• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಸುಗ್ಗಲಮ್ಮ ದೇವಿ ಶಾಪ ತಟ್ಟಿತೆ….?

ಹೀಗೊಂದು ಮಾತು ಬಳ್ಳಾರಿ-ಅನಂತಪುರಂ ಗಡಿ ವಲಯದ ಗ್ರಾಮಗಳಲ್ಲಿ ಕೇಳಿ ಬರುತ್ತಿದೆ. ಹಳ್ಳಿಗರು ಆಕ್ರೋಶಭರಿತರಾಗಿಯೆ ಇಂಥ ಚರ್ಚೆ ನಡೆಸುತ್ತಿದ್ದಾರೆ. ಅಂತೂ ದೇವಿ ಶಾಪದಿಂದ ಓಎಂಸಿ ರೆಡ್ಡಿಗಳು ಬಚಾವಾಗಲು ಸಾಧ್ಯವಾಗಲಿಲ್ಲ. ತನ್ನ ಗುಡಿ ಕೆಡವಿದವರನ್ನು ಆಕೆ ಸುಮ್ಮನೆ ಬಿಟ್ಟಳೆಯೇ’ ಎನ್ನುತ್ತಿದ್ದಾರೆ. ಏನಿದು ಸುಗ್ಗಲಮ್ಮ ದೇವಿ ಮತ್ತು ಗುಡಿ ಪ್ರಕರಣ ಎಂದುಕೊಂಡಿರಾ..ಮುಂದೆ ಓದಿ…..
ಸಿಬಿಐ ಬಂಧನದ ಸಂದರ್ಭದಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತು ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ
 ಬಳ್ಳಾರಿ-ಹೊಸಪೇಟೆ-ಸಂಡೂರು ತಾಲೂಕುಗಳಲ್ಲಿ ಖನಿಜಗಳನ್ನು ತಮ್ಮ ಮೈಯೊಳ್ಳಗೆ ಹೊತ್ತ ಬೆಟ್ಟ-ಗುಡ್ಡಗಳು ಹೆಮ್ಮೆಯಿಂದ ತಲೆ ಎತ್ತಿ ನಿಂತಿದ್ದವು. ಹಾಗೆ ನಿಂತಿದ್ದವು ಏನಾದವಪ್ಪ; ನೂರಾರು ವರ್ಷಗಳ ಕಥೆ ಹೇಳುತ್ತಿರಬಹುದು ಎಂದುಕೊಳ್ಳಬೇಡಿ. ಕೇವಲ ಹತ್ತು ವರ್ಷದ ಹಿಂದೆ ಈ ಪ್ರದೇಶಕ್ಕೆ ನೀವು ಭೇಟಿ ಕೊಟ್ಟಿದ್ದರೆ ಅಬ್ಬಾ ಎಂಥ ರಮಣೀಯ ಪ್ರದೇಶ ಎಂದುಕೊಳ್ಳುತ್ತಿದ್ದಿರಿ. ಸಂಡೂರಿಗೆ ಬಂದಿದ್ದ ಮಹಾತ್ಮ ಗಾಂಧಿ ಇಲ್ಲಿನ ತಂಪಾದ ವಾತಾವರಣ ಕಾಡು-ಬೆಟ್ಟ-ಗುಡ್ಡ-ಅಸಂಖ್ಯಾತ ಮೃಗ ಪಕ್ಷಿಗಳನ್ನು ನೋಡಿ ಇದು ಕರ್ನಾಟಕದ ಕಾಶ್ಮೀರ ಎಂದು ಉದ್ಗರಿಸಿದ್ದರು. ಇಂಥ ಪರಿಸರ ಅದಿರಿನ ಬೆಲೆ ತಾರಕಕ್ಕೇರುವವರೆಗೂ ಇತ್ತು !
ಸುಗ್ಗಲಮ್ಮ ಗುಡಿ ಇದ್ದ ಪ್ರದೇಶವೀಗ ಹೀಗಿದೆ
 ಬಳ್ಳಾರಿ ವಲಯದ ಖನಿಜಗಳುಳ್ಳ ಬೆಟ್ಟಗಳ ಉಲ್ಲೇಖ ರಾಮಾಯಣದಲ್ಲಿಯೂ ಇದೆ. ಇವುಗಳನ್ನು ಅಂದಿನವರು ‘ಲೋಹಾದ್ರಿ ಪರ್ವತ ಶ್ರೇಣಿ’ ಎಂದರು. ಅತ್ಯಂತ ಹೆಚ್ಚಿನ ಶ್ರೇಣಿಯ ಖನಿಜ ಹೊತ್ತು ನಿಂತ ಬೆಟ್ಟ-ಗುಡ್ಡಗಳ ಮೇಲೆ ದೇವರ ಗುಡಿಗಳನ್ನು ಸ್ಥಾಪಿಸಿದರು. ಸಂಡೂರಿನ ಕುಮಾರ ಸ್ವಾಮಿ ದೇವಾಲಯ, ಹಲಕುಂದಿ ಸನಿಹದ ಸುಗ್ಗಲಮ್ಮ ಗುಡಿ ಇದಕ್ಕೆ ಪ್ರಮುಖ ಉದಾಹರಣೆ. ಆದರೆ ಎಲ್ಲ ಖನಿಜ ಗುಡ್ಡಗಳ ಮೇಲೂ ಅವರು ಗುಡಿಗಳನ್ನು ನಿರ್ಮಿಸಿಲ್ಲ. ಇವುಗಳನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಲಿ ಎಂಬ ಇರಾದೆ ಅವರಿಗಿತ್ತು.  ಆದರೆ…

ಬಳ್ಳಾರಿಯಿಂದ ಆರು ಕಿಲೋಮೀಟರ್ ದೂರದಲ್ಲಿರುವ ಹಲಕುಂದಿ ಸನಿಹದಲ್ಲಿಯೇ ಐತಿಹಾಸಿಕ ಸುಗ್ಗಲಮ್ಮ ಗುಡಿ ಇತ್ತು. ಸಾವಿರಾರು ವರ್ಷಗಳ ಹಿಂದಿನಿಂದಲೂ ಇದ್ದ ಇಲ್ಲಿನ ದೇವಿ ಗುಡಿಯನ್ನು ಕಾಲಾನುಕಾಲಕ್ಕೆ ಜೀರ್ಣೋದ್ದಾರ ಮಾಡಿಕೊಂಡು ಬರಲಾಗುತ್ತಿತ್ತು. ಬಳ್ಳಾರಿ, ಹಲಕುಂದಿ, ಸಿದ್ದಾಪುರ, ವಿಠಲಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳವರು ದೇವಿಯ ಭಕ್ತರು. ಇಲ್ಲಿ ನಿತ್ಯ ಒಂದು ಬಾರಿ ಪೂಜೆ ನಡೆಯುವ ವ್ಯವಸ್ಥೆ ಇತ್ತು. ಬಳ್ಳಾರಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಇಂಥ ಗುಡಿ ಇರುವುದನ್ನು ಬ್ರಿಟಿಷ್ ಅಧಿಕಾರಿಗಳು ನಕ್ಷೆಗಳಲ್ಲಿ ನಮೂದಿಸಿದ್ದಾರೆ. 200 ವರ್ಷಗಳ ಹಿಂದಿನ ಬ್ರಟಿಷ್ ದಾಖಲೆಗಳಲ್ಲಿ ಇದನ್ನು ಕಾಣಬಹುದು. ಸ್ವಾತಂತ್ರ ಗಳಿಕೆಗೂ ಮೊದಲು ಬಳ್ಳಾರಿ ಮದ್ರಾಸ್ ಪ್ರೆಸಿಡೆನ್ಸಿ ಆಳ್ವಿಕೆಯಲ್ಲಿತ್ತು. ಆಗಿನ ಬಳ್ಳಾರಿ ಜಿಲ್ಲೆಯೊಳಗೆ ಈಗ ಆಂಧ್ರದಲ್ಲಿರುವ ಅನಂತಪುರ ಪ್ರದೇಶ ಸೇರಿತ್ತು. 

ರಾಜ್ಯ ವಿಂಗಡಣೆಯಾದ ನಂತರ ಸುಗ್ಗಲಮ್ಮ ದೇವಿ ಇದ್ದ ಗುಡಿ ಮತ್ತು ಸುತ್ತಮುತ್ತಲಿನ ಹತ್ತು ಎಕರೆ ಪ್ರದೇಶ  ‘No Man Zone’ ಎಂದೇ ಪರಿಗಣಿತವಾಯಿತು. ಇದಾದ ಬಳಿಕ ಎರಡು ರಾಜ್ಯಗಳಲ್ಲಿ ಹಂಚಿಹೋದ ಹಳ್ಳಿಗಳ ನಿವಾಸಿಗಳು ಸುಗ್ಗಲಮ್ಮ ಗುಡಿಗೆ ಪೂಜೆ ಸಲ್ಲಿಸುವುದನ್ನು ಮುಂದುವರಿಸಿದರು. ವರ್ಷಕ್ಕೊಮ್ಮೆ ಇಲ್ಲಿ ವೈಭವದ ಉತ್ಸವ ನಡೆಯುತ್ತಿತ್ತು. ಇಂಥ ಪ್ರದೇಶದ ಮೇಲೆ ಗಾಲಿ ಜನಾರ್ದನ ರೆಡ್ಡಿ ಮಾಲೀಕತ್ವದ ‘ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್’ ಕಣ್ಣು ಬಿತ್ತು. ಈ ಮುಂಚೆಯೆ ಅಸ್ತಿತ್ವದಲ್ಲಿದ್ದ ಗಣಿ ಕಂಪನಿಯನ್ನು ಈ ಬಳಗ ತಮ್ಮದಾಗಿಸಿಕೊಂಡಿತ್ತು. ಕರ್ನಾಟಕದ ಮಗ್ಗುಲಿನಲ್ಲಿಯೇ ಓಬಳಾಪುರಂ ಗ್ರಾಮವಿದೆ. ಇದು ಆಂಧ್ರ ಪ್ರದೇಶಕ್ಕೆ ಸೇರುತ್ತದೆ. ಈ ವಲಯದಲ್ಲಿ ಗಣಿಗಾರಿಕೆ ನಡೆಸುವ ಕಂಪನಿ ಈ ಊರಿನ ಹೆಸರನ್ನೇ ಹೊಂದಿದೆ. ಮೈನಿಂಗ್ ಏರಿಯಾದಲ್ಲಿ ಇಂಥ ರೂಢಿ ಸಾಮಾನ್ಯ.

2004ರಿಂದ ಕಬ್ಬಿಣದ ಅದಿರಿನ ಬೆಲೆ ಏರತೊಡಗಿತ್ತು. 2006ರ ವೇಳೆಗೆ ಭಾರಿ ಬೆಲೆಯೆ ಪ್ರಾಪ್ತವಾಗಿತ್ತು. ಚೈನಾ ಬೂಮ್ ಕೂಡ ಇದಕ್ಕೆ ಕಾರಣ. ಆಗ ಓಎಂಸಿ ಕಣ್ಣು ಸುಗ್ಗಲಮ್ಮ ಗುಡ್ಡದ ಮೇಲೆ ಬಿತ್ತು. ಅಲ್ಲಿ ಹೈ ಗ್ರೇಡಿನ ಅದಿರು ಇದ್ದಿದ್ದೆ ಇದಕ್ಕೆ ಕಾರಣ. ಓಎಂಸಿ ಗುತ್ತಿಗೆ ಪ್ರದೇಶದಿಂದ ಈ ಗುಡ್ಡ ಸಾಕಷ್ಟು ಅಂತರದಲ್ಲಿದೆ. ಆದರೂ ಜನಾರ್ದನ ರೆಡ್ಡಿ ಅಂಡ್ ಟೀಮ್ ಕೈಗಳು ಅಲ್ಲಿಯವರೆಗೂ ಚಾಚಿಕೊಂಡವು. ಅದು ‘No Man Zone’ ಪ್ರದೇಶದಲ್ಲಿದೆ. ಅಲ್ಲಿ ಐತಿಹಾಸಿಕ ಸುಗ್ಗಲಮ್ಮ ಗುಡಿ ಇದೆ. ಇದಕ್ಕೆ ಅಪಾರ ಭಕ್ತ ಸಮೂಹವಿದೆ. ಓಎಂಸಿ ಗಣಿ ಗುತ್ತಿಗೆಗೂ ಇಲ್ಲಿಗೂ ಸಂಬಂಧವಿಲ್ಲ ಎಂಬುದನ್ನೆಲ್ಲ ಇವರು ಕೇರ್ ಮಾಡಲಿಲ್ಲ. ಅದಕ್ಕೆ ಪ್ರಮುಖ ಕಾರಣ ಆಂಧ್ರದಲ್ಲಿ ಇವರಿಗೆ ಆಪ್ತರಾಗಿದ್ದ  ವೈ.ಎಸ್.ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದು ! ಇದರಿಂದ ಏನೇ ಆದರೂ ದಕ್ಕಿಸಿಕೊಳ್ಳುತ್ತೇವೆ ಎಂಬ ಅಹಂ !
 ಸುಗ್ಗಲಮ್ಮ ಗುಡಿ ತಳಗಿದ್ದ ಅದಿರು ದೋಚಲು ಸ್ಕೇಚ್ ಸಿದ್ದವಾಯಿತು.  ಸೆಪ್ಟೆಂಬರ್ 3, 2006 ರಂದು ಐತಿಹಾಸಿಕ ಸುಗ್ಗಲಮ್ಮ ಗುಡಿ ಬ್ಲಾಸ್ಟ್ ಮಾಡಿದರು. ಸಿದ್ದವಾಗಿ ನಿಂತಿದ್ದ ಯಂತ್ರಗಳಿಂದ ಅದಿರು ಗೋರಲು ಪ್ರಾರಂಭಿಸಿದರು. ಹೈ ಗ್ರೇಡಿನ ಅದಿರು ವಿದೇಶಗಳಿಗೆ ರಫ್ತಾಗತೊಡಗಿತು. ಜನಾರ್ದನ ರೆಡ್ಡಿ ಅಂಡ್ ಟೀಮಿಗೆ ಹಣ ನೀರಿನಂತೆ ಹರಿದು ಬರತೊಡಗಿತು.
 
ಮಾರನೇ ದಿನ ಯಥಾ ಪ್ರಕಾರ ದೇವಿಗೆ ಪೂಜೆ ಸಲ್ಲಿಸಲು ತೆರಳಿದ ಅರ್ಚಕ ಮಂಗೂ ನಾಯಕ ಅವರಿಗೆ ದಿಗ್ಬ್ರಮೆ. ಅಲ್ಲಿ ಗುಡಿಯೆ ಇರಲಿಲ್ಲ. ಗುಡಿಯಿದ್ದ ಗುಡ್ಡವನ್ನು ಓಎಂಸಿಗೆ ಸೇರಿದ ಯಂತ್ರಗಳು ಹೆಗ್ಗಣಗಳಂತೆ ಕೊರೆಯುತ್ತಿದ್ದವು. ಕೂಡಲೇ ಅರ್ಚಕರು ಬಳ್ಳಾರಿ ಗ್ರಾಮೀಣ ಠಾಣೆಗೆ ಧಾವಿಸಿಬಂದರು. ಇವರ ದೂರನ್ನು ದಾಖಲಿಸಿಕೊಂಡವರು ರಫ್ ಅಂಡ್ ಟಫ್ ಮತ್ತು ಅಷ್ಟೆ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿದ್ದ ಅಂದಿನ ಸರ್ಕಲ್ ಇನ್ಸಪೆಕ್ಟರ್ ರವಿಕುಮಾರ್.    ಈಗಲೂ ಇವರ ಹೆಸರು ಕೇಳಿದರೆ ಅಲ್ಲಿನ ರೌಡಿಗಳು ಬೆವರುತ್ತಾರೆ.

ಅಂದು ಬಳ್ಳಾರಿ ಜಿಲ್ಲಾ ಎಸ್. ಪಿ. ಯಾಗಿದ್ದವರು ಡಿ.ಸಿ. ರಾಜಪ್ಪ. ಪೊಲೀಸ್ ನಿಯಮದಂತೆ ಪ್ರಾಥಮಿಕ ತನಿಖೆ ನಡೆಸಿದ ಸರ್ಕಲ್ ಇನ್ಸಪೆಕ್ಟರ್ ರವಿಕುಮಾರ್ ಅವರು ಅರ್ಚಕ ಮಂಗೂ ನಾಯಕ ದೂರಿನನ್ವಯ ಮೊಕದ್ದಮೆ (ಕ್ರೈಮ್ ನಂಬರ್ 338/06)ದಾಖಲಿಸಿಕೊಂಡರು. ಭಾರತೀಯ ದಂಡ ಸಂಹಿತೆ 143, 147, 120, 295, 436, 508 ಮತ್ತು ಸ್ಪೋಟಕ ನಿಯಂತ್ರಣ ಕಾಯಿದೆ ಸೆಕ್ಷನ್ 3-4 ರಡಿ ಈ ಕೇಸ್ ದಾಖಲಾಗಿತ್ತು. ಬಳಿಕ ಓಎಂಸಿ ನಿರ್ದೇಶಕರಾದ ರಾಮಚಂದ್ರ ರೆಡ್ಡಿ ( ಆಂಧ್ರದಲ್ಲಿರುವ ರಾಯದುರ್ಗ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ) ಮತ್ತು ವಿಧಾನ ಪರಿಷತ್ ಸದಸ್ಯ ಜನಾರ್ದನ ರೆಡ್ಡಿ ಇವರುಗಳನ್ನು ಬಂಧಿಸಿ ವಿಚಾರಣೆ ನಡೆಸಿ ಬಿಡುಗಡೆ ಮಾಡಿದರು.
 ರಾಯದುರ್ಗ ಶಾಸಕ ರಾಮಚಂದ್ರ ರೆಡ್ಡಿ
 ಎಸ್.ಪಿ. ಡಿ.ಸಿ.ರಾಜಪ್ಪ ಅವರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ರವಿಕುಮಾರ್ ಚಾರ್ಜ್ ಶೀಟ್ ರೆಡಿ ಮಾಡಿದರು. ಇದರಲ್ಲಿ ರಾಯದುರ್ಗ ಶಾಸಕ ರಾಮಚಂದ್ರ ರೆಡ್ಡಿ, ಎಂ.ಎಲ್. ಸಿ. ಜನಾರ್ದನ ರೆಡ್ಡಿ ಮತ್ತು ಇವರ ಸಹೋದರರಾದ ಜಿ. ಕರುಣಾಕರ ರೆಡ್ಡಿ, ಜಿ.ಸೋಮಶೇಖರ ರೆಡ್ಡಿ ಅಂದಿನ ಶಾಸಕ ಬಿ. ಶ್ರೀರಾಮುಲು, ಹಾಲಿ ಕೂಡ್ಲಿಗಿ ಶಾಸಕ ಗುಮ್ಮನೂರು ನಾಗೇಂದ್ರ, ರಾಯಚೂರಿನ ಹಾಲಿ ಶಾಸಕ ಸಣ್ಣ ಫಕೀರಪ್ಪ ಮತ್ತು ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೆಸರುಗಳು ನಮೂದಾದವು.
ರೆಡ್ಡಿ ಬ್ರದರ್ಸ್ ಅಂಡ್ ಶ್ರೀರಾಮುಲು
ಬಳ್ಳಾರಿ ನ್ಯಾಯಾಲಕ್ಕೆ ಸಲ್ಲಿಸಿರುವ ನೂರು ಪುಟಗಳಿರುವ ಈ ಚಾರ್ಜ್ ಶೀಟ್ ಸಿ.ಬಿ.ಐ ನವರಿಗೆ ಲಭಿಸಿದ ಮಹತ್ವದ ದಾಖಲಾತಿಗಳಲ್ಲಿ ಒಂದು. ಈ ಚಾರ್ಜ್ ಶೀಟ್ ನೊಂದಿಗೆ ದೇವಾಲಯದ ಅಸ್ವಿತ್ವಕ್ಕೆ ಸಂಬಂಧಿಸಿದ ನಕ್ಷೆ-ಸರಕಾರಿ ಕಾಗದ ಪತ್ರಗಳನ್ನು ಲಗತ್ತಿಸಲಾಗಿದೆ. ಇದೆಲ್ಲವನ್ನೂ ಸಿ.ಬಿ.ಐ ಡಿ.ಐ.ಜಿ. ಲಕ್ಷೀನಾರಾಯಣ ಮತ್ತು ತಂಡದ ಅಧಿಕಾರಿಗಳು ಆಳವಾಗಿ ಅಧ್ಯಯನ ಮಾಡಿದ್ದಾರೆ. ಪ್ರಸ್ತುತ ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿಯನ್ನು ಸಿ.ಬಿ.ಐ. ಬಂಧಿಸುವುದಕ್ಕೆ ಕಾರಣವಾದ ಮಹತ್ವದ ಪೂರಕ ದಾಖಲೆಗಳಲ್ಲಿ ಇದು ಸಹ ಸೇರಿದೆ !

ಓ.ಎಂ.ಸಿ. ನಡೆಸುತ್ತಿದ್ದ ಗಣಿ ಪ್ರದೇಶಕ್ಕೆ ಸಾಮಾನ್ಯರಿರಲಿ ಪೊಲೀಸ್ ಅಧಿಕಾರಿಗಳೂ ಪ್ರವೇಶಿಸುವುದು ಸಾಧ್ಯವಿರಲಿಲ್ಲ.  ಖಾಸಗಿ ಭದ್ರತಾ ಪಡೆಯ ಅನೇಕ ಗನ್ ಮನ್ ಗಳು ಇಲ್ಲಿ ಕಾವಲು ಕಾಯುತ್ತಿದ್ದರು. ಆಯಕಟ್ಟಿನ ಸ್ಥಳಗಳಲ್ಲಿ ನಿಂತು ದೂರದೂರದವರೆಗೂ ಬೈನಾಕ್ಯುಲರ್ ಮೂಲಕ  ದೃಷ್ಟಿಸುತ್ತಿದ್ದರು. ಈ ಕಾರಣದಿಂದಲೇ ಗಡಿ ಕಲ್ಲು ನಾಶ ವಿಶೇಷ ವರದಿ ಸಂದರ್ಭದಲ್ಲಿ ಬಳ್ಳಾರಿ ಕಾಯ್ಟಿಟ್ಟ ಅರಣ್ಯ ಪ್ರದೇಶದಲ್ಲಿ ಮೈಲಿಗಟ್ಟಲೇ ದೂರ ನಡೆದಾಡಿದ್ದೆ. ಕ್ಯಾಮರಾ ಜೂಮ್ ಮಾಡಿ ದೃಶ್ಯಗಳನ್ನು ಸೆರೆ ಹಿಡಿಯಬೇಕಿತ್ತು. ಆಗೇನಾದರೂ ಅಲ್ಲಿನ ಕಾವಲುಗಾರರ ಕಣ್ಣಿಗೆ ಬಿದ್ದಿದ್ದರೆ ನಾನು ಅಲ್ಲಿ ಬಂದೇ ಇರಲಿಲ್ಲ ಎನ್ನುವ ಪರಿಸ್ಥಿತಿ ಸೃಷ್ಟಿಯಾಗುತ್ತಿತ್ತು !

 ಇಂಥ ಪ್ರದೇಶಕ್ಕೆ ಸಿ.ಬಿಐ.ಟೀಮ್ ಭೇಟಿ ನೀಡಿ ವಿವರವಾದ ಪರಿಶೀಲನೆ ನಡೆಸಿತ್ತು. ಬ್ರಿಟಿಷ್ ಅಧಿಕಾರಿಗಳು ರೂಪಿಸಿದ್ದ 1896 ನಕ್ಷೆಯನ್ನು ಹುಡುಕಿ ತೆಗೆದಿದ್ದ ಅಧಿಕಾರಿಗಳು ಅದರಲ್ಲಿ ನಮೂದಾಗಿದ್ದ ಸುಗ್ಗಲಮ್ಮ ಗುಡಿ ಎಲ್ಲಿ ಎಂದು ಓಎಂಸಿ ಸಿಬ್ಬಂದಿ ಮತ್ತು ಆಡಳಿ ಮಂಡಳಿಯನ್ನು ಪ್ರಶ್ನಿಸಿದ್ದರು. ಅಲ್ಲಿ ಗುಡಿಯೇ ಇರಲಿಲ್ಲ ಎಂದು ಹೇಳಿ ಓಎಂಸಿಯವರು ನುಣಚಿಕೊಳ್ಳಲು ಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ.ಓಎಂಸಿ ಎಂ.ಡಿ. ಶ್ರೀನಿವಾಸ ರೆಡ್ಡಿ  ‘ನಾವೇ  ಅಲ್ಲಿ ಹೊಸದಾಗಿ ಗುಡಿ ನಿರ್ಮಿಸಿದ್ದೇವೆ' ಎಂದಾಗ ‘ಗುಡಿ ಅಲ್ಲಿ ಇರಲೇ ಇಲ್ಲ ಮತ್ತು ಗುಡಿ ಸ್ಪೋಟಿಸಿಯೆ ಇಲ್ಲ ಎಂದಾದರೆ ಹೊಸ ಗುಡಿ ಕಟ್ಟಿಸಿದ್ದಾದರೂ ಏಕೆ' ಎಂದು ಪ್ರಶ್ನಿಸಿದ್ದರು.

ಸೆಂಟ್ರಲ್ ಎಂಪವರ್ ಕಮಿಟಿ, ಸರ್ವೇ ಆಫ್ ಇಂಡಿಯಾ ಮತ್ತು ಸಿ.ಬಿ.ಐ ಅಧಿಕಾರಿಗಳ ತಂಡ ತನಿಖೆಗಾಗಿ ಓ.ಎಂ.ಸಿ. ಮತ್ತು ಸುತ್ತಲಿನ ಇತರ ಗಣಿ ಪ್ರದೇಶಗಳಿಗೆ ಭೇಟಿ ಇತ್ತಾಗಲೆಲ್ಲ ಸುಗ್ಗಲಮ್ಮ ಗುಡಿ ಇದ್ದ ಪ್ರದೇಶದಿಂದಲೇ ಹಾದು ಹೋಗಬೇಕಿತ್ತು. ಆಗೆಲ್ಲ ಅಲ್ಲಿ ಯಾರೋ ರೋಧಿಸುತ್ತಿದ್ದಾರೇನೋ ಎಂದು ಭಾಸವಾಗುತ್ತಿತ್ತು. ಅಲ್ಲಿಗ ಗುಡಿಯಿರಲಿ ಅದನ್ನೊತ್ತು ನಿಂತಿದ್ದ ಬೃಹದಾಕಾರದ ಗುಡ್ಡ ಇತ್ತು ಎನ್ನುವ ಕುರುಹು ಸಹ ಇಲ್ಲ. ಆದರೆ ಸುತ್ತಲಿನ ಹಳ್ಳಿಗರ ನೆನಪಿನಿಂದ ಸುಗ್ಗಲಮ್ಮ ದೇವಿ ಮರೆಯಾಗಿಲ್ಲ. ಆದ್ದರಿಂದಲೇ ಅವರ ಸಮೂಹದಿಂದ  ಪದೇಪದೇ 'ಗುಡಿ ಕೆಡವಿದವರಿಗೆ ಸುಗ್ಗಲಮ್ಮ ದೇವಿ ಶಾಪ ತಟ್ಟಿದೆ' ಎನ್ನುವ ಧ್ವನಿ ಅಲೆ ಅಲೆಯಾಗಿ ಕೇಳುತ್ತಲೇ ಇದೆ.

4 comments:

 1. bahala chennagide..

  ReplyDelete
 2. thanks a lot for sharing nice information

  ReplyDelete
 3. kumar ninna ee lekhana saha sakastu mahitiyinda koodide. ninna sahasa, ninna melina hallegalige eega parihara sikkide anniside.
  -Rudranna

  ReplyDelete