• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಕರ್ನಾಟಕಕ್ಕೆ ಆದ ಮಾನಹಾನಿಗೆ ಪರಿಹಾರವೇನು…..?ಮಾಜಿ-ಹಾಲಿ ಮುಖ್ಯಮಂತ್ರಿಗಳಿಬ್ಬರೂ ಆಣೆ ಪ್ರಮಾಣ ಮಾಡುವ ನಿರ್ಧಾರದಿಂದ ಹಿಂದೆಯೇನೋ ಸರಿದಿದ್ದಾರೆ. ಆದರೆ ಇವರಿಬ್ಬರ ಆಣೆ-ಹಣೆ ಜಗ್ಗಾಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಘನತೆಗೆ ಧಕ್ಕೆಯಾಗಿದೆ. ರಾಜ್ಯಕ್ಕೆ ಆದ ಮಾನಹಾನಿಯನ್ನು ಇವರಿಬ್ಬರು ಹೇಗೆ ಸರಿಪಡಿಸುತ್ತಾರೆ….? ಇಂಥ ನಾಟಕಗಳನ್ನು ನೋಡುತ್ತಾ ಜನ ಸುಮ್ಮನಿರಬೇಕೆ…..?

ಒಂದು ವೇಳೆ ಇವರಿಬ್ಬರೂ ‘ಧರ್ಮಸ್ಥಳ’ದಲ್ಲಿ ಅಣೆ ಪ್ರಮಾಣ ಮಾಡಿದ್ದರೂ ಧರ್ಮದೇವತೆ ಇರಲಿ ಜನತಾ ಜನಾರ್ದನರೇ ನಂಬುತ್ತಿರಲಿಲ್ಲ. ಅಂಥ ಪರಿಸ್ಥಿತಿಯನ್ನು ತಾವಾಗಿ ಇವರು ತಂದುಕೊಂಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರ ಮಾತನ್ನು ಜನತೆ ನಂಬುತ್ತಿಲ್ಲ. ಮುಂದೆ ನಂಬುವ ಖಾತ್ರಿಯೂ ಇಲ್ಲ ಎನ್ನುವುದಕ್ಕೆ ಉದಾಹರಣೆಗಳು ದೊರೆಯುತ್ತವೆ. 20/20 ಮ್ಯಾಚಿನ ಸರಕಾರದಲ್ಲಿ ಮೊದಲು ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದವರು ಕುಮಾರಸ್ವಾಮಿ. ಆದ ಒಪ್ಪಂದದಂತೆ ಇವರು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಬೇಕಿತ್ತು. ಆದರೆ ಆಡಿದ ಮಾತಿಗೆ ತಪ್ಪಿದರು. ಬಿಜೆಪಿ-ಜೆಡಿಎಸ್ ನಡುವೆ ಆದ ಒಪ್ಪಂದಕ್ಕೆ ಇಡೀ ಕರ್ನಾಟಕದ ಜನತೆ ಸಾಕ್ಷಿಯಾಗಿದ್ದರೂ ತಾವು ಆಡಿದ ಮಾತು ನಡೆಸಲಿಲ್ಲ. ಆದರ ಬದಲು ಬಿಜೆಪಿ ಅವಗುಣಗಳನ್ನು ಎತ್ತಿಹಾಡತೊಡಗಿದರು. ಕೂಡಿಕೆಯಾಗುವಾಗ ಕಾಣದ ಅವಗುಣ ಈಗ ಕಾಣತೊಡಗಿತೇ ಎಂದು ಗೊಣಗಿಕೊಂಡ ಜನತೆ ಅನುಕಂಪದ ಮತನೀಡಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು ನಿಮಗೆಲ್ಲ ತಿಳಿದೇಯಿದೆ.

ಈ ನಂತರ ಕೂಡ ಜನತೆಗೆ ಆಗಿದ್ದು ಷಾಕ್ ಸರಮಾಲೆ. ಬದಲಾವಣೆ ಬಯಸಿ ಬಿಜೆಪಿಗೆ ಅಧಿಕಾರ ನೀಡಿದ ಜನತೆಗೆ ಆಗಿದ್ದು ಮಾತ್ರ ಭ್ರಮನಿರಸನ. ಹಗರಣಗಳನ್ನೇ ಹೆರುತ್ತಾ ಹೋದ ಸರಕಾರವಿದು. ‘ನಾಳೆಯಿಂದ ಯಡಿಯೂರಪ್ಪ ಬದಲಾಗ್ತಾರೆ ಹೊಸ ಯಡಿಯೂರಪ್ಪನನ್ನ ನೋಡ್ತೀರಿ’ ಅಂತ ಅದೆಷ್ಟು ಬಾರಿ ಯಡಿಯೂರಪ್ಪ ಹೇಳಿದ್ದಾರೋ, ಅದು ಅವರಿಗೆ ನೆನಪಿಲ್ಲ. ನಂಜನಗೂಡಿನಲ್ಲಿ ಇರುವುದು ಧರ್ಮಸ್ಥಳದ ಮಂಜುನಾಥನೇ. ಅಲ್ಲಿಗೆ ಹೋಗಿ ತಾನು ಬದಲಾಗುತ್ತೇನೆ. ಅಭಿವೃದ್ಧಿ ಹರಿಕಾರನಾಗುತ್ತೇನೆ ಎಂಬರ್ಥದ ಮಾತುಗಳನಾಡಿದರು. ಆದರೆ ಯಥಾಸ್ಥಿತಿಯೇ ಸಾಗಿತು.

ಸಂಸತ್ ಚುನಾವಣೆ ಸಂದರ್ಭದಲ್ಲಿ ‘ದೇವರಾಣೆ’ಗೂ ನನ್ನ ಮಗ ಚುನಾವಣೆಗೆ ನಿಲ್ಲುವುದಿಲ್ಲ ಅಂದರು. ಆದರೆ ರಾಘವೇಂದ್ರ ಚುನಾವಣೆಗೆ ನಿಂತಿದ್ದೂ ಆಯ್ತು. ಗೆದಿದ್ದು ಆಯ್ತು. ತಾವು ಆಡಿದ ಮಾತೇನು, ಆಗುತ್ತಿರುವುದೇನು ಮತ್ತು ಜನತೆ ಏನೆಂದುಕೊಳ್ಳುತ್ತಾರೋ ಎಂಬ ಬಗ್ಗೆ ಅವರಲ್ಲಿ ಲವಲೇಶವೂ ಕಾಳಜಿಯಿಲ್ಲ ಎಂಬುದು ತಿಳಿಯತೊಡಗಿತು
ಇಲ್ಲಿ ಒಂದು ವಿಷಯ ಗಮನಿಸಬೇಕು. ಯಡಿಯೂರಪ್ಪ ಅವರು ಆಣೆ ಇಟ್ಟಿದ್ದು ನಿರ್ದಿಷ್ಟ ಏಕದೇವತೆ ಬಗ್ಗೆ ಅಲ್ಲ. ಅವರು ಹೇಳಿದ್ದು ‘ದೇವರಾಣೆ’ಗೂ ಎಂದು. ಇಲ್ಲಿ ಆದ್ದರಿಂದ ಸಕಲೆಂಟು ದೇವತೆಗಳೂ ಇದರಲ್ಲಿ ಸೇರಿದರು. ಅದೂ ಧರ್ಮಸ್ಥಳದ ಮಂಜುನಾಥನೂ ಸೇರಿದಂತೆ. ಆಣೆ ಇಟ್ಟು ಮಾತಿಗೆ ತಪ್ಪಿದ ಮೇಲೆ ಇವರು ನಂಬಿಕೆಗೆ ಅರ್ಹವಾದ ವ್ಯಕ್ತಿಯಲ್ಲ ಎಂದು ಜನತೆಗೆ ಅನಿಸುವುದು ಸಹಜವೇ…..

ಇಂಥ ಪರಿಸ್ಥಿತಿಯಲ್ಲಿ  ಅಣೆ ಮಾಡುತ್ತೇವೆ ಎಂದು ಇವರಿಬ್ಬರೂ ಹೇಳಿದರೆ ಜನ ಹೇಗೆ ನಂಬಲು ಸಾಧ್ಯ…? “ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳು ಅಲ್ಲ…..ಮಿತ್ರರೂ ಅಲ್ಲ….” ಎಂಬ ಮಾತಿದೆ. ಹಿಂದೆ ಸಂಮಿಶ್ರ ಸರಕಾರ ಮಾಡುವ ಮೂಲಕ ಇವರಿಬ್ಬರೂ ಅದನ್ನು ಸಾಬೀತುಪಡಿಸಿದ್ದಾರೆ. ಇಂಥ ಹಿನ್ನೆಲೆಯಲ್ಲಿ ‘ತಾನು ಕುಮಾರಸ್ವಾಮಿಯೊಂದಿಗೆ ರಾಜಿ ಸಂಧಾನಕ್ಕೆ ಮುಂದಾಗಿಲ್ಲ. ಹೀಗೆಂದು ಧರ್ಮದೇವತೆ ಮುಂದೆ ಆಣೆ ಮಾಡುತ್ತೇನೆ. ಕುಮಾರಸ್ವಾಮಿ ಕೂಡ ತಾವೇಳಿದ್ದು ನಿಜ ಎಂದು ಪ್ರಮಾಣ ಮಾಡಲಿ ನೋಡೋಣ’ ಎಂದು ಸವಾಲು ಎಸೆಯುವ ಅವಶ್ಯಕತೆ ಇರಲಿಲ್ಲ. ಈ ಮಾತು ಆಡುವ ಮುಂಚೆ ತಾವು ಕರ್ನಾಟಕ ಸರಕಾರದ ಮುಖ್ಯಸ್ಥ ಎಂಬುದನ್ನು ಮರೆಯಬಾರದಾಗಿತ್ತು. ಅದೇ ರೀತಿ ಕುಮಾರಸ್ವಾಮಿ ಕೂಡ ತಾನು ಆಣೆ ಸವಾಲು ಸ್ವೀಕರಿಸಿದ್ದೇನೆ ಎಂದು ಹೇಳಬಾರದಾಗಿತ್ತು. ಹೀಗೆ ಹೇಳುವಾಗ ತಾನು ಈ ನಾಡನ್ನಾಳಿದ ಮುಖ್ಯಮಂತ್ರಿ ಎಂಬುದನ್ನು ಮರೆತರು. ಇದರ ಪರಿಣಾಮ ಮಾತ್ರ ಘೋರ…

ಎಳೆ ಮಕ್ಕಳು ವಯೋ ಸಹಜವಾಗಿ ಆಣೆ-ಪ್ರಮಾಣ ಮಾಡುವುದು ಸಹಜ. ದೇವರು-ವಯಸ್ಕರು ಇದನ್ನು ನೋಡಿ ನಗುತ್ತಾರೆ ಹೊರತು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಜವಾಬ್ದಾರಿ ಸ್ಥಾನದಲ್ಲಿರುವವರು ಸಂವಿಧಾನದ ಆಶಯಗಳನ್ನು ಮರೆತು ಆಣೆ ಮಾತನಾಡಿದರೆ ‘ಎಳಸು ಬುದ್ದಿ’ ಎನ್ನುತ್ತಾರೆ. ಕರ್ನಾಟಕವನ್ನು ಪ್ರತಿನಿಧಿಸುವ ವ್ಯಕ್ತಿಗಳೇ ಇಂಥ ಬಾಲೀಶ ವರ್ತನೆ ತೋರಿದರೆ ಇನ್ನು ಆ ರಾಜ್ಯದ ಜನ ಇನ್ನೆಷ್ಟು ಎಳಸು ಎಂದು ಇತರ ರಾಜ್ಯಗಳವರು ಆಡಿಕೊಳ್ಳುವಂಥ ಸ್ಥಿತಿಯನ್ನು ತಂದಿಟ್ಟರು.

ಕರುನಾಡ ಜನತೆ ಶತಶತಮಾನಗಳಿಂದಲೂ ತಮ್ಮ ಪಕ್ವತೆಗೆ, ಶೌರ್ಯ-ಧೈರ್ಯ ಮತ್ತು ಔದರ್ಯತೆಗೆ ಹೆಸರಾದವರು. ಹೀಗಿರುವಾಗ ರಾಜ್ಯವನ್ನು ಪ್ರತಿನಿಧಿಸುವಂಥ ವ್ಯಕ್ತಿಗಳು ಇಂಥ ವರ್ತನೆ ತೋರಿದರೆ ಕರ್ನಾಟಕಕ್ಕೆ ಮಾನಹಾನಿಯಾಗುವುದಿವೇ…? ಇವರಿಬ್ಬರೂ ಇದರ ಪರಿಹಾರ ಕಟ್ಟಿಕೊಡಲು ಸಾಧ್ಯವೇ…..? ಇಂಥ ಪ್ರಶ್ನೆಯನ್ನು ಕರ್ನಾಟಕದ ಪ್ರಜ್ಞಾವಂತ ಜನತೆ ಒಕ್ಕೂರಲಿನಿಂದ ಕೇಳಬೇಕು…...ಕೇಳುತ್ತಾರೆ.

No comments:

Post a Comment