• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಅನಂತ ಪದ್ಮನಾಭ ಸಂಪತ್ತು; ದುರಂತಗಳ ಸರಮಾಲೆ

ಎರಡೂವರೆ ಶತಮಾನಗಳಿಗೂ ಹೆಚ್ಚು ಕಾಲ ‘ಎತ್ತರ ಯೋಗಂ' ಮತ್ತು ‘ವೇನಾಡ್ (ಟ್ರಾವೆಂಕೂರು)ರಾಜಮನೆತನ ನಡುವೆ ಘರ್ಷಣೆ ನಡೆದಿದೆ. ಅದೂ ತಿರು ಅನಂತ ಪದ್ಮನಾಭ ದೇಗುಲದ ಆಡಳಿತದ ಮೇಲೆ ಹಿಡಿತ ಸಾಧಿಸುವುದಕ್ಕಾಗಿ…! ಈ ದೇಗುಲ ಅಪಾರ ಸಂಪತ್ತಿನ ಕೇಂದ್ರವಾಗಿದ್ದೇ ಇದಕ್ಕೆ ಪ್ರಮುಖ ಕಾರಣ. ಈ ದಿಶೆಯಿಂದಾಗಿಯೇ ತಲ್ಲಣ-ಆತಂಕ-ವಿಷಾದ ಮೂಡಿಸುವ ದುರಂತಗಳ ಸರಮಾಲೆ ನಡೆಯುತ್ತದೆ. ಅವುಗಳೇನು…..
ದೇಗುಲ ಉತ್ಸವಗಳ ಅಮಾನತು
ದೇಗುಲದ ಅಪಾರ ಜಮೀನಿನ ಆದಾಯ ಸಂಗ್ರಹಿಸಲು ಎತ್ತರ ಯೋಗಂನಿಂದ ‘ಎತ್ತುವೆಟ್ಟಿಲ್ ಪಿಳ್ಳಮಾರ್’ ಅಧಿಕಾರಿಗಳು ನೇಮಕಗೊಂಡಿರುತ್ತಾರೆ. ತಮ್ಮ ಸ್ಥಾನ-ಮಾನ, ಜಮೀನಿನ ಆದಾಯ ಸಂಗ್ರಹಣೆ ಜವಾಬ್ದಾರಿಗಳಿಂದಾಗಿ ಗ್ರಾಮೀಣ ವಲಯದಲ್ಲಿ ಪ್ರಭಾವಿಗಳಾಗಿರುತ್ತಾರೆ. ಇವರು ಮತ್ತು ಈ ಎಲ್ಲ ಜಮೀನಿನ ಮೇಲೆ ತಮ್ಮ ನೇರ ಹಿಡಿತ ಸಾಧಿಸುವ ಇಚ್ಛೆಯ ಸಂಸ್ಥಾನದ ಅಧಿಕಾರಿಗಳಿಗೂ ಘರ್ಷಣೆ ತೀವ್ರವಾಗುತ್ತಲೇ ಸಾಗುತ್ತದೆ. ಇದು ಎಷ್ಟು ತೀವ್ರವಾಗುತ್ತದೆಯೆಂದರೆ ಮಹಾರಾಜ ಆದಿತ್ಯ ವರ್ಮ ಅವಧಿಯಲ್ಲಿ ದೇಗುಲದ ಕೆಲವು ಉತ್ಸವಗಳನ್ನು ‘ಎತ್ತರ ಯೋಗಂ’ ಅಮಾನತ್ತಿನಲ್ಲಿಡುತ್ತದೆ.
ವೇನಾಡ್ ಆಳಿದ ಮಹಾರಾಜ ರವಿವರ್ಮ(1663-1672), ಮಹಾರಾಜ ಆದಿತ್ಯ ವರ್ಮ(1672-1677) ಇವರ ಗುಣ-ಸ್ವಭಾವದ ಬಗ್ಗೆ ಕೆಲ ಇತಿಹಾಸಕಾರರು ವಿಭಿನ್ನ ನಿಲುವು ವ್ಯಕ್ತ ಪಡಿಸುತ್ತಾರೆ. ಇವರಿಬ್ಬರು ಸಹ ಕೊಚ್ಚಿ ಸಂಸ್ಥಾನದಿಂದ ಬಂದ ದತ್ತು ಸಂತಾನ. ವೇನಾಡ್ ಸಂಸ್ಥಾನದ ಗದ್ದುಗೆಯೇರಿ ಆಳ್ವಿಕೆ ನಡೆಸಿದ ಇವರಿಬ್ಬರೂ ತಮ್ಮ ದುರ್ಗುಣಗಳಿಂದಾಗಿ ಕುಖ್ಯಾತರಾಗಿದ್ದರು ಎನ್ನಲಾಗುತ್ತದೆ.
 ಬೆಂಕಿಗಾಹುತಿಯಾದ ಅರಮನೆ:
ಮಹಾರಾಜ ಆದಿತ್ಯ ವರ್ಮ ಆಳ್ವಿಕೆ ದಿನಗಳು. ಒಂದು ರಾತ್ರಿ ರಾಜ ಮನೆತನ ವಾಸವಾಗಿದ್ದ ದೇಗುಲ ಸನಿಹದ ಅರಮನೆಗೆ ಬೆಂಕಿ ಬೀಳುತ್ತದೆ. ಕಾಡ್ಗಿಚ್ಚಿನಂಥ ಬೆಂಕಿ. ನೋಡು ನೋಡುತ್ತಿದ್ದಂತೆಯೇ ಅಗ್ನಿಯ ಕೆನ್ನಾಲಿಗೆ ಅರಮನೆ ಆವರಿಸಿಕೊಳ್ಳುತ್ತದೆ. ರಾಜ ಪರಿವಾರ ಸುರಕ್ಷಿತವಾಗಿ ಹೊರ ಬೀಳುತ್ತದೆ. ಅತ್ಯಂತ ಆಶ್ವರ್ಯದ ಸಂಗತಿಯೆಂದರೆ ಸುತ್ತಲಿನ ಹಳ್ಳಿಗರಾಗಲಿ, ಸನಿಹವೇ ಇದ್ದ ದೇಗುಲದವರಾಗಲಿ ಅರಮನೆ ಬೆಂಕಿ ನಂದಿಸಲು ಮುಂದಾಗುವುದಿಲ್ಲ. ತ್ರಿವೇಂಡ್ರಮ್ ಪಶ್ಚಿಮಕ್ಕಿರುವ ‘ಕಿಲ್ಲಿಯರ್’ ನದಿ ಮಗ್ಗುಲಿನ ಗುಡ್ಡದ ಮೇಲೆ ಇದ್ದ ಪುಟ್ಟ ಅರಮನೆಗೆ ರಾಜ ಪರಿವಾರ ಸ್ಥಳಾಂತರವಾಗುತ್ತದೆ. ಈ ಸ್ಥಳವನ್ನು ‘ಪುತ್ತೇನ್ ಕೋಟಾ’ ಹೆಸರಿನ ಸಣ್ಣ ಕೋಟೆ ಸುತ್ತುವರಿದಿರುತ್ತದೆ.
ದೇಗುಲದ ಮುಂದೆ ಆನಂತರ ನಿರ್ಮಾಣವಾದ ಪುತ್ತೆನ್ ಮಾಳಿಗಾ ಅರಮನೆ
ಮಹಾರಾಜ ಆದಿತ್ಯ ವರ್ಮರಿಗೆ ವಿಷ ಪ್ರಾಶನವಾಯಿತೇ…?
ನಿತ್ಯವೂ ಮಹಾರಾಜರಿಗೆ ದೇಗುಲದಿಂದ ‘ಎತ್ತರ ಯೋಂಗಂ’ನವರು  ಪ್ರಸಾದ ತಲುಪಿಸುವ ಸಂಪ್ರದಾಯ. ಅದೊಂದು ದಿನ ಕಠೋರ ವಿಷ ಮಿಶ್ರಿತವಾಗಿದ್ದ ಪ್ರಸಾದ ಸ್ವೀಕರಿಸಿದ ಬಳಿಕ ತೀವ್ರ ಅಸ್ವಸ್ಥಗೊಳ್ಳುವ ಮಹಾರಾಜ ಆದಿತ್ಯ ವರ್ಮ ಕೂಡಲೇ ಮರಣ ಹೊಂದುತ್ತಾರೆ. ಇದರಿಂದ ರಾಜ ಪರಿವಾರಕ್ಕೆ ಭಾರಿ ಆಘಾತ. ಈ ಸಂದರ್ಭದಲ್ಲಿ ಸಂಸ್ಥಾನದಲ್ಲಿ ಆಂತರಿಕ ಕ್ಷೋಭೆ ಏಳದಂತೆ ಸಮರ್ಥವಾಗಿ ಆಡಳಿತ ನಡೆಸುವ ಉತ್ತರಾಧಿಕಾರಿ ಇರುವುದಿಲ್ಲ. ರಾಜ ಪರಿವಾರದಲ್ಲಿ ಆಗ ಮಹಾರಾಜನ ಸೋದರನ ಮಗಳು ಉಮ್ಮಯಮ್ಮ ರಾಣಿ ಮತ್ತು ಆಕೆಯ ಅಪ್ರಾಪ್ತ ವಯಸ್ಕ ಗಂಡು ಮಕ್ಕಳು ಮಾತ್ರ ಇರುತ್ತಾರೆ. ಚಿಕ್ಕಪ್ಪನ ಸಾವಿನ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ರಾಜ್ಯಾಡಳಿತದ ಭಾರ ಉಮ್ಮಯಮ್ಮ ರಾಣಿ ಹೆಗಲಿಗೇರುತ್ತದೆ. ಸಂಸ್ಥಾನವನ್ನು ಒಳಗಿನ-ಹೊರಗಿನ ಶತ್ರುಗಳಿಂದ ರಕ್ಷಿಸಿಕೊಳ್ಳುವ ಬಗ್ಗೆ ಮಹಾರಾಣಿ ಯೋಜನೆ ಸಿದ್ದಪಡಿಸಿಕೊಳ್ಳುತ್ತಿರುವಾಗಲೇ ಮತ್ತೊಂದು ಸಿಡಿಲಿಗಿಂತಲೂ ತೀವ್ರ ಆಘಾತ ಬಂದು ಅಪ್ಪಳಿಸುತ್ತದೆ.
ಕಗ್ಗೊಲೆಯಾದ ರಾಜ ಕುಮಾರರು.
ಅದೊಂದು ದಿನ ಬೆಳದಿಂಗಳ ರಾತ್ರಿ. ಪುತ್ತೇನ್ ಕೋಟೆ ಒಳ ಆವರಣದಲ್ಲಿ ಉಮ್ಮಯಮ್ಮ ರಾಣಿಯ ಆರು ಮಂದಿ ಗಂಡು ಮಕ್ಕಳು ಪರಿವಾರದ ಮಕ್ಕಳೊಂದಿಗೆ ಆಟವಾಡುತ್ತಿರುತ್ತಾರೆ. ಪರಿವಾರದಲ್ಲೊಬ್ಬ ‘ಬೆಳದಿಂಗಳಿದೆ. ನದಿ ತಟದಲ್ಲಿ ಆಟವಾಡೋಣ’ ಎಂಬ ಸಲಹೆ ಮುಂದಿಡುತ್ತಾನೆ. ಆಲೋಚಿಸುವ ವಯಸ್ಸೂ ಅಲ್ಲದ ರಾಜ ಕುಮಾರರು ಕೆಲ ಸಂಗಡಿಗರೊಂದಿಗೆ ರಾಣಿಗೆ ಸೂಚನೆಯನ್ನೂ ನೀಡದೇ ಅರಮನೆ ಪಶ್ಚಿಮ ದಿಕ್ಕಿನಲ್ಲಿರುವ ನದಿ ತಟಕ್ಕೆ ತೆರಳುತ್ತಾರೆ. ಆದರೆ ಒಂಭತ್ತು ವರ್ಷದ ಒಬ್ಬ ರಾಜ ಕುಮಾರ ಮಾತ್ರ ಅರಮನೆಯಲ್ಲಿಯೇ ಉಳಿಯುತ್ತಾನೆ. ಐವರು ರಾಜಕುಮಾರರು ತೀರದ ಮರಳಿನಲ್ಲಿ ಆಟವಾಡುತ್ತಾ ನದಿ ನೀರಿಗಿಳಿಯುತ್ತಾರೆ. ದಡದ ಸನಿಹವೇ ನಿಂತು ನೀರಾಟವಾಡತೊಡಗುತ್ತಾರೆ. ಆಗ ಇವರನ್ನು ನೀರಿನಿಂದ ಮೇಲೇಳುವ ಆಗಂತುಕರು ಸುತ್ತುಗಟ್ಟುತ್ತಾರೆ. ಚೀರಲೂ ಅವಕಾಶವಾಗದಂತೆ ಆಕ್ರಮಿಸುವ ಆಗಂತುಕರು ರಾಜಕುಮಾರರನ್ನು ನೀರಿನಲ್ಲಿ ಅದ್ದಿ ಕಗ್ಗೊಲೆ ಮಾಡುತ್ತಾರೆ. ಈ ಸ್ಥಳವನ್ನು ‘ಕಳಿಪ್ಪಮ್ ಕುಳಮ್’ ಎಂದು ಕರೆಯುತ್ತಾರೆ. ಇದು ಪುತ್ತೇನ್ ಕೋಟೆಯ ಪಶ್ಚಿಮಕ್ಕೆ ತ್ರಿವೇಂಡ್ರಮ್ ಕೋಟೆಯಿಂದ ಕೆಲ ಫರ್ಲಾಂಗುಗಳ ದೂರದಲ್ಲಿದೆ.
ಧಾವಿಸಿ ಬಂದ ಪರಿವಾರದ ಹುಡುಗರಿಂದ ಸುದ್ದಿ ತಿಳಿದ ಮಹಾರಾಣಿಗೆ ತೀವ್ರ ಆಘಾತ. ದುರ್ಘಟನೆಗಳ ಮೇಲೆ ದುರ್ಘಟನೆಗಳು. ಅದು ಭರಿಸಲಾಗದ ನೋವಿನ ಆಘಾತಗಳು. ಆದಿತ್ಯವರ್ಮರ ಅಂತ್ಯ ಸಂಸ್ಕಾರ ಮಾಡಿದ ಸ್ಥಳದಲ್ಲಿಯೇ ಮಕ್ಕಳ ಅಂತ್ಯಕ್ರಿಯೆ ನಡೆಯುತ್ತದೆ. ಅತೀವ ದುಃಖದ ನಡುವೆಯೂ ಉಳಿದ ಓರ್ವ ರಾಜಕುಮಾರನ್ನನ್ನು ಶತ್ರುಗಳಿಂದ ರಕ್ಷಿಸಬೇಕಾಗಿರುತ್ತದೆ. ತನ್ನ ರಕ್ಷಣೆಯೂ ಅಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಮಹಾರಾಣಿ ಕ್ರಮ ಕೈಗೊಳ್ಳುತ್ತಿದಂತೆಯೇ ಮತ್ತೊಂದು ಅಪಾಯ ಎದುರಾಗುತ್ತದೆ………!?

12 comments:

 1. ತುಂಬಾ ಚೆನ್ನಾಗಿದೆ ವಿವರಣೆಗಳು... ಎಲ್ಲಿಂದ ಕಲೆ ಹಾಕಿದಿರಿ ಇವೆಲ್ಲ...? ಹೀಗೆ ಬರೆಯುತ್ತಿರಿ.. ಎತ್ತರಯೋಗಂ ನಿಜಕ್ಕೂ ಎಂತಹ ಕಾನ್ಸೆಪ್ಟ್ ಅಲ್ವಾ? ಕೇರಳದಲ್ಲಿ ಇಂತಹ ಅನೇಕ ಕಥೆಗಳು ಸಿಗುತ್ತವೆ ಅನಿಸುತ್ತದೆ...

  ReplyDelete
 2. ತುಂಬಾ ಆಸಕ್ತಿದಾಯಕವಿವರಣೆ ಅಷ್ಟೆ ಭಯಾನಕ ಹಾಗು ಬೆಚ್ಚಿ ಬೀಳಿಸುವ ಸಂಗತಿಗಳು ಇನ್ನೂ ಇವುಗಳ ಬಗ್ಗೆ ಇನ್ನೂ ತಿಳಿಯುವ ಕುತೂಹಲವಿದೆ
  ಮತ್ತೆ ಇವುಗಳ ಕಲೆ ಹಾಕಿದ್ದಲ್ಲದೆ ಅಷ್ಟೇ ಆಸಕ್ತಿದಾಯಕವಾಗಿ ವಿವರಣೆ ಕೊಡುತ್ತಿರುವ ನಿಮ್ಮ ಲೇಖನಗಳ ಸರಣಿಯೂ ಚೆನ್ನಾಗಿವೆ

  ReplyDelete
 3. ಅದ್ಭುತ ಮಾಹಿತಿ ಸರ್ ಧನ್ಯವಾದಗಳು...

  ReplyDelete
 4. Gopalkrishna BhatSunday, 24 July, 2011

  too good collection, ಸಂಗ್ರಹ ಯೋಗ್ಯ

  ReplyDelete
 5. ಎಂತಾ ಅಘಾತಕಾರಿ ವಿಷಯಗಳು, ಆಸಕ್ತಿದಾಯಕ ಮಾಹಿತಿ... ಸರಾಗವಾಗಿ ಓದಿಸಿಕೊಂಡೋಗುತ್ತದೆ ಧನ್ಯವಾದಗಳು ಮುಂದಿನ ಕಂತಿಗೆ ಕಾಯುತ್ತೇವೆ..

  ReplyDelete
 6. Narasimhaiah GopalakrishnaSunday, 24 July, 2011

  ನಿಮ್ಮ ಲೇಖನಗಳನ್ನು ಓದುತ್ತಿದ್ದೇನೆ. ಮಹತ್ವಪೂರ್ಣ ಮಾಹಿತಿಗಳು ದೊರೆಯುತ್ತಿವೆ.

  ReplyDelete
 7. ತುಂಬಾ ಒಳ್ಳೆಯ ಮಾಹಿತಿಗಳನ್ನು ನಮಗೆ ನೀಡಿದ್ದೀರಿ ಸರ್... ಬಹಳ ಧನ್ಯವಾದಗಳು.. ಮುಂದಿನ ಭಾಗಕ್ಕೆ ಕಾಯುತ್ತೇವೆ..

  ReplyDelete
 8. ಮಹತ್ವಪೂರ್ಣ ಮಾಹಿತಿಗಳು,ಧನ್ಯವಾದಗಳು.. ಮುಂದಿನ ಭಾಗಕ್ಕೆ ಕಾಯುತ್ತೇವೆ..:)))

  ReplyDelete
 9. ಅದ್ಭುತ ಮಾಹಿತಿ... ನಿಮ್ಮ ಲೇಖನ ಚೆನ್ನಾಗಿವೆ..ಧನ್ಯವಾದಗಳು.. ಮುಂದಿನ ಭಾಗಕ್ಕೆ ಕಾಯುತ್ತೇವೆ...:)))))

  ReplyDelete
 10. Muralidhar SajjanFriday, 29 July, 2011

  ಸರ್ ಪರಿಹರಿಸಿ,
  ಎತ್ತರಯೋಗಂ ಮತ್ತು ವೇನಾಡ್ ಇವುಗಳು ರಾಜ್ಯವನ್ನು ಹಂಚಿಕೊಂಡು ಸಾಮ್ರಾಜ್ಯವ ನಡೆಸುತ್ತಿದ್ದವೇನು ?
  ವೆರಿ ಇಂಟರೆಸ್ಟಿಂಗ್, ಮುಂದುವರೆಸಿ.

  ReplyDelete
 11. ಮುರಳೀಧರ ಸಜ್ಜನSaturday, 30 July, 2011

  ಸರ್, ಒಂದು ಪ್ರಶ್ನೆ......
  ಇಲ್ಲಿ ಕೇರಳ ರಾಜ್ಯವನ್ನು ನೀವು ಉಲ್ಲೇಖಿಸಿರುವ ಎರಡು ರಾಜಮನೆತನಗಳು ಆಳುತ್ತಿದ್ದವೇ ? ಅಥವಾ ಹಂಚಿಕೊಂಡು ಆಳ್ವಿಕೆ ನಡೆಸುತ್ತಿದ್ದವೇ ?
  ಕೂತಹಲಕಾರಿ ವಿಷಯಗಳು... ಮುಂದುವರೆಸಿ ಸರ್...

  ReplyDelete
 12. ತುಂಬಾ ಇಂಟ್ರೆಸ್ಟಿಂಗ್ ಸ್ಟೋರಿ. ಒಬ್ಬ ವರದಿಗಾರರಾಗಿ ಇಷ್ಟೆಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿರುವ ನಿಮಗೆ ಹ್ಯಾಟ್ಸಪ್..! ಇದರ ಬಗ್ಗೆ ತಾವು ಸಂಗ್ರಹಿಸಿರುವ ಮಾಹಿತಿ ಕನ್ನಡದಲ್ಲಿರುವುದು ತುಂಬ ಸಂತೋಷವಾಗುತ್ತದೆ ಮತ್ತು ಕನ್ನಡಿಗರಿಗೆ ಕೇರಳದಲ್ಲಿ ಆಳಿದ ರಾಜ ಮನೆತನಗಳ ಬಗ್ಗೆ ಅಲ್ಪ ಮಾಹಿತಿಯಾದರು ಅರಿಯುವಂತಾಗುತ್ತದೆ. ದಯವಿಟ್ಟು ಇದರ ಬಗ್ಗೆ ಹೆಚ್ಚಿನ ವಿಷಯ ಸಂಗ್ರಹಿಸಿ ಒಂದು ಪುಸ್ತಕವನ್ನು ಬರೆಯಿರಿ ಇದರಿಂದ ಇತಿಹಾಸ ಪ್ರಿಯರಿಗೆ ಸಹಾಯವಾಗ ಬಹುದು.

  ReplyDelete