• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಅನಂತ ಸಂಪತ್ತು ಸರಣಿ: ಮೂಡುವ ಪ್ರಶ್ನೆಗಳಿಗೆ ಉತ್ತರವೇನು...?

ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದ ಪ್ರಕ್ರಿಯೆ ಜಾರಿಯಲ್ಲಿರುವಾಗ ಇದಕ್ಕೆ ವಿರುದ್ಧವಾಗುವ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಈ ಹಿನ್ನೆಲೆಯಲ್ಲಿ 'ದೇವಪ್ರಶ್ನೆ ನಡೆಸಿದ್ದರ ಕುರಿತು ರಾಜಮನೆತನದ ಮೇಲೆ ಸುಪ್ರೀಮ್ ಸಿಟ್ಟಾಗಿದೆ. 'ಬಿ' ಕೊಠಡಿ ತೆರೆಯದಿರುವಂತೆ ಆದೇಶಿಸಲು ಕೋರಿದ ಅರ್ಜಿ ವಿಚಾರಣೆಗೆ ಬಂದಂಥ ಸಂದರ್ಭದಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಕೋರ್ಟಿನಿಂದ ನೇಮಕಗೊಂಡ ಸಮಿತಿ  'ಬಿ' ಕೊಠಡಿ ತೆರೆಯಬೇಕೆ-ಬೇಡವೇ ಎಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದನ್ನು ದೇಗುಲದ ಮುಖ್ಯ ಅರ್ಚಕರಿಗೆ ವಹಿಸಿದ್ದರ ಬಗ್ಗೆಯೂ ಅಚ್ಚರಿ-ಅಸಮಾಧಾನ ವ್ಯಕ್ತಪಡಿಸಿದೆ. ಹೀಗೆ ಮಾಡಲು ಹೇಗೆ ಸಾಧ್ಯ ಎಂದಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 6ಕ್ಕೆ ನಿಗದಿಯಾಗಿದೆ.
ಸುಪ್ರೀಮ್ ಕೋರ್ಟ್
ತಿರುವಂತನಪುರ ಪ್ರಾಚೀನ 'ಅನಂತ ಪದ್ಮನಾಭ ದೇಗುಲ' ನೆಲಮಾಳಿಗೆಯ 'ಬಿ' ಕೊಠಡಿ ತೆರೆದರೆ ಕೆಡಕು ಉಂಟಾಗುತ್ತದೆ. ಆದ್ದರಿಂದ ಇದನ್ನು ತೆಗೆಯಲೇಬಾರದು. ಈಗಾಗಲೇ ತೆಗೆದಿರುವ ಕೊಠಡಿಗಳಲ್ಲಿರುವ ವಸ್ತುಗಳ ಪೋಟೋ ಮತ್ತು ವಿಡಿಯೋ ತೆಗೆಯಬಾರದು. ಇದು ದೇಗುಲದ ಆಚಾರ-ವಿಚಾರಗಳಿಗೆ ವಿರುದ್ಧ ಎಂಬುದು ಟ್ರಾವೆಂಕೂರು ರಾಜಮನೆತನದ ವಾದ. ಈ ಬಗ್ಗೆ ಸುಪ್ರೀಮ್ ಕೋರ್ಟ್ ನಿರ್ಣಯ ತೆಗೆದುಕೊಳ್ಳಲಿದೆ. ಇದು ಸಾರ್ವಜನಿಕರ ಕುತೂಹಲವನ್ನು ತೀವ್ರ ಕೆರಳಿಸಿದೆ..! ಪರ-ವಿರೋಧ ಚರ್ಚೆಗಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಉದ್ಬವವಾಗುತ್ತದೆ.

ದೇಗುಲದ ಚೈತನ್ಯಕ್ಕೂ 'ಬಿ' ಕೊಠಡಿಗೂ ನೇರ ಸಂಬಂಧವಿದೆ. ಆದ್ದರಿಂದ ಈ ಕೊಠಡಿ ತೆರೆಯಬಾರದು. ಒಂದು ವೇಳೆ ತೆರೆದರೆ ಅಪಾಯ ಖಚಿತ ಎಂಬುದು ಟ್ರಾವೆಂಕೂರು ರಾಜವಂಶಸ್ಥರ ವಾದ. ಈ ರೀತಿಯಾದ ಉಲ್ಲೇಖ ದೇಗುಲಕ್ಕೆ ಸಂಬಂಧಿಸಿದ 'ಗ್ರಂಥಾವಳಿ'  'ಅನಂತಶಯನ ಮಹಾತ್ಮೆ'  ಗ್ರಂಥಗಳಲ್ಲಿದೆಯೆ...?
ಲಕ್ಷ ದಿಪೋತ್ಸವ ಸಂದರ್ಭದಲ್ಲಿ ಅನಂತ ಪದ್ಮನಾಭ ದೇಗುಲ
 ದೇಗುಲದ ಚೈತನ್ಯವನ್ನು ಭಂಢಾರದ ಕೊಠಡಿಗಳೊಂದಿಗೆ ಸಂಬಂಧ ಕಲ್ಪಿಸುವ ವಿಧಿ ಭಾರತೀಯ ಧರ್ಮಶಾಸ್ತ್ರ ಮತ್ತು ದೇಗುಲ ಸ್ಥಾಪನೆ ಮತ್ತು ವಾಸ್ತು ಗ್ರಂಥಗಳಲ್ಲಿ ಉಲ್ಲೇಖವಾಗಿದೆಯೇ...?

'ಬಿ' ಕೊಠಡಿ ತೆರೆದರೆ ಟ್ರಾವೆಂಕೂರು ರಾಜಮನೆತನದಲ್ಲಿ ಸಾವು ಸಂಭವಿಸುವ ಭೀತಿಯಿದೆ ಎನ್ನಲಾಗುತ್ತಿದೆ. ಅನಂತ ಪದ್ಮನಾಭ ಮೂರ್ತಿ ಮತ್ತು ಮೂಲ ದೇಗುಲವನ್ನು ಪ್ರತಿಷ್ಠಾಪಿಸಿದ್ದು ತುಳು ನಾಡಿನ ದಿವಾಕರ ಮುನಿ. ಇದನ್ನು ಸಾವಿರಾರು ವರ್ಷ ಜತನದಿಂದ ನೋಡಿಕೊಂಡು ಬಂದಿದ್ದು ' ಎತ್ತರ ಯೋಗಂ' ಪ್ರಸ್ತುತದ ಭವ್ಯ ದೇಗುಲ ನಿರ್ಮಾಣ ಮಾಡಿದ್ದು ಕೂಡ ಎತ್ತರಯೋಗಂ. ಹೀಗಿರುವಾಗ 'ಬಿ' ಕೊಠಡಿ ತೆರೆದರೆ ತಮಗೆ ಅಪಾಯ ಎಂದು ಈ ಮನೆತನ ಹೇಳುವುದರಲ್ಲಿ ಹುರುಳಿದೆಯೇ..?
ಭವ್ಯವಾದ ಅನಂತ ಪದ್ಮನಾಭ ದೇಗುಲದ ಹೊರ ನೋಟ
 'ಅನಂತ ಪದ್ಮನಾಭ ದೇಗುಲ'ದ ವಾಸ್ತು ರೂಪುಗೊಂಡಿದ್ದು ಎತ್ತರಯೋಗಂ ಮೇಲ್ವೀಚಾರಣೆಯಲ್ಲಿ. ಈ ಭವ್ಯ ಸ್ಥಾವರ ನಿರ್ಮಾಣಗೊಂಡಿದ್ದು ಕೂಡ ಅವರ ಕಣ್ಗಾವಲಿನಲ್ಲಿ. ಸಾವಿರಾರು ವರ್ಷಗಳಿಂದ ಸಂಗ್ರಹಣೆಯಾಗುತ್ತಾ ಬಂದ ದೇಗುಲದ ಅತ್ಯಮೂಲ್ಯ ಸಂಪತ್ತು ಅನ್ಯರ ಪಾಲಾಗಬಾರದು ಎಂಬ ಉದ್ದೇಶದಿಂದಲೇ ಅವರು ರಹಸ್ಯವಾದ ನೆಲ ಮಾಳಿಗೆ ಮತ್ತು ಅಲ್ಲಿ ಅತ್ಯಂತ ಸುಭದ್ರವಾದ ವಿಶಾಲ ಕೊಠಡಿ ನಿರ್ಮಿಸಿದರು. ಇದರಲ್ಲಿ ಸಂಪತ್ತನ್ನು ಶೇಖರಿಸಿಟ್ಟರು. ಈ ಸಂದರ್ಭದಲ್ಲಿ ಅವರು ದೇಗುಲದ ಚೈತನ್ಯಕ್ಕೂ ಮತ್ತು ನೆಲ ಮಾಳಿಗೆಯ ' ಎ' ಮತ್ತು 'ಬಿ' ಕೊಠಡಿಗೂ ನೇರ ಸಂಬಂಧವಿದೆ ಎಂದು ಉಲ್ಲೇಖಿಸಿದ್ದಾರೆಯೆ..?

  1729ರಲ್ಲಿ ಪಟ್ಟಕ್ಕೇರಿದ ರಾಜ ಮಾರ್ತಂಡ ವರ್ಮ ನಂತರ 'ಅನಂತ ಪದ್ಮನಾಭ ದೇಗುಲ'ದ ಸಂಪೂರ್ಣ ಆಡಳಿತ ನೋಡಿಕೊಳ್ಳುತ್ತಿದ್ದ  'ಎತ್ತರ ಯೋಗಂ' ಅನ್ನು ತೀವ್ರ ವಿರೋಧದ ನಡುವೆಯೂ ವಜಾಗೊಳಿಸಿ ದೇಗುಲವನ್ನು ರಾಜ ಪ್ರಭುತ್ವದ ವಶಮಾಡಿಕೊಂಡರು. ಈ ನಂತರ ಒಮ್ಮೆಯೂ ನೆಲಮಾಳಿಗೆಯ ಕೊಠಡಿಗಳನ್ನು ತೆರೆದಿಲ್ಲವೆ...? ಲಭ್ಯವಿರುವ ದಾಖಲಾತಿಗಳ ಪ್ರಕಾರ 1931ರಲ್ಲಿ ರಾಜ ಬಲರಾಮ ವರ್ಮ ಖುದ್ದು ನಿಂತು ನೆಲಮಾಳಿಗೆಯ ಕೊಠಡಿಯೊಂದನ್ನು ತೆರೆಸಿದ್ದರು. ಇದಕ್ಕೂ ಮುಂಚೆ 1908ರಲ್ಲಿ ಈ ಕೊಠಡಿಗಳ ಬಾಗಿಲುಗಳನ್ನು ತೆರೆಯುವ ಪ್ರಯತ್ನವಾಗಿತ್ತು ಎಂಬ ಉಲ್ಲೇಖಗಳಿವೆ (ವಿವರಗಳಿಗಾಗಿ ದೇಗುಲ  ಸರಣಿಯ ಅನಂತ ಪದ್ಮನಾಭ ದೇಗುಲ; ನೆಲ ಮಾಳಿಗೆಯ ‘B’ ಕೊಠಡಿ ತೆರೆದರೆ ಕೆಡುಕೆ…? ಅಲ್ಲಿರುವುದೇನು…? 
ಲೇಖನ ಗಮನಿಸಿ.) ಆಗ ಏನಾದರೂ ಕೆಡಕುಗಳಾಗಿತ್ತೆ...?

ದೇಗುಲದ ಉತ್ಸವ ಮೂರ್ತಿ ಮತ್ತು ಇದಕ್ಕೆ ಅಲಂಕರಿಸುವ ಆಭರಣಗಳು ಪ್ರಾಚೀನಕಾಲದವು. ಇವುಗಳನ್ನು ವಿಶೇಷ ಉತ್ಸವಗಳ ಸಂದರ್ಭದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಆಗ ಅನೇಕ ಕ್ಯಾಮರಾ ಫ್ಲಾಷ್ ಗಳು ಜಗಮಗಿಸುತ್ತವೆ. ವಿಡಿಯೋ ಕ್ಯಾಮರಾಗಳ ಲೈಟುಗಳು ಕೋರೈಸುತ್ತವೆ. ದೇಗುಲಕ್ಕೆ ಸೇರಿದ ವಸ್ತುಗಳ ಪೋಟೋ ತೆಗೆಯುವುದು ಮತ್ತು ವಿಡಿಯೋ ಮಾಡುವುದು ಅಲ್ಲಿನ ಆಚಾರ-ವಿಚಾರಗಳಿಗೆ ವಿರುದ್ಧ ಎನ್ನುವುದಾದರೆ ಇದಕ್ಕೆ ಒಪ್ಪಿಗೆ ಕೊಟ್ಟಿದಾದರೂ ಏಕೆ. ಉತ್ಸವ ಮೂರ್ತಿ ಮತ್ತು ಅದಕ್ಕೆ ಬಳಸಲ್ಪಡುವ ವಸ್ತು-ಆಭರಣಗಳಿಗೆ ಅನ್ವಹಿಸದ ಆಚಾರ-ವಿಚಾರ ನೆಲಮಾಳಿಗೆಯ ಕೊಠಡಿಯಲ್ಲಿರುವ ವಸ್ತುಗಳಿಗೆ ಅನ್ವಹಿಸುವುದೆ..?

ದೇಗುಲದಲ್ಲಿ ಪ್ರತಿವರ್ಷ ಅಷ್ಟಮಂಗಲ ಪ್ರಶ್ನೆ ನಡೆಸುವುದು ವಾಡಿಕೆ. ಆದರೆ ಅನಂತ ಪದ್ಮನಾಭ ದೇಗುಲದಲ್ಲಿ ಕೆಲವಾರು ವರ್ಷಗಳಿಂದ ಅಷ್ಟಮಂಗಲ ಪ್ರಶ್ನೆ ನಡೆಸಿಲ್ಲವೇಕೆ...? ಆಗ ನೆನಪಾಗದ 'ದೇವ ಪ್ರಶ್ನೆ' ವಿಧಿ ಈಗ ದಿಢೀರನೆ ನೆನಪಾಗಿದೇಕೆ..?

ಇದಕ್ಕೂ ಮೊದಲು ನಡೆಸಿದ ಪ್ರಶ್ನೆಗಳಲ್ಲಿ 'ದೇಗುಲ ನಿಧಿ' ಮತ್ತು  'ಬಿ' ಕೊಠಡಿಯ ಪ್ರಸ್ತಾಪವೇ ಇರಲಿಲ್ಲ ಎನ್ನಲಾಗುತ್ತಿದೆ. ಹಾಗಿದ್ದರೆ ಈಗ ಆ ಎಲ್ಲ ಪ್ರಸ್ತಾಪ ಮೂಡಿದ್ದು ಹೇಗೆ ಮತ್ತು ಏಕೆ...?

ಎತ್ತರಯೋಗಂ ಆಡಳಿತದಲ್ಲಿದ್ದ ಅನಂತ ಪದ್ಮನಾಭ ದೇಗುಲವನ್ನು ಸ್ವಾಧೀನ ಪಡಿಸಿಕೊಂಡಿದ್ದು ಅಂದಿನ ರಾಜ ಪ್ರಭುತ್ವ. ಹೀಗಿರುವಾಗ ಪ್ರಸ್ತುತ ಇದರ ಆಡಳಿತವನ್ನು ಪ್ರಜಾ ಪ್ರಭುತ್ವದ ಸರಕಾರದ ಉಸ್ತುವಾರಿಗೆ ಕೊಡಲು ವಿರೋಧವೇಕೆ..? ನಿವೃತ್ತ ಐಪಿಎಸ್ ಅಧಿಕಾರಿ ಸುಂದರ್ ರಾಜನ್ ಅವರು ಮದ್ರಾಸ್ ಹೈಕೋರ್ಟಿನ ಮೊರೆ ಹೋದಾಗ ಕೋರ್ಟ್ ದೇಗುಲದ ಆಡಳಿತ ಸರಕಾರದ ವಶದಲ್ಲಿರಬೇಕೆಂದು ತೀರ್ಪು ನೀಡಿತ್ತು. ಹೀಗಿರುವಾಗ ಈ ಆದೇಶದ ವಿರುದ್ಧ ಸುಪ್ರೀಮ್ ಕೋರ್ಟ್ ಮೊರೆ ಹೋಗಿದ್ದೇಕೆ...?


ಇಂಥ ಪ್ರಶ್ನೆಗಳು ಮೂಡುತ್ತಲೇ ಹೋಗುತ್ತವೆ. ಇದಕ್ಕೆಲ್ಲ ಸುಪ್ರೀಮ್ ಕೋರ್ಟಿನ ಅಂತಿಮ ತಿರ್ಮಾನವೇ ಉತ್ತರ......

No comments:

Post a Comment