• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ವಿಜಯನಗರ ಮರು ನಿರ್ಮಾಣಕ್ಕೆ ಜನಾರ್ದನ ರೆಡ್ಡಿ ಸಂಕಲ್ಪ..! ! !

ಶ್ರೀಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕೋತ್ಸವ ಸವಿ ನೆನಪಿಗೆ ವಿಜಯನಗರ ವೈಭವದ ಮರು ನಿರ್ಮಾಣಕ್ಕೆ ಅಂದಿನ ಅತಿ ಪ್ರಭಾವಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸಂಕಲ್ಫಿಸಿದರು. ಅವರ ಕಣ್ಣುಗಳಲ್ಲಿ ಸದಾ ಕೃಷ್ಣದೇವರಾಯರ  ಆಡಳಿತದ ಸ್ವಪ್ನಗಳೇ ತೇಲುತ್ತಿದ್ದವು. ಸರಕಾರದ ಹಣ ಎಷ್ಟೆ ಖರ್ಚಾಗಲಿ  ಈ ನಿರ್ಧಾರ ಈಡೇರಿಸಿಯೇ ಸಿದ್ದ ಎಂದುಕೊಂಡು ಮುಂದಡಿಯಿಟ್ಟರು. ಅರೇ ಇದು ಒಳ್ಳೆಯ ಕೆಲಸ ತಾನೇ….ಛೇ…ಎಂಥ ಆಡಳಿತಗಾರ ಮಾಜಿಯಾಗಿ ಜೈಲಿಗೆ ಹೋಗುವಂಥ ಪರಿಸ್ಥಿತಿ ಬಂತಲ್ಲ ಎಂದುಕೊಂಡಿರಬಹುದು ನೀವು...! ದಯವಿಟ್ಟು ಮುಂದೆ ಓದಿ…..
  
ಜೀವಂತ ಮ್ಯೂಸಿಯಂ
‘ಹಂಪಿ ಜಗತ್ತಿನ ಒಂದು ಅತಿದೊಡ್ಡ ತೆರೆದ ಜೀವಂತ ಮ್ಯೂಸಿಯಂ. ಇದಕ್ಕೆ ಯಾವುದೇ ಕುಂದು ಬಾರದಂತೆ ರಕ್ಷಿಸಬೇಕು. ಈ ಐತಿಹಾಸಿಕ ಪ್ರದೇಶ ಮತ್ತು ಸುತ್ತಮುತ್ತ ಇದಕ್ಕೆ  ಧಕ್ಕೆಯಾಗುವ ಕಾರ್ಯ ಯಾವುದೇ ನಡೆಯಬಾರದು’ ಇದು ಯುನೆಸ್ಕೋ ಅಭಿಪ್ರಾಯ. ಆದರೆ ಇದನ್ನು ಅಭಿನವ ಶ್ರೀಕೃಷ್ಣದೇವರಾಯರು ಕೇಳಿಸಿಕೊಂಡಿದ್ದರೋ ಇಲ್ಲವೋ…ಆದರೆ ತಾವು ವಿಜಯನಗರ ವೈಭವದ ಮರು ನಿರ್ಮಾಣಕ್ಕೆ ಮುಂದಾಗುತ್ತಿರುವುದು ಯುನೆಸ್ಕೊಗೂ ಪ್ರಿಯವಾಗಬಹುದು ಎಂದು ಭಾವಿಸಿಕೊಂಡಿರಬಹುದು …! ಆದ್ದರಿಂದ  ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು.
ಹಂಪಿ ಕಲ್ಲಿನ ರಥ
  'ಏನ್ರೀ ಇದು…ವಿಜಯನಗರ ಮರು ನಿರ್ಮಾಣ…ಯುನೆಸ್ಕೂ ಅದು-ಇದು ಅಂತ ಗೋಜಲು ಮಾಡ್ತಿದ್ದೀರಿ. ಸ್ವಲ್ಪ ವಿವರವಾಗಿ ಹೇಳ್ರಿ' ಅಂತೀರಾ… ಅಂದು ಕರ್ನಾಟಕ ಸಚಿವ ಸಂಪುಟದಲ್ಲಿ ಪ್ರಭಾವಿ ಅಮಾತ್ಯ(ಮಂತ್ರಿ)ರಾದ ಗಾಲಿ ಜನಾರ್ದನ ರೆಡ್ಡಿ ವಿಜಯನಗರದ ವೈಭವದ ದಿನಗಳನ್ನು ಮತ್ತೆ ಅನುಷ್ಠಾನಕ್ಕೆ ತರಲು ನಿಶ್ಚಯಿಸಿದ್ದು ಆಡಳಿತಾತ್ಮಕವಾಗಿ ಅಲ್ಲ. ಕೇವಲ ಇದು ಥೀಮ್ ಪಾರ್ಕ್ ನಿರ್ಮಾಣದ ಒಂದು ಯೋಜನೆ…

ಏನಿದು ಥೀಮ್ ಪಾರ್ಕ್: 
 'ವಿಜಯನಗರ ವೈಭವದ ಪ್ರತಿಕೃತಿಗಳ ನಿರ್ಮಾಣ. ಇದಕ್ಕೆ ಅಕ್ಷರ ಧಾಮ ಮಾದರಿ. ಇದಲ್ಲದೇ ಸಂಶೋಧನಾ ಕೇಂದ್ರ, ಮಲ್ಟಿ ಮೀಡಿಯಾ ಕೇಂದ್ರ, ವಸ್ತು ಸಂಗ್ರಹಾಲಯದ ಸ್ಥಾಪನೆ ಮಾಡುವುದು. ‘ವಿಜಯನಗರ ಸಾಮ್ರಾಜ್ಯದ ಭವ್ಯತೆಯ ಪುನರ್ದಶನ ಮತ್ತು ಆ ಸಂದರ್ಭದ ಚಟುವಟಿಕೆಗಳನ್ನು ಜನರಿಗೆ ಪರಿಚಯಿಸುವುದು' ಈ ಯೋಜನೆ ರೂವಾರಿಗಳ ಮಾತಿದು. ‘ಇಂಡೋನೈಷ್ಯಾದ ಜಕಾರ್ತಾದಲ್ಲಿರುವ ತಮಾನಾ ಮಿನಿ ಇಂಡೋನೇಷ್ಯಾ ಮಾದರಿಯಲ್ಲಿ ಥೀಮ್ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಇದರಿಂದ ವಿಜಯನಗರ ವೈಭವದ ದರ್ಶನವಾಗುತ್ತದೆ’ ಇದು ಸಂಸದ ಅನಂತ್ ಕುಮಾರ್ ಮಾತು. ಇದೇ ವಿಜಯನಗರ ಥೀಮ್ ಪಾರ್ಕ್. ಇದಕ್ಕಾಗಿ ಆಯ್ಕೆಯಾಗಿದ್ದು  ಕರ್ನಾಟಕದ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿದ ಜಾಗ !
ಭೂಮಿ ಪೂಜೆ ನೆರವೇರಿಸಿದ ಎಲ್. ಕೆ. ಅಡ್ವಾಣಿ
 ಭೂಮಿ ಪೂಜೆ:
ಮಾರ್ಚ್ 29, 2010ರಂದು ಎಲ್.ಕೆ. ಅಢ್ವಾಣಿ ಅವರು ವಿಜಯನಗರ ಥೀಮ್ ಪಾರ್ಕ್ ಯೋಜನೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರದೇಶದಲ್ಲಿಯೆ ಭೂಮಿ ಪೂಜೆ ನೆರವೇರಿಸಿದರು. ಶ್ರೀಕೃಷ್ಣದೇವರಾಯ 500ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಸಮಾರೋಪ ಸಮಾರಂಭಕ್ಕೆ ಎಲ್.ಕೆ. ಅಡ್ವಾಣಿ ಅವರನ್ನು ಜನಾರ್ದನ ರೆಡ್ಡಿ ಆಹ್ವಾನಿಸಿದ್ದರು. ಇದೇ ಸಂದರ್ಭದಲ್ಲಿ ‘ ಥೀಮ್ ಪಾರ್ಕ್ ಪ್ರಕಲ್ಪಗಳ ಭೂಮಿ ಪೂಜೆ ಹಾಗೂ ಕಟ್ಟಡಗಳ ಶಿಲಾನ್ಯಾಸ' ಕಾರ್ಯವನ್ನು ಅಡ್ವಾಣಿ ಅವರೇ ನೆರವೇರಿಸುವಂತೆ ಪೂರ್ವಭಾವಿ ಯೋಜನೆ ರೂಪಿಸಿದ್ದರು. ಇದರಿಂದ ಅಡ್ವಾಣಿ ಅವರ ಬಳಿ ವರ್ಚಸ್ಸು ಹೆಚ್ಚಿಸಿಕೊಳ್ಳುವುದು ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಚಾರ ಪಡೆಯುವುದೇ ಆಗಿತ್ತು ! 'ಭವ್ಯ ಸಾಮ್ರಾಜ್ಯದ ವೈಭವವನ್ನು ಜನರಿಗೆ ತಿಳಿಸಲು ತಮ್ಮ ಸರಕಾರ ರಾಜ್ಯ ಪ್ರವಾಸೋದ್ಯಮ ಇಲಾಖೆಯಡಿ ವಿಜನಗರ ಪುನಶ್ಚೇತನ ಟ್ರಸ್ಟ್ ಸ್ಥಾಪಿಸಿದೆ. ಈ ಕಾರ್ಯ ತಮಗೆ ವೈಯಕ್ತಿಕವಾಗಿ ತೃಪ್ತಿ ನೀಡಿದೆ. ಸದ್ಯ ಪ್ರತಿಷ್ಠಾನದ ಚಟುವಟಿಕೆಗಳಿಗಾಗಿ ಐದು ಕೋಟಿ ರುಪಾಯಿ ಬಿಡುಗಡೆ ಮಾಡಲಾಗುತ್ತದೆ. ಪ್ರತಿಷ್ಠಾನ ತನ್ನ ಕ್ರಿಯಾ ಯೋಜನೆಯನ್ನು ಸರಕಾರಕ್ಕೆ ಸಲ್ಲಿಸಿದ ಬಳಿಕ ಮುಂದಿನ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು’ ಇದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮಾತು. ಈ ಸಮಾರಂಭದ ಸಾನಿಧ್ಯವನ್ನು ವಹಿಸಿದ್ದು ಶ್ರೀ ಶ್ರೀ ರವಿಶಂಕರ್ ಗುರೂಜಿ ! ಬಳ್ಳಾರಿಯ ಅಂದಿನ ತ್ರಿಮೂರ್ತಿ ಸಚಿವರೊಂದಿಗೆ ಆಗಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಇದ್ದರು.

ಪ್ರತಿಷ್ಠಾನದ ರಚನೆ:
ಈ ಸಮಾರಂಭದವರೆಗೂ ವಿಜಯನಗರ ಪುನಶ್ಚೇತನ ಟ್ರಸ್ಟ್ ರಚನೆಯಾಗಿದೆ. ಅದಕ್ಕೆ ಕರ್ನಾಟಕ ಸರ್ಕಾರದ ಅಂಕಿತ ಬಿದ್ದಿದೆ ಎಂಬ ವಿಷಯ ಹೊರ ಜಗತ್ತಿಗೆ ಗೊತ್ತಿರಲಿಲ್ಲ ! ಇದಕ್ಕೆ ವಿಧಾನ ಪರಿಷತ್ ಸದಸ್ಯ ಹಾಲಪ್ಪಾಚಾರ್ ಅಧ್ಯಕ್ಷರು, ಶ್ರೀಕೃಷ್ಣದೇವರಾಯ 500ನೇ ಪಟ್ಟಾಭಿಷೇಕ ಮಹೋತ್ಸವದ ಕಾರ್ಯದರ್ಶಿ ವಿಷ್ಣುಕಾಂತ ಚಟಪಲ್ಲಿ ಅವರೇ ಇದಕ್ಕೂ ಕಾರ್ಯದರ್ಶಿ. ಇದರ ಸದಸ್ಯರ ಹೆಸರುಗಳಲ್ಲಿ ಪ್ರಮುಖವಾಗಿ ಕಾಣಿಸಿದ್ದು ಸಂಸದ ಅನಂತ ಕುಮಾರ್ ಅವರ ಪತ್ನಿ ತೇಜಸ್ವೀನಿ ಅವರದು. ಹದಿನೆಂಟು ಮಂದಿ ಸದಸ್ಯರಲ್ಲಿ ಹೆಚ್ಚಿನವರು ಬಿಜೆಪಿಯವರೇ ಆಗಿದ್ದರು.
ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯ
 ಕನ್ನಡ ವಿಶ್ವವಿದ್ಯಾಲಯ ಆವರಣವೇಕೆ..?
ನಾನು ಆಗ ಬಳ್ಳಾರಿಯಲ್ಲಿದ್ದೆ. ಕಟ್ಟಡ ಕುಸಿತ ಕಾರ್ಯಾಚರಣೆಯ ಪ್ರತಿ ಅಂಶವನ್ನು ವರದಿ ಮಾಡುತ್ತಿದ್ದೆ. ಆದರೆ ಹಂಪಿಯಲ್ಲಿ ನಡೆಯುವ ಪ್ರತಿಯೊಂದು ಘಟನೆಯ ವಿವರಗಳು ಸಹ ವರದಿಗಾರರ ಮುಖಾಂತರ ನನಗೆ ತಲುಪುತ್ತಿದ್ದವು. ಆಗ ಅನಿಸಿದ್ದು ‘ಅರೇ ಭೂಮಿ ಪೂಜೆಯನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿದ ಪ್ರದೇಶದಲ್ಲಿ ಯಾಕೆ ಮಾಡುತ್ತಿದ್ದಾರೆ’ ಎಂದು. ಕಟ್ಟಡ ಅವಶೇಷಗಳ ತೆರವು ಮತ್ತು ಅದರಲ್ಲಿ ಸಿಲುಕಿಕೊಂಡಿದ್ದ ಶವಗಳನ್ನು ಹೊರತೆಗೆಯುವ ಕಾರ್ಯ ಸತತ ಹತ್ತು ದಿನ ನಡೆಯಿತು. ಈ ಸಂದರ್ಭದಲ್ಲಿ ಪವಾಡವೊಂದು ಘಟಿಸಿತು. ‘ಮೃತ್ಯುವನ್ನು ಗೆದ್ದ ಮಲ್ಲಯ್ಯ’ ಅಲ್ಲಿದ್ದರು. ಈ ಆಶ್ಚರ್ಯಕರ ಘಟನೆ ಬಗ್ಗೆ ಮುಂದೆ ತಿಳಿಸುತ್ತೇನೆ. ಈ ಕಾರ್ಯಾಚರಣೆ ನಂತರ ನನ್ನ ಗಮನ ಹರಿದಿದ್ದು ವಿಜಯನಗರ ಪುನಶ್ಚೇತನ ಪ್ರತಿಷ್ಠಾನದ ಕಡೆಗೆ…

ಸಿಂಡಿಕೇಟ್ ಸಭೆ ಸದಸ್ಯರಲ್ಲಿಯೆ ವಿರೋಧ:
ವಿಶ್ವವಿದ್ಯಾಲಯ ಸ್ಥಳದಲ್ಲಿ ಅನ್ಯ ಉದ್ದೇಶಗಳಿಗಾಗಿ ಈ ಸಂಸ್ಥೆಗೆ ಹೊರತಾದವರು ಚಟುವಟಿಕೆ ನಡೆಸಬೇಕಾದರೆ ಪೂರ್ವಭಾವಿ ಅನುಮತಿ ಪಡೆಯಬೇಕಾಗುತ್ತದೆ. ಆದರೆ ವಿಜಯನಗರ ಪುನಶ್ಚೇತನ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ಭೂಮಿ ಪೂಜೆಗೆ ಈ ಕನಿಷ್ಠ ನಿಯಮವನ್ನು ಪಾಲಿಸಲಾಗಿರಲಿಲ್ಲ ! ಸಮಾರಂಭ ಆದ ಬಳಿಕ ಈ ವಿಷಯದ ಕುರಿತಂತೆ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ನಡೆಯಿತು. ‘ ವಿಶ್ವವಿದ್ಯಾಲಯಕ್ಕೆ ಸೇರಿದ ಎಂಭತ್ತು ಎಕರೆ ಭೂಮಿಯನ್ನು ಪ್ರತಿಷ್ಠಾನಕ್ಕೆ ನೀಡಲು ಒಪ್ಪಿಗೆ ನೀಡಲಾಯಿತು. ಆದರೆ ಈ ಸಭೆಗೆ ಪ್ರಾಧ್ಯಾಪಕರು ಮತ್ತು ಸಿಂಡಿಕೇಟ್ ಸದಸ್ಯರು ಆದ ಡಾ. ರಹಮತ್ ತರಿಕೆರೆ ಮತ್ತು ಟಿ.ಆರ್. ಚಂದ್ರಶೇಖರ್ ಅವರು ಹಾಜರಿರಲಿಲ್ಲ. ಇವರ ಗೈರುಹಾಜರಿಯಲ್ಲಿಯೇ ಕುಲಪತಿ ಡಾ. ಎ. ಮುರಿಗೆಪ್ಪ ಅವರ ನೇತೃತ್ವದ ಸಭೆ ಮಹತ್ವದ ನಿರ್ಣಯ ತೆಗೆದುಕೊಂಡಿತ್ತು. ಇದನ್ನು ವಿರೋಧಿಸಿದ ಇವರಿಬ್ಬರು ಪ್ರಾಧ್ಯಾಪಕರು ತಮ್ಮ ಸಿಂಡಿಕೇಟ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರು.

ಸಿಂಡಿಕೇಟ್ ನ ಒಂದಿಬ್ಬರು ಸದಸ್ಯರನ್ನು ಹೊರತು ಪಡಿಸಿ ಕುಲಪತಿ ಎ. ಮುರಿಗೆಪ್ಪ ಅವರಿಗಾಗಲಿ ಮತ್ತು ಉಳಿದ ಸದಸ್ಯರಿಗಾಗಲಿ ಇಂಥ ನಿರ್ಣಯ ತೆಗೆದುಕೊಳ್ಳುವುದು ವೈಯಕ್ತಿಕ ನೆಲೆಗಟ್ಟಿನಲ್ಲಿ ಇಷ್ಟವಾದ ಸಂಗತಿಯಾಗಿರಲಿಲ್ಲ. ಆದರೆ  ಆಗ ಸ್ವತಂತ್ರ ಗಣರಾಜ್ಯದಂತೆ ಇದ್ದ ಬಳ್ಳಾರಿಯ ಮೇಲೆ ಸಂಪೂರ್ಣ ಹಿಡಿತವಿದ್ದ ಜನಾರ್ದನ ರೆಡ್ಡಿ  ತೀವ್ರ ಒತ್ತಡದ ಹಿನ್ನೆಲೆ ಇಂಥ ಬೆಳವಣಿಗೆಗೆ ಕಾರಣವಾಗಿತ್ತು.

ಭುಗಿಲೆದ್ದ ಕನ್ನಡ ವಿಶ್ವವಿದ್ಯಾಲಯ:
ಥೀಮ್ ಪಾರ್ಕ್ ನಿರ್ಮಾಣಕ್ಕೆ ವಿ.ವಿ.ಯ 80 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯಕ್ಕೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸತೊಡಗಿದರು. ತರಗತಿಗಳನ್ನು ಬಹಿಷ್ಕರಿಸಿ ಉಗ್ರ ಸ್ವರೂಪದ ಹೋರಾಟಕ್ಕೂ ಇಳಿದರು. ಇಲ್ಲಿಯ ಅಧ್ಯಾಪಕ ಮತ್ತು ಪ್ರಾಧ್ಯಾಪಕ ವೃಂದದವರಲ್ಲಿ ಬಹುತೇಕರು ಕೂಡ ಹೋರಾಟಕ್ಕೆ ತೊಡಗಿಸಿಕೊಂಡರು. ದಿನದಿಂದ ದಿನಕ್ಕೆ ಹೋರಾಟದ ಕಾವು ಏರತೊಡಗಿತು. ಕಮಲಾಪುರ ಮತ್ತು ಹೊಸಪೇಟೆಯ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳು ಕೂಡ ಇದಕ್ಕೆ ಬೆಂಬಲ ಸೂಚಿಸಿದವು. ವಿದ್ಯಾರ್ಥಿಗಳು ಇಂಥ ನಿರ್ಣಯದ ಹಿಂದಿದ್ದ ಶಕ್ತಿಗಳ ಪ್ರತಿಕೃತಿಗಳನ್ನು ದಹಿಸಿದರು. ಈ ಸಂದರ್ಭದಲ್ಲಿ ನಡೆದ ಪ್ರತಿಯೊಂದು ಬೆಳವಣಿಗೆಯನ್ನು ವರದಿ ಮಾಡುತ್ತಿದ್ದೆ.

ಪ್ರತಿಭಟನೆಯಲ್ಲಿ ಅರ್ಥವಿತ್ತು:
ಕನ್ನಡ ಕಟ್ಟುವ-ಬೆಳೆಸುವ ಮತ್ತು ಅದರ ಐತಿಹಾಸಿಕ ಹಿನ್ನೆಲೆಗಳ ಬಗ್ಗೆ ತಳಸ್ಪರ್ಶಿ ಸಂಶೋಧನೆ ನಡೆಸುವ ಮತ್ತು ಯಾವಾಗಲೂ ಆವಿಷ್ಕಾರಗೊಳುತ್ತಲೇ ಸಾಗುವ ಆಧುನಿಕ ಘಟ್ಟಕ್ಕೆ ಭಾಷೆಯನ್ನು ಎಲ್ಲ ನೆಲೆಗಳಲ್ಲಿ ಸಮರ್ಥವಾಗಿ ಮುಖಾಮುಖಿಗೊಳಿಸುವ ನಿಟ್ಟಿನಲ್ಲಿ 1992ರಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲಾಗಿತ್ತು. ಇದಕ್ಕಾಗಿ ಹಂಪಿ-ಕಮಲಾಪುರ ಸರಹದ್ದಿನಲ್ಲಿ 700 ಎಕರೆ ಜಾಗವನ್ನು ನೀಡಲಾಗಿತ್ತು. ಪ್ರಪ್ರಥಮ ಉಪ ಕುಲಪತಿಯಾದ ಚಂದ್ರಶೇಖರ ಕಂಬಾರ ಅವರು ತಮ್ಮೆಲ್ಲ ಸೃಜನಾತ್ಮಕ ಶಕ್ತಿಯನ್ನು ವಿಶ್ವವಿದ್ಯಾಲಯ ಕಟ್ಟಲು ಧಾರೆಯೆರೆದರು. ಸ್ವತಃ ಸಾಹಿತಿಯೂ ಆದ ಆಗಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಕೂಡ  ಈ ಕಾರ್ಯಕ್ಕೆ ತಮ್ಮ ಬೆಂಬಲ ನೀಡಿದರು.
ಚಂದ್ರಶೇಖರ ಕಂಬಾರ
 1994ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಆಗ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದವರು ಸಾಹಿತಿ-ಕಲಾವಿದ ಮತ್ತು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯವರೇ ಆದ ಎಂ.ಪಿ. ಪ್ರಕಾಶ್. ಇವರ ಅವಧಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸರ್ವತೋಮುಖ ಬೆಳವಣಿಗೆಯಾಗುವ ನಿಟ್ಟಿನಲ್ಲಿ ಭರದಿಂದ ಹೆಜ್ಜೆಗಳನ್ನು ಇಡಲಾರಂಭಿಸಿತು. ವಿಶ್ವವಿದ್ಯಾಲಯದ ಬಗ್ಗೆ ಇವರಿಗೆ ಮಹತ್ವದ ಕನಸುಗಳಿದ್ದವು. ಈ ಕಾರಣದಿಂದಾಗಿಯೆ ಉಪ ಕುಲಪತಿ ಕಂಬಾರರಿಗೆ ಮತ್ತಷ್ಟು ಹುರುಪು-ಪ್ರೋತ್ಸಾಹ ದೊರೆಯಿತು. ಕನ್ನಡ ವಿಶ್ವವಿದ್ಯಾಲಯದ ಪರಿಕಲ್ಪನೆಯನ್ನು ಗಟ್ಟಿಗೊಳಿಸುವಲ್ಲಿ ಶ್ರಮಿಸಿದವರಲ್ಲಿ ಇವರಿಬ್ಬರು ಪ್ರಮುಖರು.
ಎಂ.ಪಿ ಪ್ರಕಾಶ್
 ಹಂಪಿ ಮಗ್ಗುಲಿನಲ್ಲಿಯೇ ಇರುವ 700 ಎಕರೆ ಜಾಗ ಅಂದು ಬಣಗುಟ್ಟುತ್ತಿದ್ದ ಪ್ರದೇಶ. ಈ ಪ್ರದೇಶದಲ್ಲಿ ನಿತ್ಯವೂ ಖುದ್ದು ಓಡಾಡಿ ಎಲ್ಲೆಲ್ಲಿ ಯಾವಯಾವ ಕಟ್ಟಡಗಳು ಬರಬೇಕು ಮತ್ತು ಅದರ ವಿನ್ಯಾಸ ಹೇಗಿರಬೇಕು ಎಂದು ಕಂಬಾರರು ಸುದೀರ್ಘವಾಗಿ ಯೋಚಿಸುತ್ತಿದ್ದರು. ಇಂಥ ಮಂಥನಕ್ಕೆ ಎಂ.ಪಿ.ಪ್ರಕಾಶ್ ಸಹ ಜೊತೆಯಾಗಿದ್ದರು. ಹೊರಳಿದರೆ ಐತಿಹಾಸಿಕ ಹಂಪಿ. ಇಲ್ಲಿನ ಪರಂಪರೆಗೆ ಕುಂದು ಉಂಟಾಗದಂತೆ ಕಟ್ಟಡಗಳನ್ನು ನಿರ್ಮಿಸುವುದು ಸವಾಲಾಗಿತ್ತು. ಈ ದಿಶೆಯಲ್ಲಿ ಸ್ಥಳೀಯವಾಗಿ ದೊರೆಯುವ ಪರಿಕರಗಳನ್ನು ಸಮರ್ಥವಾಗಿ ಬಳಸಿಕೊಂಡು ದೇಸೀ ವಿನ್ಯಾಸದಲ್ಲಿ ಕಟ್ಟಡಗಳನ್ನು ನಿರ್ಮಾಣಗೊಳಿಸಿದರು. ವಿಧವಿಧವಾದ ಗಿಡಗಳನ್ನು ಬೆಳೆಸಿದರು. ಅವೆಲ್ಲ ಇಂದು ಬೆಳೆದು ನಿಂತು ಅಲ್ಲಿ ಸೊಬಗಿನ ವನವೇ ಸೃಷ್ಟಿಯಾಗಿದೆ. ಇದು ನಿಜವಾದ ಥೀಮ್ ಪಾರ್ಕ್. ಆದರೆ ಕೃತಕ-ನಿಸ್ಸಾರ ಥೀಮ್ ಪಾರ್ಕ್ ಮಾಡಲು ಹೊರಟವರು ಇತ್ತ ಗಮನ ಹರಿಸಲಿಲ್ಲ !

ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿ:
ಕನ್ನಡ ವಿಶ್ವವಿದ್ಯಾಲಯದ ಬೆಳವಣಿಗೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ 700 ಎಕರೆ ಜಾಗ ಏನೇನೂ ಅಲ್ಲ. ಅದು ಅಲ್ಲದೇ ಪ್ರವಾಸಿಗರಿಂದ ಗಿಜಿಗುಡುವ ಸಾಧ್ಯತೆಗಳಿರುವ ಕೃತಕ ಥೀಮ್ ಪಾರ್ಕ್ ಚಟುವಟಿಕೆಗಳು ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗೆ ಧಕ್ಕೆ ತರುವ ಸಂಗತಿಗಳು. ಪ್ರಾರಂಭದಲ್ಲಿ ಎಂಭತ್ತು ಎಕರೆಯೆಂದು ಹೇಳಿ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜಾಗವನ್ನು ಆಕ್ರಮಿಸಿಕೊಳ್ಳುತ್ತಲೇ ಹೋಗುವ ಬೆಳವಣಿಗೆ ನಿಚ್ಚಳ. ಈ ಎಲ್ಲ ಅಂಶಗಳೇ ವಿದ್ಯಾರ್ಥಿಗಳನ್ನು-ಅಧ್ಯಾಪಕ ವೃಂದದವರನ್ನು ಆತಂಕಗೊಳಿಸಿತ್ತು.

ಚಳವಳಿಯಲ್ಲಿ ಪತ್ರಕರ್ತರು:
ಭೂಮಿ ಆಕ್ರಮಿಸುವುದನ್ನು ವಿರೋಧಿಸಿ ವಿಶ್ವವಿದ್ಯಾಲಯದ ಆವರಣ, ಪ್ರವೇಶ ಸ್ಥಳ, ಕಮಲಾಪುರ-ಹೊಸಪೇಟೆಗಳಲ್ಲಿ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿತ್ತು. ಈ ಪ್ರತಿಯೊಂದು ಪ್ರತಿಭಟನೆಗೂ ಕ್ಯಾಮರಾ-ಮೈಕ್ ಹಿಡಿದು ಹೋರಾಟದ ಧ್ವನಿಗಳನ್ನು ದಾಖಲಿಸುತ್ತಿದ್ದೆವು. ಇದು ಚಳವಳಿಗೆ ಜಯ ಲಭಿಸುವವರೆಗೂ ಸಾಗಿತು. ಒಂದು ರೀತಿಯಲ್ಲಿ ನಾವು ಕೆಲವಾರು ಪತ್ರಕರ್ತರು ಚಳವಳಿಯಲ್ಲಿ ತೊಡಗಿಸಿಕೊಂಡೆವು ಎನಿಸುತ್ತದೆ. 

ಹೊಸಪೇಟೆಯ ಪತ್ರಕರ್ತ, ವಿಚಾರವಾದಿ ಪರಶುರಾಮ್ ಕಲಾಲ್ ಅವರು ಸಕ್ರಿಯವಾಗಿ ಹೋರಾಟಕ್ಕೂ ಧುಮ್ಮಿಕ್ಕಿದರು. ಪ್ರತಿಭಟನೆಗಳನ್ನು ಸಂಘಟಿಸಿದರು. ಆ ಸಂದರ್ಭಗಳಲ್ಲಿ ಇವರ ಆವೇಶ ಅಪಾರ. ಇವರ ಕಾರಣದಿಂದಲೂ ಹೋರಾಟದ ಕಾವು ಮತ್ತಷ್ಟು ಏರಿತು. ಬಲಿ ಚಕ್ರವರ್ತಿಗೆ ಒಂದು ಹೆಜ್ಜೆ ಜಾಗ ಕೇಳಿ ವಾಮನಮೂರ್ತಿ ಕೊನೆಗೆ ಯಾವ ಜಾಗವೂ ಸಾಕಾಗದೇ ಬಲಿ ಚಕ್ರವರ್ತಿಯ ತಲೆಯ ಮೇಲೆ ಕಾಲಿಟ್ಟು ಪಾತಾಳಕ್ಕೆ ತುಳಿದಂತೆ ಕೇವಲ 80 ಎಕರೆ ಭೂಮಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದನ್ನು ಕಬಳಿಸುವ ಮೂಲಕ ಇಡೀ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನೇ ಅಲ್ಲಿಂದ ಎತ್ತಿ ಹಾಕುವ ಹುನ್ನಾರ ಇದ್ದಂತೆ ಕಾಣುತ್ತಿದೆ. ಯಾಕೆಂದರೆ ಟ್ರಸ್ಟ್ ಆರಂಭಕ್ಕೆ ಮುಂಚೆ ಸಚಿವ ಜನಾರ್ದನ ರೆಡ್ಡಿ ಇವರು ಹಂಪಿಯ 200 ಎಕರೆ ಪ್ರದೇಶದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ಹಂಪಿಯ ಮರುಸೃಷ್ಠಿ ಉದ್ಯಾನವನ ನಿರ್ಮಿಸಲಾಗುವುದು ಎಂದು ಹೇಳಿದ್ದರು. ಇದಕ್ಕೆ ಅಷ್ಟು ಭೂಮಿ ಎಲ್ಲಿದೆ ಎಂದು ಪತ್ರಕರ್ತರು ಕೇಳಿದರೆ, ನೋಡುತ್ತೀರಿ ಎಂದೇ ಹೇಳಿದ್ದರು. ಹಂಪಿ ಕನ್ನಡ ವಿವಿ ಆವರಣದಲ್ಲಿ ಟ್ರಸ್ಟ್ ಸ್ಥಾಪಿಸಿರುವುದನ್ನು ನೋಡಿದರೆ  ನೆಲಕ್ಕಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಅಪೋಶನ ತೆಗೆದುಕೊಳ್ಳುವುದೇ ಆಗಿದೆ ಎಂದು ಅರ್ಥವಾಗುತ್ತದೆ’ ಇದು ಪರಶುರಾಮ್  ಕಲಾಲ್ ನುಡಿ. 

ಸಾಹಿತಿಗಳೂ ಕೂಗು ಹಾಕಿದರು:
ಹಿರಿಯ ಕಲಾವಿದ, ವಿಚಾರವಾದಿ ಜಿ.ಕೆ. ಗೋವಿಂದ ರಾವ್ ನೇತೃತ್ವದಲ್ಲಿ ಬೆಂಗಳೂರಿನಿಂದ ಬಂದ ತಂಡ ಮತ್ತು ಸ್ಥಳೀಯ ಹೋರಾಟಗಾರರು ಸೇರಿ ವಿ.ವಿ, ಕಮಲಾಪುರ ಮತ್ತು ಪಾಪಿನಾಯಕನ ಹಳ್ಳಿ ರಸ್ತೆಗಳು ಸೇರುವ ಕೂಡು ಮಾರ್ಗದಲ್ಲಿ ಭಾರಿ ಪ್ರತಿಭಟನೆ ನಡೆಸಿದರು. ಆಗ ಬಂದೋಬಸ್ತ್ ಗಾಗಿ ಸೇರಿದ್ದ ಪೋಲೀಸರ ಸಂಖ್ಯೆಯನ್ನು ನೋಡಿದರೆ ಅಲ್ಲಿ ಕರ್ಫ್ಯೂ ಹೇರಲು ತಿರ್ಮಾನಿಸಿದ್ದಾರೇನೋ ಎನಿಸುತ್ತಿತ್ತು.  ಯು. ಆರ್ ಅನಂತಮೂರ್ತಿ, ಜಿ.ಎಸ್ ಶಿವರುದ್ರಪ್ಪ, ಗೀತಾ ನಾಗಭೂಷಣ್ ಪತ್ರಕರ್ತ ಪಾಟೀಲ ಪುಟ್ಟಪ್ಪ ತೀವ್ರವಾಗಿ ವಿರೋಧಿಸಿದರು. ಕನ್ನಡ ವಿಶ್ವವಿದ್ಯಾಲಯದ ಹಿಂದಿನ ಕುಲಪತಿಗಳಾದ ಚಂದ್ರಶೇಖರ ಕಂಬಾರ, ಬಾ. ವಿವೇಕ್ ರೈ ಮತ್ತು ಲಕ್ಕಪ್ಪಗೌಡ ಅವರು ಕನ್ನಡ ವಿ.ವಿ. ಭೂಮಿಯನ್ನು ಅನ್ಯ ಉದ್ದೇಶಕ್ಕೆ ಆಕ್ರಮಿಸುವ ನಿಲುವನ್ನು ವಿರೋಧಿಸಿದರು.

ವಿರೋಧಕ್ಕೆ ಮಣಿದ ಸರಕಾರ:
ತೀವ್ರವಾಗಿ ಎದ್ದ ಪ್ರತಿಭಟನೆ ಪ್ರತಿಧ್ವನಿ ಸರ್ಕಾರವನ್ನು ಕಂಗೆಡಿಸಿತು. ವಿ.ವಿ.ಗೆ ಸೇರಿದ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವ ನಿರ್ಧಾರದಿಂದ ಸರಕಾರ ಹಿಂದೆ ಸರಿದಿದೆ ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ಕನ್ನಡದ ಕೂಗಿಗೆ ಸರಕಾರ ಮಣಿದಿತ್ತು. ಆದರೆ ಇಷ್ಟೆಲ್ಲ ಅಶಾಂತಿಗೆ ಕಾರಣವಾಗಿದ್ದು ಮಾತ್ರ ವಿ.ವಿ. ಜಾಗದಲ್ಲಿ ಥೀಮ್ ಪಾರ್ಕ್ ನಿರ್ಮಿಸಲು ನಿರ್ಧರಿಸಿದ ಜನಾರ್ದನ ರೆಡ್ಡಿ  !

ಕನ್ನಡ ಕೆಲಸಕ್ಕಿಲ್ಲದ ದುಡ್ಡು ಥೀಮ್ ಪಾರ್ಕಿಗೆ ಇದೆ:
ವಿಜಯನಗರ ವೈಭವ ತಿಳಿಸಲು ಹಂಪಿ ಜೀವಂತವಾಗಿದೆ. ಇಲ್ಲಿಯ ಸ್ಮಾರಕಗಳೇ ಎಲ್ಲವನ್ನು ಪಿಸುಗುಟ್ಟುತ್ತವೆ. ಕೇಳಿಸಿಕೊಳ್ಳುವ ಮನಸು ಬೇಕಷ್ಟೆ. ಆದರೆ ಇದನ್ನು ಅರ್ಥಮಾಡಿಕೊಳ್ಳದ ಸರಕಾರ ವಿಜಯನಗರ ವೈಭವ ಮರುಕಳಿಸುವಂತೆ ಮಾಡುತ್ತೇವೆಂದು ಥೀಮ್ ಪಾರ್ಕ್ ನಿರ್ಮಾಣಕ್ಕೆ 2011-12 ರ ಸಾಲಿನ ಬಜೆಟ್ ನಲ್ಲಿ  ನೂರು ಕೋಟಿ ಮೀಸಲಿರಿಸಿದೆ. ಆದರೆ ಕನ್ನಡ ವಿಶ್ವವಿದ್ಯಾಲಯದ ಕೆಲಸಗಳಿಗೆ ದುಡ್ಡಿನ ಕೊರತೆ ಹೇಳುತ್ತದೆ. ಅದೇನು…ಮುಂದೆ ನೋಡೋಣ…

2 comments:

 1. ಅಧಿಕಾರದಲ್ಲಿದ್ದಾಗ ತಾನು ಯಾರು ಎಂಬ ಸತ್ಯವನ್ನು ಮರೆತು ತನ್ನ ಮನಸ್ಸಿಗೆ ಬಂದಂತೆ ನಿರ್ಣಯಗಳನ್ನು ತೆಗೆದುಕೊಂಡರೆ ಜನ ಸಾಮಾನ್ಯರು ಹೋರಾಡುವದು ಸಹಜ ...ಆದರೆ ಜನರ ಮನಸ್ಸಿನಲ್ಲಿನ ಹತಾಶೆ ,ಕೋಪ ಹಾಗೂ ಅದರಿಂದ ಬರುವ ಶಾಪ ತಟ್ಟದೆ ಬಿಡದು...ಇದನ್ನು ಅರ್ಥ ಮಾಡಿಕೊಂಡು ನಡೆದರೆ ಯಾವ ತೊಂದರೆ ಬಾರದು ...ಇಲ್ಲದಿದ್ದರೆ ಈಗ ನೋಡುತ್ತಿದ್ದೀರಲ್ಲಾ .....

  ReplyDelete
 2. ದಿನೇಶ್ ಕುಕ್ಕುಜಡ್ಕSaturday, 17 September, 2011

  ಪ್ರಿಯ ರೈತರೇ,
  ಈಗಷ್ಟೆ ನಿಮ್ಮ ಬ್ಲಾಗ್ ನೋಡಿದೆ. ಬಳ್ಳಾರಿ ಎಂಬ "ಭಯಾನಕ ಸಂಸ್ಥಾನ"ದ ಪ್ರತೀ ಒಳ ವಿವರಗಳನ್ನೂ ಹತ್ತಿರದಿಂದ ಕಂಡುಂಡು ಅನುಭವಿಸಿದ್ದೀರಿ ನೀವು. ನಾವು ಇಲ್ಲೆಲ್ಲೋ ದೂರದಲ್ಲೇ ಕೂತಿದ್ದು ಆ ಜನಗಳನ್ನು ವಿರೋಧಿಸುವುದು ಸುಲಭ. ಆದರೆ, ಅಲ್ಲೇ ಇದ್ದು ಅದನ್ನು ನೇರ ಮುಖಾಮುಖಿಯಾಗುವುದು ಅಷ್ಟೊಂದು ಸಲೀಸಲ್ಲವೆಂಬುದನ್ನೂ ಅರಿಯಬಲ್ಲೆ. ಮನುಷ್ಯ ಹೆಚ್ಚುಹೆಚ್ಚು ಸ್ವಯಂ ಕೇಂದ್ರಿತನಾಗಿಯೇ ಬದುಕುತ್ತಿರುವ ಈ ಹೊತ್ತಿನಲ್ಲೂ, ಸಮಾಜಮುಖಿಯಾಗಿರಬೇಕೆಂಬ ಅದಮ್ಯ ಸತ್ಕಾಳಜಿಯ ಕಾರಣಕ್ಕಾಗಿಯೇ ಎಲ್ಲಾ ಸವಾಲುಗಳೊಂದಿಗೆ ಹೋರಾಡುತ್ತಿರುವ ಎಸ್.ಆರ್.ಹಿರೇಮಠ್ ರಂಥವರನ್ನೂ ನಾವು ಈ ಹೊತ್ತು ನೆನೆಯಬೇಕು. ಈ ನಿಟ್ಟಿನಲ್ಲಿ ನಿಮ್ಮ -ಹಾಗೂ ನಿಮ್ಮಂಥವರ ಕಾರ್ಯಕಾಳಜಿಗಳೂ ಅಭಿನಂದನೀಯ.
  ಒಂದೆರಡು ಕೋಟಿ ಹೊಡೆದವರ್ಯಾರೂ ಈಗ ಕಳ್ಳರೇ ಅಲ್ಲವೆನ್ನಿಸುವ ಮಟ್ಟಿಗೆ ಭೀಕರಚೋರಕೋರರ ನಾಡಾಗಿಬಿಟ್ಟಿದೆ ಈ ನೆಲ! ಸದ್ಯ ಎಲ್ಲ ಅತಿಗಳಿಗೂ ಒಂದು ಕೊನೆಯಿದೆಯೆಂಬಂಥ ಬೆಳವಣಿಗೆಗಳು ನಡೆಯುತ್ತಿರುವುದೊಂದು ಸಮಾಧಾನವಷ್ಟೆ! ಇರಲಿ: ಮುಂದೆಯೂ ಆತ್ಮ ಸಾಕ್ಷಿಯೊಂದಿಗೆ ಹೋರಾಡೋಣ. ಆಲ್ ದಿ ಬೆಸ್ಟ್ ರೈತರೇ.

  ReplyDelete