• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಹೊಳೆಯಾಗಿ ಹರಿದ ಎದೆಯಾಳದ ನೋವು

ಪ್ರಿಯದರ್ಶಿನಿಸಭಾಂಗಣ ಕಿಕ್ಕಿರಿದಿತ್ತು. ಬಂದವರು ಎರಡು  ದಶಕಗಳ ಕಾಲ ದಕ್ಷಿಣ ಭಾರತದ ಬೆಳ್ಳಿ ಪರದೆಯನ್ನಾಳಿದ್ದ ಕಥಾ ನಾಯಕಿ ಮಾತುಗಳನ್ನಾಲಿಸಲು ಮೌನವಾಗಿ ಕುಳಿತ್ತಿದ್ದರು. ಕಲಾವಿದೆ ಸಾಹುಕಾರ್ ಜಾನಕಿ ಭಾವುಕರಾಗಿದ್ದರು. ಆರು ದಶಕಗಳ ಕಾಲದ ಅವರ ಎದೆಯಾಳದ ನೋವು ಅಲ್ಲಿ ಹೊಳೆಯಾಗಿ ಹರಿಯಿತು…..ಇದು ನೆರೆದವರ ಹೃದಯಗಳನ್ನು ತೊಯ್ಯಿಸಿ ಅವರ ಮನಗಳನ್ನೂ ಭಾರವಾಗಿಸಿತು…..
 ಸೆಪ್ಟೆಂಬರ್ 10, 2011. ಸ್ಥಳ: ಬಾದಾಮಿ ಹೌಸ್ ಪ್ರಿಯದರ್ಶಿನಿ ಸಭಾಂಗಣ, ಬೆಂಗಳೂರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ಕಲಾವಿದೆ ಸಾಹುಕಾರ್ ಜಾನಕಿ ಅವರೊಂದಿಗೆ  ಸಂವಾದ ಕಾರ್ಯಕ್ರಮ. ಎಂಭತ್ತರ ಹರೆಯದ-ಹದಿನೆಂಟರ ಉತ್ಸಾಹದ ಅಭಿನಯ ಶಾರದೆ ಎಲ್ಲಿಯೂ ಎಡವದೆ-ತಡವರಿಸದೆ-ದಣಿಯದೆ ಬತ್ತದ ನೆನಪಿನ ನದಿಯಿಂದ ವಿಷಯಗಳನ್ನು ಮೊಗೆಮೊಗೆದು ಎರಡು ತಾಸು ನಿರರ್ಗಳವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರ ಸಂಗ್ರಹದ ಹಳೆಯ ಚಿತ್ರಗಳೊಂದಿಗೆ ಅವರ ನೆನಪು ಮತ್ತು ನಾನು ಕ್ಲಿಕಿಸಿದ ಚಿತ್ರಗಳು ನಿಮ್ಮ ಮುಂದೆ...............
ತಮ್ಮ ಹಳೆಯ ಚಿತ್ರಗಳನ್ನು ನೋಡುತ್ತಾ ಅದರ ಸಂದರ್ಭದ ಬಗ್ಗೆ ವಿವರಣೆ
ಕಾರ್ಯಕ್ರಮ ನಿರ್ವಹಿಸಿದ ಚಲನಚಿತ್ರ ಅಕಾಡೆಮಿ ಸದಸ್ಯೆ ಕೆ.ಎಚ್.ಸಾವಿತ್ರಿ ಅವರೊಂದಿಗೆ
ತಮ್ಮ ತುಂಬು ಯೌವನ ಕಾಲ ಘಟ್ಟದ ಕಲಾವಿದೆಯ ಸ್ಥಿರ ಚಿತ್ರಗಳನ್ನು ನೋಡುತ್ತಾ ನೆನಪಿನಂಗಳಕ್ಕೆ ಜಾರಿದ ವ್ಯಕ್ತಿಗಳು

ನಮ್ಮೂರಿನವರು ನಮ್ಮ ಭಾಷೆಯವರು:
ಭಾವವೇ ಮೈದುಂಬಿ ನಟಿಸುವ ಜಾನಕಿ ಅಂದರೆ ಯಾರು ಎಂಬ ಪ್ರಶ್ನೆ ಎದುರಾಗಬಹುದು. ಆದರೆ ಸಾಹುಕಾರ್ ಜಾನಕಿ ಎಂದರೆ ಹಿಂದಿನ-ಇಂದಿನ ಪೀಳಿಗೆಯವರು ಗೊತ್ತು ಎನ್ನುತ್ತಾರೆ. ಇದಕ್ಕೆ ಕಾರಣ ಕಲಾವಿದೆ ಇಂದೂ  ಅಭಿನಯಿಸುತ್ತಿರುವುದು. ಕನ್ನಡಕ್ಕಿಂತಲೂ ತೆಲುಗು-ತಮಿಳು ಚಲನಚಿತ್ರಗಳಲ್ಲಿ ಹೆಚ್ಚು ನಟಿಸಿದ ಕಲಾವಿದೆ. ಇದರಿಂದಾಗಿಯೆ ಇವರು ಕನ್ನಡ ಭಾಷಿಕರಲ್ಲವೆನೋ ಎಂಬ ಭಾವನೆ ಸಾಮಾನ್ಯ. ‘ಆದರೆ ನನ್ನೂರು ಉಡುಪಿ. ಮಾತೃಭಾಷೆ ಕನ್ನಡ. ತಂದೆಯದು ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಯಾಗುವ ಕೇಂದ್ರ ಸರಕಾರಿ ಕೆಲಸ. ಹಿನ್ನೆಲೆಯಲ್ಲಿ ಜನಿಸಿದ್ದು 1931ರಲ್ಲಿ ಆಂಧ್ರದ ರಾಜಮುಂಡ್ರಿಯಲ್ಲಿ. ಎಲ್ಲಿ ಬೆಳೆದರೂ ಮನೆಯೊಳಗಿನ ಮಾತು ಕಸ್ತೂರಿ ಕನ್ನಡ.

ಹೆಚ್ಚು ಓದಲಾಗಲಿಲ್ಲ:
ಅಪ್ಪ ಉನ್ನತ ಹುದ್ದೆಯಲ್ಲಿದ್ದರೂ ಮನೆಯಲ್ಲಿ ತುಂಬ ಸಂಪ್ರದಾಯದ ವಾತಾವರಣ. ಸಿನಿಮಾ ಎಂದರೆ ಸಿಡಿಸಿಡಿ ಎನ್ನುವ ವಾತಾವರಣ. ತಂದೆಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅತ್ಯಲ್ಪ ಅವಧಿಯಲ್ಲಿಯೆ ಆಗುತ್ತಿದ್ದ ವರ್ಗಾವಣೆ ಜಾನಕಿ ಅವರ ವಿದ್ಯಾಭ್ಯಾಸದ ಮೇಲೂ ಆಯಿತು. ‘ಹೆಚ್ಚು ಓದಬೇಕೆಂಬ ಹಂಬಲವಿದ್ದರೂ ಹೈಸ್ಕೂಲು ದಾಟುವುದೂ ಸಾಧ್ಯವಾಗಲಿಲ್ಲ. ಕೊರಗು ಇಂದಿಗೂ ಇದೆಇದವರ ಮಾತು. ಆದರೆ ಸೂಕ್ಷ್ಮಗ್ರಾಹಿ ಜಾನಕಿ ಪಂಚಭಾಷೆ ಬಲ್ಲವರು. ಇಂಗ್ಲೀಷ್ ಸಂಭಾಷಣೆಯೂ ಸುಲಲಿತ. ಕ್ಷೇತ್ರ ಸಿನಿಮಾ ಆದರೂ ರಾಜಕೀಯ-ಆರ್ಥಿಕ-ಧಾರ್ಮಿಕ ಜೊತೆಗೆ ಮನೋವಿಜ್ಞಾನದ ವಿಷಯಗಳನ್ನೂ ಅರಿತವರು. ಎರಡು ತಾಸಿನ ಸಂವಾದ ಅವರ ವಿಶಾಲ ವಿದ್ವತ್ತಿನ ಪರಿಚಯ ಮಾಡಿಸಿತು. ಆಗ ಸಾಂಪ್ರದಾಯಿಕವಾಗಿ  ಮಾಡಿಸುತ್ತಿದ್ದ ಸಂಗೀತಾಭ್ಯಾಸದಲ್ಲಿ ಹೆಚ್ಚು ನುರಿತ ಕಾರಣ 11ನೇ ವಯಸ್ಸಿಗೆ ಆಕಾಶವಾಣಿ ಕಲಾವಿದೆಯಾಗುವ ಸುಯೋಗ.

ದೇಶಕ್ಕೆ ಸ್ವಾತಂತ್ರ ಬಂತು. ಆದರೆ ನನ್ನ ಸ್ವಾತಂತ್ರ ಕಳೆಯಿತು.
ಅಂಗಳದಲ್ಲಿ ಕುಂಟಾಬಿಲ್ಲೆ ಆಡುತ್ತಿದ್ದ ಹದಿನಾರನೆ ವಯಸ್ಸಿಗೆ ಕುತ್ತಿಗೆಗೆ ಭಾರವಾದ ತಾಳಿ. ಸಣ್ಣ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿದ್ದ ಶ್ರೀನಿವಾಸ್ ರಾವ್ ಜೊತೆಗೆ ಮದುವೆ. ಮಾತನಾಡತೊಡಗಿದಂತೆ ಜಾನಕಿ ಮತ್ತೂ ಭಾವುಕರಾದರು. ಅವರ ಕಣ್ಣುಗಳಲ್ಲಿ ತೆಳುವಾಗಿ ನೀರು ತುಂಬಿಕೊಂಡಿತು. ‘1947ರಲ್ಲಿ ದೇಶಕ್ಕೆ ಸ್ವಾತಂತ್ರ ಬಂತು. ವರ್ಷವೇ ಮದುವೆ ಎಂಬುದರ ಮೂಲಕ ನನ್ನ ಸ್ವಾತಂತ್ರ ಕಳೆದುಕೊಂಡೆ. ಎಂದು ನಕ್ಕರು. ನಗುವಿನಲ್ಲಿ ದುಗುಡವಿತ್ತು. ತವರು ಮನೆಯಿಂದ ಹೊರ ನಡೆಯುವ ಹೆಣ್ಣು ಗಂಡನಿಂದ ಆಸರೆ-ಅಕ್ಕರೆ-ಆಶ್ವಾಸನೆ ಬಯಸುತ್ತಾಳೆ. ಆದರೆ ನನ್ನ ದಾಂಪತ್ಯ ಜೀವನದಲ್ಲಿ ಇದೆಲ್ಲ ಗಗನ ಕುಸುಮವಾಯಿತು. ಮದುವೆಯಾದ ಕೆಲ ತಿಂಗಳಿನಲ್ಲಿ ಪತಿ ಕೆಲಸ ತೊರೆದರು. ಕಷ್ಟಪಟ್ಟು ದುಡಿಯುವುದಕ್ಕೆ ಅವರಿಗೆ ಮನಸಿರಲಿಲ್ಲ. ಆಗ ನನ್ನ ತಂದೆ ಅಸ್ಸಾಂನಲ್ಲಿದ್ದರು. ನಿನ್ನ ತಂದೆ ಏನಾದರೂ ಕೆಲಸ ಕೊಡಿಸಬಹುದು ಬಾ ಎಂದು ಅಲ್ಲಿಗೆ ಕರೆದುಕೊಂಡು ಹೋದರು. ನಮ್ಮದು ದೊಡ್ಡ ಕುಟುಂಬ. ತವರಿಗೆ ಹೆಚ್ಚು ದಿನ ಹೊರೆಯಾಗಿ ಇರುವುದಕ್ಕೆ ಮನ ಒಪ್ಪಲಿಲ್ಲ. ಪರಿಣಾಮ ಗಂಡನೊಟ್ಟಿಗೆ ಮದ್ರಾಸಿಗೆ ಬಂದೆ. ಆಗಲೇ ಕಂಕುಳಿನಲ್ಲೊಂದು ಮಗುವಿತ್ತು’  ಬಾಲ್ಯದಂಗಳದಲ್ಲಿ ನಲಿದಾಡುವ ಹದಿನೇಳರ ಬಾಲೆಗೆ ಒಂದು ಹೆಣ್ಣು ಮಗು !

ಸಿಡಿಮಿಡಿಸುತ್ತಿದ್ದ ಸಿನಿಮಾವೇ ಆಸರೆ:
ಪತಿ ಶ್ರೀನಿವಾಸರಾವ್ ಕೆಲಸ ಹುಡುಕಲು ಆಸಕ್ತಿಯೆ ತೋರಲಿಲ್ಲ. ಬದುಕಿನ ಬಂಡಿ ಉರುಳುವುದು ಕಷ್ಟವಾಗತೊಡಗಿತು. ಮೊದಲು ತಂದೆ ಮದ್ರಾಸಿನಲ್ಲಿದ್ದಾಗ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿತ್ತು. ಆದರೆ ಸಿನಿಮಾದಲ್ಲಿ ನಟಿಸುವ ಮಾತಿರಲಿ-ಸಿನಿಮಾ ನೋಡುವುದಕ್ಕೂ ಸಿಡಿಮಿಡಿಗುಟ್ಟುತ್ತಿದ್ದ ತಂದೆ, ನಾನು ನಟಿಸುವುದಕ್ಕೆ ಒಪ್ಪಿರಲಿಲ್ಲ. ಈಗ ಮತ್ತೆ ಮದ್ರಾಸಿಗೆ ಬಂದ ನಂತರ ಕಂಕುಳಿನಲ್ಲಿದ್ದ ಮಗಳಿಗಾಗಿ, ನನಗಾಗಿ ದುಡಿಯಲೇ ಬೇಕಿತ್ತು’  ನಟನೆ ಅವಕಾಶ ಕೋರಿ .ವಿ.ಎಂ ಸ್ಟುಡಿಯೋಗೆ ಕಾಲಿರಿಸಿದಾಗ ಜಾನಕಿ ಅವರು ಮೂರು ತಿಂಗಳ ಹಸಿ ಬಾಣಂತಿ !

ನನ್ನೊಂದಿಗೆ ಕಂಕುಳಿನಲ್ಲಿದ್ದ ಮಗು ನೋಡಿದ .ವಿ.ಎಂ. ಸ್ಟುಡಿಯೋ ಮಾಲೀಕರಿಂದ ಯಾರದಮ್ಮ ಮಗು ಎಂಬ ಮೊದಲ ಪ್ರಶ್ನೆ. ನನ್ನದೇ ಎಂದೆ. ಸದ್ಯ ನಾನು ಯಾವುದೇ ಸಿನಿಮಾ ನಿರ್ಮಿಸುತ್ತಿಲ್ಲಮ್ಮ ಎನ್ನುವ ಪ್ರತಿಕ್ರಿಯೆ. ಪರಿಪರಿಯಾಗಿ ಕೇಳಿಕೊಂಡೆ. ನನ್ನ ತಮ್ಮ ಸದ್ಯವೆ ಒಂದು ಸಿನಿಮಾ ಮಾಡುತ್ತಿದ್ದಾನೆ. ಅವನಿಗೆ ಹೇಳಿ ನೋಡುತ್ತೇನೆ ಎಂದು ಅಲ್ಲಿಂದಲೇ ಪೋನ್ ಮಾಡಿದರು. ನಂತರ ಸ್ಕ್ರೀನ್ ಟೆಸ್ಟ್ ಆಯಿತು. ಕೆಲ ದಿನಗಳ ನಂತರ ಕರೆ ಬಂತು. ಪೋಷಕ ಪಾತ್ರಧಾರಿ ಅವಕಾಶ ದೊರೆಯಬಹುದು ಎಂದು ಕೊಂಡು ಹೋದೆ. ನೀನು ಕಥಾ ನಾಯಕಿಯಾಗಿ ಆಯ್ಕೆಯಾಗಿದ್ದೀಯ ಕಣ್ಣಮ್ಮ ಎಂದರು. ನನ್ನನ್ನೇ ನಾನು ನಂಬಲಾಗಲಿಲ್ಲ. ಮೊದಲ ಸಿನಿಮಾ ಸಾಹುಕಾರ್. ಚಿತ್ರದ ನಾಯಕ ನಟ ಎನ್.ಟಿ.ರಾಮರಾವ್. ಇದು ರಾವ್ ಅವರ ತೆರೆ ಕಂಡ ಮೊದಲ ಚಿತ್ರ. ಸಿನಿಮಾದ ಹೆಸರೆ ನನ್ನ ಹೆಸರಿನೊಂದಿಗೆ ಸೇರಿ ಮುಂದಿನ ಬಾಳಿನುದ್ದಕ್ಕೂ ಜೊತೆಯಾಗಿ ಬಂದಿದೆಎಂದರು ಸಾಹುಕಾರ್ ಜಾನಕಿ !
ಸಾಹುಕಾರ್ ಸಿನಿಮಾದಲ್ಲಿ ಎನ್.ಟಿ.ರಾಮರಾವ್ ಮತ್ತು ಜಾನಕಿ
ಸಾಹುಕಾರ್ ಸಿನಿಮಾ ಸಂದರ್ಭ
 ಮೊದಲ ಸಿನಿಮಾ ಯಶಸ್ಸಾಯಿತು. ಆಗ  ದೊರೆತ ಮೊಟ್ಟ ಮೊದಲ ಸಂಭಾವನೆ 2700 ರುಪಾಯಿ ( ಎರಡು ಸಾವಿರದ ಎಳುನೂರು) ಅವಕಾಶಗಳನ್ನು ಕೊಡುತ್ತೇವೆ ಎಂದವರು ಕೊಡಲಿಲ್ಲ. ಆಯ್ಕೆಯಾಗಿ ಕೆಲದಿನ ನಟಿಸಿದ್ದ ಸಿನಿಮಾ ಸಹ ಕೈ ತಪ್ಪಿತು. ಕೇಳಿದಾಗ ನೀನು ಹೈಟಿಲಮ್ಮ. ಜೊತೆಗೆ ಪೀಚು ಎಂದರು. ಆಗ ಎತ್ತರದ ನಟಿ ಮಣಿಯರೇ ಇದ್ದರು. ಪ್ರಾರಂಭದಲ್ಲಿ ಎಲ್ಲೋ ಒಂದೊಂದು ಅವಕಾಶಗಳು ದೊರೆಯುತ್ತಿದ್ದವು
 
ನನ್ನ ಕಣ್ಣೀರನ್ನು ನಾನೇ ಒರೆಸಿಕೊಳ್ಳಬೇಕಿತ್ತು.
ಪತಿ, ದುಡಿಯುವುದಕ್ಕೆ ಹೋಗಲೇ ಇಲ್ಲ. ನಾನು ದುಡಿಯಲು ಆರಂಭಿಸಿದ ಮೇಲೆ ಅವರ ದುರಭ್ಯಾಸಗಳು ಹೆಚ್ಚಾಯಿತು. ವರ್ಷ ಉರುಳ ತೊಡಗಿತು. 22ನೇ ವಯಸ್ಸಿಗೆ ಮೂರು ಮಕ್ಕಳ ತಾಯಿಯಾಗಿದ್ದೆ. ತುಂಬ ಕಡು ಕಷ್ಟದ ದಿನಗಳು. ಆದರೂ ಬಂದ ನೋವನ್ನೆಲ್ಲ ನುಂಗಿಕೊಂಡು ನಟಿಸತೊಡಗಿದೆ. ಮಕ್ಕಳಿಗೆ ನೋವಾಗದಂತೆ ಬೆಳೆಸಿದೆ. ಗಂಡನಿಗೂ ಕಷ್ಟ ಗೊತ್ತಾಗಲಿಲ್ಲ. ಸುಸ್ತಾಗಿ ಮನೆಗೆ ಬಂದರೆ ಕೇಳುವವರಿರಲಿಲ್ಲ. ಸ್ಪಂದಿಸುವ ಹೃದಯವೇ ಇರಲಿಲ್ಲ. ಒಳ್ಳೆಯದು-ಕೆಟ್ಟದು ಹೇಳಿಕೊಳ್ಳುವುದಕ್ಕೂ ಯಾರು ಇಲ್ಲ. ಇಷ್ಟಾದರೂ ಗಂಡನ ವ್ಯಂಗ್ಯ. ಸಿನಿಮಾಗಳಲ್ಲಿ ನಾಯಕಿಗೆ ತೊಡಿಸುವ ನಕಲಿ ಆಭರಣ ನೋಡಿಹಾಗಾದರೂ ತೊಟ್ಟುಕೊಳ್ಳುತ್ತಿಯಲ್ಲ ಬಿಡು ಇತ್ಯಾದಿ ಮಾತನಾಡಿ ಮನಕ್ಕೆ ಚುಚ್ಚುವ ಪರಿ. ಪುಟ್ಟ ಪಟ್ಟ  ಮಕ್ಕಳ ಮೊಗ ನೋಡಿ ಎಲ್ಲವನ್ನೂ ನುಂಗಿ ನಡೆಯಬೇಕಾದ ಸ್ಥಿತಿ. ನನ್ನ ಬಾಳು ರಾಜಿ ಎಂಬ ಹಾದಿಯಲ್ಲಿ ನಡೆಯುವುದೇ ಆಗಿ ಹೋಯ್ತುಬದುಕಿನುದ್ದಕ್ಕೂ ರಾಜಿಯೇ ನನ್ನ ನೆನಪು’ !

 ಮತ್ತೊಂದು ಮದುವೆಯಾಗುವ ಯೋಚನೆ:
ಸಂತೈಸುವ ಜೊತೆಗಾರ ಹೃದಯವೇ ಇರಲಿಲ್ಲ. ನೊಂದಿದ್ದೆ. ಪತಿರಾಯ ಸರಿ ಹಾದಿಗೆ ಬರಲಿಲ್ಲ. ನಿಜ ಜೀವನದಲ್ಲಿ ನನ್ನ ಕನಸುಗಳಾವುದೂ ಈಡೇರಲಿಲ್ಲ. ಸುಖ-ದುಖಃ ಹಂಚಿಕೊಳ್ಳುವ ಹೃದಯಕ್ಕಾಗಿ ಮನ ಮಿಡಿಯತೊಡಗಿತು. ಮತ್ತೊಂದು ಮದುವೆಯಾಬೇಕೆನ್ನುವ ಭಾವ ಸುಳಿಯತೊಡಗಿತು. ಆಗ ಕಣ್ಮುಂದೆ ಬರತೊಡಗಿದ್ದು ನನ್ನ ಮೂರು ಮಕ್ಕಳ ಚಿತ್ರ. ಅವರಿಗಾಗಿ ಬದುಕಬೇಕು ಎಂದುಕೊಂಡೆ. ಎಷ್ಟೇ ಕಷ್ಟ ಬಂದರೂ ಹೇಳಿಕೊಳ್ಳಲಿಲ್ಲ. ಮತ್ತೊಂದು ಮದುವೆಯಾಗುವ ಯೋಚನೆ ದೂರ ಮಾಡಿದೆ. ಇವರ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುತ್ತಾ ನಡೆದೆ. ನನ್ನ ಕಷ್ಟಗಳನ್ನು ಅಡುಗೆ ಮಾಡುವುದರ ಮೂಲಕವೂ ಮರೆಯಲು ಯತ್ನಿಸುತ್ತಿದ್ದೆ. ಹೊಸ ಹೊಸ ರುಚಿಗಳನ್ನು ಅನ್ವೇಷಿಸುತ್ತಾ ಪಾಕ ಪ್ರವೀಣೆ ಎನಿಸಿಕೊಂಡೆ. ಇಬ್ಬರು ಹೆಣ್ಣು ಮಕ್ಕಳು ಒಬ್ಬ ಮಗ ಚೆನ್ನಾಗಿ ಓದಿದರು. ಉತ್ತಮ ಸಂಬಂಧ ನೋಡಿ ಹೆಣ್ಣು ಮಕ್ಕಳಿಬ್ಬರ ಮದುವೆಯನ್ನು ಮಾಡಿದೆ. ಇವರಿಬ್ಬರ ಮದುವೆಯನ್ನು ತಿರುಪತಿಯ ಒಂದು ಛತ್ರದಲ್ಲಿ ಅತ್ಯಂತ ಸರಳವಾಗಿ ಮಾಡಿದೆ. ಚಿತ್ರ ರಂಗದವರೆಲ್ಲ ಬಂದು ಹರಸಿದರು. ನೆಲದ ಮೇಲೆ ಕುಳಿತು ಸಂತಸದಿಂದಲೇ ಊಟ ಮಾಡಿ ಹೋದರು. ಆಡಂಬರದ ಮದುವೆ ಆಸರೆಯಾಗುವುದಿಲ್ಲ. ಗಂಡ ಅರ್ಥ ಮಾಡಿಕೊಳ್ಳಲಿಲ್ಲ. ಮುಪ್ಪಿನಲ್ಲಿ ಮಗ ಆಸರೆಯಾಗುತ್ತಾನೆ ಎಂದು ಕೊಂಡಿದ್ದೆ. ಓದಲೆಂದು ಅಮೆರಿಕಾಕ್ಕೆ ಹೋದವನು ಅಲ್ಲಿಯ ಹುಡುಗಿಯನ್ನೆ ಮದುವೆಯಾಗಿ ಅಲ್ಲೆ ನೆಲಸಿದ. ವರ್ಷಕ್ಕೊಮ್ಮೆ ಅಲ್ಲಿಗೆ ಹೋಗಿ ಬರುವ ಪರಿಪಾಠವಿದೆ. ಆತನ ಸಂಪಾದನೆ ಹಣದಿಂದ ಬದುಕಬೇಕೆನ್ನುವ ಮನಸಿನವಳು ನಾನಲ್ಲ. ದುಡಿದಿದ್ದೇನೆ. ನನ್ನ ಜೀವ ಸಾಕಿಕೊಳ್ಳಬಲ್ಲೆಎಂದರು. ಅಲ್ಲಿ ವಿಷಾದವಿತ್ತು.
ನಿಜ ಜೀವನದ ಕಿರಿಯ ಸಹೋದರಿ ಮತ್ತು ದಕ್ಷಿಣ ಭಾರತದ ಮತ್ತೋರ್ವ ಜನಪ್ರಿಯ ತಾರೆ ಕೃಷ್ಣ ಕುಮಾರಿ ಅವರೊಂದಿಗೆ ಸಿನಿಮಾವೊಂದರಲ್ಲಿ
 ದೊರೆತ ಜನಪ್ರಿಯತೆ:
ಸಾಹುಕಾರ್ ಜಾನಕಿ ಹೆಸರೇ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸಿನಿಮಾಗಳತ್ತ ಸೆಳೆಯತೊಡಗಿತು. ಇವರು ನಟಿಸಿದ ಚಿತ್ರಗಳಿಗೆ ಯಶಸ್ಸು ಗ್ಯಾರಂಟಿ ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ‘ನನ್ನ ವೈಯಕ್ತಿಕ ನೋವುಗಳನ್ನೆಲ್ಲ ಪಾತ್ರಗಳಿಗೆ ವರ್ಗಾಹಿಸುತ್ತಿದ್ದೆ. ಇದರಿಂದ ಪಾತ್ರವೇ ಆಗಿ ಅಭಿನಯಿಸುವುದು ಸಾಧ್ಯವಾಯಿತುಎನ್ನುತ್ತಾರೆ. ದಕ್ಷಿಣ ಭಾರತದಲ್ಲಿ ಇವರ ಅಭಿನಯ ಮನೆ ಮಾತಾಯಿತು. ನಾಲ್ಕು ದಶಕಗಳ ಹಿಂದೆ ಇವರು ಸಿನಿಮಾದಲ್ಲಿ ಧರಿಸುತ್ತಿದ್ದ ಉಡುಗೆ-ತೊಡುಗೆ-ಆಭರಣ ಇವೆಲ್ಲವುಗಳನ್ನು ಅಂದಿನ ಯುವ ಮಹಿಳಾ ಸಮುದಾಯ ಅನುಸರಿಸುವ ಟ್ರೆಂಡ್ ಬೆಳೆಯಿತು. ಸಾಹುಕಾರ್ ಜಾನಕಿ ಜನಪ್ರಿಯತೆ ಉತ್ತುಂಗಕ್ಕೇರಿದರು. ದಕ್ಷಿಣ ಭಾರತ ಚಿತ್ರರಂಗದ ಮಹಾನ್ ನಟರೊಡನೆ ನಾಯಕಿಯಾಗಿ ನಟಿಸಿದರು. 'ತಮಿಳು ಚಿತ್ರರಂಗದ ಎಂ.ಜಿ.ಆರ್., ಶಿವಾಜಿ ಗಣೇಶನ್, ತೆಲುಗು ಚಿತ್ರರಂಗದ ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಕನ್ನಡದ ರಾಜ ಕುಮಾರ್ ಅವರೊಂದಿಗಿನ ಅಭಿನಯದ ದಿನಗಳು ಅವಿಸ್ಮರಣೀಯ. ಇವರೆಲ್ಲರದೂ ನಿಜ ಜೀವನದಲ್ಲಿಯೂ ಮೇರು ವ್ಯಕ್ತಿತ್ವ. ಅವರ ವಿನಯ-ಶಿಸ್ತು ಎಂದಿಗೂ ಆದರ್ಶಎಂದರು. ತಮ್ಮ ಸಿನಿ ಹಾದಿಯನ್ನೆ ಅನುಸರಿಸಿದ ತಮ್ಮ ಕಿರಿಯ ಸಹೋದರಿ, ಅಂದಿನ ಮತ್ತೋರ್ವ ಜನಪ್ರಿಯ ನಟಿ ಕೃಷ್ಣ ಕುಮಾರಿ ಅವರ ಬಗ್ಗೆಯೂ ಹೆಮ್ಮೆಯಿಂದ ಮಾತನಾಡಿದರು. ‘ ನಾನು ಮತ್ತು ನನ್ನ ಸಹೋದರಿ ಬೆಂಗಳೂರಿಗೆ ಬಂದು ನೆಲಸಿದ್ದೇವೆಎಂದರು ರಾಜ್-ಶಿವಾಜಿ ಅಭಿನಯಿಸುತ್ತಿದ್ದರೆ ಕಲ್ಲುಗಳಿಗೂ ಜೀವ:
'ಶಿವಾಜಿ ಗಣೇಶನ್ ಮತ್ತು ರಾಜ ಕುಮಾರ್ ಜೊತೆಗೆ ಅಭಿನಯಿಸಿದ ದಿನಗಳ ನೆನಪು ಅನನ್ಯ. ಇವರಿಬ್ಬರು ಕಲಾವಿದರು ಕಲ್ಲುಗಳಿಗೂ ಜೀವ ಬರಿಸುವಂಥ ರೀತಿ ಅಭಿನಯಿಸುತ್ತಿದ್ದರು. ಇವರ ಕಲಾ ಜೀವನದ ಬದ್ಧತೆಯೂ ಅಪಾರ. ರಾಜ್ ಕುಮಾರ್ ಅವರಂಥ ನಟ ಸಾವಿರ ವರ್ಷಕ್ಕೊಮ್ಮೆ ಹುಟ್ಟುತ್ತಾರೋ ಏನು. ನಿಜ ಜೀವನದಲ್ಲಿಯೂ ಇವರೆಲ್ಲ ಆದರ್ಶ ಪ್ರಾಯರು. ಇದನ್ನು ಇಂದಿನ ಕಲಾವಿದರು ಅಳವಡಿಸಿಕೊಳ್ಳಬೇಕುಇದಿವರ ಕಿವಿ ಮಾತು.
1964ರಲ್ಲಿ ತೆರೆಕಂಡ ಸತಿ ಶಕ್ತಿ ಸಿನಿಮಾದಲ್ಲಿ ರಾಜ್ ಕುಮಾರ್ ಮತ್ತು ಸಾಹುಕಾರ್ ಜಾನಕಿ
ಮಹಾನ್ ಕಲಾವಿದೆ ಮಾತು ನಿಲ್ಲಿಸಿ ಕೆಲ ನಿಮಿಷಗಳಾದರೂ ಸಭಾಂಗಣದಲ್ಲಿ ಕಿಂಚಿತ್ತೂ ಸದ್ದಿಲ್ಲ. ಮೌನವೇ ಅಲ್ಲಿದ್ದ ಮನಗಳು ಭಾವುಕವಾಗಿವೆ ಎಂಬುದಕ್ಕೆ ಸಾಕ್ಷಿ..................

7 comments:

 1. ಸೂಪರ್ ಲೇಖನ

  ReplyDelete
 2. ಅವಿನಾಶ ಕನ್ನಮ್ಮನವರSunday, 11 September, 2011

  ಬೆಳಿಗ್ಗೆ ಸಾಹುಕಾರ್ ಜಾನಕಿಯವರ ಬಗ್ಗೆ ಸುದ್ದಿಯನ್ನು ಓದಿದೆ ಅದು ಬರೀ(Informative) ಆಗಿತ್ತೆ ವಿನಹ ಇಷ್ಟು ವಿಸ್ತೃತವಾಗಿರಲಿಲ್ಲ, ಹೆಚ್ಚಾಗಿ ತಿಳಿಸಿದಕ್ಕೆ ಧನ್ಯವಾದ.

  ReplyDelete
 3. Sunanda Puthran ‎Sunday, 11 September, 2011

  ‎''ಸುಖ-ದುಖಃ ಹಂಚಿಕೊಳ್ಳುವ ಹೃದಯಕ್ಕಾಗಿ ಮನ ಮಿಡಿಯತೊಡಗಿತು''.....ಓದಿ ನಮ್ಮ ಮನಗಳನ್ನೂ ಭಾರವಾಗಿಸಿತು......

  ReplyDelete
 4. Bhagavantanu avarige arogyavannu kodali

  ReplyDelete
 5. jeevanavella kashtavanne anubhavisida eeeeeee mahan thareya manadalada mathugalau entha kallinantha hrudayavannu karagisibiduthe.

  ReplyDelete
 6. Intahude ondu kasthada jeevana nadesidavaru - dakshinada nati - Srividya. http://en.wikipedia.org/wiki/Srividya

  ReplyDelete
 7. ಮೋಹನ್ ವೆಣೇಕರ್Tuesday, 13 September, 2011

  ಸಾಹುಕಾರ್ ಜಾನಕಿ ಅವರ ಬಗ್ಗೆ ಇಷ್ಟೊಂದು ವಿಷಯ ಖಂಡಿತ ಗೊತ್ತಿರಲಿಲ್ಲ. 'ಬದುಕಿನುದ್ದಕ್ಕೂ ರಾಜಿ ಮಾಡಿಕೊಳ್ಳುವುದು ಅನಿವಾರ್ಯವಾಯಿತು' ಎನ್ನುವ ಅವರ ಮಾತಿಗೆ ಮನಮಿಡಿಯಿತು. ಅಂತೆಯೇ ಪರಾಧೀನತೆಯೊಲ್ಲದ ಅವರ ಮನೋಸ್ಥೈರ್ಯದ ಬಗ್ಗೆ ಹೆಮ್ಮೆಯೂ ಉಂಟಾಯಿತು. ನಿಜಕ್ಕೂ ಒಳ್ಳೆಯ ವರದಿ/ಲೇಖನ.

  ReplyDelete