• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಸಿನಿಮಾದವರು ಭೂತಕಾಲದಲ್ಲಿಯೆ ಹೆಚ್ಚು ಬದುಕಲು ಇಷ್ಟಪಡುತ್ತಾರೆ…!

ಕನ್ನಡ ಚಿತ್ರರಂಗದ ಭಾವಪೂರ್ಣ ನಟ ಅನಂತನಾಗ್. ಹಿಂದಿ-ಮರಾಠಿ ರಂಗಭೂಮಿಯಲಿ ಭರವಸೆ ಮೂಡಿಸಿದ ನಾಗ್ ಸಿನಿಮಾಗಳಲ್ಲಿಯೂ ವಿಶಿಷ್ಟ ಛಾಪು ಮೂಡಿಸಿದರು. ಇಂದಿಗೂ ಇವರ ರಂಗಭೂಮಿ ನಟನೆಯನ್ನು ಮೆಚ್ಚಿ ಮಾತನಾಡುವ ಮಂದಿ ಕಾಣಸಿಗುತ್ತಾರೆ. ನಾಲ್ಕು ದಶಕಗಳ ನಂತರವೂ ಓರ್ವ ನಟನ ರಂಗಾಭಿನಯ ಜನಮಾನಸದಲ್ಲಿ ಉಳಿಯುವುದು ಆ ಪ್ರತಿಭೆಯ ಶಕ್ತಿಯನ್ನು ವ್ಯಕ್ತಪಡಿಸುತ್ತದೆ. ಇಂಥ ಅಪರೂಪದ ನಟನ ಬದುಕಿನ ಮಜಲುಗಳ ಕುರಿತು ಪ್ರೇಕ್ಷಕರೊಂದಿಗೆ ನೇರವಾಗಿ ಸಂವಾದಿಸುವ ಕಾರ್ಯಕ್ರಮವನ್ನು ಅಕ್ಟೋಬರ್ 8, 2011ರಂದು ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರಿನ ಬಾದಾಮಿ ಹೌಸ್ ಪ್ರಿಯದರ್ಶಿನಿ ಸಭಾಂಗಣದಲ್ಲಿ ಆಯೋಜಿಸಿತ್ತು. ಲೇಖಕ ಸತ್ಯಮೂರ್ತಿ ಆನಂದೂರು ಸಂವಾದಕ್ಕೆ ಚಾಲನೆ ನೀಡಿದರು. ಕಿಕ್ಕಿರಿದು ನೆರೆದಿದ್ದ ಅಭಿಮಾನಿ ಬಳಗ ನಟನ ಮಾತುಗಳನ್ನು ತನ್ಮಯತೆಯಿಂದ ಆಲಿಸಿತು.
ದಂಪತಿ ಅನಂತನಾಗ್ ಮತ್ತು ಗಾಯತ್ರಿ
 ವಿಶಿಷ್ಟ ಅಭಿನಯ ಕಾರಣದ ಜೊತೆಗೆ ಅನಂತನಾಗ್ ಹೆಚ್ಚು ಇಷ್ಟವಾಗುವುದು ಹಮ್ಮು-ಬಿಮ್ಮುಗಳಿಲ್ಲದ ಸೀದಾಸಾದಾ ವರ್ತನೆಗೆ. ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ಏರಿಳಿತಗಳನ್ನು ಇವರು ವ್ಯಕ್ತಪಡಿಸಿದ ರೀತಿ ಅನನ್ಯ. ‘ ಸಿನಿಮಾದವರು ಭೂತಕಾಲದಲ್ಲಿಯೆ ಹೆಚ್ಚು ಬದುಕಲು ಇಷ್ಟಪಡುತ್ತಾರೆ’ ಈ ಮಾತನ್ನು ಸಂವಾದದ ಆರಂಭದಲ್ಲಿಯೆ ಅನಂತ್ ಹೇಳಿದ್ದು ಅರ್ಥಪೂರ್ಣವಾಗಿತ್ತು. 63ರ ಹರೆಯದ ಅನಂತ್ ಅವರ ನೇರ ನೇರ ಮಾತುಗಳು ನೆರದವರಿಗೂ ಆಪ್ತವೆನಿಸಿತು….ಆ ಮಾತುಗಳು ನಿಮ್ಮ ಮುಂದೆ……. 
ಬೆಳ್ಳಿಬರಹ ಸಂಚಿಕೆ ಲೋಕಾರ್ಪಣೆ ಮಾಡಿದ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗಾಭರಣ ಮತ್ತು ಅನಂತ್-ಗಾಯತ್ರಿ


 ಕುಟುಂಬ:
ನನ್ನ ತಾಯಿ ಆನಂದಿ ಅವರು ಮಂಗಳೂರು ಸನಿಹದ ಕಾಂಚನಗಡದವರು( ಈಗ ಕಾಸರಗೋಡು ಜಿಲ್ಲೆಯ ಹೊಸದುರ್ಗ ಸನಿಹದಲ್ಲಿದೆ) ತಂದೆ ಸದಾನಂದ ಅವರು ಉತ್ತರ ಕನ್ನಡ ಜಿಲ್ಲೆಯ ನಾಗರಕಟ್ಟೆಯವರು. ತಾಯಿ ಆನಂದಿ ಅವರು ಹುಟ್ಟಿದಾಗಲೇ ತಮ್ಮ ತಾಯಿ ಕಳೆದುಕೊಂಡಿದ್ದರು. ಈ ಕಾರಣದಿಂದ ಅವರ ತಂದೆ ಅಲ್ಲೇ ಸನಿಹದ ಆನಂದಾಶ್ರಮಕ್ಕೆ ಸೇರಿಸಿದ್ರು. ನಮ್ಮ ತಂದೆ ಅದೇ ಆಶ್ರಮಕ್ಕೆ ಸೇರಿದ್ರು. ಬೆಳೆಯುತ್ತಾ ಇದ್ದ ಹಾಗೆ ನನ್ನ ತಂದೆ ಮದುವೆಯಾದ್ರೆ ಆನಂದಿಯನ್ನೇ ಎಂದು ನಿಶ್ಚಯಿಸಿದ್ರು. ಈ ಕಾರಣದಿಂದ ಮುಂಬೈಗೆ ಹೋಗಿದ್ರು ಮತ್ತೆ ಆಶ್ರಮಕ್ಕೆ ಬಂದ್ರು. ವಿವಾಹದ ಬಳಿಕ ಅಲ್ಲಿಯೇ ನೆಲೆ ನಿಂತ್ರು. ನನ್ನ ಹಿರಿಯ ಸಹೋದರಿ, ನಾನು ಮತ್ತು ಸಹೋದರ ಶಂಕರನಾಗ್ ಹುಟ್ಟಿ..ಬೆಳೆದಿದ್ದು ಇಲ್ಲಿಯೆ…
ತಾಯಿ ಆನಂದಿ, ತಂದೆ ಸದಾನಂದ ನಾಗರಕಟ್ಟೆ ಮತ್ತು ಅಜ್ಜ (ಕುಳಿತವರು) ಬಂಟ್ವಾಳ್ ಸದಾಶಿವ ಭಟ್
 ಮುಂದೆ ನನ್ನ ತಂದೆ ಭಟ್ಕಳ ಸನಿಹದ ಶಿರಾಲಿ ಮಠ ಪಾರಿಪತ್ಯಗಾರರಾಗಿ ಕೆಲಸಕ್ಕೆ ಸೇರಿದ್ರು. ಕುಟುಂಬ ಕೂಡ ಅಲ್ಲಿಗೆ ಸ್ಥಳಾಂತರವಾಯಿತು. ಅಕ್ಕ ಮತ್ತು ನನ್ನನ್ನು ಹೊನ್ನಾವರದ ಶಾಲೆಗೆ ಸೇರಿಸಿದ್ರು. ಅಲ್ಲಿಯೆ ನಮ್ಮ ಬಿಡಾರ. ನನ್ನನ್ನು ಸೆಂಟ್ ಥಾಮಸ್ ಸ್ಕೂಲಿಗೆ ಸೇರಿಸಿದ್ರು. ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ರು ಮಠದಲ್ಲಿ ಬೊಬ್ಬೆ. ಸದಾನಂದ ಅವರು ಮಗನನ್ನು ಇಂಗ್ಲೀಷ್ ಮೀಡಿಯಂಗೆ ಸೇರಿಸಿದ್ದಾರೆ ಅಂತ. ಇದರಿಂದ ಆ ಶಾಲೆ ಬಿಡಿಸಿ ನ್ಯೂ ಇಂಗ್ಲೀಷ್ ಸ್ಕೂಲಿಗೆ ಸೇರಿಸಿದ್ರು. ಮನೆ ಮಾತು ಕೊಂಕಣಿಯಾದ್ರೂ ಓದಿದ್ದು ಪೂರ್ಣ ಕನ್ನಡ ಮಾಧ್ಯಮದಲ್ಲಿ. ಎಸ್.ಎಸ್.ಎಲ್.ಸಿ. ನಂತರ ಅಕ್ಕನಿಗೆ ಮುಂದೆ ಓದುವ ಅವಕಾಶ ದೊರೆಯಲಿಲ್ಲ. ಆಗಿನ ಕಾಲದಲ್ಲಿ ಅಷ್ಟು ಓದಿಸಿದ್ದೇ ಹೆಚ್ಚು. ಹೊನ್ನಾವರದಲ್ಲಿ ನಾನು ಒಬ್ಬಂಟಿ. ಆಗ ನನ್ನ ತಂದೆ ನನ್ನನ್ನು ಮುಂಬೈಗೆ ಕಳುಯಿಸುವ ಯೋಚನೆ ಮಾಡಿದ್ರು. ಅಲ್ಲಿ ನನ್ನ ಚಿಕ್ಕಪ್ಪ ಇದ್ರು. ಅಲ್ಲಿನ ಸೆಂಟ್ ಜೇವಿಯರ್ಸ್ ಸ್ಕೂಲಿನಲ್ಲಿ ಎಂಟನೇ ತರಗತಿಗೆ ಸೇರಿದೆ. ಅಲ್ಲಿಂದ ಭಾಷೆ ಫಜೀತಿ ಶುರುವಾಯ್ತು.
ಅನಂತನಾಗ್ ಮತ್ತು ಶಂಕರನಾಗ್
ಇಂಗ್ಲೀಷಿನ ಕಷ್ಟ:
ನಾನು ಅಲ್ಲಿಯ ತನಕ ಓದಿದ್ದು ಕನ್ನಡ ಮಾಧ್ಯಮದಲ್ಲಿ. ಇಲ್ಲಿ ಬಂದ ನಂತರ ಇಂಗ್ಲೀಷ್. ಮೇಷ್ಟ್ರು ಹೇಳಿದ್ದು ಅರ್ಥವಾಗುತ್ತಿತ್ತು. ಆದ್ರೆ ಏನಾದ್ರೂ ಪ್ರಶ್ನೆ ಕೇಳಿದ್ರೆ ಇಂಗ್ಲೀಷಿನಲ್ಲಿ ಉತ್ತರಿಸುವುದಕ್ಕೆ ಕಷ್ಟವಾಗುತ್ತಿತ್ತು. ಹಾಗೂ-ಹೀಗೂ ಒಂಭತ್ತನೇ ತರಗತಿ ಬಹಳ ಕಷ್ಟಪಟ್ಟು ಪಾಸು ಮಾಡಿದೆ. ಆಗ ಇಂಗ್ಲೀಷ್ ಹಿಂಡಿ ಹಿಪ್ಪೆ ಮಾಡಿತು ಎಂತಲೇ ಹೇಳಬೇಕು. ಸ್ಕೂಲಿನಲ್ಲಿ ಮೇಷ್ಟ್ರು ಏನಾದ್ರೂ ಪ್ರಶ್ನೆ ಕೇಳ್ತಿದ್ರು. ಉತ್ತರ ಗೊತ್ತಿದ್ರೂ ಭಾಷೆ ತೊಡಕಿನಿಂದ ಹೇಳುವುದಕ್ಕೆ ಆಗುತ್ತಿರಲಿಲ್ಲ. ಆಗ ಬೆಂಚಿನ ಮೇಲೆ ನಿಲ್ಲಿಸ್ತಾ ಇದ್ರು. ಇಲ್ಲವೆ ಕ್ಲಾಸಿನಿಂದ ಹೊರಗೆ ಕಳುಯಿಸ್ತಿದ್ರು. ಆಗ ಪಕ್ಕದಲ್ಲಿಯೆ ಮೆಟ್ರೋ ಥಿಯೇಟರ್ ಇತ್ತು. ಅಲ್ಲಿ ಇಂಗ್ಲೀಷ್ ಸಿನಿಮಾಗಳನ್ನೇ ಹೆಚ್ಚು ಹಾಕ್ತಾ ಇದ್ರು. ಥಿಯೇಟರ್ ಮೇಲನೆ ಅಂತಸ್ತಿನಲ್ಲಿ ಚಿಕ್ಕಪ್ಪ ಕೆಲಸ ಮಾಡುತ್ತಿದ್ದ ಆಫೀಸು. ಅಲ್ಲಿಗೆ ಹೋಗುತ್ತೇನೆಂದು ಹೇಳಿ ಅಲ್ಲಿನ ಒಳದಾರಿ ಮುಖಾಂತರ ಥಿಯೇಟರ್ ಗೆ ಬಂದು ಕುಳಿತು ಸಿನಿಮಾ ನೋಡುತ್ತಿದ್ದೆ. ಹೀಗೆ ತುಂಬ ಸಿನಿಮಾ ನೋಡಿದೆ. ಭಾಷೆಯ ತೊಡಕಿನಿಂದ ಎಸ್.ಎಸ್.ಎಲ್.ಸಿ.ಯನ್ನು ಬಹಳ ಕಷ್ಟಪಟ್ಟು ಪಾಸು ಮಾಡಬೇಕಾಯಿತು.
ಯುವ ಅನಂತ್
ಗಾಯತ್ರಿ ಮತ್ತು ಅನಂತನಾಗ್ ತಮ್ಮ ಮಗಳು ಆದಿತಿಯೊಂದಿಗೆ
ಮಗಳು ಆದಿತಿಯೊಂದಿಗೆ

ಡಾಕ್ಟ್ರು ಮಾಡುವ ಹಂಬಲ:
ನನ್ನ ತಂದೆಗೆ ನನ್ನನ್ನು ಡಾಕ್ಟ್ರು ಮಾಡುವ ಹಂಬಲ. ಇಂಟರ್ ಮೀಡಿಯೇಟ್ (ಇಂದಿನ ಪಿಯುಸಿ) ಗೆ ಸೈನ್ಸ್ ಕ್ಲಾಸಿಗೆ ಸೇರಿಸಿದ್ರು. ನಾನೋ ಈರುಳ್ಳಿ-ಬೆಳ್ಳುಳ್ಳಿ ತಿನ್ನದೇ ಬೆಳೆದವನು. ಇಂಥವನಿಗೆ ಸೈನ್ಸ್ ಕ್ಲಾಸಿನಲ್ಲಿ ಕಪ್ಪೆ ಕೊಟ್ಟು ಕೊಯ್ಯಲು ಹೇಳಿದ್ರೆ ಹೇಗಾಗಬೇಡ. ಹೀಗಾಗಿ ಆ ಕ್ಲಾಸಿಗೆ ನಮಸ್ಕಾರ ಹೊಡೆದೆ. ಮುಂದೇನು ಎನ್ನುವಾಗ ನಾಟಕದ ದಾರಿ ಕಾಣಿಸಿತು.

ರಂಗಭೂಮಿ ಕೈ ಬೀಸಿ ಕರೆಯಿತು:
ಮರಾಠಿ-ಹಿಂದಿ ನಾಟಕಗಳಲ್ಲಿ ಅವಕಾಶ ದೊರೆಯತೊಡಗಿತು. ಇದನ್ನು ನೋಡಿ ತಂದೆ ಸಾಕಷ್ಟು ಬೈಯ್ದರು.. ಆಗ ತುಂಬ ಕಷ್ಟದ ದಿನಗಳು. ದಿನದ ಒಂದೇ ಒಪ್ಪತ್ತು ಊಟ ಮಾಡಿ ಇರಬೇಕಾದ ಸ್ಥಿತಿ. ತಂದೆಯೊಟ್ಟಿಗೆ ಇದ್ದಾಗ ಇಂಥ ಸ್ಥಿತಿಯನ್ನು ಎಂದೂ ಅನುಭವಿಸಿರಲಿಲ್ಲ. ನಾಟಕ ಮಾಡುತ್ತಲೇ ಕೆಲಸಕ್ಕೂ ತಲಾಷ್ ಮಾಡುತ್ತಿದ್ದೆ. ಆಗಿನ್ನೂ ಬ್ಯಾಂಕುಗಳು ರಾಷ್ಟ್ರೀಕರಣ ಆಗಿರಲಿಲ್ಲ. ನಾನು ಅಭಿನಹಿಸುತ್ತಿದ್ದ ನಾಟಕ ನೋಡಲು ಬರುತ್ತಿದ್ದವರ ಶಿಫಾರಸ್ಸಿನಿಂದ ನನ್ನ ಹತ್ತೊಂಭತ್ತನೇ ವಯಸ್ಸಿನಲ್ಲಿ ಯೂನಿಯನ್ ಬ್ಯಾಂಕಿನಲ್ಲಿ ಗುಮಾಸ್ತ ಕೆಲಸ ಸಿಕ್ಕಿತು. ಈ ನಂತರ ಪರಿಸ್ಥಿತಿ ಸುಧಾರಿಸಿತು. ನನಗಿಂತ ಆರು ವರ್ಷ ಚಿಕ್ಕವನಾದ ಶಂಕರನಾಗ್ ನನ್ನು ಮುಂಬೈಗೆ ಕರೆದುಕೊಂಡು ಬಂದೆ.

ನಾವಿದ್ದ ಕಾಲೋನಿಯಲ್ಲಿಯೇ ಮರಾಠಿ ರಂಗಭೂಮಿಯ ಪ್ರಸಿದ್ದ ನಟ ಅಮೋಲ್ ಪಾಲೇಕರ್ ಮತ್ತು ಅವರ ಪತ್ನಿ ಇದ್ದರು. ಅವರ ಪರಿಚಯವಾಯಿತು. ಇವರು ಪ್ರಸಿದ್ಧ ರಂಗ ನಿರ್ದೇಶಕ ಸತ್ಯದೇವ್ ದುಬೆ ಅವರ ಪರಿಚಯ ಮಾಡಿಸಿದ್ರು. ನಟನೆಯ ಪ್ರಾಥಮಿಕ ಅಂಶಗಳನ್ನು ದುಬೆ ಕಲಿಸಿಕೊಟ್ರು. ರಂಗಭೂಮಿ ನಟರು ನಟನೆ ತಾಲೀಮು ಅಲ್ಲದೇ ದೈಹಿಕ ತಾಲೀಮು ಮಾಡಬೇಕಿತ್ತು. ತಲೆಯ ಮೇಲೆ ಭಾರವಾದ ಮರಳಿನ ಚೀಲ ಹೊರಿಸಿ ನಿಲ್ಲಲ್ಲು-ನಡೆಯಲು ಹೇಳ್ತಿದ್ರು. ಸರಿಯಾಗಿ ನಿಲ್ಲದಿದ್ರೆ-ನಡೆಯದಿದ್ರೆ ಅವರಿಂದ ಬೈಗುಳ ಕೇಳಬೇಕಿತ್ತು. ರಂಗದ ಮೇಲೆ ನಟರು ಯಾವ ಸ್ಥಿತಿಯಲ್ಲಿ ನಿಲ್ಲಬೇಕು. ನಡೆಯಬೇಕು ಎಂಬ ಸೂಕ್ಷ್ಮ ಅಂಶಗಳನ್ನು ಅವರು ತಿಳಿಸಿದ್ರು.

ಕನ್ನಡ ಸಿನಿಮಾದಲ್ಲಿ:
ಮರಾಠಿ-ಹಿಂದಿ ರಂಗಭೂಮಿ ಮುಖಾಂತರ ಗಿರೀಶ್ ಕಾರ್ನಾಡ್ ಪರಿಚಯವಾಗಿದ್ರು. ಇವರ ಮುಖಾಂತರ  ಕನ್ನಡದ ಕಲಾತ್ಮಕ ಸಿನಿಮಾ ‘ಸಂಕಲ್ಪ’ದಲ್ಲಿ ಅವಕಾಶ ದೊರೆಯಿತು. ಈ ಸಿನಿಮಾ ನಿರ್ಮಾಣ ಮಾಡಿ ನಿರ್ದೇಶಿಸಿದವರು ಮೈಸೂರಿನ ನಂಜರಾಜೇ ಅರಸ್. ಈ ಬಳಿಕ ಅವಕಾಶಗಳೇನೂ ದೊರೆಯಲಿಲ್ಲ. ಆಗ ‘ಮಾಡಿದರೆ ಕಲಾತ್ಮಕ ಚಿತ್ರಗಳಲ್ಲಿ ಮಾತ್ರ. ಇಲ್ಲದಿದ್ದರೆ ಇಲ್ಲ’ ಎನ್ನುವ ನಿಲುವು ನನ್ನದಾಗಿತ್ತು. ವರ್ಷಕ್ಕೆ ಒಂದೋ ಅಥವಾ ಎರಡು ವರ್ಷಕ್ಕೆ ಒಂದೋ ಕಲಾತ್ಮಕ ಚಿತ್ರಗಳು ನಿರ್ಮಾಣವಾಗುತ್ತಿದ್ದವು. ಅಂಥ ಎಲ್ಲ ಚಿತ್ರಗಳಲ್ಲಿಯೂ ನನಗೆ ಅವಕಾಶ ಸಿಗಬೇಕೆಂದು ನಿರೀಕ್ಷಿಸುವುದು ಕಷ್ಟವಾಗಿತ್ತು.

ಸಂಕಲ್ಪ ಚಿತ್ರದ ಬಳಿಕ ಹಿಂದಿಯ ಅಂಕುರ್, ನಿಶಾನ್ ಮತ್ತು ಮಂಥನ್ ಚಿತ್ರಗಳಲ್ಲಿ ಅವಕಾಶ ದೊರೆಯಿತು. ಇವೆಲ್ಲ ಕಲಾತ್ಮಕ ಚಿತ್ರಗಳು. ಶ್ಯಾಮ್ ಬೆನಗಲ್ ಅವರು ನಿರ್ದೇಶಿಸಿದ ಸಿನಿಮಾಗಳು. ಜಾಹಿರಾತು ರೆಂಗದಿಂದ ಬಂದಿದ್ದ ಬೆನಗಲ್ ಎಡಪಂಥೀಯ ವಿಚಾರಧಾರೆ ಹೊಂದಿದ್ದರು. ಈ ವಿಚಾರದ ಹಿನ್ನೆಲೆಯಲ್ಲಿಯೆ ಸಿನಿಮಾಗಳನ್ನು ಮಾಡಿದರು.

ತೀವ್ರ ಜ್ವರ:
ಕನ್ನಡದಲ್ಲಿ ಮತ್ತೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆಯಿತು. ಅವರು ಮುಂಗಡ ಹಣ ಕೂಡ ನೀಡಿದ್ರು. ಮುಂಬೈನಿಂದ ಬೆಂಗಳೂರಿಗೆ ಫ್ಲೈಟಿನಲ್ಲಿ ಬರುವ ವ್ಯವಸ್ಥೆ ಮಾಡಿದ್ರು. ಆದರೆ ಅದೇ ಸಂದರ್ಭದಲ್ಲಿ ಏರ್ ಇಂಡಿಯಾ ಸಿಬ್ಬಂದಿ ಮುಷ್ಕರ. ಟ್ರೈನ್ ಫಸ್ಟ್ ಕ್ಲಾಸ್ ಕಂಪಾರ್ಟ್ ಮೆಂಟಿನಲ್ಲಿ ಬೆಂಗಳೂರಿಗೆ ಬರಲು ತಿಳಿಸಿದ್ರು. ಅವಕಾಶಗಳು ದೊರೆಯುತ್ತಿವೆಯಲ್ಲ ಎಂಬ ಭರವಸೆಯಿಂದ ಕೆಲಸಕ್ಕೆ ರಾಜಿನಾಮೆ ನೀಡಿದೆ. ಬೆಂಗಳೂರಿಗೆ ಹೊರಟೆ. ಪೂನಾಕ್ಕೆ ಬರುವಷ್ಟರಲ್ಲಿ ನನಗೆ ವಿಪರೀತ ಜ್ವರ. ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ನನ್ನನ್ನು ಗಮನಿಸಿಕೊಳ್ಳುತ್ತಿದ್ದ ಡಾಕ್ಟ್ರು ‘ ಇದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ. ನೀವು ತೀವ್ರ ಜ್ವರದಿಂದ ಪ್ರಜ್ಞೆ ಕಳೆದುಕೊಂಡಿದ್ರಿ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ಸ್ಟೇಷನ್ ಮಾಸ್ಟರ್ ಗೆ ತಿಳಿಸಿದ್ರು. ಇವರ ಸೂಚನೆ ಮೇರೆಗೆ ರೈಲ್ವೇ ಪೊಲೀಸರು ನಿಮ್ಮನ್ನು ಇಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ನಿಮ್ಮ ಸಂಕಲ್ಪ ಚಿತ್ರವನ್ನು ನಾನು ನೋಡಿದ್ದೇನೆ’ ನನ್ನ ಹೆಸರು ದೇವದತ್ತಾ’ಎಂದರು. ನನ್ನ ಪಾಲಿಗೆ ಅವರು ದೇವದತ್ತಾನೇ ಆಗಿದ್ದರು.

ನನಗೆ ತೀವ್ರ ಟೈಪಾಯಿಡ್ ಉಂಟಾಗಿತ್ತು. ಕೆಲದಿನ   ಹೌಸ್ ಸರ್ಜನ್ ಷಿಪ್ ಮಾಡುತ್ತಿದ್ದ ಇದೇ ಯುವಕ ತಮ್ಮ ಚಿಕ್ಕ ಮನೆಗೆ ಬಹಳ ಬಲವಂತದಿಂದ ನನ್ನನ್ನು ಕರೆದುಕೊಂಡು ಹೋಗಿ ಉಪಚರಿಸಿದ್ರು. ಅವರೇನೂ ಶ್ರೀಮಂತರಾಗಿರಲಿಲ್ಲ. ಆದರೆ ಹೃದಯ ಶ್ರೀಮಂತಿಕೆ ಅವರಲ್ಲಿತ್ತು. ತಮ್ಮ ವಯಸ್ಸಾದ ತಾಯಿಯೊಡನೆ ಚಿಕ್ಕದೊಂದು ಮನೆಯಲ್ಲಿ ಇದ್ರು. ಟೈಪಾಯಿಡ್ ತೀವ್ರ ಹಂತಕ್ಕೆ ಹೋಗಿ ಇಳಿದಿತ್ತು. ಈ ಕಾರಣದಿಂದ ನನ್ನ ಮಾತಿನಲ್ಲಿ ತೊದಲು ಬಂದಿತ್ತು. ನಟನಾಗಬೇಕೆಂದು ಇದ್ದ ಕೆಲಸಕ್ಕೂ ರಾಜಿನಾಮೆ ನೀಡಿ ಬಂದವನಿಗೆ ಇದೆಂಥ ಸ್ಥಿತಿ ಬಂತಲ್ಲಪ್ಪಾ ದೇವ್ರೆ ಎಂದು ಕಣ್ಣೀರಿಟ್ಟೆ. ಚೇತರಿಸಿಕೊಂಡ ಬಳಿಕ ನಾನು ಜನಿಸಿದ್ದ ಸ್ಥಳ ಆನಂದಾಶ್ರಮಕ್ಕೆ ಬಂದೆ. ವಿಷಯ ತಿಳಿದ ಗುರುಗಳು ನನ್ನನ್ನು ಚೆನ್ನಾಗಿ ಬೈಯ್ದರು. ನಾಟಕ-ಸಿನಿಮಾ ಸಹವಾಸ ಬಿಟ್ಟು ಕೆಲಸಕ್ಕೆ ಸೇರಿ ಚೆನ್ನಾಗಿರು ಎಂದರು. ನಾನು ಕೆಲಸಕ್ಕೆ ರಾಜಿನಾಮೆ ನೀಡಿದ್ದ ವಿಷಯ ಅವರಿಗೆ ತಿಳಿಸಿರಲಿಲ್ಲ.

ಮಾರ್ಗದರ್ಶನ:
ಕನ್ನಡ ಚಲನಚಿತ್ರಗಳಲ್ಲಿ ನಟಿಸುವುದಕ್ಕೆ ಹಿರಿಯ ಪತ್ರಕರ್ತ ವೈ.ಎನ್ಕೆ, ಗಿರೀಶ್ ಕಾರ್ನಾಡ್ ಮೂಲ ಕಾರಣಕರ್ತರು. ನಟನೆ ವಿಷಯಕ್ಕೆ ಸಂಬಂಧಿಸಿ ಅನೇಕ ಮಾಹಿತಿಗಳನ್ನು ನೀಡಿ ನನ್ನನ್ನು ಹೆಚ್ಚು ಹೆಚ್ಚು ಮಾಹಿತಿಪೂರ್ಣನನ್ನಾಗಿ ಮಾಡುತ್ತಿದ್ದವರು ವೈ.ಎನ್ಕೆ
.
ಹಂಸಗೀತೆ ಮತ್ತು ದೇವರಕಣ್ಣು:
 ಈ ಬಳಿಕ ‘ಹಂಸಗೀತೆ’ ಚಿತ್ರದಲ್ಲಿ ಅವಕಾಶ ದೊರೆಯಿತು. ಜಿ.ವಿ.ಅಯ್ಯರ್ ನಿರ್ದೇಶನದ ಕಲಾತ್ಮಕ ಚಿತ್ರವಿದು. ಇದಾದ ನಂತರ ‘ದೇವರಕಣ್ಣು’ ಸಿನಿಮಾದಲ್ಲಿ ಎರಡನೇ ಹಿರೋ ಆಗಿ ನಟಿಸುವ ಅವಕಾಶ ದೊರೆಯಿತು. ಚಿತ್ರದಲ್ಲಿ ಲೋಕೇಶ್ ನಟಿಸಿದ್ದರು. ಈ ಸಿನಿಮಾದಿಂದ ಕನ್ನಡ ಚಿತ್ರರಂಗ ನನ್ನನ್ನು ಗುರುತಿಸಿತು. ಸಾಲು ಸಾಲು ಅವಕಾಶಗಳು ದೊರೆಯತೊಡಗಿದವು. ‘ಬಯಲುದಾರಿ’ ತುಂಬ ಯಶಸ್ವಿಯಾಯಿತು.
 
ಡ್ಯಾನ್ಸ್ ಅಂದರೆ ನಡುಕ:
ರಂಗಭೂಮಿಯಿಂದ ಬಂದ ನನಗೆ ಸಿನಿಮಾ ನಟನೆ ಕಷ್ಟವಾಗಿರಲಿಲ್ಲ. ಆದರೆ ಕಮರ್ಷಿಯಲ್ ಸಿನಿಮಾಗಳಲ್ಲಿ ಹಾಡಿಗೆ ಸ್ಟೆಪ್ ಹಾಕಬೇಕು ಅಂದಾಗ ನಡುಕ ಉಂಟಾಗುತ್ತಿತ್ತು. ಡ್ಯಾನ್ಸ್ ಎಲ್ಲ ಹೆಂಗಸರಿಗೆ ಅಂದುಕೊಂಡಿದ್ದೆ. ಅವರು ನರ್ತಿಸಿದರೆ ಚೆಂದ ಅಂತ ಭಾವಿಸಿಕೊಂಡಿದ್ದೆ. ಆದರೆ ಬಯಲುದಾರಿ ಸಿನಿಮಾದಲ್ಲಿ ಹಾಡಿಗೆ ಸ್ಟೆಪ್ ಹಾಕಬೇಕಾದ ಸಂದರ್ಭ ಬಂದಾಗ ಕೈಕಾಲು ನಡುಕ ಬರೋದು. ಮುಂದೆ ಈ ಪರಿಸ್ಥಿತಿ ಸುಧಾರಿಸಿತು. ಡ್ಯಾನ್ಸ್ ಅಂದ ಕೂಡಲೇ ಡ್ಯಾನ್ಸ್ ಮಾಸ್ಟರ್ ಜಯರಾಂ ಅವರೊಂದಿಗೆ ನಡೆದ ಪ್ರಸಂಗ ನೆನಪಿಗೆ ಬರುತ್ತೆ. ಒಮ್ಮೆ ಅವರು ‘ ಏನ್ರೀ ನಿಮಗೆ ನಮಸ್ಕಾರ ಮಾಡೋದಿಕ್ಕೆ ಬರೋದಿಲ್ವ ಅಂತ ರೇಗುವ ಧಾಟಿಯಲ್ಲಿ ಹೇಳಿದ್ರು. ಡ್ಯಾನ್ಸ್ ಹೇಳಿಕೊಡುವ ಗುರುಗಳಿಗೆ ಮೊದಲು ನಮಸ್ಕರಿಸಬೇಕು ಎಂಬುದು ಅವರ ಇರಾದೆ. ಆದರೆ ಇವೆಲ್ಲ ನನಗೆ ಅಭ್ಯಾಸವಿಲ್ಲ. ಅದಕ್ಕೆ ‘ನೀವು, ಸಿನಿಮಾ ನಿರ್ದೇಶಕರು ಎಲ್ಲ ಒಟ್ಟಾಗಿ ನಿಂತುಕೊಳ್ಳಿ ಒಂದೇ ಬಾರಿ ನಮಸ್ಕರಿಸುತ್ತೇನೆ’ ಎಂದುತ್ತರಿಸಿದೆ.

ಫೈಟಿಂಗ್ ಕೂಡ ಕಷ್ಟ:
ಮೊದಮೊದಲು ನನಗೆ ಫೈಟಿಂಗ್ ಸಿನಿಮಾದಲ್ಲಿ ಮಾಡೋದು ಕಷ್ಟವಿತ್ತು. ಒಂದು ಸಿನಿಮಾದಲ್ಲಿ ರಜನೀಕಾಂತ್ ಖಳನಟರಾಗಿ ಅಭಿನಯಿಸಿದ್ರು. ಆ ಸಿನಿಮಾದಲ್ಲಿ ನಾನು ಅವರು ಹೊಡೆದಾಡುವ ಪ್ರಸಂಗ. ಈ ಫೈಟಿಂಗ್ ದೃಶ್ಯಗಳನ್ನು ಎರಡು ದಿನ ಚಿತ್ರೀಕರಿಸಲು ವ್ಯವಸ್ಥೆ ಮಾಡಿದ್ರು. ಆ ಸಂದರ್ಭದಲ್ಲಿ ನನ್ನ ಬಳಿ ಬಂದ ರಜನೀಕಾಂತ್ ‘ನಾನು ಈಗಾಗಲೇ ತಮಿಳು ಸಿನಿಮಾಗಳಲ್ಲಿ ನಾಯಕನಟನಾಗಿ ಆಕ್ಟಿಂಗ್ ಮಾಡಿದ್ದೀನಿ. ಈ ಸಿನಿಮಾದಲ್ಲಿ ಖಳನಾಯಕ ಸಿಕ್ಕಾಪಟ್ಟೆ ಒದೆ ತಿನ್ನೋ ದೃಶ್ಯಗಳನಿಟ್ಟಿದ್ದಾರಂತೆ’ ಎಂದರು. ನನಗೆ ಅವರ ಭಾವನೆ ಅರ್ಥವಾಯಿತು. ಸಾಹಸ ನಿರ್ದೇಶಕರಿಗೆ ಸೂಕ್ಷ್ಮವಾಗಿ ಈ ವಿಷಯ ಹೇಳಿ ಹೊಡೆದಾಟದ ದೃಶ್ಯಗಳನ್ನು ಕಡಿಮೆ ಮಾಡಿಸಿದೆ. ಆದರೆ ನಂತರ ನಿರ್ಮಾಪಕರಿಗೆ ಅಚ್ಚರಿ. ‘ಫೈಟಿಂಗ್ ಷೂಟಿಂಗ್ ಇಷ್ಟು ಬೇಗ ಮುಗಿಯಿತೆ’  ಎಂದು. ವಿಷಯ ಅವರಿಗೆ ಗೊತ್ತಾಯಿತು. ಅವರು ‘ನಿಮ್ಮ ಷೂಟಿಂಗ್ ಆಯಿತೆ’ ಎಂದು ನನ್ನನ್ನು ಕೇಳಿದ್ರು. ಆಯಿತೆಂದೆ. ನಾನು ಅತ್ತ ಹೋದ ಬಳಿಕ ನನ್ನ ಡ್ಯೂಪ್ ಬಳಸಿ  ಸಿನಿಮಾದ ಖಳನಟ ಮತ್ತೆ ಹೆಚ್ಚು ಏಟುಗಳನ್ನು ತಿನ್ನುವಂಥ ದೃಶ್ಯಗಳನ್ನ ಚಿತ್ರೀಕರಿಸಿದ್ರು !

ನಿರ್ದೇಶಕರು:
ಜಯರಾಂ ಮತ್ತು ಭಗವಾನ್ ನಿರ್ದೇಶನದ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದೇನೆ. ಜಯರಾಂ ನನಗಿಂತ ವಯಸ್ಸಿನಲ್ಲಿ ಕಿರಿಯ. ಆದರೆ ಭಗವಾನ್ ಹಿರಿಯರು.  ಭಾಷೆ ವಿಚಾರದಲ್ಲಿ ನನಗೂ ಭಗವಾನ್ ಅವರಿಗೂ ತುಂಬ ವಾಗ್ವದಗಳಾಗುತ್ತಿದ್ದವು. ನಾನು ಉತ್ತರ ಕನ್ನಡದ ಕಡೆ ಆಡುವ ಕನ್ನಡದಲ್ಲಿ ಮಾತನಾಡುತ್ತಿದೆ. ಆದರೆ ಅವರು ಬೆಂಗಳೂರು-ಮೈಸೂರು ಕಡೆ ಮಾತನಾಡುವ ಕನ್ನಡದಲ್ಲಿಯೇ ಮಾತನಾಡಬೇಕೆಂದು ಹೇಳುತ್ತಿದ್ದರು. ಸಿನಿಮಾದಲ್ಲಿ ನಟನೆ ಮಾತ್ರ ಮುಖ್ಯ. ಯಾವ ಕಡೆ ಕನ್ನಡ ಆದರೇನು, ಕನ್ನಡ ತಾನೇ ಎನ್ನುತ್ತಿದ್ದೆ. ಈ ರೀತಿ ತುಂಬ ಚರ್ಚೆಗಳಾಗುತ್ತಿದ್ದರೂ ಇದು ನಮ್ಮ ಬಾಂಧವ್ಯಕ್ಕೆ ಅಡ್ಡಿಯಾಗಿರಲಿಲ್ಲ.

ಭಾಷೆ ಬಳಕೆ ವಿಚಾರಕ್ಕೆ ಬಂದಾಗ ಗಿರೀಶ್ ಕಾರ್ನಾಡ್ ಅವರು ಒಂದಾನೊಂದು ಕಾಲದಲ್ಲಿ ಸಿನಿಮಾದಲ್ಲಿ ಉತ್ತರ ಕನ್ನಡ-ಉತ್ತರ ಕರ್ನಾಟಕದ ಭಾಷೆ ಬಳಕೆ ಮಾಡಿದ್ರು. ಆಗಲೂ ತುಂಬ ಆಕ್ಷೇಪಣೆ ಬಂದವು. ಸಿನಿಮಾ ಚೆನ್ನಾಗಿದೆ. ಆದರೆ ಭಾಷೆ ಅರ್ಥವೇ ಆಗುವುದಿಲ್ಲವೆಂದು ಕೆಲವರು ಹೇಳಿದ್ರು.

ಪಾತ್ರ-ಪ್ರಭಾವ-ಸಿದ್ದತೆ-ನಿರ್ದೇಶನ
ರಂಗಭೂಮಿಯಲ್ಲಿ ಸಾಕಷ್ಟು ಪೌರಾಣಿಕ-ಐತಿಹಾಸಿಕ ಪಾತ್ರಗಳನ್ನು ಮಾಡಿದ್ದೇನೆ. ಆದರೆ ಸಿನಿಮಾಗಳಲ್ಲಿ ಕಡಿಮೆ. ಡಾ. ರಾಜ್ ಕುಮಾರ್ ಅವರೊಂದಿಗೆ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ನಾರದನ ಪಾತ್ರ ಮಾಡಿದ್ದೇನೆ. ನಾರದ-ವಿಜಯ ಸಿನಿಮಾದಲ್ಲಿಯೂ ನಾರದನ ಪಾತ್ರ ಮಾಡಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಮತ್ತು ಸವಾಲು ಎನಿಸುವಂಥ ಪಾತ್ರಗಳು ನನಗೆ ದೊರೆತಿವೆ. ಕಾಮಿಡಿ ಚಿತ್ರಗಳಲ್ಲಿಯೂ ಮಾಡಿದ್ದೇನೆ. ಇಂಥ ಪಾತ್ರಗಳ ಉತ್ತಮ ನಿರ್ವಹಣೆ ಕೂಡ ಸವಾಲು. ಹಿಂದಿ ಅಥವಾ ಬೇರೆ ಚಿತ್ರರಂಗದಲ್ಲಿ ಇಷ್ಟು ಅವಕಾಶ ದೊರೆಯುತ್ತಿರಲ್ಲಿಲ್ಲವೆಂಬುದು ನನ್ನ ಭಾವನೆ. ನನ್ನ ನಟನೆಯ ಮೇಲೆ ಇಂಥವರದೇ ನಿರ್ದಿಷ್ಟ ಪ್ರಭಾವ ಆಗಿದೆ ಎಂದು ಹೇಳುವುದು ಕಷ್ಟ. ನಮಗೆ ಅರಿವಿಲ್ಲದಂತೆ ಅನೇಕ ನಟರ ಪ್ರಭಾವ ಆಗಿರಲೂಬಹುದು ಅಥವಾ ಆಗಿರದೆಯೂ ಇರಬಹುದು. ನಟನೆಗೆ ಬೇಕಾದ ಸಿದ್ದತೆ ಬಗ್ಗೆ ಹೇಳಬೇಕಾದರೆ ಇದು ತುಂಬ ಮುಖ್ಯ. ತಾನು ಅಭಿನಯಿಸುವ ಪಾತ್ರದ ಬಗ್ಗೆ ಪೂರ್ವಸಿದ್ದತೆಯಿದ್ದರೆ ಅದಕ್ಕೆ ಹೆಚ್ಚು ನ್ಯಾಯ ಒದಗಿಸಲು ಸಾಧ್ಯ. ನಟ-ನಟಿ ಕ್ಯಾಮರಾದ ರೀತಿ ಇರಬೇಕು. ನೋಡಿದನ್ನು ಸೂಕ್ಷ್ಮವಾಗಿ ಗ್ರಹಿಸುವ ಗುಣ ಬೆಳೆಸಿಕೊಳ್ಳಬೇಕು. ರಂಗಭೂಮಿಯಲ್ಲಿ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ತಮ್ಮ ಶಂಕರ ಈ ವಿಭಾಗದಲ್ಲಿ ಕೆಲಸ ಮಾಡಲು ಬಂದಾಗ ನಾನು ಹಿಂದೆ ಸರಿದೆ. ನಿರ್ದೇಶನದಲ್ಲಿ ಅವನಿಗೆ ಅಪಾರ ಉತ್ಸಾಹವಿತ್ತು. ಇದರಿಂದಾಗಿಯೆ ಆಕ್ಸಿಡೆಂಟ್-ಮಿಂಚಿನ ಓಟ-ನೋಡಿ ಸ್ವಾಮಿ ನಾವಿರೋದೆ ಹೀಗೆ ಇತ್ಯಾದಿ ಸಿನಿಮಾಗಳನ್ನು ಮಾಡಿದ. ಈ ಚಿತ್ರಗಳು ಹೆಚ್ಚು ಹಣ ಮಾಡದೇ ಇದ್ದರೂ ಆತ್ಮತೃಪ್ತಿ ನೀಡಿವೆ. ಮಾಲ್ಗುಡಿ ಡೇಸ್ ನಂಥ ಧಾರವಾಹಿ ನೀಡುವುದಕ್ಕೂ ಅವನಿಗೆ ಸಾಧ್ಯವಾಯಿತು. ಈ ಧಾರವಾಹಿ ಶಂಕರನಿಗೆ ರಾಷ್ಟ್ರೀಯ-ಅಂತರಾಷ್ಟ್ರೀಯ ಖ್ಯಾತಿ ತಂದು ಕೊಟ್ಟಿತು.

ಸಿನಿಮಾ ಹಂಚಿಕೆ ಮತ್ತು ಚಿತ್ರರಂಗದ ಶಿಸ್ತು:
ಸರಕಾರವೇ ಎಲ್ಲವನ್ನೂ ಮಾಡಬೇಕು ಎಂಬ ಧೋರಣೆ ಎಲ್ಲ ಸಂದರ್ಭಗಳಿಗೂ ಸೂಕ್ತವಾಗುವುದಿಲ್ಲ. ಕಲಾತ್ಮಕ ಸಿನಿಮಾಗಳನ್ನು ಮಾಡಲು ಸರಕಾರ ಹಣಕಾಸು ನೆರವು ನೀಡುತ್ತಿತ್ತು. ಆದರೆ ಬಿಡುಗಡೆಗೂ ತನಗೂ ಯಾವ ಜವಾಬ್ದಾರಿ ಇಲ್ಲವೆಂದು ಸುಮ್ಮನಾಗುತ್ತಿತ್ತು. ಇದೇ ಕಾರಣದಿಂದ ಎಂ.ಎಸ್.ಸತ್ಯು ನಿರ್ದೇಶನದಲ್ಲಿ ನಾನು ನಟಿಸಿದ್ದ ‘ಬರ’ಚಲನಚಿತ್ರ ಬಿಡುಗಡೆಯಾಗುವುದು ಕಷ್ಟವಾಯಿತು. ಎನ್.ಎಫ್.ಡಿ.ಸಿ. ಇದಕ್ಕೆ ಹಣಕಾಸು ನೆರವು ನೀಡಿತ್ತು. ಸಿನಿಮಾ ಬಿಡುಗಡೆಗೆ ಕೆ.ಎಫ್.ಡಿ.ಸಿ. ಕೂಡ ನೆರವಿಗೆ ಬರಲಿಲ್ಲ. ಆಗ ನಾನೇ ಸಾಲ ಮಾಡಿ ಚಿತ್ರ ಹಂಚಿಕೆ ಮಾಡಿದೆ. ಸಿನಿಮಾ ಯಶಸ್ವಿಯೂ ಆಯಿತು. ಆದರೆ ಮುಂದೆ ಫಣಿಯಮ್ಮ ಚಿತ್ರ ಹಂಚಿಕೆ ಮಾಡಿದಾಗ ನಷ್ಟ ಉಂಟಾಯಿತು. ಚಿತ್ರರಂಗದ ಶಿಸ್ತು ಬಗ್ಗೆ ಹೇಳುವುದಾದರೆ ಈಗಲೂ ಅತ್ಯಂತ ಶ್ರದ್ಧೆ-ಆಸಕ್ತಿಯಿಂದ ಸಿನಿಮಾ ಮಾಡುವವರು ಇದ್ದಾರೆ. ಇದರ ಜೊತೆಗೆ ಬಹಳಷ್ಟು ಹಣ ಸಂಪಾದಿಸಿ ಮಗ-ಅಳಿಯ ಇಂಥವರನ್ನು ನಾಯಕ ನಟರನ್ನಾಗಿ ನೋಡುವ ಹಂಬಲದಿಂದ ಚಿತ್ರ ನಿರ್ಮಿಸುವಂಥವರೂ ಇದ್ದಾರೆ. ಇದೆಲ್ಲ ಸಾಮಾನ್ಯ.

ಸಬ್ಸಿಡಿ:
ಖಂಡಿತವಾಗಿಯೂ ಚಲನಚಿತ್ರಗಳಿಗೆ ಸಬ್ಸಿಡಿ ಅಗತ್ಯವಿದೆ. ಆದರೆ ಒಂದೊಂದು ಸರಕಾರ ಬಂದಾಗಲೂ ಸಬ್ಸಿಡಿ ಧೋರಣೆಗಳೂ ಬದಲಾಗುತ್ತವೆ. ಇಂಥ ಪರಿಸ್ಥಿತಿ ನಿವಾರಣೆಯಾಗಿ ಒಂದು ಸ್ಥಿರವಾದ ಸಬ್ಸಿಡಿ ಕಾಯಿದೆ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಚಿತ್ರರಂಗ ಮತ್ತು ಸರಕಾರ ಚರ್ಚೆ ಮಾಡಿ ಏಕಸೂತ್ರ ಕಂಡುಕೊಳ್ಳಬೇಕು.

ಟೆಲಿವಿಷನ್:
ಆರಂಭದಲ್ಲಿ ಸಿನಿಮಾದಲ್ಲಿ ಪ್ರಸಿದ್ದರಾದವರು ಟೆಲಿವಿಷನ್ ನಲ್ಲಿ ನಟಿಸುವುದಕ್ಕೆ ಅಭ್ಯಂತರವಿತ್ತು. ಇವರು ಟಿವಿಯಲ್ಲಿ ಹೆಚ್ಚು ಕಾಣಿಸಿಕೊಂಡ್ರೆ ಇವರು ನಟಿಸಿದ ಸಿನಿಮಾ ನೋಡೋದಿಕ್ಕೆ ಯಾರೂ ಬರ್ತಾರ್ರಿ ಎನ್ನುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಸಿನಿಮಾದವರೇ ಹೆಚ್ಚೆಚ್ಚು ಟಿವಿಗಳಿಗೆ ಹೋಗುವುದಕ್ಕೆ ಹಾತೊರೆಯುತ್ತಿದ್ದಾರೆ. ಕಲಾತ್ಮಕ ವಿಷಯಗಳನ್ನು ಟಿವಿಯಲ್ಲಿ ನೀಡುವುದಕ್ಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು.

ರಾಜಕೀಯ:
1974ರಲ್ಲಿ ಆರಂಭವಾದ ಜೆ.ಪಿ.ಚಳವಳಿಗೆ ಆಕರ್ಷಿತನಾದೆ. ಇದರಿಂದ ರಾಜಕೀಯ ರಂಗದವರ ಪರಿಚಯ ಆಯಿತು. ಕನ್ನೇಶ್ವರರಾಮ ಸಿನಿಮಾ ಸಂದರ್ಭದಲ್ಲಿ ಶಿವಮೊಗ್ಗ ಜೈಲಿಗೆ ಷೂಟಿಂಗ್ ಗೆ ಹೋದಾಗ ಜೆ.ಎಚ್.ಪಟೇಲರ ಪರಿಚಯವಾಯಿತು. 1983ರಲ್ಲಿ ಕರ್ನಾಟಕದಲ್ಲಿ ಚುನಾವಣೆ ಆದಾಗ ರಾಮಕೃಷ್ಣ ಹೆಗಡೆ ಅವರ ಪರಿಚಯ ಆಯಿತು. ‘ನಿಮ್ಮ ಸಿನಿಮಾ ವೃತ್ತಿಗೆ ರಾಜಕೀಯ ಅಡ್ಡಿಯಾಗಬಹುದು ಎಂದು ಹೆಗಡೆಯವ್ರು ಹೇಳಿದ್ರು. ನಾನು ಮತ್ತು ಶಂಕರನಾಗ್ ಪ್ರಚಾರದಲ್ಲಿ ತೊಡಗಿಸಿಕೊಂಡ್ವಿ. 1998ರಲ್ಲಿ ಎಂ.ಎಲ್.ಸಿ. ಮಾಡಿದ್ರು. 1994ರಲ್ಲಿ ಮಂತ್ರಿ ಮಾಡಿದ್ರು. ಸಚಿವನಾಗಿದ್ದ ಮೂರು ವರ್ಷದ ಅವಧಿಯಲ್ಲಿ ಸಿನಿಮಾಗಳಲ್ಲಿ ಮಾಡಲಿಲ್ಲ. ಸಚಿವನಾಗುವುದಕ್ಕೂ ಜೆ.ಎಚ್.ಪಟೇಲರ ಒತ್ತಾಯವೇ ಕಾರಣ. ಒಮ್ಮೆ ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ ಅವರೊಂದಿಗೆ ಚುನಾವಣಾ ಪ್ರಚಾರಕ್ಕೆ ಹೋದಾಗ ಅಧಿಕಾರಕ್ಕಾಗಿ ರಾಜಕೀಯಕ್ಕೆ ಬರಲಿಲ್ಲ ಎಂದಿದ್ದೆ. ಆಗ ಹೆಗಡೆ ಮತ್ತು ಪಟೇಲರು ಅಧಿಕಾರ ಬೇಡದಿದ್ರೆ ರಾಜಕೀಯ ಮಾಡಲು ಏಕೆ ಬರಬೇಕು. ಅಧಿಕಾರ ಬೇಡ ಅಂದ್ರೆ ಅಂಜುಬರುಕತನ ಆಗುತ್ತೆ ಅಂತ ಬುದ್ದಿ ಹೇಳಿದ್ರು. ಆ ಸಂದರ್ಭದಲ್ಲಿ ಆ ರೀತಿ ನನ್ನ ರಾಜಕೀಯ ತಿಳಿವಳಿಕೆಯಿತ್ತು. ಸಚಿವನಾದ ನಂತರ ಕನ್ನಡ ಚಿತ್ರರಂಗಕ್ಕೆ ನನ್ನಿಂದಾಷ್ಟು ಸಹಾಯ ಮಾಡಿದ್ದೇನೆ. ಬೆಂಗಳೂರು ಬೆಳವಣಿಗೆ ಬಗ್ಗೆ ಸಾಕಷ್ಟು ಕನಸಿತ್ತು. ನಮ್ಮ ಅವಧಿಯಲ್ಲಿಯೆ ಬೆಂಗಳೂರಿನ ಶಿರ್ಸಿ (ಟೌನ್ ಹಾಲ್ ಮುಂದಿನ) ಫ್ಲೈ ಓವರ್ ನಿರ್ಮಾಣಕ್ಕೂ ಚಾಲನೆ ದೊರೆಯಿತು. ಇನ್ನೂ ಸಾಕಷ್ಟು ಕೆಲಸ ಮಾಡಬೇಕೆಂದು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಣಕಾಸು ಕೂಡ ಕ್ರೋಢೀಕರಣ ಆಗಿತ್ತು. ಆದರೆ ಅವುಗಳಿಗೆ ನಾನಾ ಅಡೆ-ತಡೆಗಳು ಬಂದವು. ಅದನ್ನೆಲ್ಲ ನೋಡಿದ್ರೆ ಸಿನಿಮಾನೇ ವಾಸಿ ಎನಿಸುತ್ತೆ.
ಗಾಯನ
 ತಮ್ಮ ಶಂಕರ:
ಚಿತ್ರಗಳಲ್ಲಿ ನಟಿಸುವುದು ಶಂಕರನಾಗ್ ಗೆ ಇಷ್ಟವಿರಲಿಲ್ಲ. ಆತ ಕೂಡ ರಂಗಭೂಮಿಯಿಂದ ಬಂದವನು. ನನ್ನ ಬಲವಂತದಿಂದಾಗಿಯೇ ಒಂದಾನೊಂದು ಕಾಲದಲ್ಲಿ ಸಿನಿಮಾದಲ್ಲಿ ಮಾಡಿದ. ಅದು ಸಂಪೂರ್ಣ ಯಶಸ್ವಿಯಾಯಿತು. ಮುಂದಿನದ್ದೆಲ್ಲ ನಿಮಗೆ ಗೊತ್ತಿದೆ. 13 ವರ್ಷ ಚಿತ್ರರಂಗದಲ್ಲಿದ್ದ. ಅವನಿಲ್ಲದೇ ಈಗ 21 ವರ್ಷಗಳಾಗಿವೆ. ಲಂಕೇಶ್ ಅವರ ಒತ್ತಾಯದಿಂದ ನನ್ನ ಮತ್ತು  ಶಂಕರ್ ನಡುವಿನ ಬಾಂಧವ್ಯ ಕುರಿತ ಲೇಖನಗಳನ್ನು ಬರೆದೆ. ಅದು ಲಂಕೇಶ್ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡಿತು. ಪುಸ್ತಕವೂ ಆಯಿತು. ಶಂಕರ್ ಕುರಿತು ಮತ್ತೆ ಮತ್ತೆ ಹೆಚ್ಚು ಮಾತನಾಡಲು ಸಾಧ್ಯವಾಗುವುದಿಲ್ಲ( ಹೀಗೆ ಹೇಳುವಾಗ ಅನಂತ್ ತುಂಬ ಭಾವುಕರಾಗಿದ್ದರು) ಎಲ್ಲ ವಿಷಯಗಳನ್ನು ಪುಸ್ತಕದಲ್ಲಿ ಹೇಳಿದ್ದೇನೆ.
ಅನಂತ್ ನಾಗ್ ಅವರ ಮಾತುಗಳನ್ನು ಕೇಳಿದ ಅಭಿಮಾನಿ ಬಳಗದ ಮನ ಕೂಡ ಭಾರವಾಗಿತ್ತು………………………….

7 comments:

 1. ಅನಂತ ತುಂಬಾ ಸಹಜವಾಗಿ ನಟಿಸುತ್ತಾರೆ. ಹಾಗಾಗಿ ನನಗೆ ಅವರು ತುಂಬಾ ಇಷ್ಟ.
  ಎಲ್ಲೂ ಅತೀರೇಕಗಳನ್ನು ಮಾಡುವದಿಲ್ಲ.

  ಅವರ ಮಾತುಗಳೂ ಹಾಗೆ.

  ನನ್ನ ಕಾಲೇಜು ದಿನಗಳಲ್ಲಿ ಅವರ ಹಾಗು ಲಕ್ಷ್ಮಿಯವರ ಜೋಡಿ ತುಂಬಾ ಪ್ರಸಿದ್ಧ.

  ಗಾಳಿ ಮಾತು, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು ಇತ್ಯಾದಿ..

  ನನಗೆ "ಧೈರ್ಯ ಲಕ್ಷ್ಮಿ" ಎನ್ನುವ ಸಿನೇಮ ಬಹಳ ಇಷ್ಟವಾಗಿತ್ತು.

  ಹೆಣ್ಣುಮಕ್ಕಳಿಗೆ ಹೆದರುವ ಪಾತ್ರ..
  ಆವರ ಅಭಿನಯ ಅಲ್ಲಿ ಸೂಪರ್.

  ಹಳೆಯ ನೆನಪುಗಳನ್ನು ಕೆದಕಿದ್ದಕ್ಕೆ..ಧನ್ಯವಾದಗಳು..

  ReplyDelete
 2. ಚಿತ್ರ-ಲೇಖನ ತುಂಬ ಇಷ್ಟ ಆಯ್ತು.ಅಪರೂಪದ ವ್ಯಕ್ತಿತ್ವದ ಸೀದಾ ಸಾದಾ ಮಾತುಕತೆಯನ್ನು ಅತ್ಯಂತ ಚೆನ್ನಾಗಿ ನಿರೂಪಿಸಿದ್ದೀರಿ. ಅಭಿನಂದನೆಗಳು

  ReplyDelete
 3. ಅಪರೂಪದ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. - ramakrishna

  ReplyDelete
 4. nijakku bahala olleya collection. adarallu shankarnag and ananth nag baalyada photo agale idda athmavishvasa thorisiddalade. " hegiddaralwa?" annisitu. bahushaha anath avarige aa photo nodi " aa photo thegeda sandharba, avaribbara aa kshanada nenapu moddi bandu manassu odde agiralebeku. lekhanavanthu as ushal good:)

  ReplyDelete
 5. ಕುಮಾರ ರೈತTuesday, 11 October, 2011

  ಇಲ್ಲಿರುವ ಕಪ್ಪು-ಬಿಳುಪು ಮತ್ತು ಅನಂತನಾಗ್ ಅವರು ತಮ್ಮ ಪತ್ನಿ-ಮಗಳೊಂದಿಗಿರುವ ಚಿತ್ರಗಳೆಲ್ಲ ಈ ಮೇರುನಟನ ಖಾಸಗಿ ಸಂಗ್ರಹದ ಚಿತ್ರಗಳು. ಇವರ ಬೆಳ್ಳಿಹೆಜ್ಜೆ ಕಾರ್ಯಕ್ರಮದ ಸಂದರ್ಭದಲ್ಲಿ ಇವು ಪ್ರದರ್ಶಿತವಾಗಿದ್ದವು. ಉಳಿದಂತೆ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಅನಂತ್ ಇರುವ ಚಿತ್ರಗಳೆಲ್ಲ ನಾನು ಕ್ಲಿಕ್ಕಿಸಿದ್ದು...

  ReplyDelete
 6. ಅನಂತ್ ನನಗೂ ಬಹಳ ಇಷ್ಟವಾದ ನಟರಲ್ಲೊಬ್ಬ...ಅದರಲ್ಲೂ ಕಲಾತ್ಮಕ ಚಿತ್ರಗಳೆಂದರೆ ಅವರ ಅಭಿನಯ ಸೂಪರ್...ಗಣೇಶ್ ಚಿತ್ರ ಅರಮನೆಯಲ್ಲಿ ನನಗೆ ಅನಂತ್ ನಾಯಕ ಆನಿಸಿದ್ದು ನಿಜ...

  ReplyDelete