• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಸಂತಸ…ಸಂಕಟ…ಸಂತಾಪ ಆಗುತ್ತೆ ಪರಮಾತ್ಮ….!

ಯೋಗರಾಜ ಭಟ್ಟರೆ ನಿಮ್ಮಗೊಂದು ಬಹಿರಂಗ ಪತ್ರ……..‘ಪರಮಾತ್ಮ ಚಿತ್ರದ ಬಗ್ಗೆ ನನ್ನ ಅನೇಕ ಸ್ನೇಹಿತರು ನನ್ನೊಂದಿಗೆ ಮಾತನಾಡುತ್ತಿದ್ದರು. ಪ್ರತಿಯೊಬ್ಬರು ಹೇಳುತ್ತಿದ್ದ ಮಾತುಚಿತ್ರ, ನಿರೀಕ್ಷೆಯನ್ನು ಹುಸಿಯಾಗಿಸಿದೆಇದು ನನ್ನ ಅಭಿಪ್ರಾಯ ಕೂಡ. ಸಿನಿಮಾ ತೆರೆಕಂಡ 12 ದಿನಗಳ ಬಳಿಕ ಪತ್ರ ಬರೆಯಲು ನನ್ನೊಳಗಿನ ಒತ್ತಡವೇ ಕಾರಣ. ಮಣಿ, ಮುಂಗಾರು ಮಳೆ ಮತ್ತು ಪಂಚರಂಗಿ ಯಿಂದ ಸಹಜವಾಗಿಯೆ ನಿಮ್ಮ ಚಿತ್ರಗಳೆಂದರೆ ನಮಗೆ ಹೆಚ್ಚು ನಿರೀಕ್ಷೆ-ಕುತೂಹಲ. ಪ್ರತಿಭಾನ್ವಿತ ನಟ ಪುನೀತ್ ಅವರು ನಟಿಸುವ ಚಿತ್ರವನ್ನು ನೀವು ನಿರ್ದೇಶಿಸುತ್ತೀರಿ ಎನ್ನುವುದು ಇವೆಲ್ಲವನ್ನೂ ಹೆಚ್ಚು ಮಾಡಿತ್ತು. ಬಹು ಕಲಾತ್ಮಕವಾಗಬಹುದಾಗಿದ್ದ ಚಿತ್ರವೊಂದು ನಿರೀಕ್ಷೆಯ ಮಟ್ಟ ಮುಟ್ಟದಿರಲು ನೀವೇ ಸಂಪೂರ್ಣ ಕಾರಣಕರ್ತರು. ಇದು ಹೇಗೆ….ಎನ್ನುತ್ತೀರಾ….ಮುಂದೆ ಓದಿಭಟ್ಟರೆ
ರೂಪಕ-ಪ್ರತಿಮೆಗಳನ್ನು ದುಡಿಸಿಕೊಳ್ಳಲು ನೀವು ಸಾಕಷ್ಟು ಪ್ರಯತ್ನಪಟ್ಟಿದ್ದೀರಿ ಎನ್ನುವುದು ಚಿತ್ರದುದ್ದಕ್ಕೂ ಕಾಣುತ್ತದೆ. ಇದರ ಮೊದಲ ನಿದರ್ಶನ. ನಾಯಕ ಪರಮಾತ್ಮ ಹಿಮಾಲಯ ಪರ್ವತವನ್ನೇರುವುದು. ಮೂಲಕ ಆತ ಹಿಮಾಲಯದೆತ್ತರದ ವ್ಯಕ್ತಿತ್ವವುಳ್ಳವನು ಎಂದು ಹೇಳಿದಿರಿ. ಕುಂಗ್ ಪು ಸಮರ ಕಲೆಯೂ ಹೌದು ಮತ್ತು ದೇಹ ಮನಸಿನ ನಡುವೆ ಅದ್ಬುತ ಹೊಂದಾಣಿಕೆ ಏರ್ಪಡಿಸುವ; ತನ್ಮೂಲಕ ಏಕಾಗ್ರತೆ ನೀಡುವ ಕಲೆಯೂ ಹೌದು. ಇದರಲ್ಲಿ ಪರಿಣಿತಿ ಪಡೆದ ಕಥಾನಾಯಕ ಎಲ್ಲವನ್ನು ಸಿದ್ದಿಸಿಕೊಂಡಿದ್ದಾನೆ ಎಂದು ಪರೋಕ್ಷವಾಗಿ ತಿಳಿಸಿದಿರಿ. ಇವೆಲ್ಲದರ ಜೊತೆಗೆ ಆತ ಮಾರುಕಟ್ಟೆ ಪರಿಣಿತ ಎನ್ನುವುದನ್ನು ಹೇಳಿದಿರಿ. ಇಷ್ಟೆಲ್ಲ ಹೇಳಿದ ನೀವು ಆತ ಎಂ.ಎಸ್ ಸ್ಸಿಯಲ್ಲಿ ಆರು ವರ್ಷ ಢುಂಕಿ ಹೊಡೆದಿದ್ದು ಯಾಕೆ ಎನ್ನುವುದನ್ನು ಅರ್ಥ ಮಾಡಿಸುವುದಿಲ್ಲ. ಈ ಸಂದರ್ಭದ ಹಾಡು ಕೂಡ ಈ ನಿಟ್ಟಿನಲ್ಲಿ ವಿಫಲವಾಗಿದೆ. ದುಶ್ಚಟಗಳಿಲ್ಲದ, ಸಂಪೂರ್ಣ ಸಂಯಮದಿಂದ ವರ್ತಿಸುವ, ಯಾರನ್ನೂ ಕಿಚಾಯಿಸಿ-ಗೋಳು ಹುಯ್ದುಕೊಳ್ಳದ ನಾಯಕ ಏಕಾಗಿ ಸತತ ಫೇಲಾಗುತ್ತಾನೆ ಎಂದು ಬಿಂಬಿಸಲು ನೀವು ವಿಫಲರಾದಿರಿ. ಪರೀಕ್ಷೆಯಲ್ಲಿ ಫೇಲಾಗುವುದಕ್ಕೂ ಜೀವನದಲ್ಲಿ ಯಶಸ್ವಿಯಾಗುವುದಕ್ಕೂ ಸಂಬಂಧವಿಲ್ಲ ಎಂದು ಹೇಳಲು ನೀವು ಪ್ರಯತ್ನಿಸಿದ್ದೀರಿ ನಿಜ. ಆದರೆ 'ಪರಮಾತ್ಮ'ನ ವಿಷಯದಲ್ಲಿ ಈ ಎಣಿಕೆ ಹೊಂದಾಣಿಕೆಯಾಗುವುದಿಲ್ಲ.
ಪರಮಾತ್ಮನಿಗಾಗಿ ಜೀವ ಕೊಡಲು ಸಿದ್ದವಿರುವಷ್ಟು ಪ್ರೀತಿಸುತ್ತಾಳೆ ಎಂದು ನೀವು ತೋರಿಸಿದ ಸುಂದರಿ ಸಾನ್ವಿ ಅಲಿಯಾಸ್ ಪಸೀನಾ ಸಿನಿಮಾ ಥಿಯೇಟರ್ ನಲ್ಲಿ ನಾಯಕನನ್ನು ಎಬ್ಬಿಸಿ ಹೊರ ಕರೆದುಕೊಂಡು ಹೋಗಲಿಲ್ಲವೇಕೆ….ಬಾಂಬ್ ಎಂದರೆ ದಿಗಿಲಾಗುವ ಮಟ್ಟಿಗಿನ ಕೂಗಾಟ-ಕಿರುಚಾಟ ಇರುತ್ತದೆ. ಇಷ್ಟಾದರೂ ಪರಮಾತ್ಮನಿಗಾಗಲಿ-ನಾಯಕಿ ದೀಪಾ (ಪಾತ್ರದ ಹೆಸರು ಕೂಡ ಇದೆ)ಳಿಗಾಗಲಿ ಎಚ್ಚರವಾಗುವುದಿಲ್ಲವೇಕೆ….ಕುಂಗ್ ಪು ಕಲೆ ಕಲಿತಹೊರಗಿನ ಬಹು ಸೂಕ್ಷ್ಮ ಕದಲಿಕೆಗೂ ಥಟ್ಟನೆ ಎಚ್ಚರಗೊಳ್ಳಬೇಕಾದ ಪಟು ಅಷ್ಟು ಗದ್ದಲವಾದರೂ ಎಚ್ಚರವಾಗುವುದಿಲ್ಲವೇಕೆಇಂಥ ಸನ್ನಿವೇಶದಲ್ಲಿಯೆ ಸಿನಿಮಾ ಮಂದಿರದಲ್ಲಿ ನಾಯಕ-ನಾಯಕಿಯನ್ನು ಭೇಟಿ ಮಾಡಿಸುವ ಅನಿರ್ವಾಯತೆಗೆ ಸಿಲುಕಿದಿರೇಕೋ ಅರ್ಥವಾಗಲಿಲ್ಲ.

 ಯಾವುದೇ ಒಂದು ಕಟ್ಟಡದಲ್ಲಿ ಬಾಂಬ್ ಇಟ್ಟ ಸುದ್ದಿ ತಿಳಿದರೆ ಪೋಲಿಸರು ಫರ್ಲಾಂಗುಗಟ್ಟಲೆ ದೂರದಲ್ಲಿ ಜನರನ್ನು ನಿಲ್ಲಿಸುತ್ತಾರೆ. ಆದರೆ ಸಿನಿಮಾ ಮಂದಿರ ಆವರಣದಲ್ಲಿಯೆ ಮಾಧ್ಯಮದವರು ಮತ್ತು ಜನ ಜಂಗುಳಿಯನ್ನು ನಿಲ್ಲಿಸಿದ ನೀವು ಕಾಮನ್ ಸೆನ್ಸ್ ಕೂಡ ತೋರಿಸದೇ ಹೋಗಿದ್ದು ತುಂಬ ಅಸಹಜವಾಗಿ ಕಾಣುತ್ತದೆ. ಅಪತ್ಕಾಲದ ಸಂದರ್ಭದಲ್ಲಿ ಒಂದು ಹುಡುಗ ಮತ್ತು ಹುಡುಗಿಯೊಬ್ಬಳ ಪ್ರಾಣ ರಕ್ಷಿಸಲು ಹೊತ್ತುಕೊಂಡು ಹೊರಗೆ ಬಂದಾಕ್ಷಣ ಅವರಿಬ್ಬರಿಗೂ ಪ್ರೇಮಿಗಳ ಪಟ್ಟ ಕಟ್ಟುವಂಥ ಟಿವಿ ಮಾಧ್ಯಮಗಳನ್ನು ತೋರಿಸುವ ಮೂಲಕ ವಾಹಿನಿಗಳನ್ನು ಲೇವಡಿ ಮಾಡಿದ್ದೀರಿ. ಯಾವುದೇ ಪೂರಕ ಸನ್ನಿವೇಶ-ಹೇಳಿಕೆ ಇಲ್ಲದೇ ಇಂಥ ಅತುರದ ನಿರ್ಧಾರಕ್ಕೆ ಯಾವುದೇ ಟಿವಿ ವಾಹಿನಿ ಬರುವುದಿಲ್ಲವೆಂಬ ಪ್ರಾಥಮಿಕ ಅಂಶವೂ ನಿಮಗೆ ತಿಳಿಯದೇ ಹೋಗಿದ್ದು ಆಶ್ಚರ್ಯಕರ

 ದೀಪಾಳಲ್ಲಿ ಪರಮಾತ್ಮ ಅನುರಕ್ತನಾಗುವುದು ಕೂಡ ಸಹಜವಾಗಿ ಮೂಡಿ ಬಂದಿಲ್ಲ. ದೀಪಾ ಎಲ್ಲಿ ಹೋಗುತ್ತಾಳೆ ಎಂದು ತಿಳಿದು ಹಿಂಬಾಲಿಸಿದ ಪರಮಾತ್ಮ ಆಕೆ ತನ್ನ ಕಾರಿನಲ್ಲಿ ಕುಳಿತಾಗ ಇದಕ್ಕಿದಂತೆ ಚುಂಬಿಸುವುದು ಕೂಡ ಕೃತಕ ಎನಿಸುತ್ತದೆ. ಇಂಥ ಸನ್ನಿವೇಶ ಅವರಿಬ್ಬರೂ ತೆಪ್ಪದಲ್ಲಿ ಕುಳಿತಾಗಲೂ ಬರುತ್ತದೆ. ಇದನ್ನೆಲ್ಲ ನೋಡಿದಾಗ ನೀವು ತಮಿಳು ಚಿತ್ರ ‘ವಿನೈತ್ತಾಂಡಿ ವರುವಾಯ’ ಸಿನಿಮಾದಿಂದ ತುಂಬ ಪ್ರೇರಿತರಾಗಿದ್ದೀರಿ ಎನ್ನುವುದು ತಂತಾನೆ ತಿಳಿಯುತ್ತದೆ. ಆದರೆ ಅಲ್ಲಿಯ ಭಾವ ತೀವ್ರತೆ ಮತ್ತು ಪ್ರೇಮದ ಉತ್ಕಟ ಕ್ಷಣಗಳನ್ನು ನೀವು ಕಟ್ಟಿಕೊಡಲು ವಿಫಲರಾಗಿದ್ದೀರಿ. ಪರಸ್ಪರ ಪ್ರೀತಿಸಿದ ಮೇಲೂ ಪರಮಾತ್ಮನನ್ನು ನಿರಾಕರಿಸುವುದು ನೋಡಿದಾಗ ಆ ತಮಿಳು ಸಿನಿಮಾ ನಿಮ್ಮ ಮೇಲೆ ಮಾಡಿರುವ ಪ್ರಬಲ ಪ್ರಭಾವ ಅರಿವಾಗುತ್ತದೆ. ಆದರೆ ಅಲ್ಲಿಯ ಮಾಧುರ್ಯವನ್ನು ನೀವು ಮೂಡಿಸಿಲ್ಲ. ದೀಪಾ ಕಾರಣವಿಲ್ಲದೇ ನಗುವುದು, ಪರಮಾತ್ಮ ಆಕೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಗುರಿ ಮುಟ್ಟಲು ಓಡುವಾಗ ಆಕೆ ಆತನ ಬೆನ್ನು ಕಚ್ಚುವುದೆಲ್ಲ ತುಂಬ ಕೃತಕ ಎನ್ನಿಸುತ್ತದೆ. ದೀಪಾಳ ನಗು ಹಾಸ್ಯಸ್ಪದ ಎನಿಸುತ್ತದೆ. 
 ಜಾತಿ-ಮತ-ಪಂಥದ ಅರಿವಿಲ್ಲದೇ-ಆ ಕುರಿತು ಕಿಂಚಿತ್ತೂ ಮಾತನಾಡದೇ ಪರಮಾತ್ಮ ದೀಪಾಳನ್ನು ಪ್ರೀತಿಸಿರುತ್ತಾನೆ. ಆದರೆ ನೀವು  ದೀಪಾಳ ಅಪ್ಪಯ್ಯನಿಂದ ಈತ (ಪರಮಾತ್ಮ)ನದು ದಿವಿನಾದ ಜಾತಕ ಎಂದು ಹೇಳಿಸುವ ಮುಖಾಂತರ ಪರಮಾತ್ಮನ ಪವಿತ್ರ ಆತ್ಮಕ್ಕೆ ಅಪಚಾರ ಮಾಡಿದಿರಿ ಎನಿಸುತ್ತದೆ. ದೀಪಾಳನ್ನಷ್ಟೆ ಪ್ರೀತಿಸಿದ ಮತ್ತೊಂದು ಹುಡುಗಿಯನ್ನು ಕನಸಿನಲ್ಲಿಯೂ ಬಯಸದ ವ್ಯಕ್ತಿತ್ವದ ಪರಮಾತ್ಮನಿಂದ ‘ಇನ್ನೊಬ್ಬಳ ಪೋನ್ ನಂಬರ್ ಇಟ್ಕೊಂಡಿರಿ’ ಎಂದು ಹಾಡು ಹೇಳಿಸುವ ಮೂಲಕ ನೀವೇ ರೂಪಿಸಿದ ಪಾತ್ರಕ್ಕೆ ನೀವೇ ಅಪಚಾರ ಮಾಡುವುದು ಸರಿಯೆ ಭಟ್ಟರೆ..? ನಿರಾಕರಿಸಿದ ದೀಪಾ ಮತ್ತೆ ಬಂದು ಪರಮಾತ್ಮನನ್ನು ಮದುವೆಯಾಗುವುದಾಗಲಿ ನಂತರ ಮಗುವಾದ ನಂತರ ಸಾವನ್ನಪ್ಪುವ ದೃಶ್ಯಗಳು ವೀಕ್ಷಕರನ್ನು ಬಲವಾಗಿ ತಟ್ಟಬೇಕಿತ್ತು. ಆದರೆ ಅಂಥ ಭಾವುಕತೆ ತಂತಾನೆ ಮೂಡುವಂತೆ ಮಾಡಲು ನೀವು ವಿಫಲರಾಗಿದ್ದೀರಿ.
 
‘ಪರಮಾತ್ಮ’ ಚಿತ್ರ ಖಂಡಿತ ಕಳಪೆಯಲ್ಲ. ಅತ್ಯುತ್ತಮ ಚಿತ್ರವನ್ನು ಕಟ್ಟಿಕೊಡಲು ನೀವು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೀರಿ. ಇದು ತಿಳಿಯುತ್ತದೆ. ಚಿತ್ರದುದ್ದಕ್ಕೂ ನೀವು ಮೂಡಿಸಿರುವ ರೂಪಕಗಳು ಶಕ್ತಿಯುತವಾಗಿವೆ…ಪರಮಾತ್ಮ ಹಿಮಾಲಯವೇರುವುದು ಆತನ ಔನ್ನತ್ಯ ತೋರಿದರೆ…ತೆರೆದ ಬಿಳಿ ಕಾರನ್ನು ಆತ ಬಳಸುವಂತೆ ಮಾಡಿರುವುದು ಕೂಡ ಸೊಗಸಾಗಿದೆ. ಇದು ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗಿ…ಅದು ಕಾಮನಬಿಲ್ಲಾಗಿ ಮೂಡುವ ಬಗೆಯನ್ನು ತೋರಿಸುತ್ತದೆ. ಜನಪದ ಕಥೆಗಳಲ್ಲಿ ರಾಜಕುಮಾರ ಬಿಳಿ ಕುದುರೆಯನ್ನೇರಿ ರಾಜಕುಮಾರಿ ಅರಸಲು ಹೊರಟಂತೆ ಕಾಣುತ್ತದೆ. ಜನಪದ ಕಥೆಯೊಂದನ್ನು ಆಧುನಿಕ ರೂಪದಲ್ಲಿ ಕಟ್ಟಿಕೊಡಲು ಯತ್ನಿಸಿರುವ ನಿಮ್ಮ ಪ್ರಯತ್ನ ಶ್ಲಾಘನೀಯ.

ಅತಿ ಹಳೆಯ ವಾಸ್ತುಶಿಲ್ಪ ಹೊಂದಿದ ಮನೆಗಳ ಪರಿಕರಗಳನ್ನು ಅಣ್ಣಯ್ಯ ಮಾರುವುದು ಕೂಡ ಸಾಂಕೇತಿಕವಾಗಿದೆ. ಭಾರತೀಯ ಪರಂಪರೆಯ ಮೌಲ್ಯಗಳಿಗೆ ಬೆಲೆ ಕೊಡುವವರೆ ಕಡಿಮೆಯಾಗುತ್ತಿದ್ದಾರೆ ಎಂದು ವಿಷಾದಿಸಿದ್ದಾರೆ. ಆದರೆ ಇಂಥ ಮೌಲ್ಯಗಳ ಪ್ರತಿನಿಧಿಯಾದ ಅಪ್ಪಯ್ಯನ ಪಾತ್ರವನ್ನು ನೀವು ಗಟ್ಟಿಯಾಗಿ ಕಟ್ಟಿಕೊಟ್ಟಿಲ್ಲ. ಇಂಥ ಸಂಪ್ರದಾಯಿಕ ಮೌಲ್ಯಗಳ ಸಂಕೇತವಾದ ಕಂಭಗಳನ್ನು ಪರಮಾತ್ಮ ಖರೀದಿಸಿ ಮೌಲ್ಯದ ಮಹಲು ಕಟ್ಟುವುದು ಮತ್ತು ಅದು ಆತನ ಜೀವನದಲ್ಲಿ ದೀಪಾಳ ಮರು ಪ್ರವೇಶದ ನಂತರ ಪೂರ್ಣವಾಗುವುದು ನಿಮ್ಮ ಸೃಜನಾತ್ಮಕತೆ ತೋರುತ್ತದೆ. ಕ್ಲಾಸಿಕ್ ಕಲಾಕೃತಿಯಾಗಬಹುದಾಗಿದ್ದ ಚಿತ್ರ ಕೃತಿಯನ್ನು ನೀವು ಸಮರ್ಥವಾಗಿ ಬಳಸಿಕೊಂಡಿಲ್ಲವೆಂಬುದೇ ಸಂತಾಪದ ಸಂಗತಿ.
 ಚಿತ್ರದ ಕೊನೆಯಲ್ಲಿ ಸಾನ್ವಿ ಅಲಿಯಾಸ್ ಪಸೀನಾ ಬಿಳಿ ಕಾರನ್ನೇರಿ ಹೋಗುವುದು ಈ ಕಾರು ಚಲಿಸುತ್ತಿದ್ದಂತೆ ನೀರಿನ ಚಿಲುಮೆ ಸಕ್ರಿಯವಾಗುವುದು ಅದ್ಬುತ ಪ್ರತಿಮೆ….ಮತ್ತೊಂದು ಆಸೆಗಳೆಂಬ ಕಾಮನಬಿಲ್ಲು ಈತನಿಂದ ದೂರವಾದರೂ ಮಗುವಿನ ಮೂಲಕ ಬದುಕಿನಲ್ಲಿ ಆತ ಚೈತನ್ಯದ ಚಿಲುಮೆಯನ್ನು ಕಾಣುತ್ತಾನೆ ಎಂದು ನೀವು ಹೇಳಿರುವುದು ತುಂಬ ಅರ್ಥವತ್ತಾಗಿದೆ. ಇಂಥ ಶಕ್ತಿಯುತ ರೂಪಕಗಳು ಚಿತ್ರದುದ್ದಕ್ಕೂ ಇವೆ. ಆದರೆ ಒಟ್ಟಂದವಾಗಿ ಮೂಡಿಸಲು ನೀವು ಏಕಾಗಿ ಸೋತಿರೋ…ಅರ್ಥವಾಗುತ್ತಿಲ್ಲ….ನೀವೇ ಹೇಳಿಸಿದಂತೆ ‘ಗೊಂದಲದಲ್ಲಿಯೆ ಸುಖವಿದೆ’ ಎಂಬ ಮಾತನ್ನು ನಿಮಗೆ ಅನ್ವಯಿಸಿಕೊಂಡಿರೋ ಏನೋ…..
 ಚಿತ್ರ ಮುಗಿದ ನಂತರವೂ ಕಾಡುವ ಪಾತ್ರಗಳೆಂದರೆ ಪರಮಾತ್ಮ ಮತ್ತು ಪಸೀನಾ..ಇದು ಆ ಪಾತ್ರಗಳ ಶಕ್ತಿಯನ್ನು ತೋರಿಸುತ್ತದೆ….ಈ ಪಾತ್ರಗಳ ಮನೋಭಾವವನ್ನು ಪುನೀತ್ ಮತ್ತು ಐಂದ್ರಿತಾ ರೈ ತಮ್ಮೊಳಗೆ ಆವಾಹಿಸಿಕೊಂಡು ಅಭಿನಯಿಸಿದ್ದಾರೆ. ಭಟ್ಟರೆ ಒಂದು ಮಾತು ಹೇಳುತ್ತೇನೆ. ನೀವಿದನ್ನು ಮನವಿ ಎಂದಾದರೂ ಪರಿಗಣಿಸಿ..ಅಥವಾ ಸಲಹೆ ಎಂದಾದರೂ ತೆಗೆದುಕೊಳ್ಳಿ ‘ಚಿತ್ರದಲ್ಲಿ ಒಂದಿಷ್ಟು ಬದಲಾವಣೆಗಳನ್ನು ಈಗಲೇ ಮಾಡಿ. ಆದರೆ ಬದಲಾವಣೆಗೊಂಡ ಚಿತ್ರವನ್ನು ಇನ್ನು ಐದು ಅಥವಾ ಹತ್ತು ವರ್ಷದ ನಂತರ ಮರು ಲೋಕಾರ್ಪಣೆ ಮಾಡಿ…ಅದು ಅತ್ಯದ್ಬುತ ಯಶಸ್ಸು ಕಾಣುತ್ತದೆ ಎಂದು ನನ್ನ ನಂಬಿಕೆ…ಚಿತ್ರವನ್ನು ಗಟ್ಟಿಗೊಳಿಸಲು ನಿಮ್ಮೊಂದಿಗೆ ಸೇರಿ ಪ್ರಯತ್ನಿಸಿರುವ ಕಾಯ್ಕಿಣಿ, ಹರಿಕೃಷ್ಣ..ಪಾತಾಜೆ ಅವರಿಗೆಲ್ಲ ನನ್ನ ನಮಸ್ಕಾರ ತಿಳಿಸಿ…….

13 comments:

 1. ತುಂಬಾ ಚೆನ್ನಾಗಿ ಸಿನೆಮಾವನ್ನು ಅರಿತು ಬರೆದಿದ್ದೀರಿ ನಿಜವಾಗಲು ಶ್ಲಾಗನಿಯ...

  ReplyDelete
 2. ಕುಮಾರ್ ಪರಮಾತ್ಮ ಇನ್ನು ನೋಡಿಲ್ಲ ಅವಕಾಶ ಸಿಗಲಿಲ್ಲ ಅಂತ ಅಲ್ಲ ನೋಡಿಸಿಕೊಳ್ಳೋ ಆಶಕ್ತಿ ಮೂಡಿಸಿಲಿಲ್ಲ ಅಂದ್ರೆ ತಪ್ಪಾಗಲಾರದು. ಸನ್ನಿವೇಶಗಳನ್ನಿಟ್ಟು ಮಾಡಿರುವ ವಿಮರ್ಶೆ ಮೆಚ್ಚುಗೆಯಾಯಿತು, ಬಹುಷಃ ಭಟ್ಟರಿಗೆ ಒಂದರಿಂದೊಂದು ಯಶಸ್ಸು ನೆತ್ತಿಗೇರಿತ ಅಥವಾ ಖಾಲಿಯಾದ್ರ ಅಥವಾ ಗಾಂಧಿನಗರದವರ ಗಿಮಿಕ್ ಕಲಿತುಕೊಂಡಿದ್ದಾರ ಗೊತ್ತಿಲ್ಲ.

  ReplyDelete
 3. ನಾನು "ಪರಮಾತ್ಮ " ಸಿನೇಮಾ ನೋಡಿದೆ..

  ಭಟ್ಟರು ಪುನೀತ್ ಮೇಲೋ..
  ಪುನೀತ್ ಭಟ್ಟರ ಮೇಲೋ.. ಸೇಡು ತೀರಿಸ್ಕೊಳ್ಳೋಕೆ ಹೊರ್ಟಿದ್ದಾರೆ ಅನ್ನಿಸಿತು...

  ಇಬ್ರೂ ಸೇರ್ಕೊಂಡು ಪ್ರೇಕ್ಷಕರ ಮೇಲೆ ಸೇಡು ತೀರಿಸ್ಕೊಂಡಿದ್ದಾರಾ?

  ಬಹಳ ನಿರೀಕ್ಷೆ ಇಟ್ಟುಕೊಂಡು ಹೋಗಿದ್ದೆ.. ನಿರಾಸೆಯಾಗಿದ್ದೆಂತು ನಿಜ...

  ReplyDelete
 4. ದಿಕ್ಕು ತಪ್ಪಿದ ಹುಚ್ಚುಮನWednesday, 19 October, 2011

  ನನಗೆ ಚಿತ್ರಗಳ ಮೇಲೆ ಜಿಗುಪ್ಸೆ ತರಿಸಿದ ೨ನೇ ಚಿತ್ರವಿದು

  ReplyDelete
 5. nange tumbaa jana helidru theater hatra kooda hogbeda anta. bereyavra maatu kelo buddi ondanna nange devru kodle illa :(

  ReplyDelete
 6. ಚಿತ್ರ ನೋಡಿಲ್ಲ, ನೀವು ಬರೆದಿರುವುದು ಆಸಕ್ತಿ ಕೆರಳಿಸಿದೆ, ಚಿತ್ರ ನೋಡಿ ಬರುವೆ :)

  ReplyDelete
 7. Srikanth ManjunathThursday, 20 October, 2011

  ಒಳ್ಳೆಯ ಲೇಖನ...ದಿಗ್ದರ್ಶನ ಮಾಡುವವರು..ಒಂದು ಕ್ಷಣ..ಪ್ರೇಕ್ಷಕನ ಜಾಗದಲ್ಲಿ ಕೂತು ಯೋಚಿಸಿದಾಗ ಮಾತ್ರ ಒಳ್ಳೆ ಸಿನಿಮಾ ಬರಲು ಸಾಧ್ಯ...
  ನಾನು ಹೇಳಿದ್ದೆ ಸರಿ..ನಾನು ಮಾಡಿದ್ದೆ ಸಿನಿಮಾ ಅನ್ನುವ ತನ ಬಂದಾಗ ಹೀಗೆ ಆಗುತ್ತೆ...
  ಸಿನಿಮಾ ಅನ್ನುವುದು ಚಾರಣ ಮಾಡಿದ ಹಾಗೆ...ಬೆಟ್ಟ ಹತ್ತಿದರಷ್ಟೇ ಸಾಲದು..ಹತ್ತಿದ ಮೇಲೆ ಇಳಿದರೆ ಮಾತ್ರ ಆ ಯಶಸ್ಸನ್ನು ಸವಿಯಲು ಸಾಧ್ಯ...
  ಇಲ್ಲೇ ನಮ್ಮ ಅನೇಕ ನಿರ್ಧೆಶಕರು ಸೋಲನ್ನು ಅಪ್ಪುವುದು...

  ReplyDelete
 8. ಪ್ರಸ್ತುತ ಕನ್ನಡ ಸಿನಿಮಾ ಸಂದರ್ಭದಲ್ಲಿ ತಿರಸ್ಕರಿಸಲಾರದ ಹಾಗೆಯೇ ಹೆಮ್ಮೆಯೂ ಪಡಲಾಗದ ಚಿತ್ರವಿದು.. ಇಮೇಜಿಗೆ ತಲೆಕೆಡಿಸಿಕೊಳ್ಳದ ಪುನೀತ್ ಚಿತ್ರದಲ್ಲಿ ಅದನ್ನು ಪೂರೈಸಲು ಹಾಡು-ಫೈಟುಗಳನ್ನು ಅನಗತ್ಯವಾಗಿ ತೂರಿಸಿದಕ್ಕೂ ಸಹ ಭಟ್ಟರೇ ಕಾರಣರಾಗುತ್ತಾರೆ.. ದುರಂತವು ಕ್ಲಿಕ್ಕಾಗುತ್ತೆ ಎನ್ನುವ ಭರದಲ್ಲಿ ನಿರಾಸೆಯ ಅಂತ್ಯ ಕಾಣಿಸಿದ ಭಟ್ಟರದು ಗೋದಲಗಳಲ್ಲಿ ಸುಖವಿದೆ ಎಂಬ ಸೂತ್ರವೆ.. ಒಟ್ಟಾರೆ ಭಟ್ಟರ ಚಿತ್ರಗಳೆಲ್ಲವನ್ನೂ ಒಂದೇ ಸೂತ್ರದಡಿ ಕಂಡರೆ ಅಪ್ಪಟ ಭಟ್ಟರ ಐಡಿಯಾಲಜಿ ಗೋಚರವಾಗಬಲ್ಲದು.. ಕುಮಾರ್ ನಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಕ್ಕೆ ಧನ್ಯವಾದ..

  ReplyDelete
 9. ಒಂದು ಸಿನಿಮಾದ ಯಶಸ್ಸು ಹಣಗಳಿಕೆಯಷ್ಟೇ ಅಲ್ಲ, ಪ್ರೇಕ್ಷಕ ಪರಮಾತ್ಮ ಸಂತೃಪ್ತನಾಗಬೇಕು. ಭಟ್ಟರು ಹಾಡುಗಳನ್ನು ರೆಡಿ ಮಾಡಿಕೊಂಡು ಕಾಟಾಚಾರಕ್ಕೆ ಸಿನಿಮಾ ಮಾಡಿದಂತಿದೆ.

  ReplyDelete
 10. ಕುಮಾರ್, ತುಂಬ ಸೊಗಸಾಗಿ ಪ್ರತಿಯೊಂದು ದೃಶ್ಯವನ್ನು ವಿಶ್ಲೇಷಿಸಿದ್ದೀರಿ. ನಿಮ್ಮ ವಿಮರ್ಶೆ ನನಗಂತೂ ತುಂಬ ಇಷ್ಟವಾಯಿತು. ಇಂಥ ಸೂಕ್ಷ್ಮ ಸಂಗತಿಗಳನ್ನು ನೋಡುವುದು ನಮ್ಮ ಸಿನಿಮಾ ವಿಮರ್ಶಕರಿಗೂ ಸಾಧ್ಯವಾದರೆ ಒಳ್ಳೆಯದು.
  -ಜೋಗಿ

  ReplyDelete
 11. bhattaru iga kaali kodapaana,, adakke bari soundu.

  ReplyDelete
 12. bhatrige aahankara thale ge attite.adanna elsi cinema madidre better

  ReplyDelete
 13. ಭಟ್ಟರ ತಲೆಯಾಕೋ ಖಾಲಿ ಆಗೋಯ್ತು
  ಯಾವಾನಿಗೊತ್ತು? ಯಾವಾನಿಗೊತ್ತು?

  ReplyDelete