• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಅನಂತನ ಅನಂತ ಸಂಪತ್ತು; ದೇಗುಲದ ಎತ್ತರ ಯೋಗಂ ಮತ್ತು ರಾಜ ಪ್ರಭುತ್ವದ ನಡುವೆ ತೀವ್ರ ಘರ್ಷಣೆಗಳೇಕಾದವು…?

ತಿರು ಅನಂತ ಪದ್ಮನಾಭ ದೇಗುಲ ಮತ್ತು ಅಲ್ಲಿನ ಸಿರಿ ಸಂಪತ್ತು ಬಗ್ಗೆ ಬರೆದಾಗ 8 ½ ‘ಎತ್ತರ ಯೋಗಂ’ ಕುರಿತು ಉಲ್ಲೇಖಿಸಿದ್ದೆ. ಕುತೂಹಲಿಗರು 8 ½ ಎತ್ತರ ಯೋಗಂ ಅಂದರೇನು ವಿವರಿಸಿ ಎಂದಿದ್ದರು. ಇದರ ಬಗ್ಗೆ ಅಧ್ಯಯನ ಮಾಡ ತೊಡಗಿದಾಗ ಅಚ್ಚರಿ-ಗಾಬರಿ-ತಲ್ಲಣ-ಆತಂಕ ಮೂಡಿಸುವ ಅನೇಕ ಸಂಗತಿಗಳು ತಿಳಿಯ ತೊಡಗಿವೆ…..ಅವುಗಳೇನು…..?

ತಿರು ಅನಂತ ಪದ್ಮನಾಭ ದೇಗುಲ, ಎತ್ತರ ಯೋಗಂ ಮತ್ತು ಟ್ರಾವೆಂಕೂರು ರಾಜಮನೆತನದ ಇತಿಹಾಸ ಒಂದರೊಳಗೊಂದು ಬೆಸೆದು ಕೊಂಡಿದೆ. ಈ ರಾಜ ಮನೆತನಕ್ಕೂ ಅತೀ ಪುರಾತನ ಇತಿಹಾಸ ‘ದೇಗುಲ ಮತ್ತು ಎತ್ತರ ಯೋಗಂ’ಗಿದೆ. ಕ್ರಿಸ್ತ ಶಕ 1050ನೇ ಇಸವಿ ಕಾಲಕ್ಕಾಗಲೇ ‘ಎತ್ತರ ಯೋಗಂ’ ಅತ್ಯಂತ ಪ್ರಬಲ ಶಕ್ತಿಯಾಗಿ ಹೊರ ಹೊಮ್ಮಿತ್ತು. ಈ ಸಮಿತಿ ಪ್ರಬಲ ಶಕ್ತಿಯಾಗಲು ಅನೇಕ ಕಾರಣಗಳಿದ್ದವು. ಅಂದಿನ ಸಾಮಾಜಿಕ ರಚನೆ, ದೇಗುಲದ ಸ್ವತ್ತನ್ನು ಜತನದಿಂದ ಸಂರಕ್ಷಣೆ ಮಾಡುವಿಕೆ, ಜನ ಸಾಮಾನ್ಯರ ನಂಬಿಕೆ ಮತ್ತು ರಾಜ ಪ್ರಭುತ್ವದ ಹಸ್ತಕ್ಷೇಪ ಇಲ್ಲದಿರುವಿಕೆ ಕಾರಣವಾಗಿತ್ತು. 1299ರಿಂದ 1344ನೇ ಇಸವಿ ತನಕ ತಮಿಳು ನಾಡು ಮತ್ತು ದಕ್ಷಿಣ ಕೇರಳ ಪ್ರದೇಶವನ್ನಾಳಿದ ರವಿವರ್ಮ ಕುಲಶೇಖರನ ಆಳ್ವಿಕೆ ತನಕ ದೇಗುಲದ ಎತ್ತರ ಯೋಗಂ ಆಡಳಿತ ಅಬಾಧಿತವಾಗಿತ್ತು. ಈತನ ನಂತರವೇ ‘ವೇನಾಡ್’ ಅರಸರ ಆಳ್ವಿಕೆ ಆರಂಭಗೊಳ್ಳುತ್ತದೆ. (ಡಚ್ಚರು-ಇಂಗ್ಲೀಷರ ಕಾಲಘಟ್ಟದಲ್ಲಿ ವೇನಾಡ್. ಟ್ರಾವೆಂಕೂರು ಸಂಸ್ಥಾನವೆಂದೇ ಹೆಸರಾಗುತ್ತದೆ)

ಮೊದಲನೇ ವೇನಾಡ್ ಅರಸ ವೀರ ಉದಯ ಮಾರ್ತಾಂಡ ವರ್ಮ. ಈತನ ಆಳ್ವಿಕೆ 1314ರಿಂದ 1344ರವರೆಗೆ ಸಾಗುತ್ತದೆ. 1344 ರಿಂದ 1350ರವರೆಗೂ ಕುನ್ನುಮ್ಮೆಲ್ ವೀರ ಕೇರಳ ವರ್ಮ ತಿರುವತ್ತಿ ರಾಜ್ಯಭಾರ. ಈತನಿಂದ ಪದ್ಮನಾಭ ದೇಗುಲಕ್ಕೆ 157 ‘ಪರಾಸ್’ ಭತ್ತದ ಗದ್ದೆಗಳ ದಾನ ಮತ್ತು ಅರ್ಚಕರ ಸಂಕಷ್ಟ ಘಟ್ಟದಲ್ಲಿ ನೆರವಿಗೆಂದು 3,000 ಫನ್ನಮ್ಸ್ ಲಭ್ಯವಾಗುತ್ತದೆ. ಆದರೆ ಈ ವೇಳೆಗಾಗಲೇ ದೇಗುಲ ಆಡಳಿತ ಮತ್ತು ರಾಜ ಪ್ರಭುತ್ವದ ನಡುವೆ ಘರ್ಷಣೆ ಆರಂಭವಾಗಿರುತ್ತದೆ. ಈ ಘರ್ಷಣೆ ಮುಂದಿನ ನಾಲ್ಕು ಶತಮಾನಗಳವರೆಗೂ ಮುಂದುವರಿಯುತ್ತಲೇ ಹೋಗುತ್ತದೆ…! ಇದಕ್ಕೆ ಪ್ರಮುಖ ಕಾರಣಗಳಾದರೂ ಏನು…?

10ನೇ ಶತಮಾನನದ ವೇಳೆಗಾಗಲೇ ಅತ್ಯಂತ ದೊಡ್ಡ ಮತ್ತು ಪ್ರಭಾವಿ ದೇಗುಲ. ಸಹಜವಾಗಿಯೇ ಇದರ ಸಂಪತ್ತು ಅಧಿಕವಾಗಿತ್ತು. ದೇಗುಲದ ಜಮೀನು ಅತ್ಯಂತ ವಿಸ್ತಾರ. ನೆಲಮಾರ್ಗ-ಜಲಮಾರ್ಗ ಮೂಲಕ ವ್ಯಾಪಾರಕ್ಕೆ ತೆರಳುವವರು, ವಿಜಯೋತ್ಸವದ ಸಂದರ್ಭಗಳಲ್ಲಿ ರಾಜ-ಮಹಾರಾಜರು ಅರ್ಪಿಸುತ್ತಿದ್ದ ಕಾಣಿಕೆಗಳಿಂದ ದೇಗುಲದ ಭಂಡಾರ ತುಂಬುತ್ತಲೇ ಇತ್ತು. ಇಷ್ಟೆಲ್ಲ ಅಪಾರ ಸಂಪತ್ತನ್ನು ರಕ್ಷಿಸಲು ಎಂಟು ಮಂದಿಯಿದ್ದ ಸಮಿತಿ ರಚನೆಯಾಗಿತ್ತು. ಇದಕ್ಕೆ ಮುಖ್ಯಸ್ಥ ಮಹಾರಾಜ. ಆದರೆ ಈತನಿಗೆ ದೇಗುಲದ ಆಡಳಿತದ ಮೇಲೆ ಪೂರ್ಣಾಧಿಕಾರವಿಲ್ಲ. ಅರ್ಧ ಅಧಿಕಾರ ಮಾತ್ರ. ಆದ್ದರಿಂದಲೇ ಎತ್ತರ ಯೋಗಂ ಅನ್ನು 8 ½ ಮಂಡಳಿ ಎಂದು ಕರೆಯುತ್ತಿದ್ದರು. ಮಹಾರಾಜರದು ದೇಗುಲದ ಧಾರ್ಮಿಕ ಉತ್ಸವಗಳಲ್ಲಿ ಭಾಗವಹಿಸಿ ಗೌರವ ಪಡೆಯುವುದಷ್ಟೆ ಆಗಿತ್ತು. 

ದೇಗುಲದ ದೈನಂದಿನ ಆಡಳಿತ ನಿರ್ವಹಣೆ, ಅತಿ ಶ್ರೀಮಂತ ಭಂಡಾರದ ರಕ್ಷಣೆ-ಲೆಕ್ಕವಿಡುವಿಕೆ, ದೇಗುಲದ ವಿಸ್ತಾರ ಜಮೀನಿನಿಂದ ಬರುವ ಉತ್ಪತ್ತಿ ಇವುಗಳ ಸಂಗ್ರಹಣೆ-ವಿತರಣೆ ಅಧಿಕಾರವೆಲ್ಲವೂ ಎತ್ತರ ಯೋಗಂನಲ್ಲಿ ಕೇಂದ್ರೀಕೃತ. ತನ್ನ ಈ ಕರ್ತವ್ಯವನ್ನು ಎತ್ತರ ಯೋಗಂನ ಉಳಿದ  ಎಂಟು ಸದಸ್ಯರು ಅತ್ಯಂತ ನಿಷ್ಠೆಯಿಂದ ನಿಭಾಯಿಸುತ್ತಿದ್ದರು. ಇವರನ್ನು ಯೋಗಕಾರ್, ಉರುಳರ್ ಎಂದೇ ಕರೆಯಲಾಗುತ್ತಿತ್ತು. ಇವರೆಲ್ಲ ದೇಗುಲ ಮಂಡಳಿಯ ಟ್ರಸ್ಟಿಗಳು. ಇವರಿಗೆ ರಾಜ ಪ್ರಭುತ್ವದ ಬಗ್ಗೆ ಆತಂಕವಿತ್ತು. ಆದ್ದರಿಂದಲೇ ದೇಗುಲದ ಆಡಳಿತ ಮತ್ತು ಪ್ರಭುತ್ವದ ನಡುವೆ ಅಂತರ ಕಾಯ್ದುಕೊಂಡಿದ್ದರು. ಇದು ಎಲ್ಲ ಮಹಾರಾಜರಿಗೂ ಫಥ್ಯವಾಗುತ್ತಿರಲಿಲ್ಲ. ಇದರಿಂದಾಗಿಯೇ ಅಸಮಾಧಾನದ ಹೊಗೆಯಾಡುತ್ತಲೇ ಇತ್ತು.

ದೇಗುಲಕ್ಕೆ ಸಂಪತ್ತಿಲ್ಲದಿದ್ದರೆ ಯಾವುದೇ ಪ್ರಭುತ್ವಕ್ಕೂ ಅದನ್ನು ತನ್ನ ಆಡಳಿತದ ತೆಕ್ಕೆಗೆ ತೆಗೆದುಕೊಳ್ಳುವ ಆಸಕ್ತಿಯಿರುವುದಿಲ್ಲ. ಇಂದಿನ ಪ್ರಜಾಪ್ರಭುತ್ವ ಕಾಲಘಟ್ಟದಲ್ಲಿಯೂ ಇದಕ್ಕೆ ಸಾಕಷ್ಟು ನಿದರ್ಶನ ನೀಡಬಹುದು. ತಿರು ಅನಂತ ಪದ್ಮನಾಭ ದೇಗುಲವನ್ನು ತನ್ನ ಆಡಳಿತದ ಪರಿಧಿಗೆ ಒಳಪಡಿಸಲು ಯೋಚಿಸುವ ವೇನಾಡ್ ಅಥವಾ ಟ್ರಾವೆಂಕೂರು ರಾಜ ಪ್ರಭುತ್ವದ ಪ್ರಯತ್ನದಿಂದಾಗಿಯೇ ಆ ದೇಗುಲ ಇವರ ಆಳ್ವಿಕೆ ಕಾಲಘಟ್ಟಕ್ಕೂ ಮೊದಲೇ ಅಪರಿಮಿತ ಸಂಪತ್ತು ಹೊಂದಿತ್ತು ಎನ್ನುವುದು ಅರ್ಥವಾಗುತ್ತದೆ…!

17ನೇ ಶತಮಾನದೊತ್ತಿಗೆ ‘ಎತ್ತರ ಯೋಗಂ’ ಮತ್ತು ರಾಜ ಪ್ರಭುತ್ವದ ನಡುವಿನ ದೇಗುಲ ಆಡಳಿತ ವಿಷಯದ ಘರ್ಷಣೆ ತಾರಕಕ್ಕೇರಿತ್ತು. ಈ ವೇಳೆಗಾಗಲೇ ಎತ್ತರ ಯೋಗಂ, ಅನಂತ ಪದ್ಮನಾಭ ದೇಗುಲದ ಅಪಾರ ವಿಸ್ತೀರ್ಣದ ಜಮೀನುಗಳನ್ನು ಎಂಟು ಜಿಲ್ಲೆಗಳನ್ನಾಗಿ ವಿಂಗಡಿಸಿತ್ತು. ಇವುಗಳನ್ನು ವ್ಯವಸಾಯದ ಹೊಣೆಯನ್ನು ರೈತರಿಗೆ ನೀಡಲಾಗಿತ್ತು. ಬಂದ ಉತ್ಪತ್ತಿಯಲ್ಲಿ ತಮ್ಮ ಪಾಲು ಕಳೆದುಕೊಂಡು ಇಂತಿಷ್ಟು ಉತ್ಪತ್ತಿಯನ್ನು ರೈತರು ದೇಗುಲಕ್ಕೆ ನೀಡುತ್ತಿದ್ದರು. ಈ ಉತ್ಪತ್ತಿಯನ್ನು ಸಂಗ್ರಹಿಸುವ ಸಲುವಾಗಿಯೇ ‘ಎತ್ತುವೆಟ್ಟಿಲ್ ಪಿಳ್ಳಮಾರ್’ ಹೆಸರಿನ ಅಧಿಕಾರಿಗಳು ನೇಮಕವಾಗಿದ್ದರು. ಇವರು ಎತ್ತರ ಯೋಗಂಗೆ ವರದಿ ಮಾಡಿಕೊಳ್ಳಬೇಕಿತ್ತು. ದೇಗುಲದ ಜಮೀನು/ತೋಟಗಳಿಂದ ಅಪಾರ ಆದಾಯವಿದ್ದಿದ್ದರಿಂದ ಇದರ ಮೇಲೆ ಒಡೆತನ ಸಾಧಿಸಲು, ಕಂದಾಯ ಸಂಗ್ರಹಿಸಲು ರಾಜ ಪ್ರಭುತ್ವ ಪ್ರಯತ್ನಿಸುತ್ತಲೇ ಇತ್ತು. ಇದರಿಂದಾಗಿಯೇ ಎತ್ತರ ಯೋಗಂ, ಎತ್ತುವೆಟ್ಟಿಲ್ ಪಿಳ್ಳಮಾರ್, ದೇಗುಲದ ಜಮೀನಿನ ರೈತರು ಮತ್ತು ರಾಜ ಪ್ರಭುತ್ವದ ನಡುವೆ ಘರ್ಷಣೆಗಳು ಸಂಭವಿಸುತ್ತಲೇ ಸಾಗಿದವು. 1663 ರಿಂದ 1672ರವರೆಗೆ ಆಳಿದ ರವಿ ವರ್ಮ ಮತ್ತು 1672ರಿಂದ 1677ರವರೆಗೂ ಆಳಿದ ಆದಿತ್ಯ ವರ್ಮ ಕಾಲಘಟ್ಟದಲ್ಲಿ ಈ ಘರ್ಷಣೆಗಳು ತೀವ್ರತೆ ಪಡೆದುಕೊಂಡವು. ಅದರಲ್ಲೂ ಆದಿತ್ಯ ವರ್ಮ ಆಳ್ವಿಕೆ ಸಂದರ್ಭದಲ್ಲಿಯಂತೂ ಅತ್ಯಂತ ತೀವ್ರವಾಯಿತು.

ಇವೆಲ್ಲದರ ಪರಿಣಾಮ ಏನಾಯಿತು, ಮಹಾರಾಜ ಆದಿತ್ಯ ವರ್ಮ ಸಾವು ಹೇಗೆ ಸಂಭವಿಸಿತ್ತು. ಇದು ಸಹಜವೇ-ಅಸಹಜ ಸಾವೇ ಎಂಬುದನ್ನು ಮುಂದೆ ನೋಡೋಣ…….
ಈ ಲೇಖನ ಸರಣಿ ಕುರಿತು ನಿಮ್ಮ ಅನಿಸಿಕೆ-ಅಭಿಪ್ರಾಯ-ಸಲಹೆಗಳನ್ನು ತಿಳಿಸಲು ಕೋರಿಕೆ…

15 comments:

 1. istella ola arthagalu ee ettara yogam nalli iruvudendu tiladiralilla....idanella sangrahisi namma kutoohalavannu tanisidakkagi vandanegalu...

  ReplyDelete
 2. ಕೋಲೆ ಬಸವTuesday, 19 July, 2011

  ನಿಜಕ್ಕೂ ಅಚ್ಚರಿ ಹುಟ್ಟಿಸುವಂತಹ ಅಧ್ಯಯನ, ಅರ್ಥಪೂರ್ಣವಾದ ಸಂಗತಿ, ಸೊಗಸಾದ ವಿಚಾರ ಮಂಡನೆ, ಧನ್ಯವಾದಗಳು ಸಾರ್

  ReplyDelete
 3. interesting. pls continue. waiting for that.

  ReplyDelete
 4. Gopalkrishna BhatTuesday, 19 July, 2011

  Sir, ur articles on Anantha Padmanaabha temple were awesome. Do u write historic novels? If so can u pls give a list of them ? History is one of my fav area despite being a software Engineer :-) I like historic novels like anything :-)

  ReplyDelete
 5. ನಮಸ್ತೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ನಾನು ಪತ್ರಕರ್ತ. ಚರಿತ್ರೆ ಆಧಾರಿತ ವಿಷಯದ ಕಾದಂಬರಿಕಾರನಲ್ಲ. ನಿಮ್ಮ ಆಸಕ್ತಿ ಶ್ಲಾಘನೀಯ...

  ReplyDelete
 6. Gopalkrishna BhatTuesday, 19 July, 2011

  Hm.. nimma baravanige vidhaana tumbaa hidstu adakke kelde. Neev Kaadambari baredre thumbaa jana ishta padtaare ansatte. Anyway nice reading those articles :-) Thanks for sharing them..

  ReplyDelete
 7. tumba upayukta vishayagalannu tilisiddira dhanyavada

  ReplyDelete
 8. 1750ರಲ್ಲಿ ಅತ್ಯಪೂರ್ವ ಘಟನೆ ಜರುಗುತ್ತದೆ. ರಾಜ ಮಾರ್ತಂತ ವರ್ಮ ತನ್ನ ರಾಜ್ಯಾಧಿಕಾರವನ್ನು ಮಹಾವಿಷ್ಣುವಿನ ಸನ್ನಿಧಿಗೆ ಸಮರ್ಪಿಸಿ ‘ಪದ್ಮನಾಭ ದಾಸ’ರಾಗುತ್ತಾರೆ, ನಂತರ ದೇವರ ಹೆಸರಿನಲ್ಲಿಯೇ ಆಳ್ವಿಕೆ ನಡೆಯುತ್ತದೆ.

  ಮಹಾರಾಜ ಆದಿತ್ಯ ವರ್ಮ ಸಾವು ಹೇಗೆ ಸಂಭವಿಸಿತ್ತು. ಇದು ಸಹಜವೇ-ಅಸಹಜ ಸಾವೇ..... agalu sampattigendu hapahapitana? nijavagalu kootahala keraliside.

  ReplyDelete
 9. ಮುರಳೀಧರ ಸಜ್ಜನ.Tuesday, 19 July, 2011

  ಬಹಳ ಕೂತುಹಲಕಾರಿ, ಮುಂದುವರೆಸಿ ಸರ್ ......

  ReplyDelete
 10. ಅನಂತ ಪದ್ಮನಾಭ ಈಗ ಕುಬೇರ... ಉತ್ತಮ ಮಾಹಿತಿಯ ಲೇಖನಕ್ಕೆ ಧನ್ಯವಾದಗಳು

  ReplyDelete
 11. tumba chennagide mahiti thank you ..

  ReplyDelete
 12. ಕನ್ನಡೇತರ ಶಬ್ದಗಳಿಗೆ ಕಂಸಿನಲ್ಲಿ ಅರ್ಥವನ್ನು ಬರೆದಲ್ಲಿ ಗ್ರಹಿಕೆ ಇನ್ನೂ ಸರಳವಾಗಬಹುದು ನನ್ನಂಥ ಓದುಗರಿಗೆ.
  ‘3,000 ಫನ್ನಮ್ಸ್’ ಅಂದರೆ ೩೦೦೦ ಹೊನ್ನ ನಾಣ್ಯಗಳಿರಬಹುದೇನೊ ಅನ್ನುವ ಒಂದಾಜಾಯಿತು. ಆದರೆ ‘157 ‘ಪರಾಸ್’ ’ ಅಂದರೆ ಏನು ಅಂತ ಗೊತ್ತಾಗಲಿಲ್ಲ... ತುಂಬಾನೇ ಸ್ಪೂನ್ ಫೀಡಿಂಗ್ ಎಕ್ಸ್ಪೆಕ್ಟ್ ಮಾಡ್ತಿದೀನೇನೊ ಅನಿಸ್ತಿದೆ..:) :)

  ReplyDelete
 13. realy amazing, u r great because collected lots of matter and enhance our knowdlege

  ReplyDelete
 14. ಅನಂತ ಪದ್ಮನಾಭ ಈಗ ಕುಬೇರ..ಬಹಳ ಕೂತುಹಲಕಾರಿ,ಮುಂದುವರೆಸಿ ಸರ್ ....ಉತ್ತಮ ಮಾಹಿತಿಯ ಲೇಖನಕ್ಕೆ ಧನ್ಯವಾದಗಳು

  ReplyDelete