• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಕನಸ ಕಂಡ ‘ಮುಂಗಾರು’ ಕಣ್ಮುಚ್ಚಿದ ಕಥೆ

ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಅನೇಕ ಪತ್ರಿಕೆಗಳು; ಸಂಪಾದಕರು ಕಾಣಸಿಗುತ್ತಾರೆ. ಆದರೆ ಎಲ್ಲವನ್ನೂ ಎಲ್ಲರನ್ನೂ ವರ್ತಮಾನ ಸ್ಮರಿಸಿಕೊಳ್ಳುವುದಿಲ್ಲ. ಸ್ಮರಣಿಯ ಸಾಲಿನ ಮುಂಗಾರು; ವಡ್ಡರ್ಸೆ ರಘುರಾಮಶೆಟ್ಟರು ವಿಶಿಷ್ಟ ಕಾರಣಗಳಿಗಾಗಿ ಮುಖ್ಯರಾಗುತ್ತಾರೆ. ‘ಚಿಂತನೆಯ ಮಳೆ ಸುರಿಸಿ, ಜನಶಕ್ತಿಯ ಬೆಳೆ ತೆಗೆವ ಮುಂಗಾರು’ ಇದು ಈ ಪತ್ರಿಕೆಯ ಧ್ಯೆಯ ವಾಕ್ಯ. ಇಂಥ  ಆದರ್ಶಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡ ಪತ್ರಿಕೆ-ಸಂಪಾದಕರ ಕುರಿತ ವಿವರಗಳನ್ನು ಪತ್ರಕರ್ತ ಚಿದಂಬರ ಬೈಕಂಪಾಡಿ ‘ಇದು ಮುಂಗಾರು’ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಸಂಪಾದಕತ್ವದ ಮೀಡಿಯಾ ಮಾಲಿಕೆಯಡಿ ಈ ಪುಸ್ತಕವನ್ನು ‘ಅಂಕಿತ ಪ್ರಕಾಶನ’ ಹೊರತಂದಿದೆ.
 ‘ವ್ಯಕ್ತಿ ಎಂಥವನು ಎಂದು ತಿಳಿಯಬೇಕಾದರೆ ಆತನೊಂದಿಗಿರುವ ಸ್ನೇಹಿತರನ್ನು ನೋಡು’ ಎಂಬ ಅರ್ಥದ ಇಂಗ್ಲೀಷ್ ನಾಣ್ಣುಡಿಯಿದೆ. ಈ ಮಾತನ್ನೆ ಕೊಂಚ ಬದಲಾಯಿಸಿ ಹೇಳುವುದಾದರೆ ಒಂದು ಸಂಸ್ಥೆಯನ್ನು ಲೋಕಾರ್ಪಣೆ ಮಾಡಿದ ವ್ಯಕ್ತಿಯಿಂದಲೇ ಆ ಸಂಸ್ಥೆ ಬಗ್ಗೆ ಸಾಕಷ್ಟು ಅರಿಯಬಹುದು. 1984ರ ಸೆಪ್ಟೆಂಬರ್ 9ರಂದು ‘ ಮುಂಗಾರು’ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿದ್ದು ಮಾನವತಾವಾದಿ ದೇವನೂರು ಮಹಾದೇವ. ಅತ್ಯುತ್ಸಾಹದಿಂದ ಆರಂಭವಾದ ಮುಂಗಾರು ಚೆನ್ನಾಗಿ ಮಳೆ ಸುರಿಸಿದರೂ ಆರ್ಥಿಕತೆಯ ಬೆಳೆ ತೆಗೆಯುವಲ್ಲಿ ವಿಫಲವಾದ ಬಗೆಯನ್ನು ಚಿದಂಬರ ಬೈಕಂಪಾಡಿ ದಾಖಲಿಸುತ್ತಾರೆ. ಅಂದ ಹಾಗೆ ಇವರು ಕೂಡ ಈ ಸಂಸ್ಥೆಯ ಪತ್ರಕರ್ತ.

ತಾನು ಹಿಂದೆ ಕೆಲಸ ಮಾಡಿದ ಸಂಸ್ಥೆ ಬಗ್ಗೆ ವ್ಯಕ್ತಿ ಬಗ್ಗೆ ಅತೀವ ಪ್ರೀತಿ ಅಥವಾ ದ್ವೇಷ ಇರುತ್ತದೆ. ಇಂಥವರು ಬರವಣಿಗೆ ಮಾಡಿದರೆ ಅದು ಪೂರ್ವಾಗ್ರಹಪೀಡಿತ ಎಂಬುದರಲ್ಲಿ ಅನುಮಾನಗಳಿರುವುದಿಲ್ಲ. ಮುಂಗಾರು ಮತ್ತು ಸಂಪಾದಕ ವಡ್ಡರ್ಸೆ ಅವರ ಬಗ್ಗೆ ಗೌರವವಿಟ್ಟುಕೊಂಡ ಬೈಕಂಪಾಡಿ ವಸ್ತುನಿಷ್ಢವಾದ ಕೃತಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಯಾರನ್ನೂ ತೆಗೆಳುವ-ಹೊಗಳುವ ಕೆಲಸವನ್ನು ಕೃತಿ ಮಾಡುವುದಿಲ್ಲ. ಇದಕ್ಕೊಂದು ಉದಾಹರಣೆ. ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರಾದ ರಾಮಪ್ಪಯ್ಯ ಅವರ ಮನೆ ಧಾರ್ಮಿಕ ಸಮಾರಂಭ ಕುರಿತ ಸಣ್ಣ ಸುದ್ದಿ ಪ್ರಕಟಿಸುವ ವಿಚಾರದಲ್ಲಿ ಸಂಪಾದಕ ಮತ್ತು ಕಾರ್ಯನಿರ್ವಾಹಕ ಸಂಪಾದಕ ಇಂದೂಧರ ಹೊನ್ನಾಪುರ ನಡುವೆ ನಡೆದ ವಾಗ್ವಾದ. ಸಣ್ಣದೊಂದು ಪ್ರಕರಣ ತಾರಕಕ್ಕೆ ಹೋಗಿ ಇಂದೂಧರ ಮತ್ತು ಅವರ ಗೆಳೆಯರು ಮುಂಗಾರುವಿನಿಂದ ಹೊರ ನಡೆಯುವುದರೊಂದಿಗೆ ಪರ್ಯಾವಸನವಾಗುತ್ತದೆ. ಈ ಸಂದರ್ಭದ ಕುರಿತು ಯಾರ ಪರವೂ ನಿಲ್ಲದೆ ಇದ್ದ ಘಟನೆಯನ್ನು ಇದ್ದಂತೆ ದಾಖಲಿಸುತ್ತಾರೆ. ಈ ಮಾದರಿ ಅಪರೂಪ.  ಈ ಕಾರಣಕ್ಕಾಗಿಯೂ ಪತ್ರಿಕೋದ್ಯಮದ ನೆಲೆಗಟ್ಟಿನಲ್ಲಿ ‘ ಇದು ಮುಂಗಾರು’ ಮುಖ್ಯವಾಗುತ್ತದೆ.

1984ರ ವೇಳಗೆ ಮುದ್ರಣ ಮಾಧ್ಯಮದಲ್ಲಿ ಸಾಕಷ್ಟು ಆವಿಷ್ಕಾರಗಳಾಗಿತ್ತು. ಆದರೆ ವಡ್ಡರ್ಸೆ ರಘುರಾಮ ಶೆಟ್ಟರು ನೆಚ್ಚಿಕೊಂಡಿದ್ದು ಅಚ್ಚುಮೊಳೆ ಜೋಡಿಸುವ ವಿಧಾನವನ್ನೆ. ಇದು ಕೂಡ ಹೇಗೆ ತಪ್ಪು ಹೆಜ್ಜೆಯಾಯಿತು ಎಂಬುದನ್ನು ಅದು ತಪ್ಪು ಎಂದು ಹೇಳದೇ ವಿವರಿಸುತ್ತಾರೆ. ಷೇರು ಸಂಗ್ರಹಣೆಯಿಂದಲೇ ನಿರ್ವಹಣೆಯಾಗಬೇಕಿದ್ದ ಪತ್ರಿಕೆ ಆರ್ಥಿಕತೆಯ ಹಾದಿಯಲ್ಲಿ ಮುಗ್ಗರಿಸುತ್ತಾ ಹೋದ ವಿವರಗಳು ದೊರೆಯುತ್ತವೆ. ಇವೆಲ್ಲವನ್ನೂ ಹೇಳುತ್ತಾ ವಡ್ಡರ್ಸೆ ರಘುರಾಮ ಶೆಟ್ಟರ ವ್ಯಕ್ತಿತ್ವದ ಸೂಕ್ಷ್ಮ ಸಂಗತಿಗಳನ್ನು ಛಾಯಾಚಿತ್ರದ ಮಾದರಿಯಲ್ಲಿ ಬೈಕಂಪಾಡಿ ದಾಖಲಿಸಿದ್ದಾರೆ. ಹಾಗಾಗಿ ಇದು ಮುಂಗಾರು ಬಗ್ಗೆ ಮಾತ್ರವಲ್ಲ; ಅಪರೂಪದ ಸಂಪಾದಕ ವಡ್ಡರ್ಸೆ ಅವರ ವಿವರವೂ ಹೌದು. ಇವೆಲ್ಲದರ ಜೊತೆಗೆ 80ರ ದಶಕದಲ್ಲಿ ಪತ್ರಕರ್ತರ ಸಂಬಳ-ಸಾರಿಗೆ ಸ್ಥಿತಿ-ಗತಿ, ದೂರದೂರಿನಿಂದ ವರದಿ ಮಾಡುವಾಗ ಪಡಬೇಕಿದ್ದ ಕಷ್ಟಗಳ ಮಾಹಿತಿಯೂ ದೊರೆಯುತ್ತದೆ.

ಕನಸ ಕಂಡ ಪತ್ರಿಕೆಯನ್ನು ಮಾರಲೇಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಈ ಪಕ್ರಿಯೆ ನಂತರ ಗುರು-ಶಿಷ್ಯರ ಸಂಭಾಷಣೆ ಹೀಗಿದೆ. ‘ ಸಾರ್ ಮುಂದೇನು ಮಾಡ್ತೀರಿ’ ಅಂದಾಗ ‘ವಡ್ಡರ್ಸೆಗೆ ಹೋಗ್ತೀನಿ. ಅಲ್ಲೆ ನೆಲೆಯೂರಿ ಕೃಷಿ ಮಾಡ್ಕೊಂಡಿರ್ತೇನೆ. ಈ ಮಣ್ಣಂಗಟ್ಟಿ ಜನರ ಸಹವಾಸವೇ ಬೇಡ’ ಸಿಟ್ಟಿತ್ತು ಮಾತಿನಲಿ. ಅವರೊಂದಿಗೆ ಮಾತನಾಡಿ ಹೊರಡಬೇಕು ಎನ್ನುವಷ್ಟರಲ್ಲಿ ಶೆಟ್ರು ನನ್ನ ಹೆಗಲ ಮೇಲೆ ಕೈ ಇಟ್ಟು ಬೆನ್ನು ಸವರಿದರು. ಆಗ ಅವರೇಳಿದ್ದು,

‘ಮಾನಗೆಟ್ಟು ಪತ್ರಿಕೋದ್ಯಮ ಮಾಡಬೇಡ ತಮ್ಮಾ. ನಿನಗೆ ಹೇಳಬೇಕದ್ದನ್ನು ನಿರ್ಭಯವಾಗಿ ಹೇಳು. ಜನಪರವಾಗಿರಲಿ ಬರವಣಿಗೆ’

3 comments:

 1. ನಾನೂ ಅವರ ಗರಡಿಯಲ್ಲಿಯೇ ಪತ್ರಿಕೋದ್ಯಮದ ಮೊದಲ ಹೆಜ್ಜೆಗಳನ್ನು ಇಟ್ಟವನು. ಉದ್ಯೋಗಕ್ಕಾಗಿ ಮೊದಲ ಸಂದರ್ಶನ ಅಂತ ನಾನು ಎದುರಿಸಿದ್ದು ಶೆಟ್ಟರನ್ನು. ಅವರ ಕಿರು ಸಂದರ್ಶನ ಈಗಲೂ ನನ್ನ ಮನಸ್ಸಿನಲ್ಲಿ ಚಿರಸ್ಥಾಯಿ.... ಮುಂಗಾರು ಹಾಕಿಕೊಟ್ಟ ಬುನಾದಿಗೆ ದೊಡ್ಡ ಸಲಾಮು ಹೇಳಬೇಕು.
  ವಡ್ಡರ್ಸೆ ಆಗಾಗ ಒಂದು ಮಾತು ಹೇಳಿ ಬೆನ್ನು ತಟ್ಟುತ್ತಿದ್ದರು; "ವಾಚು ನೋಡಿ ಕೆಲಸ ಮಾಡಬೇಡ ತಮ್ಮಾ... ಕಸದ ಬುಟ್ಟಿ ಸೇರ್ತಿಯಾ!"
  -ಚಾಂದ್

  ReplyDelete
 2. ಚಿದಂಬರ ಬೈಕಂಪಾಡಿWednesday, 24 August, 2011

  ಪುಸ್ತಕ ಬಿಡುಗಡೆಯ ದಿನ ನಿಮ್ಮೊಡನೆ ಮಾತನಾಡಿದ ನೆನಪು ಹಸಿರಾಗಿದೆ.ಅಂದಹಾಗೆ `ಇದು ಮುಂಗಾರು' ಪುಸ್ತಕದ ಬಗ್ಗೆ ನೀವು ನೀಡಿರುವ ವ್ಯಾಖ್ಯಾನ ನಿಜಕ್ಕು ಮನಮಿಡಿಯಿತು. ನಾನು ಇದನ್ನು ಬರೆಯುವ ಸಂದರ್ಭದಲ್ಲಿ ಮನದೊಳಗೆ ನನ್ನನ್ನು ಕಾಡುತ್ತಿದ್ದ ತಳಮಳದ ನಡುವೆಯೂ ಯಾವುದೇ ಸಂದರ್ಭದಲ್ಲೂ ಹೊಗಳುವ ಅಥವಾ ತೆಗಳುವ ಕೆಲಸ ಮಾಡಬಾರದು, ದಾಖಲೀಕರಣವಷ್ಟೇ ಉದೇಶವಾಗಬೇಕು ಎನ್ನುವುದನ್ನು ಎಚ್ಚರಿಕೆಯಿಂದ ನಿರ್ವಹಿಸಿದೆ. ಅದನ್ನು ನೀವು ಪುಸ್ತಕ ಓದಿ ಅರಿತು ಮುಕ್ತವಾಗಿ ಹೇಳಿರುವುದು ಚಕಿತಗೊಳಿಸಿತು

  ReplyDelete