• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಕಪ್ಪಾಗಿದ್ದರೆ ಖುಷಿ ಪಡಲು ಕಾರಣಗಳಿವೆ…!

ಭಾರತದಲ್ಲಿ ಕಪ್ಪು ಬಣ್ಣದವರನ್ನೆ ಗುರಿಯಾಗಿಟ್ಟುಕೊಂಡು ಉತ್ಪನ್ನಗಳನ್ನು ತಯಾರು ಮಾಡುತ್ತಿರುವ ಕಂಪನಿಗಳಿವೆ. ‘ಕೆಲವೇ ದಿನ/ವಾರಗಳಲ್ಲಿ ಗೌರವರ್ಣ ಪಡೆಯಿರಿ’ ಎಂದೆಲ್ಲ ಜಾಹಿರಾತು ನೀಡುತ್ತಾ ಕೋಟ್ಯಾಂತರ ರುಪಾಯಿ ಹಣ ಗಳಿಸಲಾಗುತ್ತಿದೆ. ಇದಕ್ಕೆಲ್ಲ ಕಾರಣ ಕಪ್ಪು ವರ್ಣದ ಬಗ್ಗೆ ಇರುವ ಕೀಳಿರಿಮೆ ಮನೋಭಾವ. ಭಾರತೀಯರ ಈ ಮನೋಧರ್ಮ ಬಹುರಾಷ್ಟ್ರೀಯ ಕಂಪನಿಗಳ ಹೇರಳ ಸಂಪಾದನೆಗೂ ಅವಕಾಶ ಕೊಟ್ಟಿದೆ. ಇದಕ್ಕೆಲ್ಲ ಮೂಲ ಕಾರಣವಾದ ಕಪ್ಪು ಬಣ್ಣದ ಬಗ್ಗೆ ಕೀಳರಿಮೆ ಸರಿಯೆ..?
 ಭಾರತೀಯ ಟಿ.ವಿ.ಚಾನಲ್ ಗಳ ಸುದ್ದಿವಾಚಕಿಯರ ಮೇಕಪ್ ಹೆಚ್ಚಾಗಿರುತ್ತದೆ.ಅದರಲ್ಲೂ ದಕ್ಷಿಣ ಭಾರತೀಯರ ಸಿನಿಮಾ/ ವಾಹಿನಿಗಳಲ್ಲಿ ಇನ್ನೂ ಅಧಿಕ ಮೇಕಪ್…!  ಕಪ್ಪಗಿರುವ ನಟಿಯರು/ವಾಚಕಿಯರಂತೂ ಮುಂಗೈಗೂ ಮೇಕಪ್ ಮಾಡಿಸಿಕೊಂಡಿರುತ್ತಾರೆ. ಆದರೆ ಇವರ ಕುತ್ತಿಗೆ,ಕಿವಿಗಳಿಗೆ ಮೇಕಪ್ ಟಚ್ ಕೊಡುವುದನ್ನು ಮೇಕಪ್ ಮ್ಯಾನ್ ಮರೆತಿರುತ್ತಾನೆ. ಇದರಿಂದ ಸ್ಟುಡಿಯೋದ ಪ್ರಖರ ಬೆಳಕಿನಲ್ಲಿ ಈ ವಾಚಕಿಯರು ವಿಚಿತ್ರವಾಗಿ ಕಾಣುತ್ತಿರುತ್ತಾರೆ. ಅದರಲ್ಲೂ ಕ್ಯಾಮರಾ ಕ್ಲೋಸ್ ಅಪ್ ತುಸು ಹೆಚ್ಚಾಗಿದ್ದರಂತೂ ಇನ್ನೂ ಅಸಹಜತೆ. ಇಂಥ ವಾಚಕಿಯರು ಲೋಕಾಭಿರಾಮವಾಗಿ ಮಾತನಾಡುವಾಗ "ಅಯ್ಯೋ ತಾವು ಬೆಳ್ಳಗಿರಬೇಕಿತ್ತು ಎಂದು ಕೊರಗುತ್ತಿರುತ್ತಾರೆ. ನಿಜಕ್ಕೂ ಈ ನಟಿಯರು/ವಾರ್ತಾ ವಾಚಕಿಯರು ತುಂಬ ಆಕರ್ಷಕವಾಗಿಯೇ ಇರುತ್ತಾರೆ. ಆದರೂ ಕೀಳಿರಿಮೆ. ಕಾರಣ ಬಣ್ಣ…!
  ಕಪ್ಪಾಗಿದ್ದರೆ ಕೊರಗುವ ಮನೋಭಾವ ಭಾರತೀಯರಲ್ಲಿ ಎಂದಿನಿಂದ ಪ್ರಾರಂಭವಾಯಿತು ಎಂಬುದೇ ದೊಡ್ಡ ಪ್ರಶ್ನೆ. ಈ ಪ್ರವೃತ್ತಿಯಿಂದ ತಾವ್ಯಾಕೆ ಹೀಗೆ ಹುಟ್ಟಿದೆವೋ ಎಂಬಷ್ಟು ಕೀಳರಿಮೆ ಕಪ್ಪನೆ ಹೆಣ್ಣುಗಳಲ್ಲಿ ಮನೆಮಾಡಿರುತ್ತದೆ. ಇವರಿಗೆ ಹೋಲಿಸಿದರೆ ಕಪ್ಪನೆ ಗಂಡುಗಳಲ್ಲಿ ಇಂಥ ಕೀಳಿರಿಮೆ ಕಡಿಮೆ. ಇದು ಹೆಣ್ಣು-ಗಂಡಿನ ಕುರಿತ ಭಾರತಿಯ ಸಮಾಜದ ಪೂರ್ವಾಗ್ರಹ ಪೀಡಿತ ಭಾವನೆಗೂ ನಿದರ್ಶನ. ಸಾಮಾನ್ಯವಾಗಿ ಹೆಣ್ಣೆತ್ತವರು ಅಂತಿಮವಾಗಿ ಯೋಚಿಸುವುದು, ಆಕೆ ಮದುವೆ ಕುರಿತೆ. ಕಪ್ಪಗಿರುವವಳನ್ನು ಮದುವೆ ಮಾಡಿಕಳುಹಿಸುವುದು ಕಷ್ಟ;ವರದಕ್ಷಿಣೆ ಹೆಚ್ಚು ತೆರಬೇಕು ಎಂಬೆಲ್ಲ ಚಿಂತೆ. ಕಪ್ಪಾಗಿರುವವರು ಚೆನ್ನಾಗಿರುವುದಿಲ್ಲ ಎಂಬಷ್ಟು ಮಟ್ಟಿಗೆ ಪೂರ್ವಗ್ರಹಪೀಡಿತ ಮನೋಭಾವ.

ಪ್ರಾಚೀನ ಭಾರತೀಯರು ಖಂಡಿತಾ ಇಂಥ ಬಣ್ಣ ಪೂರ್ವಾಗ್ರಹಪೀಡಿತರಾಗಿರಲ್ಲಿಲ್ಲ. ಬಹುಶಃ ಬ್ರಿಟಿಷರು ಇಲ್ಲಿ ತಮ್ಮ ಪ್ರಭಾವ ಮೂಡಿಸುವವರೆಗೂ ಇಂಥದೊಂದು ಪೂರ್ವಾಗ್ರಹ ಇದ್ದಿರಲ್ಲಿಕ್ಕಿಲ್ಲ. ಪ್ರಾಚೀನ ಭಾರತೀಯರಂತೂ ಸೌಂದರ್ಯಕ್ಕೂ, ಬಣ್ಣಕ್ಕೂ ಸಂಬಂಧವನ್ನೇ ಕಲ್ಪಿಸಿರಲಿಲ್ಲ. ಇದಕ್ಕೆ ಅತ್ಯುತ್ತಮ ನಿದರ್ಶನ ಶಿವ,ಕೃಷ್ಣ,ರಾಮ ಮತ್ತು ದ್ರೌಪತಿ.

ಪಾಂಚಾಲ ರಾಜ್ಯದ ಮಹಾರಾಜ ಯಜ್ಞಸೇನ(ದ್ರುಪದ)ಮಹಾರಾಜನ ಮಗಳಾದ ದ್ರೌಪದಿ ಜಗದೇಕ ಸುಂದರಿ.ಈಕೆಗೆ ಕೃಷ್ಣೆ,ಪಾಂಚಾಲಿ ಎಂಬ ಹೆಸರುಗಳೂ ಇವೆ. ಕಪ್ಪಗಿದ್ದ ಕಾರಣಕ್ಕೆ ಕೃಷ್ಣೆ ಎಂಬ ಹೆಸರು ಬಂದಿದೆ. ಈಕೆಯ ಅದ್ವೀತಿಯ ಸೌಂದರ್ಯದ ವರ್ಣನೆ ಇತರ ರಾಜ್ಯ,ದೇಶಗಳಲ್ಲಿ ಹರಡಿರುತ್ತದೆ. ಅಲ್ಲಿಯ ರಾಜ-ಮಹಾರಾಜರು ಈಕೆಯನ್ನು ವರಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ದ್ರುಪದ ಮಹಾರಾಜನಿಗೆ ಕೃಷ್ಣೆಯನ್ನು ಅರ್ಜುನನಿಗೆ ಕೊಟ್ಟು ಮದುವೆ ಮಾಡಬೇಕೆನ್ನುವ ಆಕಾಂಕ್ಷೆ. ಪಾಂಡವರು ಅರಗಿನ ಅರಮನೆಯಿಂದ ಪಾರಾಗಿ, ಕೌರವರ ಹಂತಕ ಪಡೆಗೆ ಸಿಲುಕಬಾರದೆನ್ನುವ ಕಾರಣಕ್ಕೆ ವೇಷಧಾರಿಗಳಾಗಿರುತ್ತಾರೆ. ಇವರೆಲ್ಲರು ಪಾಂಚಾಲ (ಕನೌಜ್ ಪ್ರಾಂತ್ಯ) ರಾಜ್ಯದ ರಾಜಧಾನಿ ಸಮೀಪ ಬ್ರಾಹ್ಣಣ ವೇಷಧಾರಿಗಳಾಗಿ ಇರುತ್ತಾರೆ.
 
ಇದೇ ಸಂದರ್ಭದಲ್ಲಿ ದ್ರುಪದ ಮಹಾರಾಜ, ದ್ರೌಪದಿ ಸ್ವಯಂವರ ಏರ್ಪಡಿಸಿರುತ್ತಾನೆ.ಮುಖ್ಯರಾದ ರಾಜಮಹಾರಾಜರಿಗೆ ಆಮಂತ್ರಣ ಹೋಗಿ ಅವರೆಲ್ಲರೂ ಆಗಮಿಸಿರುತ್ತಾರೆ. ಎಲ್ಲರೂ ದ್ರೌಪದಿ ನಿರೀಕ್ಷೆಯಲ್ಲಿರುತ್ತಾರೆ. ಬ್ರಾಹ್ಣಣರ ಮಧ್ಯದಲ್ಲಿ ಪಾಂಡವರು ಕುಳಿತಿರುತ್ತಾರೆ. ಆಗ ಯುವರಾಜ ಧೃಷ್ಟದ್ಯುಮ್ನ ತನ್ನ ಸಹೋದರಿ ಕರೆದುಕೊಂಡು ಸಭಾಮಂಟಪಕ್ಕೆ ಬರುತ್ತಾನೆ. ದ್ರೌಪದಿಯ ಅನುಪಮ ಸೌಂದರ್ಯ ನೋಡಿದವರೆಲ್ಲರೂ ಪಡೆದರೆ ಇಂಥ ಸುಂದರಿಯನ್ನು ಪತ್ನಿಯಾಗಿ ಪಡೆಯಬೇಕು ಎಂದುಕೊಳ್ಳುತ್ತಾರೆ. ಮೊದಲು ಧೃಷ್ಟದ್ಯುಮ್ನ ತನ್ನ ಸಹೋದರಿಗೆ ಅಲ್ಲಿ ನೆರೆದಿದ್ದ ವಧು ಆಕಾಂಕ್ಷಿ ಪ್ರಮುಖರ ಪರಿಚಯ ಮಾಡಿಕೊಡುತ್ತಾನೆ.

"ಕೃಷ್ಣೆ,ಈತ ದುರ್ಯೋಧನ,ಯುಯುತ್ಸು,ಶಲ್ಯ,ವಿರಾಟ,ಬಲರಾಮ.....ನಂತರ ಸಭೆಯನ್ನುದ್ದೇಶಿಸಿ, ‘ಈ ಬಿಲ್ಲಿನ ಹೆದೆಯೇರಿಸಿ, ಎತ್ತರದ ಸ್ತಂಭದ ಮೇಲಿರುವ ಚಲಿಸುತ್ತಿರುವ ಚಕ್ರದ ಹಿಂಭಾಗದಲ್ಲಿರುವ ಲಕ್ಷ್ಯ ಭೇದಿಸಬೇಕುಎನ್ನುತ್ತಾನೆ.ಅಲ್ಲಿರುವ ಭಾರಿ ಬಿಲ್ಲನ್ನು ನೋಡುತ್ತಿದಂತೆಯೇ ಹಲವರ ಉತ್ಸಾಹ ಠುಸ್ಸೆನ್ನುತ್ತದೆ. ಕೆಲವರು ಹುರುಪಿನಿಂದ ಮುಂದೆ ಬಂದು,ಬಿಲ್ಲಿನ ಹೇದೆಯೇರಿಸಲೂ ವಿಫಲರಾಗುತ್ತಾರೆ. ಈ ಪ್ರಯತ್ನದಲ್ಲಿ ಕೆಳಗೆ ಬಿದ್ದು ನಗೆಪಾಟಲಿಗೀಡಾಗುತ್ತಾರೆ. ಸಂದರ್ಭದಲ್ಲಿ ಬ್ರಾಹ್ಣಣರ ಮಧ್ಯದಿಂದ ಅರ್ಜುನ ಎದ್ದುನಿಲ್ಲುತ್ತಾನೆ. ಭಾರಿ ಬಿಲ್ಲನ್ನಿಟ್ಟ ರಂಗಕ್ಕೆ ಈತ ಹೋಗುತ್ತಿದಂತೆ ಕೋಲಾಹಲ !

ಕ್ಷತ್ರೀಯರ ಕೈಲಾಗದ್ದನ್ನು ಈ ಬ್ರಾಹ್ಣಣ ಮಾಡಿಯನೇ ಎಂಬುದೂ ಇದಕ್ಕೆ ಕಾರಣ. ಇವರೆಲ್ಲರ ಅನಿಸಿಕೆ ಸುಳ್ಳುಮಾಡುವ ಅರ್ಜುನ ನಿರಾಯಾಸವಾಗಿ ಪಂಥ ಗೆಲ್ಲುತ್ತಾನೆ. ದ್ರೌಪದಿ ಹಸನ್ಮುಖಿಯಾಗಿ ಮಾಲೆ ಹಾಕುತ್ತಾಳೆ. ಕ್ಷತ್ರೀಯರ ಗುಂಪಿನಲ್ಲಿ ಗೌಜು-ಗದ್ದಲ ಪ್ರಾರಂಭ. ಇಂಥ "ಸ್ತ್ರಿರತ್ನ" ಪಡೆಯಲು ಏರ್ಪಡಿಸಿರುವ ಸ್ವಯಂವರದಲ್ಲಿ ಬ್ರಾಹ್ಣಣನಿಗೇನು ಕೆಲಸ ಎಂದು ಕೂಗಾಡಿ ಗಲಾಟೆ ಆರಂಭಿಸುತ್ತಾರೆ. ಇದನ್ನು ಕೃಷ್ಣ ಶಮನ ಮಾಡುತ್ತಾನೆ.

ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ ಓರ್ವ ಕಪ್ಪು ಹೆಣ್ಣಿನ ಮನ ಗೆಲ್ಲಲ್ಲು ಕಠಿಣ ಪರೀಕ್ಷೆಯ ಸ್ವಯಂವರ ಏರ್ಪಡಿಸಿರುವುದು. ಇವಳನ್ನು ಪಡೆಯಲು ದೊಡ್ಡ ದೊಡ್ಡ ರಾಜ-ಮಹಾರಾಜರು ಕಾತರಿರಿಸಿರುವುದು. .ಆ ಸಂದರ್ಭದಲ್ಲಿ ಕಪ್ಪನೆ ಹೆಣ್ಣಿನ ಕುರಿತು ತಾತ್ಸಾರ ಭಾವನೆ ಇದಿದ್ದರೆ ಇಂಥ ಸನ್ನಿವೇಶ ನಿರ್ಮಾಣವಾಗುತ್ತಿರಲಿಲ್ಲ.

ಧೃಷ್ಟದ್ಯುಮ್ನ ತನ್ನ ಸಹೋದರಿಯನ್ನು ಕರೆಯುವುದು 'ಕೃಷ್ಣೆ'ಎಂದೇ. ಅಂದರೆ ಕಪ್ಪನೆಯವಳೆ ಎಂದರ್ಥ. ಹೀಗೆ ಕರೆಸಿಕೊಳ್ಳುವುದು ಆಗ ಅವಮಾನಕರವೆಂಬ ಭಾವ ಆಗಿರಲಿಲ್ಲವೆಂಬುದು ಇದರಿಂದ ಅರ್ಥವಾಗುತ್ತದೆ. ದ್ರೌಪದಿ ಮೋಹನಾಂಗಿ. ಜಗದೇಕ ಸುಂದರಿ. ಮಹಾಭಾರತದ ನಿಜನಾಯಕಿ ಈ ಮೋಹನಾಂಗಿ.
 ಮಹಾಭಾರತದ ಇನ್ನೋರ್ವ ಮನಮೋಹಕ ಮೋಹನಾಂಗನೆಂದರೆ ಕೃಷ್ಣ. ಈತನ ಮೈಬಣ್ಣ ಕಪ್ಪು. ಆದ್ದರಿಂದಲೇ ಕೃಷ್ಣ ಅರ್ಥಾತ್ ಕರಿಯ ಎಂಬ ಅನ್ವರ್ಥಕನಾಮ. ಶ್ಯಾಮ ಎಂತಲೂ ಕರೆಯುತ್ತಾರೆ. ಹೀಗೆಂದರೂ ಕಪ್ಪನೆಯವನ್ನು ಎಂದರ್ಥ. ದ್ವಾಪರಯುಗವನ್ನು ಆವರಿಸಿಕೊಂಡ ಚೇತನವೆಂದರೆ ಕೃಷ್ಣ....

ದ್ವಾಪರಯುಗಕ್ಕಿಂತಲೂ ಮೊದಲಿನ ತ್ರೇತ್ರಾಯುಗದ ನಾಯಕ ರಾಮ. ಈತನ ಮೈಬಣ್ಣವೂ ಕಪ್ಪು. ರಾಮ ಎಂದರೆ ಕಪ್ಪು ಎಂಬರ್ಥವೂ ಇದೆ.ರಾಮ ಅದ್ವೀತಿಯ ಚೆಲುವ. ವಿಶ್ವಾಮಿತ್ರನಿಗೆ ಸಹಾಯ ಮಾಡಿ ಮಿಥಿಲಾನಗರ ಪ್ರವೇಶ ಮಾಡಿದಾಗ ಅಲ್ಲಿನ ಜನತೆ ಈತನ ಅನುಪಮ ಸೌಂದರ್ಯ ನೋಡಿ ನಿಬ್ಬೆರಗಾಗುತ್ತದೆ.ಈ ವರ್ತಮಾನ ಸೀತೆಗೂ ತಲುಪಿ ಆಕೆಯೂ ಈ ಚೆಲುವನನ್ನು ಕಾಣಲು ಕಾತರಳಾಗುತ್ತಾಳೆ. ರಾಮನನ್ನು ಮೊದಲ ಬಾರಿಗೆ ಸಂದರ್ಶಿಸಿದಾಗ ತನ್ನ ಸಖಿಯರು ವರ್ಣಿಸಿದಕ್ಕಿಂತಲೂ ಈ ರಾಮ ಸುಂದರನಾಗಿದ್ದಾನೆ ಎಂದುಕೊಳ್ಳುತ್ತಾಳೆ. ಈಕೆ ಶ್ವೇತ ವರ್ಣೆ. ರಾಮ ಕಪ್ಪು.ಕರಿಯ ಎಂಬ ತೆಗಳಿಕೆ ಭಾವ ಆಗ ಚಾಲ್ತಿಯಲ್ಲಿದ್ದರೆ ಸೀತೆಗಿಂತ ಭಾವನೆ ಬರುತ್ತಿರಲ್ಲಿಲ್ಲವೇನೋ. ತ್ರೇತ್ರಾ ಯುಗದ ಈ ಶ್ವೇತವರ್ಣೆ ನಾಯಕಿಯನ್ನು ಮದುವೆಯಾದವನು ಕಪ್ಪನೆಯ ರಾಮ. ದ್ವಾಪರಯುಗದ ಕಪ್ಪುವರ್ಣೆ ನಾಯಕಿಯನ್ನು ಮದುವೆಯಾದವನು ಶ್ವೇತವರ್ಣದ ಅರ್ಜುನ.

ಕರಾವಳಿ ತೀರದ ಕೇರಳ, ತಮಿಳುನಾಡುಗಳ ನಸುಗಪ್ಪು. ಕಪ್ಪು ಹೆಣ್ಣುಗಳ ದೇಹ ಸೌಂದರ್ಯ ಅಪೂರ್ವ. ಇದೇ ರೀತಿ ದಕ್ಷಿಣ ಭಾರತದ ಕಾಡುಗಳಲ್ಲಿರುವ ಬುಡಕಟ್ಟು ಜನಾಂಗಗಳ ಕಪ್ಪನೆಯ ಹೆಣ್ಣುಗಳ ಸುಂದರತೆ ಕೂಡ. ಆದರೆ ಇಂಥ ಅಪರೂಪದ ಸೌಂದರ್ಯ,ಕಪ್ಪು ಎಂಬ ತಾತ್ಸಾರ ಮನೋಭಾವದಡಿ ಮರೆಯಾಗಿದೆ.
 
ಕಪ್ಪಾಗಿರುವವರ ಬಗ್ಗೆ ಪ್ರಕೃತಿಯೂ ಒಲವು ಹೊಂದಿದೆ.ಕಪ್ಪನೆ ಮೈಬಣ್ಣದವರಿಗೆ 'ಸನ್ ಬರ್ನ್'ಸಾಧ್ಯತೆ ಭಾರಿ ಕಡಿಮೆ.ಅದೇ ರೀತಿ ಚರ್ಮದ ಕಾಯಿಲೆಗಳು ತಗುಲುವ ಸಾಧ್ಯತೆ ಕೂಡ ಕಡಿಮೆ. ಹವಾಮಾನದ ವ್ಯೆಪರಿತ್ಯಗಳನ್ನು ಕಪ್ಪು ಚರ್ಮ ಸುಲಭವಾಗಿ ತಡೆದುಕೊಳ್ಳಬಲ್ಲುದು. ಇಷ್ಟೇಲ್ಲಾ ಹಿನ್ನೆಲೆಯಿರುವ ಕಪ್ಪುವರ್ಣದ ಬಗ್ಗೆ ಭಾರತೀಯರು ತಾತ್ಸಾರ ಮನೋಭಾವನೆ ತಳೆದಿರುವುದು ವಿಷಾದನೀಯ. ಇದನ್ನೆ ಬಂಡವಾಳ ಮಾಡಿಕೊಂಡಿರುವ  ಮುಲಾಮು ಕಂಪನಿಗಳು ವಾರ್ಷಿಕ ಸಾವಿರಾರು ಕೋಟಿ ರುಪಾಯಿ ಗಳಿಸುತ್ತಿವೆ ! ಎಲ್ಲಿಯವರೆಗೂ ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ‘ಗೌರವರ್ಣ ಪಡೆಯಲು ಮುನ್ನುಗಿ’ ಎನ್ನುತ್ತಾ ಪೊಳ್ಳು ಜಾಹೀರಾತುಗಳನ್ನು ತೋರಿಸುವಂಥ ಕಂಪನಿಗಳು ಇದ್ದೇ ಇರುತ್ತವೆ. ಇಂಥ ಕ್ರೀಮುಗಳನ್ನು ಬಳಸುವುದು ಕೂಡ ಚರ್ಮದ ಆರೋಗ್ಯಕ್ಕೆ ಹಾನಿಕರ. ದುಡ್ಡು ಕೊಟ್ಟು ತೊಂದರೆ ತೆಗೆದುಕೊಳ್ಳಬೇಕೆ..?

2 comments:

 1. ಕಪ್ಪು ಬಣ್ಣದವರಿಗೆ ತಲೆ ಕೂದಲು ಸಹ ತುಂಬಾ ಚೆನ್ನಾಗಿರುತ್ತದೆ ಕಣ್ರೀ . ದಟ್ಟ , ನೀಳ ಕಪ್ಪನೆಯ ಕೇಶ ವನ್ನು ಹೊಂದಿರುತ್ತಾರೆ. ಗಮನಿಸಿದ್ದೀರಾ?

  ReplyDelete
 2. ಗೌರ ವರ್ಣ ಪಡೆಯಲು ಈಗ ಪುರುಷರೂ ಯತ್ನಿಸುತ್ತಿದ್ದಾರೆ. ಅದಕ್ಕೆಂದೇ ಜಾಹಿರಾತುಗಳಲ್ಲಿ ಪುರುಷರಿಗಾಗಿಯೇ ಈ ಕ್ರೀಮ್ ಎಂದು ತೋರಿಸಲಾಗುತ್ತಿದೆ. ಚರ್ಮದ ಬಣ್ಣಕ್ಕೆ ಕಾರಣ ಚರ್ಮದಡಿಯಲ್ಲಿರುವ ಮೆಲನಿನ್ ಎಂಬ ವರ್ಣದ್ರವ್ಯ. ಅದನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂಬುದೂ ನಮ್ಮವರಿಗೆ ತಿಳಿದಿಲ್ಲ. ಆದರೂ ಬ್ಲೇಡ್ ಕಂಪನಿಗಳಿರುವವರೆಗೆ ನಮ್ಮವರು ತಮ್ಮ ತಲೆಯನ್ನು ಕೊಡುತ್ತಲೇ ಇರುತ್ತಾರೆ. ಏನಂತೀರಿ?

  ReplyDelete