• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಮಾಧ್ಯಮ ತನಿಖಾ ವರದಿಗೆ ಸಿಬಿಐ ತನಿಖೆ ಪುಷ್ಟಿ. . .!

ಬಳ್ಳಾರಿಯ ನೂತನ ವಿಮಾನ ನಿಲ್ದಾಣಕ್ಕೆ ಹೊಸಪೇಟೆ ಸನಿಹದ ಪಾಪಿನಾಯಕನ ಹಳ್ಳಿಯಲ್ಲಿ 800 ಎಕರೆ ಭೂಮಿ ಗುರುತಿಸಲಾಗಿತ್ತು. ಎಂ.ಪಿ. ಪ್ರಕಾಶ್ ಅವರು ಸಚಿವರಾಗಿದ್ದ ಸಮಯದಲ್ಲಿ ಈ ಕೆಲಸ ಆಗಿತ್ತು. ಇಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಯಾರದೂ ತಕರಾರಿರಲಿಲ್ಲ. ಮಳೆಯಾಶ್ರಿತ ಭೂಮಿ. ಸುತ್ತಮುತ್ತಲಿನ ಹಳ್ಳಿಗರು ಗಣಿ ಮತ್ತು ಇತರ ಕೆಲಸಗಳಲ್ಲಿಯೆ ಹೆಚ್ಚು ತೊಡಗಿಸಿಕೊಂಡವರು. ಆದರೆ ಇತ್ತ ಸಚಿವ ಜನಾರ್ದನ ರೆಡ್ಡಿ ತಿರುಗಿಯೂ ನೋಡಲಿಲ್ಲ. ಇದಲ್ಲದೇ  ಇನ್ನು ಮೂರು ಸ್ಥಳಗಳನ್ನು ಗುರುತಿಸಲಾಗಿತ್ತು. ಇವೆಲ್ಲವುಗಳನ್ನು ಒಂದಲ್ಲ ಒಂದು ಕಾರಣ ಕೊಟ್ಟು ತಿರಸ್ಕರಿಸಲಾಯಿತು. ಆದರೆ ಆಯ್ಕೆಯಾಗಿದ್ದು ಮಾತ್ರ ಅತ್ಯಂತ ಫಲವತ್ತಾದ ಕೃಷಿಭೂಮಿ. ರೈತರ ಅಪಾರ ವಿರೋಧದ ನಡುವೆಯೂ ಇಲ್ಲಿ ಭೂ ಸ್ವಾಧೀನದ ಪ್ರಕ್ರಿಯೆ ನಡೆಯತೊಡಗಿತು. ಇಷ್ಟೆಲ್ಲ ವಿರೋಧವಿದ್ದರೂ, ಬಳ್ಳಾರಿಯಲ್ಲಿ ಸಾಕಷ್ಟು ಒಣಭೂಮಿ ಇದ್ದರೂ ಸಿರಿವಾರ-ಚಾಗನೂರಿನ ಪ್ರದೇಶವೇ ಆಯ್ಕೆಯಾಗಿದ್ದು ಏಕೆ ಎಂಬ ಯೋಚನೆ ನನ್ನನ್ನು ತೀವ್ರವಾಗಿ ಕಾಡತೊಡಗಿತು. ಯೋಚಿಸುತ್ತಲೇ ಕೂರಲಿಲ್ಲ. ತನಿಖಾ ವರದಿಗೆ ತೊಡಗಿದೆ. ಆಗ ಹೊರ ಬಂದ ಫಲಿತಾಂಶ…
ನೆಲ ನೋಡದ ರೆಡ್ಡಿ
 ಪ್ರಾಣ ಕೊಟ್ಟೆವು; ಭೂಮಿ ಕೊಡೆವು:
ಸಿರಿವಾರದ ರೈತರು ಅಕ್ಷರಶಃ ಕುದಿಯತೊಡಗಿದರು. ಅಲ್ಲಿನ ಯುವ ರೈತರು ಬಳ್ಳಾರಿಯ ಪ್ರೆಸ್ ಗಿಲ್ಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಗಿಲ್ಡ್ ನ ಚಿಕ್ಕ ಕೊಠಡಿ ಪತ್ರಕರ್ತರಿಂದ ತುಂಬಿತ್ತು. ಇದರ ಜೊತೆಗೆ ಬಂದಿದ್ದ ಅನೇಕ ಮಂದಿ ರೈತರು ಅಲ್ಲಿದ್ದರು. ಪತ್ರಿಕಾಗೋಷ್ಠಿ ನೋಡಿಯೂ ಇರದ ಮತ್ತು ಯಾವುದೇ ಸಂಘಟನೆ-ಪಕ್ಷಗಳಿಗೆ ಸೇರದೆ ಭೂ ತಾಯಿಯನ್ನಷ್ಟೆ ನಂಬಿ ಬದುಕು ಸಾಗಿಸುತ್ತಿದ್ದವರು ಅಂದು ಮಾತನಾಡತೊಡಗಿದರು. ಭೂಮಿ ಕಳೆದುಕೊಳ್ಳುತ್ತಿದ್ದೇವೆ ಎಂಬ ಆಕ್ರೋಶ ಅವರ ಬಾಯಿಗೆ ಬಲ ತಂದಿತ್ತು. ಬಂದವರ ನೇತೃತ್ವವನ್ನು ಯುವ ರೈತ ನಾಗರಾಜ್ ವಹಿಸಿದ್ದರು. ಇವರು ಮಾತನಾಡತೊಡಗಿದಂತೆ ಕೊಠಡಿಯಲ್ಲಿನ ಗೌಜು ನಿಂತಿತು.
ಚಳವಳಿ ತಡೆಯಲು ಪೊಲೀಸ್ ಬಲದ ದುರುಪಯೋಗ; ಸಿರಿವಾರದ ಹೊಲದಲ್ಲಿ ನಿಂತ ಪಡೆ.
 ಸಿರಿವಾರದ ಸಾವಿರಾರು ಎಕರೆ ಕೃಷಿಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಬಿಡ್ ಕರೆಯಲಾಗಿದೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ. ಆದರೆ ವಿಮಾನ ನಿಲ್ದಾಣ ನಿರ್ಮಿಸಲು ಗ್ರಾಮಸ್ಥರ ಒಪ್ಪಿಗೆಯಿದೆ ಎಂದು ಸಚಿವ ಜನಾರ್ದನ ರೆಡ್ಡಿ ಸುಳ್ಳು ಹೇಳುತ್ತಿದ್ದಾರೆ. ಖಡಾಖಂಡಿತ ಇದಕ್ಕೆ ನಮ್ಮ ಒಪ್ಪಿಗೆಯಿಲ್ಲ. ಇದನ್ನು ಸ್ಪಷ್ಟಪಡಿಸಲು ಪತ್ರಕರ್ತರಾದ ನಿಮ್ಮ ಮುಂದೆ ಬಂದಿದ್ದೇವೆ. ಬಳ್ಳಾರಿ ಜಿಲ್ಲೆಯಲ್ಲಿ ಸಾಕಷ್ಟು ಒಣಭೂಮಿಯಿದೆ. ಆದರೂ ಫಲವತ್ತಾದ ಸಾವಿರಾರು ಎಕರೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಹಠವೇಕೆ. ಇದು ಸಚಿವರ ಸ್ವಹಿತಾಸಕ್ತಿ ಇರಬಹುದೆ’  ಇದು ನಾಗರಾಜ್ ಮಾತು. ಹೀಗೆ ಹೇಳುತ್ತಿದಂತೆ ನೆರೆದಿದ್ದ ರೈತರು ಈ ಮಾತಿಗೆ ನಮ್ಮ ಬೆಂಬಲವಿದೆ ಎಂದು ಸೂಚಿಸುವ ಸಲುವಾಗಿ ಜೋರಾಗಿ ಚಪ್ಪಾಳೆ ಹೊಡೆಯತೊಡಗಿದರು. ಆಗ ಪತ್ರಕರ್ತರು ‘ಇದು ಬಹಿರಂಗ ಸಭೆಯಲ್ಲ. ಇಲ್ಲಿ ಚಪ್ಪಾಳೆ ಹೊಡೆಯುವುದು, ಘೋಷಣೆ ಕೂಗುವುದು ಮಾಡಬೇಡಿ’ ಎಂದು ಸುಮ್ಮನಿರಿಸಬೇಕಾಯಿತು.

ನಾಗರಾಜ್ ಗೆ ಮತ್ತು ಅವರ ಜೊತೆ ಕುಳಿತು ಮಾತನಾಡಿದ ರೈತರಿಗೆ ಪತ್ರಕರ್ತರ ಪ್ರಶ್ನೆಗಳು ಆರಂಭವಾದವು. ‘ಈಗ ನಮ್ಮ ಮುಂದೆ ವಿರೋಧವಿದೆ ಎನ್ನುವ ನೀವು ನಾಳೆ ಮಾತು ಬದಲಿಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ. ಜಮೀನಿಗೆ ಹೆಚ್ಚು ಬೆಲೆ ನೀಡಿದರೆ ನೀವು ಪ್ರತಿಭಟನೆ ಹಿಂತೆಗೆದುಕೊಳ್ಳುತ್ತಿರಾ. ನೀವಷ್ಟೆ ವಿರೋಧ ವ್ಯಕ್ತಪಡಿಸುತ್ತಿರಬಹುದು. ಸಿರಿವಾರದ ಉಳಿದ ರೈತರು ಜಮೀನು ಕೊಡಲು ಸಿದ್ದವಿರಬಹುದು’ ಇದಕ್ಕೆಲ್ಲ ರೈತರದು ಒಂದೇ ಉತ್ತರ. ‘ ನಮ್ಮ ನಿರ್ಧಾರ ಬದಲಿಲ್ಲ. ಸಿರಿವಾರದ ಯಾವ ರೈತರು ಜಮೀನು ನೀಡಲು ಸಿದ್ದರಿಲ್ಲ. ಸಚಿವರು ಹಠಮಾರಿ ಧೋರಣೆ ಆರಂಭಿಸಿದರೆ ಹೋರಾಟ ತೀವ್ರಗೊಳಿಸುತ್ತೇವೆ’

ರೈತರು ನಡೆಸಿದ ಮೊಟ್ಟ ಮೊದಲ ಪತ್ರಿಕಾಗೋಷ್ಠಿ
 ಇದು ಸಚಿವ ಜನಾರ್ದನ ರೆಡ್ಡಿ ವಿರುದ್ಧ ಸಿರಿವಾರದ ರೈತರು ನಡೆಸಿದ ಮೊಟ್ಟ ಮೊದಲ ಪತ್ರಿಕಾಗೋಷ್ಠಿ. ನನಗಿದ್ದ ಅನುಮಾನಗಳಿಗೆ ಇವರಿಂದ ಉತ್ತರ ಸಿಗಬಹುದೇ ಎಂದು ಯೋಚಿಸಿದೆ. ‘ಫಲವತ್ತಾದ ಸಾವಿರಾರು ಎಕರೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಹಠವೇಕೆ. ಇದು ಸಚಿವರ ಸ್ವಹಿತಾಸಕ್ತಿ ಇರಬಹುದೆ’  ಎಂಬ ಮಾತು ಹೇಳಿದ್ದೇಕೆ. ಈ ಮಾತಿನ ಎಳೆ ಹಿಡಿದು ಹೋದರೆ ನನ್ನ ತನಿಖಾ ವರದಿಗೆ ಸಹಾಯವಾಗಬಹುದೆ ಎಂದು ಯೋಚಿಸಿದೆ. ರೈತರು ಹೊರಬಂದ ಕೂಡಲೇ ಅವರೊಂದಿಗೆ ಹೆಜ್ಜೆ ಹಾಕಿದೆ. ಪ್ರಶ್ನೆಯನ್ನೂ ಹಾಕಿದೆ. ಅವರು ಒಬ್ಬರ ಮುಖ ಒಬ್ಬರು ನೋಡಿಕೊಂಡರೆ ಹೊರತು ಉತ್ತರ ಕೊಡಲಿಲ್ಲ.
ಚಳವಳಿ ನಿರತ ರೈತರನ್ನು ಬಂಧಿಸಿ ಕರೆದೊಯ್ಯುತ್ತಿರುವ ಪೊಲೀಸರು
 ತನಿಖೆಯ ಜಾಡಿನಲ್ಲಿ... 
 ಆದರೆ ಅಷ್ಟಕ್ಕೆ ನಾನು ಸುಮ್ಮನಾಗಲಿಲ್ಲ. ಇಷ್ಟರಲ್ಲಾಗಲೇ ನಾನು ಸಿರಿವಾರದ ರೈತರಿಗೆ ಪರಿಚಿತನಾಗಿದ್ದೆ. ವಿಮಾನ ನಿಲ್ದಾಣ ಯೋಜನೆ ಮತ್ತು ರೈತರ ವಿರೋಧದ ಬಗ್ಗೆ ‘ಸುವರ್ಣ ನ್ಯೂಸ್’ ವಾಹಿನಿಯಲ್ಲಿ ವಿಶೇಷ ವರದಿಗಳು ಬರತೊಡಗಿದ್ದವು. ಆದರೂ ಮತ್ತೆ ಮತ್ತೆ ಸಿರಿವಾರ-ಚಾಗನೂರುಗಳಿಗೆ ಭೇಟಿ ನೀಡತೊಡಗಿದಾಗ ಅನುಮಾನ ಬಗೆಹರಿಸುವ ಅಥವಾ ಅದಕ್ಕೆ ಪುಷ್ಟಿ ನೀಡುವಂಥ ಮಾಹಿತಿ ಅಷ್ಟು ಸುಲಭದಲ್ಲಿ ದೊರೆಯಲಿಲ್ಲ. ನನ್ನ ಪ್ರಯತ್ನ ನಿಲ್ಲಿಸಲಿಲ್ಲ. ಈ ಹಳ್ಳಿಗಳಿಗೆ ಪ್ರತಿಬಾರಿ ಭೇಟಿ ನೀಡಿದಾಗಲೂ ವಿಶೇಷ ವರದಿಗಳಿಗೆ ಆಗುವ ವಿಷಯಗಳು ನನ್ನ ಕೈಯಲ್ಲಿರುತ್ತಿದ್ದವು. ಇದರ ಜೊತೆಗೆ ಹೆಚ್ಚೆಚ್ಚು ಮಂದಿ ಪರಿಚಯವಾಗತೊಡಗಿದರು. ಅದರಲ್ಲಿ ಕೆಲವರು ನಿಕಟ ಸಂಪರ್ಕಕ್ಕೂ ಬಂದರು. 

ವ್ಯತ್ಯಾಸ:
 ಸಾಮಾನ್ಯ ಸಂದರ್ಭಗಳಲ್ಲಿನ ರೈತರಿಗೂ ಚಳವಳಿಗಳಲ್ಲಿ ತೊಡಗಿಸಿಕೊಂಡ ರೈತರಿಗೂ ವ್ಯತ್ಯಾಸಗಳಿರುತ್ತವೆ. ಹೋರಾಟದ ಹಾದಿಯಲ್ಲಿ ಪ್ರತಿ ಹೆಜ್ಜೆ ಎತ್ತಿಡುವ ಮುನ್ನ ಇವರುಗಳ ನಡುವೆ ಸುದೀರ್ಘ ಚರ್ಚೆಗಳಾಗುತ್ತವೆ. ತಮ್ಮತಮ್ಮಲ್ಲಿ ಮೂಡಿದ ಅನುಮಾನಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಯಾರನ್ನು ಸಂಪರ್ಕಿಸಬೇಕು; ನಮ್ಮ ಚಳವಳಿ ಗುರಿ ಮುಟ್ಟಿಸುವ ಬಗೆಯೇಗೆ ಎಂದೆಲ್ಲ ಯೋಜನೆ ಹಾಕಿರುತ್ತಾರೆ. ಇಂಥ ಸಂದರ್ಭದಲ್ಲಿ ಅವರು ಹೊರಗಿನವರನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ. ನನ್ನ ಪ್ರಯತ್ನ ಮುಂದುವರಿದಿತ್ತು. ಅಂದು ಸಂಜೆ ನನ್ನ ಮೊಬೈಲ್ ನಲ್ಲಿ ಕೇಳುತ್ತಿದ್ದ ಧ್ವನಿ ‘ನೀವು ನಾಳೆ ಬೆಳಿಗ್ಗೆ 5 ಗಂಟೆಗೆಲ್ಲ ಕಪ್ಪಗಲ್-ಸಿರಿವಾರ ಗೇಟ್ ಬಳಿ ಬರಬೇಕು. ನಿಮಗೆ ಬೇಕಿದ್ದ ಮಾಹಿತಿ ದೊರೆಯುತ್ತದೆ ಬನ್ನಿ’ ಎಂದು ಹೇಳಿತು. ಕರೆ ಮಾಡಿದವರು ತಮ್ಮ ಪರಿಚಯ ಕೂಡ ಹೇಳಲಿಲ್ಲ. ಆದರೆ ಆ ಧ್ವನಿಯಲ್ಲಿ ಕಪಟವಿದೆ ಎಂದು ನನಗನಿಸಲಿಲ್ಲ. 

 ಆತಂಕವಿತ್ತು:
 ರಿಸ್ಕ್ ತೆಗೆದುಕೊಳ್ಳಲೇಬೇಕಿತ್ತು. ಯಾವ ಮಾಹಿತಿ-ಯಾವ ದಾಖಲೆ ದೊರೆಯಬಹುದು ಎಂಬ ಕುತೂಹಲ ಮೂಡತೊಡಗಿತು. ಜನವರಿ 3, 2009. ಅಂದು ಬೆಳಿಗ್ಗಿನ ಜಾವ 4ಕ್ಕೆ ಎದ್ದೆ. ರೆಡಿಯಾದೆ. ಕ್ಯಾಮರಾಮನ್ ಕರೆದುಕೊಂಡು ಹೋಗುವುದೆನೂ ಬೇಡ ಎನಿಸಿತು. ನನ್ನದೇ ಹ್ಯಾಂಡಿಕ್ಯಾಮ್ ಇದ್ದ ಬ್ಯಾಗ್ ಹೆಗಲಿಗೇರಿಸಿಕೊಂಡು ಬೈಕ್ ಸ್ಟಾರ್ಟ್ ಮಾಡಿದೆ. ಸಂಗನಕಲ್ ಹಾದಿಯುದ್ದಕ್ಕೂ ನೀರಾವರಿ ಗದ್ದೆಗಳು. ಥಂಡಿ ವಾತಾವರಣ. ಜೊತೆಗೆ ಶಿವರಾತ್ರಿ ನಂತರ ಶಿವಶಿವ ಎಂದು ಹೋಗುವ ಚಳಿ ಇನ್ನೂ ಹೋಗಿರಲಿಲ್ಲ. ಹೀಗಾಗಿ ಬೈಕ್ ನಲ್ಲಿ ಹೋಗುವಾಗ ಬೀಸುವ ಗಾಳಿ ಮೈಯನ್ನು ತಣ್ಣಗೆ ಕೊರೆಯುತ್ತಿತ್ತು. ಸಿರಿವಾರದ ಗುಡಿಸಲು ಹೋಟೆಲ್ ಬಳಿ ಬೈಕ್ ನಿಲ್ಲಿಸಿದೆ. ಅಲ್ಲಾಗಲೇ ಒಲೆಯ ಮೇಲಿದ್ದ ಪಾತ್ರೆಯಲ್ಲಿ ಟೀ ಕುದಿಯುತ್ತಿತ್ತು. ಬಿಸಿಬಿಸಿ ಟೀ ಕುಡಿದೆ. ಚಳಿಯಲ್ಲಿ ಬೆಚ್ಚನೆ ಟೀ ಹಿತವಾಗಿತ್ತು. ಎರಡನೇ ಬಾರಿ ಟೀ ಕುಡಿದು ಗ್ಲಾಸ್ ಕೆಳಗಿಡುವುದರಲ್ಲಿ ಎದುರು ಕುಳಿತಿದ್ದ ಇಬ್ಬರು ಚಳಿ ತಡೆಯಲೆಂದು ಮೈ ತುಂಬ ಹೊದ್ದುಕೊಂಡಿದ್ದ ಉಣ್ಣೆ ರಗ್ಗು ಸರಿಸಿ ಹೋಗೋಣವೆಂದು ಸನ್ನೆ ಮಾಡಿದರು. ಒಲೆಯ ಬೆಳಕಿನಲ್ಲಿ ಕಂಡ ಅವರ ಮುಖ ಪರಿಚಿತವಾಗಿತ್ತು. ನನ್ನ ಆತಂಕ ಕಡಿಮೆಯಾಯಿತು.
ಚಳವಳಿ ಸಂದರ್ಭ ಸಿರಿವಾರ-ಚಾಗನೂರಿಗೆ ಬಂದಿದ್ದ ಖ್ಯಾತ ಹೋರಾಟಗಾರ್ತಿ ಮೇಧಾ ಪಾಟ್ಕರ್

ಮುಳ್ಳುಕಂಟಿಗಳ ಹಾದಿ:
  ಹೊರಗೆ ಬಂದೆವು. ರಸ್ತೆಯಂಚಿಗೆ ಬಂದ ನಂತರ ಇನ್ನೂ ಒಂದಷ್ಟು ಮಂದಿ ಕೂಡಿಕೊಂಡರು. ಅಷ್ಟರಲ್ಲಿ ಚುಮುಚುಮು ಬೆಳಗು ಹರಿಯಲಾರಂಭಿಸಿತ್ತು. ಹೋಟೆಲಿನಲ್ಲಿ ಕಂಡವರು 'ನಮ್ಮ ಮೇಲೆ ಕ್ಯಾಮರಾ ಬಿಡಬಾರದು. ನಾವು ಮಾತನಾಡುವುದಿಲ್ಲ. ಇವರು ಮಾತನಾಡುತ್ತಾರೆ' ಎಂದರು. ಮೋಕಾ ರಸ್ತೆಗೆ ಬಂದ ಬೈಕ್ ಗಳು ಬಂಡಿ ಜಾಡಿಗೆ ತಿರುಗಿದವು. ಮುಂದೆ ಇದ್ದ ಬೈಕ್ ಗಳನ್ನು ನನ್ನ ಬೈಕಿನ ಗಾಲಿ ಹಿಂಬಾಲಿಸುತ್ತಿತ್ತು. ನನ್ನ ಹಿಂದೊಬ್ಬರು ಕುಳಿತಿದ್ದರು. ಅದು ಚಾಗನೂರಿನತ್ತ ಹೋಗುವ ಒಳದಾರಿ. ಇಕ್ಕೆಲ್ಲಗಳಲ್ಲಿ ಬಳ್ಳಾರಿ ಜಾಲಿ ಪೊದೆಗಳು ಸಮೃದ್ಧವಾಗಿ ಬೆಳೆದು ಬಂಡಿ ದಾರಿಯನ್ನು ಆಕ್ರಮಿಸಿಕೊಂಡಿದ್ದವು. ಆ ಮುಳ್ಳುಕಂಟಿಗಳು ಮೈ ಕೈಗಳನ್ನು ಪರಚತೊಡಗಿದವು. ಸರ್ಕಸ್ ಮಾಡುತ್ತಾ ಸಾಗಿದೆ. ಎರಡು ಕಿಲೋಮೀಟರ್ ಸಾಗಿದ ಬಳಿಕ ನಿಲ್ಲಿಸುವಂತೆ ಸೂಚನೆ. ‘ಮಿನಿಷ್ಟ್ರು ಜನಾರ್ದನ ರೆಡ್ಡಿ ಇಲ್ಲಿ ಚಾಗನೂರಿನ ಒಂದಷ್ಟು ಮಂದಿ ರೈತರಿಂದ 280 ಎಕರೆ ಭೂಮಿಯನ್ನು ಒಂದು ವರ್ಷದ ಕೆಳಗೆ ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದಾರೆ ಎಂಬ ಸುದ್ದಿಯಿದೆ. ಆ ರೈತರು ಎಕರೆಗೆ 25 ಸಾವಿರದಂತೆ ಮಾರಿದ್ದಾರಂತೆ’ ಎಂದರು.

ಸುತ್ತಲೂ ನೋಡತೊಡಗಿದೆ. ಆ ಜಮೀನುಗಳ ಗುಚ್ಛ ಸುತ್ತಲೂ ಇದ್ದ, ನೀರು ಸರಾಗವಾಗಿ ಹರಿಯುತ್ತಿದ್ದ ಮತ್ತು ಫಲವತ್ತಾಗಿದ್ದ ಜಮೀನುಗಳಿಗಿಂತ ಎತ್ತರದಲ್ಲಿತ್ತು. ನೀರು ಆ ಎತ್ತರಕ್ಕೆ ಬರುವುದು ಕಷ್ಟವಾಗಿತ್ತು. ಮತ್ತೇನೂ ವಿವರ ಎನ್ನುವಂತೆ ಆ ರೈತರತ್ತ ನೋಡಿದೆ. ಅವರು ಮಾತನಾಡತೊಡಗಿದರು.

‘ತುಂಗಾಭದ್ರಾ ಬಲದಂಡೆ ಕಾಲುವೆ ದೆಶೆಯಿಂದ ಸಿರಿವಾರ, ಚಾಗನೂರು, ಎತ್ತಿನ ಬೂದಿಹಾಳು, ಬಿ.ಡಿ.ಹಳ್ಳಿ, ಭರತನಹಳ್ಳಿ ಸೇರಿದಂತೆ ಇನ್ನೂ ಹಲವಾರು ಹಳ್ಳಿಗಳಿಗೆ ಸಮೃದ್ಧವಾದ ನೀರಾವರಿಯಿದೆ. ಆದರೆ ಮಿನಿಷ್ಟ್ರು ಜನಾರ್ದನ ರೆಡ್ಡಿ ಬೇನಾಮಿಯಾಗಿ ಖರೀದಿಸಿದ್ದಾರಂತೆ ಎಂದು ಸುದ್ದಿಯಿರುವ ಈ ಜಮೀನು ಫಲವತ್ತಾಗಿಲ್ಲದ ಬೀಳು ಭೂಮಿ. ಅಂತರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣ ಬಂದರೆ ಈ ಭೂಮಿಗೂ ಭಾರಿ ಬೆಲೆ ಬರುತ್ತದೆ. ಆಗ ಇಲ್ಲಿ ತಮಗನುಕೂಲವಾದ ವ್ಯಾಪಾರೋದ್ಯಮ ಕೈಗೊಳ್ಳಬಹುದು ಜನಾರ್ದನ ರೆಡ್ಡಿ ಲೆಕ್ಕಾಚಾರವಂತೆ. ಆದ್ದರಿಂದ ಇಲ್ಲಿಯೇ ವಿಮಾನ ನಿಲ್ದಾಣ ನಿರ್ಮಿಸಲು ಮಿನಿಷ್ಟ್ರು ಹಠ ಹಿಡಿದಿದ್ದಾರಂತೆ’ ಎಂದರು. ರೈತರು ತೋರಿಸಿದ ಜಮೀನುಗಳಲ್ಲಿಯೇ ಅವರುಗಳನ್ನು ನಿಲ್ಲಿಸಿ ಬೈಟ್ ಗಳನ್ನು ತೆಗೆದುಕೊಂಡೆ. ಸುತ್ತಮುತ್ತಲಿನ ದೃಶ್ಯಗಳನ್ನು ರೈತರ ಸಮೇತ ಚಿತ್ರೀಕರಿಸಿದೆ.
ಮುಳ್ಳುಕಂಟಿಗಳ ಹಾದಿಯಲ್ಲಿ ಸಾಗುತ್ತಿರುವ ಮೇಧಾ ಪಾಟ್ಕರ್
ಪ್ರಸಾರ:
ಬಳ್ಳಾರಿಗೆ ಬಂದವನೆ ಆಫೀಸಿಗೆ ನೇರ ಹೋಗಿ ಸುದ್ದಿಯನ್ನು ಟೈಪ್ ಮಾಡಿದೆ. ರೈತರು ಹೇಳಿದ ಹೇಳಿಕೆ ನಿಜವಿರಬಹುದೆ, ಸಚಿವ ಜನಾರ್ದನ ರೆಡ್ಡಿ ಅಲ್ಲಿ ಬೇನಾಮಿಯಾಗಿ ಜಮೀನು ಖರೀದಿಸಿರಬಹುದೆ, ಇಲ್ಲದಿದ್ದರೆ ಫಲವತ್ತಾದ ಕೃಷಿಭೂಮಿಯಲ್ಲಿಯೆ ವಿಮಾನ ನಿಲ್ದಾಣ ನಿರ್ಮಿಸಲು ಹಠ ಹಿಡಿದಿರುವುದೇಕೆ ಎಂಬ ಪ್ರಶ್ನೆಗಳನ್ನಿಟ್ಟು ಸುದ್ದಿ-ವಿಶುವಲ್ಸ್-ಬೈಟ್ಸ್ ಕಳುಯಿಸಿದೆ. ಇದಾದ ಅರ್ಧ ತಾಸಿಗೆ ಚಾನಲ್ ನ ಡಿಸ್ಟ್ರೀಕ್ ನ್ಯೂಸ್ ಕೋ ಆರ್ಡಿನೇಟರ್ ವಿನೋದ್ ಕುಮಾರ್ ಪೋನ್ ‘ ಲೋಗೋ ಬಳಸಿಲ್ಲ ಯಾಕ್ರಿ’ ಎಂಬ ಪ್ರಶ್ನೆ. ಪರಿಸ್ಥಿತಿ ವಿವರಿಸಿದೆ. ಆದರೂ ಅವರಿಗೆ ಸಮಾಧಾನವಾದಂತೆ ಕಾಣಲಿಲ್ಲ. ‘ಚಾನಲ್ ನ್ಯೂಸ್ ಹೆಡ್ ಶಶಿಧರ್ ಭಟ್ ಅವರು ಬಂದ ಮೇಲೆ ಈ ಸುದ್ದಿ ಬಗ್ಗೆ ನಿರ್ಧಾರವಾಗುತ್ತೆ’ ಎಂದರು. ನ್ಯೂಸ್ ಹೆಡ್ ಗ್ರೀನ್ ಸಿಗ್ನಲ್ ದೊರೆತ ತಕ್ಷಣ ಸುದ್ದಿ ಹೆಡ್ ಲೈನ್ಸ್ ನಲ್ಲಿಯೆ ಪ್ರಸಾರವಾಗತೊಡಗಿತು. ಜೊತೆಗೆ ಹೆಚ್ಚಿನ ವಿವರಣೆಗಾಗಿ ಪೋನೋ… ಇಡೀ ದಿನ ಆ Exclusive News ಹೆಡ್ ಲೈನ್ಸ್ ನಲ್ಲಿಯೇ ಇತ್ತು.

ಸೆಪ್ಟೆಂಬರ್ 12, 2011 ರಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಈ ಮುಂದಿನ ವರದಿ ಓದಿದ ಬಳಿಕ ಹಿಂದಿನ ಈ ವಿವರಗಳು ನೆನಪಾದವು.
     
           ಅಕ್ರಮ ವ್ಯವಹಾರಗಳಿಂದ ಬಂದ ಹಣದಲ್ಲಿ 250 ಎಕರೆಗೂ ಹೆಚ್ಚು ಭೂಮಿ ಖರೀದಿಸಿದ್ದ ರೆಡ್ಡಿ!
ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ, ಓಬಳಾಪುರಂ ಮೈನಿಂಗ್ ಕಂಪೆನಿಯ (ಓಎಂಸಿ ) ಅಕ್ರಮ ವ್ಯವ ಹಾರಗಳಿಂದ ಬಂದ ಹಣದಲ್ಲಿ ಬಳ್ಳಾರಿ ನಗರದಲ್ಲಿ 250 ಎಕರೆಗೂ ಹೆಚ್ಚು ಭೂಮಿ ಖರೀದಿಸಿ ದ್ದಾರೆ ಎಂಬುದನ್ನು ಸಿಬಿಐ ತನಿಖಾ ತಂಡ ಪತ್ತೆಹಚ್ಚಿದೆ. ಬೆಂಗಳೂರು, ಹೈದರಾಬಾದ್‌ನಲ್ಲೂ ರೆಡ್ಡಿ ಕುಟುಂಬ ಹೊಂದಿರುವ ಸ್ಥಿರಾಸ್ತಿಗಳ ಪತ್ತೆಗೆ ಈಗ ಸಿಬಿಐ ಮುಂದಾಗಿದೆ. ಬಳ್ಳಾರಿ ನಗರ ಒಂದರಲ್ಲೇ ರೆಡ್ಡಿ ಕುಟುಂಬದ ಸದಸ್ಯರು ತಮ್ಮ ಹೆಸರಿನಲ್ಲಿ ಹಾಗೂ ನಂಬಿಕಸ್ಥ ಬೇನಾಮಿದಾರರ ಹೆಸರಿನಲ್ಲಿ 250 ಎಕರೆ ಭೂಮಿ ಖರೀದಿಸಿದ್ದಾರೆ. ಈ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬಳ್ಳಾರಿ ನಗರದ ಪ್ರಮುಖ ಪ್ರದೇಶಗಳು, ಉದ್ದೇಶಿತ ವಿಮಾನ ನಿಲ್ದಾಣ ಯೋಜನಾ ಪ್ರದೇಶ, ಸಂಡೂರು, ಹೊಸಪೇಟೆ ಮತ್ತಿತರ ಕಡೆಗಳಲ್ಲಿ ಜನಾರ್ದನ ರೆಡ್ಡಿ ಸ್ಥಿರಾಸ್ತಿ ಖರೀದಿಸಿದ್ದಾರೆ.

2 comments:

 1. ಧನ್ಯವಾದಗಳು, ಕುಮಾರ ರೈತ ಅವರೇ. ಕರ್ನಾಟಕದಲ್ಲಿಯೇ ಇರುವ ಬಳ್ಳಾರಿಗೆ ಸಂಬಂಧಿಸಿದ, ಬಹುತೇಕ ಕನ್ನಡಿಗರ ಗಮನಕ್ಕೆ ಬಾರದ ಎಷ್ಟೋ ಸಂಗತಿಗಳಿಗೆ ಅಕ್ಷರ ರೂಪ ಕೊಟ್ಟಿದ್ದೀರಿ. ಹಿಂದಿನ ರಾಜಕೀಯವೆನೇ ಇರಲಿ, ಸಿಬಿಐ ರಾಜ್ಯದ ಪಾಲಿಗೆ ಅಕ್ಷರಶಃ ಭಸ್ಮಾಸುರರಂತಿರುವ ಈ ರೆಡ್ಡಿಗಳ ಹೆಡೆಮುರಿ ಕಟ್ಟುತ್ತಿದೆ. ಆ ಮೂಲಕ ಬಳ್ಳಾರಿಯ ವಿಮೋಚನಗೆ ನಾಂದಿ ಹಾಡಿದೆ. ಈಗ ಬಿದ್ದಿರುವ ಹೊಡೆತ ನೋಡಿದರೆ, ಬಹುಶಃ ರೆಡ್ಡಿಗಳ ಯುಗ ಅಂತ್ಯವಾದಂತಿದೆ. ದುಡ್ಡಿನ ಮದದಿಂದ ಕರ್ನಾಟಕದ ರಾಜಕೀಯವನ್ನೇ ಕೊಂಡುಕೊಂಡು ದರ್ಬಾರು ನಡೆಸುತ್ತಿದ್ದ ಈ ರೆಡ್ಡಿಗಳ ಕುರಿತ ಇನ್ನಷ್ಟು ಸಂಗತಿಗಳಿಗಾಗಿ ಎದುರು ನೋಡುತ್ತಿದ್ದೇನೆ.

  ReplyDelete
 2. kannada naadinalli kannadigane saarvabouma ennuva maathu klisheyaagide..annadaatana novannu yaavude paksha oresalilla .ella pakshagaligu dikkaaravirali

  ReplyDelete