• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಕೃಷಿಕರ ಕಣ್ಣುಗಳಿಗೆ ಧೂಳು ಎರಚಿ ಹೋದ ಜನಾರ್ದನ ರೆಡ್ಡಿ….!..?

ಬಳ್ಳಾರಿಯಲ್ಲಿ ಎರಡು ವಿಮಾನ ನಿಲ್ದಾಣಗಳಿವೆ. ಆದರೂ ಮತ್ತೊಂದು ವಿಮಾನ ನಿಲ್ದಾಣ ತರಬೇಕು ಎನ್ನುವುದು ಅಂದಿನ ಸಚಿವ ಜನಾರ್ದನ ರೆಡ್ಡಿ ಹಠ. ಇದಕ್ಕಾಗಿ ಆಯ್ಕೆಯಾಗಿದ್ದು ಭಾರಿ ಫಲವತ್ತಾದ ವರ್ಷಕ್ಕೆ ಮೂರು ಬೆಳೆ ಬೆಳೆಯುವ ನೀರಾವರಿ ಜಮೀನು ! ಇದನ್ನು ಸ್ವಾಧೀನಪಡಿಸಿಕೊಳ್ಳಬೇಡಿ ಎಂದು ಕೃಷಿಕರು ಪರಿಪರಿಯಾಗಿ ಬೇಡಿಕೊಂಡರೂ ರೆಡ್ಡಿ ಮನಸು ಕರಗಲಿಲ್ಲ. ಆದರೆ ಕೃಷಿಕರು ಜಮೀನು ಬಿಟ್ಟುಕೊಡಲು ಒಪ್ಪಲಿಲ್ಲ. ಚಳವಳಿ ಆರಂಭಿಸಿದರು. ಒಮ್ಮೆ ಸಚಿವ ರೆಡ್ಡಿ ತಮ್ಮೂರುಗಳ ಮಾರ್ಗದಲ್ಲಿ ಹಾದು ಹೋಗಲಿದ್ದಾರೆ ಎಂದು ತಿಳಿದು ಮನವಿ ಪತ್ರ ಕೊಡಲು ಸಿದ್ದರಾದರು. ಆದರೆ ಆಗಿದ್ದು ಮಾತ್ರ……


 ಫೆಬ್ರವರಿ 11, 2009 ಅಂದು ಹೊಸಮೋಕಾದಲ್ಲಿ ಗಡಿನಾಡ ಉತ್ಸವ. ಜಿಲ್ಲಾ ಉಸ್ತುವಾರಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಉದ್ಘಾಟಕರು ಮತ್ತು ಮುಖ್ಯ ಅತಿಥಿಗಳು. ಸಿರಿವಾರ-ಚಾಗನೂರು ರೈತರು ಧರಣಿ ಕುಳಿತ ಸ್ಥಳವನ್ನೇ ಹಾದು ಮೋಕಾಕ್ಕೆ ಹೋಗಬೇಕು. ಈ ಉತ್ಸವದಲ್ಲಿ ಸಚಿವರು ಭಾಗವಹಿಸುವುದು ಖಚಿತವಾಗಿತ್ತು. ಧರಣಿ ಕುಳಿತ ರೈತರು ಮನವಿ ಪತ್ರ ಸಿದ್ಧಪಡಿಸಿಕೊಂಡಿದ್ದರು.

ಅದೇ ದಿನ ಸಿರಿವಾರ-ಚಾಗನೂರು ರೈತರು ‘ತಮಟೆ ಚಳವಳಿ ಆರಂಬಿಸಿದ್ದರು. ಅಧಿಕಾರಿಗಳು-ಶಾಸಕರು-ಸಚಿವರ ಗಮನ ಸೆಳೆಯಲು ಇದನ್ನು ಆರಂಭಿಸಲಾಗಿತ್ತು. ಅಂದು ಸಂಜೆ ಸಮಾರಂಭ ನಿಗದಿಯಾಗಿತ್ತು. ವರದಿ ಸಲುವಾಗಿ ಹೊಸಮೋಕಾಕ್ಕೆ ಹೋಗೋಣವೆಂದುಕೊಂಡಿದ್ದೆ. ಆಗ ಧರಣಿ ಕುಳಿತ ರೈತರನ್ನು ಸಚಿವರುಗಳು ಮಾತನಾಡಿಸಬಹುದೆ; ಇವರ ಪ್ರತಿಕ್ರಿಯೆ ಏನಿರಬಹುದು ಎಂದು ಯೋಚಿಸಿದೆ. ಕ್ಯಾಮರಾಮನ್ ಕರೆದುಕೊಂಡು ಬೇಗನೆ ಧರಣಿ ಸ್ಥಳಕ್ಕೆ ಬಂದೆ. ಕ್ಯಾಮರಾ ಸಿದ್ದಪಡಿಸಿಕೊಳ್ಳಲು ಸೂಚಿಸಿದೆ.

ತಮಟೆ ಸದ್ದು ಮೊಳಗುತ್ತಲೇ ಇತ್ತು. ರೈತರು ಸಚಿವರ ಹಾದಿ ಕಾಯುತ್ತಲೇ ಇದ್ದರು. ಆದರೆ ಮೊದಲು ಬಂದವರು ಬಿಜೆಪಿಯ ಸ್ಥಳೀಯ ಮುಖಂಡ, ಬಳ್ಳಾರಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರುಲಿಂಗನ ಗೌಡ. ಗುಡಾರದೊಳಗೆ ಬಂದು ಕುಳಿತ ಇವರು ‘ಸಚಿವರು ನಿಮ್ಮ ಒತ್ತಾಯ ಪರಿಶೀಲಿಸುತ್ತಾರೆ. ಧರಣಿ ಹಿಂತೆಗೆದುಕೊಳ್ಳಿ’ ಎಂದರು. ಸಚಿವರುಗಳಿಗೆ ಮುಜುಗರ ಆಗಬಾರದು ಎನ್ನುವ ಉದ್ದೇಶ ಇವರದಾಗಿತ್ತು. ‘ಸಚಿವರೇ ಈ ಮಾತು ಹೇಳಲಿ; ನಾವು ಅಲ್ಲಿಯವರೆಗೂ ಮೇಲೆಳುವುದಿಲ್ಲ’ ಇದು ಧರಣಿ ಕುಳಿತರ ಪ್ರತಿಕ್ರಿಯೆ. ಬಂದ ದಾರಿಯಲ್ಲಿಯೇ ಬುಡಾ ಅಧ್ಯಕ್ಷ ವಾಪ್ಪಸಾದರು. ಕೆಲವೇ ಕ್ಷಣಗಳ ಒಳಗೆ ಮೂರು ಪೊಲೀಸ್ ಜೀಪ್ ಗಳು ಗುಡಾರದ ಅಕ್ಕಪಕ್ಕ ಬಂದು ನಿಂತವು. ದಢದಢನೆ ಇಳಿದ ಪೊಲೀಸರು ಆ ಜಾಗವನ್ನು ಸುತ್ತುವರೆದರು. 
ಫಲವತ್ತಾದ ಭೂಮಿ ಸ್ವಾಧೀನ ವಿರೋಧಿಸಿ ಬಳ್ಳಾರಿ ರೈತರ ಪ್ರತಿಭಟನೆ
ಐದು ನಿಮಿಷದಲ್ಲಿ ಪೊಲೀಸ್ ಪೈಲಟ್ ಜೀಪುಗಳು ಸೈರನ್ ಮೊಳಗಿಸುತ್ತಾ ಬರತೊಡಗಿದವು. ಅವುಗಳ ಹಿಂದೆ ಸಚಿವರ ಸ್ವಂತದ ಐಷಾರಾಮಿ ಕಾರುಗಳು, ಹಿಂದೆ ಅವರ ಖಾಸಗಿ ಅಂಗರಕ್ಷಕ ಪಡೆಯ ಇಪ್ಪತ್ತಕ್ಕೂ ಹೆಚ್ಚು ಕಪ್ಪು ಸ್ಕಾರ್ಪಿಯೋಗಳು. ರೈತರ ಕಣ್ಣುಗಳು ನಿರೀಕ್ಷೆಯಿಂದ ಅರಳತೊಡಗಿದವು. ಆದರೆ ಧರಣಿ ಕುಳಿತ ಸ್ಥಳದಿಂದ ಈ ಎಲ್ಲ ವಾಹನಗಳು ಎಷ್ಷು ವೇಗವಾಗಿ ಹೋದವೆಂದರೆ ಅಲ್ಲಿ ಕುಳಿತಿದ್ದ ರೈತರುಗಳ ಕಣ್ಣು-ಮೂಗು-ಬಾಯಿಗಳಿಗೆ ಧೂಳಿನ ಪ್ರವಾಹವೇ ನುಂಗಿತು. ಇಷ್ಟಾದರೂ ತಮಟೆ ಸದ್ದು ಮಾತ್ರ ನಿಂತಿರಲಿಲ್ಲ. ಅದು ಸಚಿವರ ವಾಹನಗಳನ್ನು ಹಿಂಬಾಲಿಸುತ್ತಲೇ ಇತ್ತು. ರೈತರ ಕಣ್ಣೀರು ಇಳಿಯುತ್ತಲೇ ಇತ್ತು.

ಆಂಧ್ರಕ್ಕೆ ತಾಗಿಕೊಂಡಿರುವ ಹೊಸಮೋಕಾದಲ್ಲಿ ಗಡಿನಾಡ ಉತ್ಸವ ತಡವಾಗಿ ಆರಂಭವಾಯಿತು. ಸಚಿವರುಗಳು ಮಾತನಾಡಿದರು. ಶ್ರೀರಾಮುಲು ಅಂತೂ ಅಪ್ಪಿತಪ್ಪಿಯೂ ವಿಮಾನ ನಿಲ್ದಾಣದ ವಿಷಯ ಪ್ರಸ್ತಾಪಿಸಲಿಲ್ಲ. ಆದರೆ ಜನಾರ್ದನ ರೆಡ್ಡಿ ಇದರ ಬಗ್ಗೆಯೂ ಮಾತನಾಡಿದರು. ‘ಸಿರಿವಾರ-ಚಾಗನೂರಿನಲ್ಲಿಯೆ ವಿಮಾನ ನಿಲ್ದಾಣ ಆಗುವುದು ಖಚಿತ. ಇದಕ್ಕೆ ರೈತರ ವಿರೋಧವಿಲ್ಲ. ರಾಜಕೀಯ ವಿರೋಧಿಗಳಿಂದ ಧರಣಿ ನಡೆಯುತ್ತಿದೆ !

ಗೆಳೆಯ ಪೊಟೋಗ್ರಾಫರ್ ಪುರುಷೋತ್ತಮ್ ಹಂದ್ಯಾಳ್ ಅವರ ‘ರಕ್ತರಾತ್ರಿ’ ನಾಟಕವೂ ಅಂದು ಏರ್ಪಾಡಾಗಿತ್ತು. ಹಂದ್ಯಾಳ್ ಅವರ ಶಕುನಿ ಪಾತ್ರವನ್ನು ನೋಡಬೇಕೆಂದುಕೊಂಡಿದ್ದೆ. ಆದರೆ ಧರಣಿ ಕುಳಿತ ರೈತರನ್ನು ಕ್ಯಾರೇ ಅನ್ನದ ಸಚಿವರ ಕುರಿತು ವರದಿ ಮಾಡಬೇಕಿತ್ತು. ಕ್ಯಾಮರಾಮನ ಜೊತೆ ಬಳ್ಳಾರಿಗೆ ಧಾವಿಸಿದೆ. ರಾತ್ರಿ ಹನ್ನೊಂದು ಸಮೀಪಿಸುತ್ತಿತ್ತು. ಸುದ್ದಿ ಕಳುಯಿಸಿದೆ. 'ಸುವರ್ಣ ನ್ಯೂಸ್ ' ನಲ್ಲಿ ಮರುದಿನದ ಫಸ್ಟ್ ನ್ಯೂಸ್ ಬುಲೆಟಿನ್ ನಿಂದಲೇ ‘ ಧರಣಿ ಕುಳಿತವರನ್ನು ಕ್ಯಾರೇ ಎನ್ನದ ಸಚಿವರುಗಳು; ರೈತರ ಕಣ್ಣಿಗೆ ಮಣ್ಣೆರಚಿದ ಇವರ ವಾಹನಗಳು’ ಸುದ್ದಿ ಹೆಡ್ ಲೈನ್ ನಲ್ಲಿ ಪ್ರಸಾರವಾಗತೊಡಗಿತು. ಆ ದಿನವಿಡೀ ಪ್ರತಿ ಬುಲೆಟಿನ್ ನಲ್ಲಿಯೂ ಇದೇ ಸುದ್ದಿ-ಪೋನೋ.
ನೆಲ ನೋಡದ ರೆಡ್ಡಿ
ಮುಂದೆ ಸಚಿವ ಜನಾರ್ದನ ರೆಡ್ಡಿ ಹಠ ಸಾಧಿಸಿದರು. ಚಿನ್ನದಂಥ ಬೆಳೆ ಬೆಳೆಯುವಂಥ ನೆಲ ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನವಾಯಿತು. ಆದರೆ ಅಂದು ಸುರಿಯಲು ಆರಂಭಿಸಿದ ರೈತರ ‘ರಕ್ತ ಕಣ್ಣೀರು’ ಇನ್ನೂ ನಿಂತಿಲ್ಲ...

3 comments:

 1. ದಿನೇಶ್ ಕುಕ್ಕುಜಡ್ಕSunday, 18 September, 2011

  ಪ್ರಿಯ ರೈತರೇ,
  ಚಿಕ್ಕವನಿದ್ದಾಗ ನನಗೆ ಅಜ್ಜಿ ದಿನಕ್ಕೊಂದು ರಾಕ್ಷಸನ ಕಥೆ ಹೇಳ್ತಿದ್ರು. ಹಾಗೇ ತೂಕಡಿಸಿ ಮಲಗುತ್ತಿದ್ದೆ!
  ನೀವೀಗ ಅದನ್ನೇ ಮುಂದುವರಿಸುತ್ತಿದ್ದೀರಿ. ಆದ್ರೆ ನಿದ್ರೆಯೇ ಬರುತ್ತಿಲ್ಲ!
  ಖುಷಿ-ರೋಮಾಂಚನಗಳ ಜಾಗದಲ್ಲೀಗ ಭಯ-ದುಃಖ-ವಿಷಾದಗಳಿವೆ!!

  ReplyDelete
 2. ಕುಮಾರ ರೈತರವರೇ,
  ಒಂದು ಸಮಾಧಾನದ ವಿಷಯ ಎಂದರೆ ಕೇಂದ್ರದ ಮಂತ್ರಿ ಶ್ರೀಯುತ ಜೈರಾಮ್ ರಮೇಶ್ ಅವರು ಹೊಸ ಭೂಸ್ವಾಧೀನ ಕಾಯಿದೆ ತರಲು ಹೊರಟಿರುವುದು. ಆದರೆ ಅದು ಕಾಯಿದೆಯಾಗಿ ಬರುವುದರೊಳಗಾಗಿ ನಮ್ಮ ರೈತರ ಎಷ್ಟೊಂದು ಫಲವತ್ತಾದ ಭೂಮಿಯು ನಾಶವಾಗುವುದೊ.

  ReplyDelete
 3. ನಾನು ಬಳ್ಳಾರಿ ಜಿಲ್ಲೆಯವನೇ... ಮೊದಲು ನನಗೆ ನನ್ನ ಪಕ್ಕದ ಮನೆಯಲ್ಲಿ ಏನು ಆಗುತ್ತೆ ಅನ್ನೋ ವಿಷಯ ಕೂಡ ತಿಳಿತಿದ್ದಿಲ್ಲ. ಅದು ನನಗೆ ಬೇಕಾಗಿದ್ದಿಲ್ಲ ಕೂಡ. ಆದ್ರೆ ನನ್ನ ಜಿಲ್ಲೆಯಲ್ಲಿ ನನಗೆ ತಿಳಿಯದಂತೆ ರಾಷ್ಟ್ರಕ್ಕೆ ಮನೆಹಾಳು ಮಾಡುವ ಕೆಲಸದ ಮಾಹಿತಿಗಳು ಅನಂತರ ತಿಳಿದಿದ್ದು. ಅದನ್ನು ಸ್ವತಃ ಒಬ್ಬ ವರದಿಗಾರನಾಗಿ ಅದೇ ಜಿಲ್ಲೆಯಲ್ಲಿ ಸುದ್ದಿ ಮಾಡಿದ್ದು ಆಶ್ಚರ್ಯ ಉಂಟು ಮಾಡುತ್ತೆ. ವಿಷಯ ಅದಲ್ಲ... ನಮಗೆ ಅಂದ್ರೆ ಜಿಲ್ಲೆಯವರೆಗೆ, ಎಲ್ಲರಿಗೂ ತಿಳಿಯದ ರೌದ್ರ ವಿಷಯಗಳು ಗಣಿ ನಾಡಿನ ಮಣ್ಣಲ್ಲಿ ಹೂತು ಹೋಗಿವೆ. ಅದನ್ನ ಹೊರ ತೆಗೆಯೋಣವೆಂದ್ರ ಆ ಮಣ್ಣು ಕೂಡ ಈಗ ನಮ್ಮ ನಾಡಲ್ಲಿಲ್ಲ. ಇದು ನಮ್ಮ ದೌರ್ಭಾಗ್ಯವೇ ಸರಿ. 2002ರಲ್ಲಿ ಬಹುಶಃ ಏನೂ ಆಗದ ಒಬ್ಬ ಸಾಮಾನ್ಯ ಗಾಲಿ ಈಗ ಇದೆಷ್ಟೆಲ್ಲ ಆಗಿ, ಏನೂ ಆಗದವರಂತೆ ಇರೋದು ಚಂಚಲಗುಡ ಜೈಲಿನ ಅತಿಥಿಯಾಗಿದ್ದಾನೆ.

  ReplyDelete