• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಅನಂತನ ಅನಂತ ಸಂಪತ್ತು ಸರಣಿ: ಮೊಗಲ್ ಸರದಾರನ ಆಕ್ರಮಣ; ಸಹಾಯಕ್ಕೆ ಧಾವಿಸಿದ ಕೇರಳವರ್ಮ ಕೂಡ ಕಗ್ಗೊಲೆ…!

ಸರಣಿ ದುರಂತಗಳಿಂದ ತಲ್ಲಣಗೊಂಡಿದ್ದ ಉಮಯಮ್ಮ ರಾಣಿ ಅಂಥ ಅತೀವ ದುಃಖದಲ್ಲಿಯೂ ಮುಂದಿನ ಕರ್ತವ್ಯಗಳತ್ತ ಗಮನ ನೀಡಲೇಬೇಕಾಗಿರುತ್ತದೆ. ಉಳಿದಿದ್ದ ತನ್ನ ಒಂಭತ್ತು ವರ್ಷದ ಮಗ ರೆವಿ ವರ್ಮನನ್ನು ಸಂರಕ್ಷಿಸಿಕೊಳ್ಳುವುದು ಜೊತೆಗೆ ತನ್ನ ರಕ್ಷಣೆಯತ್ತಲೂ ಗಮನ ನೀಡಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಥಾವರಿ (ರಾಜ ಪುರೋಹಿತ) ಸಂಸ್ಥಾನದ ಕಾರಿಯಾಕರ್ (ಮುಖ್ಯಮಂತ್ರಿ), ಸಂಪ್ರತಿ ( ಕಾರ್ಯದರ್ಶಿ) ಜೊತೆ ಚರ್ಚಿಸಿದ ನಂತರ ರಾಣಿ ಮತ್ತು ಆಕೆಯ ಮಗನ  ವಾಸ್ತವ್ಯ ನೆಡುವನಾಡುವಿಗೆ ಬದಲಾಗುತ್ತದೆ. ಇದಾದ ನಂತರ ದಕ್ಷ ಪ್ರಭುತ್ವದ ಚುಕ್ಕಾಣಿಯೇ ಇಲ್ಲದ ತಿರುವಂತನಪುರವನ್ನು  ಮೊಗಲರ ಪ್ರತಿನಿಧಿ ಸರದಾರ ಆಕ್ರಮಿಸುತ್ತಾನೆ. ಇದರಿಂದ ವೇನಾಡ್ ಸಂಸ್ಥಾನ ಕಂಗಾಲಾಗುತ್ತದೆ.


ಮಗ ರೆವಿ ವರ್ಮ ಅಪ್ರಾಪ್ತ. ಈ ಕಾರಣದಿಂದಲೇ ಸ್ವತಃ ಉಮಯಮ್ಮ ರಾಣಿಯೇ 1677 ರಲ್ಲಿ ಗದ್ದುಗೆಯೇರುವುದು ಅನಿವಾರ್ಯವಾಗುತ್ತದೆ. ನಿರಾತಂಕವಾಗಿ ಆಡಳಿತ ನಡೆಸುವ ವಾತಾವರಣ ಸಂಸ್ಥಾನದಲ್ಲಿರಲಿಲ್ಲ. ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳ ಹಾವಳಿಯೇ ಅಧಿಕವಾಗಿರುತ್ತದೆ. ನೆಡುವನಾಡಿನಲ್ಲಿ ಕುಳಿತ ರಾಣಿಗೆ ನೆಮ್ಮದಿಯೆನ್ನುವುದು ಕನಸಿನ ಮಾತಾಗಿರುತ್ತದೆ. ಸಂಸ್ಥಾನದಲ್ಲಿ ತಾಂಡವವಾಡುತ್ತಿದ್ದ ಅರಾಜಕತೆಯನ್ನು ಸರಿಪಡಿಸಬೇಕಾಗಿರುತ್ತದೆ. ಮಗನ ಕ್ಷೇಮದ ವಿಚಾರವೇ ಹೆಜ್ಜೆಹೆಜ್ಜೆಗೂ ಕಾಡತೊಡಗುತ್ತದೆ. ಆದ್ದರಿಂದ ರಾಣಿ ಈತನನ್ನು ಪರಿಸ್ಥಿತಿ ಸರಿ ಹೋಗುವವರೆಗೂ ಅಜ್ಞಾತ ಸ್ಥಳದಲ್ಲಿರಿಸುವುದು ಅನಿವಾರ್ಯವಾಗುತ್ತದೆ. ಇಂಥ ಸಂದರ್ಭದಲ್ಲಿ ಒಳಶತ್ರುಗಳು ಮತ್ತಷ್ಟು ಪ್ರಬಲರಾಗತೊಡಗುತ್ತಾರೆ.

ವೇನಾಡ್ ಸಂಸ್ಥಾನದಲ್ಲಿ ಇಂಥ ಅರಾಜಕ ಪರಿಸ್ಥಿತಿ ಲಾಭ ಪಡೆದ ಮೊಗಲ್ ಸರದಾರನ ಪಡೆ ತಿರುವಂತಪುರವನ್ನು ಅತಿಕ್ರಮಿಸುತ್ತದೆ. ತಿರುವಂತನಪುರ ಹೊರವಲಯದಲ್ಲಿ ವಾಸ್ತವ್ಯ ಹೂಡಿದ ಸರದಾರನ ಸೂಚನೆಯಂತೆ  ಉಳಿದ ಪ್ರದೇಶಗಳನ್ನು ಹತೋಟಿಗೆ ತೆಗೆದುಕೊಳ್ಳತೊಡಗುತ್ತದೆ. ಇದರಿಂದ ಹೆಚ್ಚು ಭೀತಿಗೊಳಗಾಗಿದ್ದು ಎತ್ತರಯೋಗಂ. ಮುಸ್ಲಿಮ್ ಸರದಾರ ಮತ್ತು ಅವನ ಪಡೆಯಿಂದ ಮುಂದೇನಾಗುವುದೋ ಎಂಬ ಆತಂಕ ಅವರನ್ನು ಆವರಿಸತೊಡಗುತ್ತದೆ. ಈತ ಕತ್ತಿಯ ಮೊನೆಯಿಂದ ಮತಾಂತರ ನಡೆಸಿದರೆ ಗತಿಯೇನು ಎಂದು ತಲ್ಲಣಿಸತೊಡಗುತ್ತಾರೆ. ತಿರುವಂತನಪುರ ದೇಗುಲವನ್ನು ಮುಚ್ಚಿ ತಮ್ಮ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗುತ್ತಾರೆ

ತಿರುವಂತನಪುರದ ಪರಿಸ್ಥಿತಿ, ರಾಣಿಯ ಸ್ಥಳಾಂತರಕ್ಕೆ ಕಾರಣ ಕುರಿತ ಸಮಗ್ರ ವರದಿಯನ್ನು ಸರದಾರ ಮೊಗಲ್ ದೊರೆಗೆ ರವಾನಿಸುತ್ತಾನೆ. ಈತನಿಂದ ಹಿಂದೂ ದೇಗುಲಗಳ ಮೇಲೆ ದಾಳಿಯಾಗಲಿ ಅಥವಾ ಮತಾಂತರಗೊಳಿಸುವ ಪ್ರಕ್ರಿಯೆಯಾಗಲಿ ನಡೆಯುವುದಿಲ್ಲ. ಆದರೂ ಯಾವ ಕ್ಷಣದಲ್ಲಿ ಏನಾಗುವೋ ಎಂಬ ಭೀತಿ ಎತ್ತರಯೋಗಂನದು. ಅಲ್ಪಕಾಲದಲ್ಲಿಯೇ ಥೊವಲೈಯಿಂದ ವೇನಾಡ್ ಉತ್ತರಕ್ಕಿರುವ ಎಡವಾಯಿ ಕರಾವಳಿ ಪ್ರದೇಶವನ್ನೆಲ್ಲ ಸರದಾರನ ಪಡೆ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಹತೋಟಿಗೆ ದಕ್ಕಿದ ಪ್ರದೇಶದಿಂದ ಕಂದಾಯ ವಸೂಲಿ ಮಾಡುವ ಪ್ರಕ್ರಿಯೆ ನಡೆಸತೊಡಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂದು ಮನಗಂಡ ರಾಣಿಯಿಂದ  ಸಂಸ್ಥಾನದ ಸಹಾಯಕ್ಕೆ ಬರುವಂತೆ ಕೇರಳ ವರ್ಮನಿಗೆ ವಿನಂತಿ ರವಾನೆಯಾಗುತ್ತದೆ. ಕೊತ್ತನಾಡು ರಾಜ ಕುಟುಂಬದ ಶಾಖೆಯಾದ ನೈರುತ್ಯದ ಕೊಟ್ಟಾಯಮ್ ರಾಜ ಕುಟುಂಬದ ಸದಸ್ಯ, ಈ ಕೇರಳ ವರ್ಮ. ಅಪ್ರತಿಮ ಯೋಧನೀತ.  ಉಮ್ಮಯಮ್ಮ  ಮಹಾರಾಣಿಯ ಆದೇಶದ ಮೇರೆಗೆ ಈತ ಪ್ರಧಾನ ಆಡಳಿತ ಮಾರ್ಗದರ್ಶಕನಾಗಿ  ನೇಮಕಗೊಳ್ಳುತ್ತಾನೆ.

ವೇನಾಡ್ ಸಂಸ್ಥಾನದ ಆಡಳಿತ ವಾತಾವರಣವನ್ನು ಗ್ರಹಿಸಿದ ರಾಜಾ ಕೇರಳ ವರ್ಮ ಅತ್ಯಲ್ಪ ಕಾಲದಲ್ಲಿಯೇ ಬಲಿಷ್ಠ ಪಡೆ ಕಟ್ಟುತ್ತಾನೆ. ಇದರಲ್ಲಿ ಕತ್ತಿ, ಬಿಲ್ಲು, ಕುದುರೆ ದಳಗಳು ಸೇರಿರುತ್ತವೆ. ಈ ಪ್ರಕ್ರಿಯೆ ಮೊಗಲ್ ಸರದಾರನ ಗಮನಕ್ಕೆ ಬಾರದಂತೆ ನಡೆಯುತ್ತದೆ. ತನ್ನ ಸಮರ್ಥ ಬೇಹುಗಾರರ ಮುಖಾಂತರ ಸರದಾರ ಮತ್ತು ಆತನ ಪಡೆಯ ಚಲನವಲನ ತಿಳಿಯುತ್ತಿರುತ್ತಾನೆ.  ರಾಜಸ್ವ ಸಂಗ್ರಹಕ್ಕಾಗಿ ವಿವಿಧ ಪ್ರದೇಶಗಳಿಗೆ ಶತ್ರು ಪಡೆ ತೆರಳಿದೆ ಎಂಬ ಮಾಹಿತಿ ಬಂದ ಕೂಡಲೇ ತಿರುವಂತನಪುರ ಸನಿಹದ ಮನಕ್ಕಾಡ್ ನಲ್ಲಿ ಬೀಡು ಬಿಟ್ಟ ಸರದಾರನ ಮೇಲೆ ಮುಗಿ ಬೀಳುತ್ತಾನೆ. ಹಠಾತ್ತನೇ ನಡೆದ ದಾಳಿಯಿಂದ ಕಂಗಾಲಾದ ಸರದಾರ ತಿರುವತ್ತೂರ್ ಕಡೆ ಪಲಾಯನ ಮಾಡುತ್ತಾನೆ. ಬಳಿಕ ವರ್ಕಲಿ, ಥೋವಲೈ ಇತ್ಯಾದಿ ಕಡೆಗಳಿಂದ ತನ್ನ ಸಮಗ್ರ ಅಶ್ವಪಡೆ ಕರಿಸಿಕೊಳ್ಳುತ್ತಾನೆ. ತಿರುವತ್ತೂರಿನ ಅರಣ್ಯ ಪ್ರದೇಶದ ಬೆಟ್ಟದಲ್ಲಿ ಘೋರ ಕದನ ನಡೆಯುತ್ತದೆ. ಗೆರಿಲ್ಲಾ ಮಾದರಿ ದಾಳಿ ನಡೆಸುವ ಕೇರಳ ವರ್ಮನ ಪಡೆ ಶತ್ರು ಪಡೆಯ ಅನೇಕರನ್ನು ಬಲಿ ತೆಗೆದುಕೊಳ್ಳುತ್ತದೆ.

ಮೊಗಲ್ ಸರದಾರ ಕಣಜಗಳ ದೊಡ್ಡ ದೊಡ್ಡ ಗೂಡುಗಳಿದ್ದ ಮರಗಳ  ಕೆಳಗೆ ಕುದುರೆ ಮೇಲೆ ಕುಳಿತು ಕಾದಾಡುತ್ತಿರುತ್ತಾನೆ. ಆಗ ಬಂದೆರಗುವ ಕಲ್ಲು-ಭರ್ಜಿಗಳಿಂದ ರೊಚ್ಚಿಗೇಳುವ ಕಣಜಗಳು ಅತಿ ಸನಿಹವೇ ಇದ್ದ ಸರದಾರ ಮತ್ತು ಆತನ ಕುದುರೆ ಮೇಲೆ ದಾಳಿಯಿಡುತ್ತವೆ. ಇದರಿಂದ ಬೆದರಿದ ಕುದುರೆ ತನ್ನ ಸವಾರನನ್ನು ಕೆಳಗೆ ಕೆಡವಿ ಬೇರೆಡೆ ಧಾವಿಸುತ್ತದೆ. ಸರದಾರ ಕೆಳಗೆ ಬೀಳುತ್ತಿದ್ದಂತೆ ನೂರಾರು ಬಾಣಗಳು ಆತನ ಶರೀರ ಸೇರುತ್ತವೆ. ಈತನ ಮರಣದ ಬಳಿಕ ಸೆರೆ ಸಿಕ್ಕ ಸೈನಿಕರು, ಅಶ್ವಗಳು ಶಸ್ತ್ರಗಳ ಸಮೇತ ತಿರುವಂತನಪುರ ಪ್ರವೇಶಿಸುವ ಕೇರಳ ವರ್ಮನಿಗೆ ವಿರೋಚಿತ ಸ್ವಾಗತ ದೊರೆಯುತ್ತದೆ.

ಈ ವಿಜಯವನ್ನೇ ಸಂಭ್ರಮಿಸಿ ಕೂರುವ ಸಮಯವದಾಗಿರಲಿಲ್ಲ. ಒಳಶತ್ರುಗಳ ಎದೆಯಲ್ಲಿ ಭೀತಿ ಮೂಡಿಸಿ ಆಡಳಿತವನ್ನು ಸರಿಯಾದ ಮಾರ್ಗಕ್ಕೆ ತರುವ ಅವಶ್ಯಕತೆ ಇರುತ್ತದೆ. ಕೇರಳ ವರ್ಮನ ದಕ್ಷ ಮಾರ್ಗದರ್ಶನದಿಂದಾಗಿ ಇದು ಕೂಡ ನೇರವೇರಿ ಮಹಾರಾಣಿ ಮಹಾರಾಣಿ ನೆಮ್ಮದಿಯಿಂದ ಆಡಳಿತ ನಡೆಸುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಎತ್ತರಯೋಗಂ ಮೇಲೂ ಹಿಡಿತ ದೊರೆತು ಅನಂತ ಪದ್ಮನಾಭ ದೇಗುಲದ ನಿರ್ವಹಣೆ ಪ್ರಭುತ್ವದ ಪರಿವೀಕ್ಷಣೆಯಲ್ಲಿಯೇ ಸಾಗುವಂತ ವ್ಯವಸ್ಥೆಯಾಗುತ್ತದೆ.


ಇದರಿಂದ ಮೆಡಂಪಿಮರ್, ಎತ್ತುವೆಟ್ಟಿಲ್ ಪಿಳ್ಳಮಾರ್ ಮತ್ತು ಎತ್ತರಯೋಗಂ ಸದಸ್ಯರ ಅಸಮಾಧಾನ ಹೆಚ್ಚುತ್ತದೆ. ಸೆರೆ ಸಿಕ್ಕ ಹಾವಿನಂತೆ ಇವರು ಭುಸುಗುಟ್ಟತೊಡಗುತ್ತಾರೆ. ರಾಣಿಯ ಸಮರ್ಥ ಆಡಳಿತಕ್ಕೆ ಕಾರಣನಾದ ಕೇರಳವರ್ಮನ ವಿರುದ್ಧ ಕುದಿಯತೊಡಗುತ್ತಾರೆ. ಆತನ ವಿರುದ್ಧ ಸಂಚು ರೂಪಿಸತೊಡಗುತ್ತಾರೆ. ಇಂಥ ಸಂದರ್ಭದಲ್ಲಿ ಅದೊಂದು ದಿನ ರಾತ್ರಿ ಕೇರಳವರ್ಮನ ಕಗ್ಗೊಲೆಯಾಗುತ್ತದೆ. ಈತನ ಕೊಲೆಗೆ ಕಾರಣರ್ಯಾರು ಎಂಬುದೇ ನಿಗೂಢವೆನ್ನುತ್ತಾರೆ ಇತಿಹಾಸಕಾರರು. ಈ ಕೊಲೆ ನಿಗೂಢವೇ…?

ಮುಂದಿನ ಬಾರಿ ವೇನಾಡ್ (ಟ್ರಾವೆಂಕೂರ್) ಸಂಸ್ಥಾನದ ದಕ್ಷ ದೊರೆ ಮಾರ್ತಂಡವರ್ಮನ ಆಡಳಿತದ ಅವಧಿಯಲ್ಲಾದ ಪ್ರಮುಖ ಘಟನೆಗಳತ್ತ ನೋಡೋಣ……..

5 comments:

 1. ಧನ್ಯವಾದಗಳು. ಇತಿಹಾಸ ರೋಚಕ, ಮತ್ತೆ ನಮಗೆ ಕಲಿಕೆಯ ವಸ್ತು. ಚೆನ್ನಾಗಿದೆ ನಿರೂಪಣೆ.

  ReplyDelete
 2. Yogeesh BevinamaradaSaturday, 13 August, 2011

  ಅನಂತನಾ ಆಟ ಬಲ್ಲಾವರಾರು..
  ಇನ್ನೂ ಹೆಚ್ಚಿನ ಮಾಹಿತಿ ಇದ್ದರೆ ಬರೆಯಿರಿ

  ReplyDelete
 3. ನಿಮ್ಮಲ್ಲಾ ಮಾಹಿತಿಗೆ ಧನ್ಯವಾದಗಳು ಸರ್,

  ReplyDelete
 4. ನಿಮ್ಮ ಬರವಣಿಗೆ ನಿಜಕ್ಕೂ ಅದ್ಭುತ..... ಪತ್ತೆದಾರಿ ಕಥೆಯ ರೀತಿಯಲ್ಲಿ ಕಥೆ ಹೇಳುವ ನಿಮ್ಮ ತಂತ್ರಗಾರಿಕೆ ಅನನ್ಯ..... ಉತ್ತಮ ಲೇಖನ.... ಕುಮಾರ ರೈತ ಅವರೆ.... ನಿಮ್ಮಿಂದ ಇನ್ನಷ್ಟು ನಿರೀಕ್ಷೆಯಲ್ಲಿ......
  ಮುರಳಿ ಕೃಷ್ಣ ಮದ್ದಿಕೇರಿ...

  ReplyDelete
 5. ಮುರಳೀಧರ ಸಜ್ಜನTuesday, 16 August, 2011

  ಇತಿಹಾಸದಲ್ಲಿ ನಡೆದ ಘಟನಾವಳಿಗಳಲ್ಲಿ ನೀವು ಬರೆಯುತ್ತಿರುವ ಕಥನ ತುಂಬಾ ಡಿಫರೆಂಟ. ಟರ್ನಿಂಗ್ ಪಾಯಿಂಟ್ಸಗಳು ರೋಚಕವೆನಿಸಿ, ಮನಕಲಕಿ, ಕಣ್ಮುಂದೆ ಸಂಚರಿಸುತ್ತವೆ. ಮುಂದುವರೆಸಿ ಸರ್.....

  ReplyDelete