• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ತಾರತಮ್ಯದ ಶಿಕ್ಷಣ ನೀಡುವಂಥ ಸರಕಾರಗಳು ಯೂಸ್ ಲೆಸ್ ಸರಕಾರಗಳು-ಚಂದ್ರಶೇಖರ ಕಂಬಾರ

ಮೌಖಿಕ ಪರಂಪರೆಯ ಜನಪದೀಯ ಬನಿ-ಸೊಗಡಿನ ಸಾಹಿತ್ಯವನ್ನು ಕನ್ನಡಕ್ಕೆ ನೀಡಿದವರು ಚಂದ್ರಶೇಖರ ಕಂಬಾರ.  ಕನ್ನಡ ವಿಶ್ವವಿದ್ಯಾಲಯದ ಪ್ರಪ್ರಥಮ ಉಪ ಕುಲಪತಿಯಾಗಿ ಇವರು ಮಾಡಿದ ಕಾರ್ಯ-ಸಾಧನೆ ಅನನ್ಯ. ಭಾರತೀಯ ಸಾಹಿತ್ಯ ಕ್ಷೇತ್ರದ ಮೇರು ಪ್ರಶಸ್ತಿ ಎಂದೆ ಪರಿಗಣಿತವಾಗಿರುವ ಜ್ಞಾನಪೀಠ ಪುರಸ್ಕಾರ ಪಡೆಯುವುದರ ಮೂಲಕ ಕನ್ನಡ ಭಾಷೆ-ಸಾಹಿತ್ಯದ ಹಿರಿಮೆ-ಗರಿಮೆಯನ್ನು ಮತ್ತಷ್ಟೂ ವಿಸ್ತರಿಸಿದವರು. ಈ ಸಂದರ್ಭದಲ್ಲಿ ಇವರ ಸಂದರ್ಶನ ನಡೆಸಿದಾಗ ಕನ್ನಡ ತಂತ್ರಾಂಶ, ಆಧುನಿಕ ಶಿಕ್ಷಣದ ಕೊರತೆ ಮತ್ತು ಕಲಿಯುವ ಭಾಷಾ ಮಾಧ್ಯಮ ಯಾವುದಾಗಿರಬೇಕು ಎಂಬುದರ ಬಗ್ಗೆ ಖಚಿತ ಅಭಿಪ್ರಾಯಗಳನ್ನು ತಿಳಿಸಿದರು……

ತಮಗೆ ಅಭಿನಂದನೆ. ಕನ್ನಡ ಭಾಷಾ ಸಶಕ್ತ ತಂತ್ರಾಂಶದ ಬಗ್ಗೆ ನೀವು ಹಿಂದಿನಿಂದಲೂ ಧ್ವನಿ ಎತ್ತುತ್ತಲೇ ಬಂದಿದ್ದೀರಿ. ಇದಕ್ಕೆ ಸರಕಾರ ಸ್ಪಂದಿಸಿದೆಯೆ.

ಚಂದ್ರಶೇಖರ ಕಂಬಾರ: ನಾನೋಬ್ಬನೇ ಅಲ್ಲರೀ…ನಾನು, ಪೂರ್ಣಚಂದ್ರ ತೇಜಸ್ವಿ ಮತ್ತು ಅಮೆರಿಕಾದ ಈ ಕವಿ ಸಂಘಟನೆಯ ಕುಮಾರ ಸ್ವಾಮಿ ಅವರೆಲ್ಲ  ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಿಸಿದೆವು. ಬಹಳ ಜನ ಮುಖ್ಯಮಂತ್ರಿಗಳು ಬಂದು ಹೋದರು. ಅವರಿಂದ್ದೆಲ್ಲ ಸೂಕ್ತ ಸ್ಪಂದನೆ ದೊರೆಯಲೇ ಇಲ್ಲ. ಕಂಬಳದ ಕೋಣಗಳನ್ನು ನಿಲ್ಲಿಸಿಕೊಂಡು ಪೋಟೋ ತೆಗೆಸಿಕೊಳ್ಳುವ ರೀತಿ ನಮ್ಮನ್ನು ಮಂತ್ರಿಗಳು ಜೊತೆಗೆ ನಿಲ್ಲಿಸಿಕೊಂಡು ಪೋಟೋ ತೆಗೆಸಿಕೊಂಡರು. ನೀವು ಹೇಳಿದ್ದನ್ನು ಪರಿಗಣಿಸುತ್ತೇವೆ ಎಂದು ಹೇಳಿ ಕಳುಯಿಸಿದರು. ಆದರೆ ಯಾವ ಪರಿಗಣನೆಯೂ ಆಗಲಿಲ್ಲ.  ಏನೂ ಮಾಡಲಿಲ್ಲ. ಎರಡು ವರ್ಷದ ಹಿಂದೆ ಕನ್ನಡದ ಸಶಕ್ತ ತಂತ್ರಾಂಶ ರೂಪಿಸುವ ಸಲುವಾಗಿ ಒಂದು ಕೋಟಿ ರುಪಾಯಿ ತೆಗೆದಿರಿಸಿದರು. ಒಂದು ಕಮಿಟಿಯನ್ನೂ ಮಾಡಿದರು. ಆಗಬೇಕಿರುವ ಕೆಲಸ-ಕಾರ್ಯಗಳ ಬಗ್ಗೆ ಒಂದು ವರದಿ ಕೊಡಿ ಎಂದರು. ಅದನ್ನೂ ಕೊಟ್ಟು ಎರಡು ವರ್ಷವಾಯಿತು. ಏನೂ ಆಗಲಿಲ್ಲ.

ನಿಮ್ಮ ಹಿರಿಯ ತಲೆಮಾರಿನ ಲೇಖಕರು ಮತ್ತು ನಿಮ್ಮ ತಲೆಮಾರಿನ ಲೇಖಕರು ಕನ್ನಡಕ್ಕೆ ಸಪುಷ್ಟವಾದ ಸಾಹಿತ್ಯ ನೀಡಿದಿರಿ. ಇದರಿಂದ ಎಂಟು ಜ್ಞಾನಪೀಠ ಪುರಸ್ತಾರ ಲಭಿಸಿತು. ಈ ಮೂಲಕ ಕನ್ನಡಕ್ಕೆ ಬಹುದೊಡ್ಡ ಹಿರಿಮೆ ತಂದುಕೊಟ್ಟಿರಿ. ಆದರೆ ನಿಮ್ಮ ನಂತರದ ತಲೆಮಾರು ಕೂಡ ಇಷ್ಟೆ ಸಪುಷ್ಟವಾಗಿ ಕನ್ನಡ ಸಾಹಿತ್ಯವನ್ನು ಉಳಿಸಿಕೊಳ್ಳಬಲ್ಲದು ಎಂದು ನಿಮಗನಿಸುತ್ತದೆಯೆ…

ಚಂದ್ರಶೇಖರ ಕಂಬಾರ: ಏಕೆ-ಏಕೆ ಉಳಿಸಿಕೊಳ್ಳುವುದಿಲ್ಲ. ಉಳಿಯುತ್ತೆ. ಅವರಿಗೂ ಕನ್ನಡದ ಅಗತ್ಯಗಳು ಬೀಳುತ್ತವೆ. ಅವರಲ್ಲಿಯೂ ಪ್ರತಿಭಾವಂತರಿದ್ದಾರೆ. ಆದರೆ…..ಈಗಿನ ಶಿಕ್ಷಣ ಪಡೆದುಬಂದವರು; ಅದರಲ್ಲಿಯೂ ನಗರಗಳಲ್ಲಿ ಓದಿದವರಿಗೆ ಅನುಭವಗಳು ಇರುವುದಿಲ್ಲ. ಮಾಹಿತಿ ಸಾಕಷ್ಟು ಇರುತ್ತದೆ. ಕಂಪ್ಯೂಟರ್ ತುಂಬಿಕೊಂಡಷ್ಟು ಮಾಹಿತಿ ಅವರಲ್ಲಿರುತ್ತದೆಯಾದರೂ ಅದರ ಅರ್ಥವೇನು ಎಂದು ಅವರಿಗೆ ಗೊತ್ತಿರುವುದಿಲ್ಲ. ಆ ಮಾಹಿತಿಯ ಅನುಭವ ಏನು ಎಂದು ಗೊತ್ತಾಗುವುದಿಲ್ಲ.
ವಾಲ್ಮೀಕಿ ಆಶ್ರಮದಲ್ಲಿ ಲವಕುಶ ಇದ್ದರು. ಅಲ್ಲಿ ವಟುಗಳಿದ್ದರು. ರಾಮನ ಅಶ್ವಮೇಧದ ಕುದುರೆ ಅಲ್ಲಿಗೆ ಬರುತ್ತದೆ. ಆಶ್ರಮದ ಬಳಿ ಬಂದ ಕುದುರೆಯನ್ನು ನೋಡಿದ ವಟುಗಳಿಗೆ ಆಶ್ವರ್ಯ-ದಿಗ್ಭ್ರಮೆ-ಆತಂಕ. ಏಕೆಂದರೆ ಅವರ್ಯಾರು ಕುದುರೆ ನೋಡಿರುವುದಿಲ್ಲ. ಅಶ್ವದೊಂದಿಗೆ ಬಂದವರು ಹೇಳಿದ ಮಾತು ಕೇಳಿ ಅಶ್ವವೆಂಬ ಭಯಂಕರ ಪ್ರಾಣಿ ಬಂದಿದೆ ಎಂದು ಕೂಗಿಕೊಂಡು ಒಳಗೆ ಓಡುತ್ತಾರೆ. ಲವಕುಶರಿಗೆ ವಿಷಯ ತಿಳಿಸುತ್ತಾರೆ. ಲವನಿಗೆ ಅಶ್ವದ ಬಗ್ಗೆ ಕೇಳಿ ಗೊತ್ತು. ಆದರೆ ಅವನೂ ಪ್ರತ್ಯಕ್ಷವಾಗಿ ನೋಡಿಲ್ಲ. ಕುದುರೆ ಮೇಲೆ ಕುಳಿತು ಯುದ್ಧ ಮಾಡುತ್ತಾರೆ ಎಂದು ಕೇಳಿದ್ದ ಅಷ್ಟೆ. ನಮ್ಮ ಶಹರ(ನಗರ)ದ ಹುಡುಗರಿಗೂ ಹಾಗೆಯೆ. ಅವರಿಗೆ ಕುದುರೆ ಬಗ್ಗೆ ಕೇಳಿ ಗೊತ್ತಿದೆ. ಆದರೆ ಕುದುರೆ ಅನುಭವವಿಲ್ಲ. ಅದರ ಅರ್ಥವೂ ಗೊತ್ತಿಲ್ಲ. ಅದೇನು ಮಾಡುತ್ತೆ, ಕುದುರೆಯನ್ನು ಯಾವುದಕ್ಕೆ ಉಪಯೋಗಿಸುತ್ತಾರೆ ಎಂದು ತಿಳಿದಿಲ್ಲ. ಇನ್ನೊಬ್ಬನಿಗೆ ಕುದುರೆ ಅರ್ಥ ಗೊತ್ತಿದೆ ! ಆದರೆ ಅವನಿಗೂ ಅದರ ಅನುಭವವಿಲ್ಲ. ಆ ಸ್ಥಿತಿಯಲ್ಲಿ ನಾವಿದ್ದೇವೆ ಇಂದು.
ನಿಮ್ಮ ಹತ್ತಿರ ಬರೇ ಅರ್ಥವಿದೆ. ಆದರೆ ಅನುಭವವಿಲ್ಲ. ಈ ನಗರದ ಹುಡುಗರ ಬಳಿ ಅಗಾಧ ಮಾಹಿತಿಯಿದೆ. ಆದರೆ ಆ ಮಾಹಿತಿಯ ಮೂಲ ಅನುಭವ ಅವರಿಗಿಲ್ಲ ! ಹೀಗಾಗಿ ಅವರ ಅನುಭವ ತುಂಬ ಸೀಮಿತ-ಸಂಕುಚಿತ. ಒಳ್ಳೆಯ ಸಾಹಿತ್ಯ ಬರಬೇಕಾದರೆ ಗ್ರಾಮೀಣ ಹುಡುಗರಿಂದಲೇ ಬರಬೇಕು.

ನೀವು ಗ್ರಾಮೀಣ ಹುಡುಗರ ಬಗ್ಗೆ ಹೇಳಿದಿರಿ. ಆದರೆ ಇಂದು ಇಂಗ್ಲೀಷ್ ಬಾರದ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಇಂಗ್ಲೀಷ್ ಗೊತ್ತಿರುವ ನಗರದ ವಿದ್ಯಾರ್ಥಿಗಳು ಎಂಬ ಎರಡು ವರ್ಗ ನಿರ್ಮಿತವಾಗಿದೆ. ಈ ವರ್ಗಗಳ ನಡುವಿನ ಅಂತರ ಹೆಚ್ಚುತ್ತಲೇ ಇದೆ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳು ಉದ್ಯೋಗಾವಕಾಶಗಳು ಮತ್ತು ಜಾಗತಿಕ ಸ್ವರ್ಧೆಯಿಂದ ವಂಚಿತರಾಗುತ್ತಿದ್ದಾರೆ ಎನಿಸುವುದಿಲ್ಲವೆ…

ಚಂದ್ರಶೇಖರ ಕಂಬಾರ: ಇಂಥ ಸ್ಥಿತಿಗೆ ಶಿಕ್ಷಣ ಮತ್ತು ಅಂಥ ಶಿಕ್ಷಣ ಕೊಡುತ್ತಿರುವ ಸರಕಾರ ಹೊಣೆ. ಇವರು ಒಂದೆಡೆ ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಧಾರಾಳವಾಗಿ ಅವಕಾಶ ನೀಡುತ್ತಾರೆ. ಇನ್ನೊಂದೆಡೆ ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳಿವೆ. ಇಂಥ ಸರಕಾರಿ ಶಾಲೆಗಳಲ್ಲಿ ಓದಿದವರಿಗೆ ಇಂಗ್ಲೀಷ್ ಭಾಷೆ ಬಗ್ಗೆ ಕೀಳರಿಮೆ ಇರುತ್ತದೆ. ಖಾಸಗಿ ಶಾಲೆಗಳಲ್ಲಿ ಓದಿದ ಹುಡುಗರಿಗೆ ಇಂಗ್ಲೀಷ್ ಸೊಕ್ಕಿರುತ್ತದೆ. ಇಂಥ ತಾರತಮ್ಯದ ಶಿಕ್ಷಣ ನೀಡಲಿಕ್ಕೆ ಸರಕಾರವೇ ಮುಂದೆ ನಿಂತಿದೆ. ಅಂದರೆ ಅಂಥ ಸರಕಾರಗಳನ್ನು ಯೂಸ್ ಲೆಸ್(ನಿಷ್ಪ್ರಯೋಜಕ) ಎಂದೇ ತಿಳಿದುಕೊಳ್ಳಬೇಕು.
ನೀವೇನು ಮಾಡಬೇಕು ಎಂದರೆ ಇಂಗ್ಲೀಷ್ ಮಾಧ್ಯಮವನ್ನು ಓಡಿಸಬೇಕು. ಎಸ್.ಎಸ್.ಎಲ್.ಸಿ. ತನಕ ಕನ್ನಡದಲ್ಲಿ ಕಲಿಸುವಂಥ ಶಾಲೆಗಳನ್ನೂ ನೀವೇ ಓಪನ್ ಮಾಡಬೇಕು. ಇಲ್ಲ ಸರಕಾರಗಳೇ ಆ ಹೊಣೆ ಹೊರಬೇಕು. ನಾನು ಸರಕಾರಕ್ಕೆ ಏನು ಸಜೆಸ್ಟ್ ಮಾಡುತ್ತೇನೆ ಎಂದರೆ ನಂಬರ್ ಒನ್, ಒಂದರಿಂದ ಹತ್ತನೇ ತರಗತಿಯವರಿಗಿನ ಎಲ್ಲ ವಿಷಯಗಳನ್ನು ಕನ್ನಡದಲ್ಲಿಯೆ ಕಲಿಸಬೇಕು. ನಂಬರ್ ಟೂ…ಸರಕಾರವೇ ಅಂಥ ಶಾಲೆಗಳನ್ನು ನಡೆಸಬೇಕು. ಪ್ರೈವೇಟ್ ನವರಿಗೆ ಕೊಡಬಾರದು.

5 comments:

 1. ಮಾನ್ಯ ಕಂಬಾರರು ಒಂದು ಮಾತನ್ನು ಇಲ್ಲಿ ಉಲ್ಲೇಖಿಸಿದ್ದು ಖರೆ ಅಂತ ಚಪ್ಪಾಳೆ ತಟ್ಟುತ್ತೇನೆ. ನಿಜ ಸಾಹಿತ್ಯದ ಒರೆತ ,ಅನುಭವದಲ್ಲಿ ಮಾತ್ರ ಅಂತ. ಅದು ಗ್ರಾಮೀಣ ಮಟ್ಟದಿಂದಲೇ ಹುಟ್ಟುತ್ತದೆ. ಕಟು ಸತ್ಯದ ಮಾತು ಇಂತಹ ಮುತ್ಸದ್ಧಿಗಳಿಂದ ಬಂದಾಗ ಮಾತ್ರ ನಮ್ಮವರು ಕಣ್ಣು ಬಿಡುವರು. ಒಂದು ಕವಿತೆಯ ಬಗ್ಗೆ ಹೀಗ್ಗೆ ಒಂದು ವಿಮರ್ಶೆ ಬರೆದರೆ ನಾವೇ ಶತ್ರುಗಳಾಗುವ ಸಾಧ್ಯತೆ ಹೆಚ್ಚು. ಹುಲ್ಲಿನ ಮನೆಯಲ್ಲಿ ಒಲೆಯ ಹೊಗೆ ನುಂಗಿಕೊಂಡು ಅಡುಗೆ ಮಾಡಿ ಸಂಸಾರ ನಡೆಸುವವರಿಗೇ ಗೊತ್ತು ಅನ್ನ ಬೇಯಿಸಲು ಬೆಂಕಿಯ ಮಹತ್ವ ಎಷ್ಟು ಅಂತ. ಅದನ್ನು ಪಟ್ಟಣದಲ್ಲಿ ಕಲ್ಫಿಸಿಕೊಂಡು ಸಾಹಿತ್ಯ ರಚಿಸುವುದಕ್ಕೂ, ಅನುಭವಿಸಿ ಸೃಷ್ಠಿಸುವದಕ್ಕೂ ಅಂತರವಿದೆ. ಅದನ್ನೇ ಕಂಬಾರರು ಸ್ಪಷ್ಟಪಡಿಸಿದರು. ಭಾಷೆಯ ಉಳಿವಿನ ಬಗ್ಗೆ ಅವರ ಮಾತುಗಳು ಈಗಿನ ಕಾಲದ ಸ್ಥಿತಿಯಲ್ಲಿ ಚಾಲ್ತಿಗೆ ತರಲು ಸಾಧ್ಯವಿಲ್ಲ ಅನ್ನಿಸಿತು. ಏಕೆಂದರೆ , ಸಮಾಜ ಸರಿಪಡಿಸಲಾಗದಷ್ಟು ದೂರ ಬಂದುಬಿಟ್ಟಿದೆ.

  ReplyDelete
 2. ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಿಷೇಧಿಸಬೇಕು. ಆದರೆ ದೇಸೀ ಭಾಷಾ ಮಾಧ್ಯಮ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಇಂಗ್ಲಿಷ್ ಕಲಿಸಬೇಕು.ಇದಕ್ಕಾಗಿ ಪ್ರಾಥಮಿಕ ಶಾಲೆಗಳಲ್ಲೂ ನುರಿತ ಇಂಗ್ಲಿಶ್ ಶಿಕ್ಷಕರನ್ನು ನೇಮಿಸ ಬೇಕಾಗಬಹುದು.ಗ್ರಾಮೀಣ ಮಕ್ಕಳಲ್ಲಿ ಇಂಗ್ಲಿಶ್ ಬಗ್ಗೆ ಭಯವಿದೆ.ಈ ಭಯದಿಂದ ಅವರಿಗೆ ಮುಂದಿನ ಶಿಕ್ಷಣ ಮುಂದುವರೆಸಲೂ ತೊಡಕಾಗುತ್ತದೆ. ಪ್ರಾಥಮಿಕ ಮಟ್ಟದಿಂದಲೇ ಇಂಗ್ಲಿಷ್ ಬಗ್ಗೆ ಅಂಜಿಕೆ ನಿವಾರಿಸಿ ಒಳ್ಳೆಯ ಇಂಗ್ಲಿಷ್ ಎಲ್ಲ ಜಾತಿ ವರ್ಗ ಪ್ರದೇಶದವರಿಗೂ ದೊರೆಯುವ ಸೌಕರ್ಯ, ಉಳಿದ ವಿಷಯಗಳ ಕಲಿಕೆಗೆ ಮತ್ತು ಸೃಜನಶೀಲ ಅಭಿವ್ಯಕ್ಯ್ಹಿಗೆ ಕಡ್ಡಾಯವಾಗಿ ಮಾತೃಭಾಷೆ , ಇಂಗ್ಲಿಷ್ ಮಾಧ್ಯಮ ಶಾಲೆಗಳ ನಿಷೇಧ( ವರ್ಗಾವಣೆ ಗೊಳಗಾಗುವ ಕೇಂದ್ರ ಸರಕಾರೀ ನೌಕರರ ಮಕ್ಕಳಿಗಾಗಿ ರಿಯಾಯಿತಿ ಇರಲಿ ) ಇದಕ್ಕಾಗಿ ಅಗತ್ಯಬಿದ್ದರೆ ಸಂವಿಧಾನದಲ್ಲಿ ತಿದ್ದುಪಡಿ ತರಬೇಕು.

  ReplyDelete
 3. ಗೋದಾವರಿ (ಶಶಿಕಲ)Thursday, 22 September, 2011

  ಮಾನ್ಯ ಚಂದ್ರಶೇಖರ ಕಂಬಾರರು ಹೇಳಿರುವ ಮಾತು ಅಕ್ಷರಶಃ ಸತ್ಯ. ಒಬ್ಬ ಯಾವುದೇ ಮನುಷ್ಯ ಆಗಲಿ ಮೇಲೆ ಬರಬೇಕಾದರೆ ತಳಪಾಯ ಮುಖ್ಯವಾಗಿರುತ್ತದೆ. ಹಾಗೆಯೇ ಅನುಭವವೂ ಸಹ ಬೇಕಾಗುತ್ತದೆ. ಇಂತಹ ಅನುಭವ, ದಿಗ್ಗಜರಾದ ಕಂಬಾರರಿಗೆ ಇದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಇವರಿಗೆ ಧನ್ಯವಾದಗಳನ್ನು ಹೇಳೋಣ. ಹಾಗೆಯೇ ಈ ಲೇಖನವನ್ನು ಬರೆದ ಕುಮಾರರೈತ ಅವರಿಗೂ ವಂದನೆಗಳು.

  ReplyDelete
 4. ದೇವು(ಸಾಫ್ಟೆಕ್):ಮೊದಲಿಗೆ ಮಾನ್ಯ ಚಂದ್ರಶೇಖರ ಕಂಬಾರರಿಗೆ ಅಭಿನಂದನೆಗಳು. ಕರ್ನಾಟಕದಲ್ಲಿ 1 ತರಗತಿಯಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಸರ್ಕಾರಿ ಶಾಲೆಗಳಲ್ಲಿ ಉನ್ನತ ಗುಣಮಟ್ಟದಲ್ಲಿ ಖಾಸಗಿ ಶಾಲೆಗಳಂತೆಯೆ ಶಿಕ್ಷಣ ನೀಡಬೇಕು. ಜೊತೆಯಲ್ಲಿ ಇಂಗ್ಲಿಷ್ ವಿಷಯಕ್ಕೆ ಉತ್ತಮ ಶಿಕ್ಷಕರನ್ನು ನಿಯೋಜಿಸಿ 1 ನೇ ತರಗತಿಯಿಂದಲೇ ಇಂಗ್ಲಿಷನ್ನು ಕಲಿಸಿದರೆ ಉತ್ತಮ ಎಂಬುದು ನನ್ನ ಅಭಿಪ್ರಾಯ.

  ReplyDelete
 5. ಸರ್ ಈ ಲೇಖನವನ್ನು ನಮ್ಮ ಬ್ಲಾಗ್ ನಲ್ಲೂ ಪ್ರಕಟಿಸಬಹುದೆ?

  ReplyDelete