ಇಬ್ಬರು ಮುಂಜಾನೆಯಿಂದ ಸಂಜೆವರೆಗೂ ಒಟ್ಟಿಗೆ ಸಾಗಬೇಕಾಗುತ್ತದೆ. ಅವಧಿಯಲ್ಲಿ ಇಬ್ಬರಿಗೂ ಪರಸ್ಪರರ ವ್ಯಕ್ತಿತ್ವಗಳು ಅನಾವರಣಗೊಳ್ಳುತ್ತಾ ಸಾಗುತ್ತದೆ. ಅಕ್ಕನ ಮನೆ ತಲುಪುವುದರೊಳಗೆ ಅಮುದಾಳಿಗೆ ಗೌತಮ್ ಮೇಲೆ ಪ್ರೇಮ ಅಂಕುರವಾಗುತ್ತದೆ. ಆದರೆ ಇದ್ಯಾವುದರ ಸೂಚನೆಯೂ ಇಲ್ಲದ ಗೌತಮ್ ನಿರ್ಭಾವುಕವಾಗಿ ತೆರಳುತ್ತಾನೆ. ಆದರೆ ಅಮುದ ದಿನದಿಂದ ದಿನಕ್ಕೆ ಭಾವುಕಳಾಗತೊಡಗುತ್ತಾಳೆ. ಬಂದ ಸಂಬಂಧಗಳ್ಯಾವುದು ಹಿಡಿಸುವುದಿಲ್ಲ. ಇದರ ಕಾರಣ ಅರಿತ ಆಕೆಯ ಅಕ್ಕಒಂದು ದಿನದಲ್ಲಿಯೇ ಆತನ ಮೇಲೆ ಪ್ರೇಮಾಂಕುರವಾಗಿ ಬಿಟ್ಟಿತ್ತೆಎಂದಾಗ ಅಮುದ ನೀಡುವ ಉತ್ತರ ಬಲು ಮಾರ್ಮಿಕ. ‘ ಅಕ್ಕ ನಿನ್ನನ್ನು ಭಾವ ನೋಡಲು ಬಂದು ಚಹಾ ಕುಡಿದು ಮುಗಿಸುವುದರೊಳಗೆ ಒಪ್ಪಿಗೆಯೆಂದರು. ಚಹಾ ಕೊಟ್ಟು ಒಳಬಂದ ನೀನೂ ಕೂಡ ನನಗೆ ಸಮ್ಮತ ಎಂದೆ. ಒಂದು ಚಹಾ ಕುಡಿಯುವುದರೊಳಗೆ ಅಪರಿಚಿತರಾದ ನೀವಿಬ್ಬರೂ ಒಟ್ಟಿಗೆ ಬಾಳಲು ನಿಶ್ಚಯಿಸಿಬಿಟ್ಟಿರಿ. ಆದರೆ ನಾನು ಆತನೊಂದಿಗೆ ಇಡೀ ದಿನದ ಸಮಯ ಕಳೆದಿದ್ದೆ. ಆತನ ವ್ಯಕ್ತಿತ್ವ ಅರಿಯಲು ಅಷ್ಟು ಸಮಯ ಸಾಕು’
  ಕದೀರೇಶ ಮತ್ತು ಮಣಿ ಮೇಘಮಾಲೆಯ ಪ್ರೇಮಾಂಕುರ ಮತ್ತೂ ವಿಭಿನ್ನ. ಸತತ ಆರು ತಿಂಗಳು ಆಕೆಯನ್ನು ಕದಿರೇಶ ಗಮನಿಸುತ್ತಲೇ ಇರುತ್ತಾನೆ. ಪ್ರೇಮ ವ್ಯಕ್ತಪಡಿಸಲು ಮಾತ್ರ ಹಿಂಜರಿಕೆ. ಆದರೆ ಮಣಿ ಮೇಘಮಾಲೆ ದಿಟ್ಟ ಹೆಣ್ಣು ಮಗಳು. ಈತನ ನಡೆನುಡಿ…ಭಾವ ಗಮನಿಸಿ ತಾನಾಗಿ ಮುಂದೆ ಬಂದು ಮಾತನಾಡಿಸಿ ಆತನ ಮನದಿಂಗಿತ ಅರಿಯುತ್ತಾಳೆ. ಅಲ್ಲಿಂದ ಮುಂದೆ ಇವರಿಬ್ಬರ ನಡುವೆ ನಡೆಯುವ ಮಾತು-ಕಥೆ…ಕನಸುಗಳು ತುಂಬ ಸ್ವಾರಸ್ಯಕರ.

ಕಾಲೇಜು ಜೋಡಿ ನಡುವೆ ಬಸ್ಸಿನಲ್ಲಿಯೇ ಒಂದೆರಡು ಗಂಟೆಗಳಲ್ಲಿಯೇ ಪ್ರೇಮಾಂಕುರವಾಗುತ್ತದೆ. ಇದನ್ನು ಚಿತ್ರಿಸಿದ ರೀತಿ ತುಂಬ ಆಸಕ್ತಿಕರ. ಇವರಿಬ್ಬರ ಪರಸ್ಪರ ಪರಿಚಯ ಮುಂದೆ ಬಳಕೆಯಾಗುವ ರೀತಿ ಮನ ಕರಗಿಸುತ್ತದೆ. ನವ ದಂಪತಿಯ ಪರಸ್ಪರ ಸೆಳೆತ ಚಿತ್ರಿಸಿರುವ ರೀತಿ ಕೂಡ ಮನೋಜ್ಞ.

ಕನಸುಗಳನ್ನೇ ಕನವರಿಸುತ್ತಿರುವ ಜೀವಗಳನ್ನು ಹೊತ್ತು ಸಾಗುವ ಎರಡೂ ಬಸ್ಸುಗಳು ಸಂಧಿಸುವ ರೀತಿ ಎದೆ ನಡುಗಿಸುತ್ತದೆ. ಇದು ಯಾವೆಲ್ಲ ಪರಿಣಾಮಗಳನ್ನು ಬೀರುತ್ತದೆ ಎನ್ನುವುದನ್ನು ಚಿತ್ರ ನೋಡಿ ತಿಳಿದರೆ ಸೂಕ್ತವೆನ್ನಿಸುತ್ತದೆ. ಎಲ್ಲಿಯೂ ಅತಿ ಎನಿಸದ ಅಥವಾ ಕಡಿಮೆಯೂ ಎನಿಸದ ಸಂಭಾಷಣೆ…ನಟರ ಭಾವಾಭಿವ್ಯಕ್ತಿ…ಹಾಡುಗಳು…ಛಾಯಾಗ್ರಹಣ..ಸಂಕಲನ ಎಲ್ಲವೂ ಪೂರಕವಾಗಿವೆ. ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಜವಾಬ್ದಾರಿಯನ್ನು ಎಂ.ಶರವಣ ಬಹಳ ಶಕ್ತವಾಗಿ ನಿರ್ವಹಿಸಿದ್ದಾರೆ. 

ಜೈ, ಶರವಣಾನಂದ, ಅಂಜಲಿ ಮತ್ತು ಅನನ್ಯ ಪಾತ್ರಗಳ ಒಳಗೆ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದಾರೆ. ಈ ಸಿನಿಮಾ ನೋಡಿ ತಿಂಗಳು (ಸೆಪ್ಟೆಂಬರ್ 16, 2011 ಬಿಡುಗಡೆ) ಕಳೆಯಿತು. ಆದರೆ ಆ ಚಿತ್ರ ಮೂಡಿಸಿದ ವಿಷಾದ ಕಳೆಯಲು ಇನ್ನೂ ಸಾಧ್ಯವಾಗಿಲ್ಲ. ಈ ಬರಹ ಬರೆದ ಮೇಲಾದರೂ ಮನದ ಭಾರ ಕಡಿಮೆಯಾಗಬಹುದೇ…ಎನ್ನುವ ನಿರೀಕ್ಷೆಯೊಂದಿಗೆ….

6 comments:

 1. ಸರ್...

  ತುಂಬಾ ಚಂದದ ವಿಮರ್ಶೆ.. ನೋಡಲೇ ಬೇಕಾಯ್ತು...
  ನೋಡಿ ಮತ್ತೊಮ್ಮೆ ಬರುತ್ತೇನೆ..

  ಒಂದು ಒಳ್ಳೆಯ ಚಿತ್ರದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು...

  ReplyDelete
 2. Looks like a good movie, need to watch it and express my views.

  ReplyDelete
 3. seems good movie with good script and work . after reading your review i cannot resist myself by watching that movie. but the tragic point is that i cannot understand that language. hope i will get dvd with subtitles.

  Nachiketha kashyapa

  ReplyDelete
 4. ಅವಿನಾಶ ಕನ್ನಮ್ಮನವರMonday, 31 October, 2011

  ಬಹಳೇ ಚೆಂದದ ನಿರೂಪಣೆ, ಇರುವ ಕಥೆಗಳನ್ನೇ ಎಷ್ಟು ಸು೦ದರವಾಗಿ ಕಟ್ಟಿಕೊಡಬಹುದು ಅ೦ತ ನಮ್ಮ ಕನ್ನಡದ ನಿರ್ದೇಶಕರು ತಮಿಳಿನ ಚಿತ್ರಗಳನ್ನ ನೋಡಿಯಾದರೂ ಕಲಿತುಕೊಳ್ಳಬೇಕು, ಸಿರಿಯೇಸ್ ಆಗಿ ಹೇಳ್ತಿದೀನಿ ಕಲಿಯಬೇಕು ರಿಮೇಕ್ ಅಲ್ಲ!!

  ReplyDelete
 5. illi tamilu sinema baruvude aprupa, c.d. huduk beeku

  ReplyDelete
 6. it was nice movie

  ReplyDelete