• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

'ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪ ಆಡುತ್ತಿರುವ ಚದುರಂಗದಾಟ-2 ' ಜೆಡಿಎಸ್ ಮಾಡಿದ ವಚನ ಭ್ರಷ್ಟತೆಯೇ ವರವಾಯ್ತು.........!

ವರದಿ ಅನುಕ್ರಮವಾಗಿ ಇದ್ದರೆ ಸೂಕ್ತ ಅಲ್ಲವೇ...ಈ ಮಾದರಿಯಲ್ಲಿ  ಯಡಿಯೂರಪ್ಪ ರಾಜಕೀಯ ಜೀವನದಲ್ಲಿ ಜೆಡಿಎಸ್ ಮಾಡಿದ ವಚನ ಭ್ರಷ್ಟತೆ ಹೇಳಬೇಕಿತ್ತು. ರೆಡ್ಡೀಸ್ ಕಥೆಯನ್ನು ನಂತರ ಹೇಳಿದರೂ ನಡೆಯುತ್ತಿತ್ತು. ಇರಲಿ ಹೇಳಿಯಾಗಿದೆ. ಈಗ ಜೆಡಿಎಸ್ ಮಾಡಿದ ವಚನ ಭ್ರಷ್ಟತೆಯನ್ನೇ ವರವಾಗಿ ಪರಿವರ್ತಿಸಿಕೊಂಡ ಯಡಿಯೂರಪ್ಪ ಅವರ ರಾಜಕೀಯ ನಡೆ ಆಸಕ್ತಿಕರ. ಜೆಡಿಎಸ್ ಅನ್ನು ಅಮಾಯಕವಾಗಿ ನಂಬಿ ಕರ್ನಾಟಕದ ರತ್ನ ಸಿಂಹಾಸನದ ಮೇಲೆ ಉರ್ದು ಶಾಯರಿ ಹೇಳುತ್ತಾ ಧರ್ಮಸಿಂಗ್ ಹಾಯಾಗಿ ಕುಳಿತ್ತಿದ್ದರು. ಜೆಡಿಎಸ್ನ್ ಯಾರೇ ಬಂದರೂ ಜೀ ಹುಜೂರ್ ಎನ್ನುತ್ತಾ ಅವರಿಗೆ ಬೇಕಾದ ಕೆಲಸ ಮಾಡಿಕೊಡುತ್ತಿದ್ದರು. ಇಷ್ಟರಿಂದಲೇ ತಾವು ಸೇಫ್ ಎಂದು ಕೊಂಡಿದ್ದರು. ಕುಮಾರ ಸ್ವಾಮಿ ಅಂಡ್ ಗ್ಯಾಂಗ್ ಇವರು ಕುಳಿತ್ತಿದ್ದ ಕುರ್ಚಿ ಕಾಲನ್ನು ತಂತ್ರಗಾರಿಕೆ ರಾಜಕಾರಣದ ಹೆಸರಿನ ಗರಗಸದಲ್ಲಿ ಕೊಯ್ಯುತ್ತಿದ್ದರೂ ಅರಿವಿಗೆ ತಂದುಕೊಳ್ಳಲಿಲ್ಲ. ಕುರ್ಚಿಯಿಂದ ದಢಾರನೇ ಕೆಳಗೆ ಬಿದ್ದಾಗಲೇ ಅವರಿಗೆ ಅರಿವು ಬಂತು.

ಮುಂದಿನ ಎಲೆಕ್ಷನ್ ಸಂದರ್ಭದಲ್ಲಿ ಇನ್ನಷ್ಟು ತೀವ್ರವಾಗಿ ಪ್ರಯತ್ನಿಸಿದರೆ ಅಧಿಕಾರಕ್ಕೆ ಬರಬಹುದು ಎಂದುಕೊಂಡ ಯಡ್ಡಿಯೂರಪ್ಪ ಅಂಡ್ ಗ್ಯಾಂಗ್ ತಮ್ಮ ಪಾಡಿಗೆ ತಾವಿದ್ದರು. ಯಡ್ಡಿ ಹೆಗಲ ಮೇಲೆ ಕುಮ್ಮಿ ಕೈ ಬಿದ್ದಾಗಲೇ ಬಿಜೆಪಿಗೆ ಇದೊಂದು ರಾಜಕೀಯದಾಟ ಆಡೋಣ ಎನಿಸಿತು. ಹೆಚ್ಚು ಚರ್ಚಿಸದೇ ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿದ್ದಾಯಿತು. ಪರಿಣಾಮ 20/20 ಸರಕಾರ ಅಧಿಕಾರಕ್ಕೆ ಬಂತು. ಫೆಬ್ರವರಿ 3, 2006ರಂದು ಹೆಚ್.ಡಿ. ಕುಮಾರಸ್ವಾಮಿ ಕರ್ನಾಟಕದ ಹದಿನೆಂಟನೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಯಡ್ಡಿ ಡೆಪ್ಯುಟಿ ಸಿಎಂ. ಅಧಿಕಾರಕ್ಕೆ ಬಂದ ಕೂಡಲೇ ಯಡಿಯೂರಪ್ಪ ಯೋಚಿಸತೊಡಗಿದ್ದು ಮತ್ತು ಕಾರ್ಯೂನ್ಮಖರಾಗಿದ್ದು ಪಕ್ಷವನ್ನು ಮುಂದೆ ಹೇಗೆ ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕು ಎನ್ನವುದರ ಬಗ್ಗೆ. ಹಣಕಾಸು ಸಚಿವರಾಗಿ ಅವರು ಕೈಗೊಂಡ ಕಾರ್ಯಗಳಲ್ಲಿ ಬಹುಪಾಲು ಈ ನಿಟ್ಟಿನವೇ ಆಗಿದ್ದವು.

 ಆದ ಒಪ್ಪಂದದಂತೆ ಅಕ್ಟೋಬರ್, 2007ರಲ್ಲಿ ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಅಧಿಕಾರ ಹಸ್ತಾಂತರಿಸಬೇಕಿತ್ತು. ಆದರೆ ಯಡ್ಡಿ ಹೆಗಲ ಮೇಲೆ ಕೈ ಹಾಕುವಾಗ ಕಾಣದಿದ್ದ ಬಿಜೆಪಿ ಹುಳುಕುಗಳೆಲ್ಲ ಅಧಿಕಾರ ಹಸ್ತಾಂತರಿಸುವಾಗ ಕಂಡು ಬಿಟ್ಟಿತು. ಪರಿಣಾಮ ವಚನ ಭ್ರಷ್ಟತೆ. ಇದು ಬಿಜೆಪಿಗೆ ಒಂದು ವರವೇ ಆಯಿತು. ಕರ್ನಾಟಕದಲ್ಲಿ ಲಿಂಗಾಯಿತ ಸಮುದಾಯ ಆಕ್ರೋಶಗೊಂಡಿತು. ಅಲ್ಲಿಯ ಶಕ್ತಿ ಕೇಂದ್ರಗಳು ರಾಜ್ಯದಲ್ಲಿ ಮತ್ತೆ ಲಿಂಗಾಯಿತ ಮುಖ್ಯಮಂತ್ರಿ ಕಾಣಬೇಕೆಂದು ಪಣ ತೊಟ್ಟವು. ಪರಿಣಾಮ 2008ರಲ್ಲಿ ಬಿಜೆಪಿ 110 ಸ್ಥಾನಗಳನ್ನು ಗಳಿಸಲು ಸಾಧ್ಯವಾಯಿತು. ಮಾಧ್ಯಮಗಳೆಲ್ಲ 'ಯಡಿಯೂರಪ್ಪ ಅನುಕಂಪದ ಅಲೆಯಲ್ಲಿ ತೇಲಿ ಬಂದರು. ಇದರ ಪರಿಣಾಮ ಬಿಜೆಪಿ 110 ಸ್ಥಾನ ಗಳಿಸುವುದು ಸಾಧ್ಯವಾಯಿತು ಎಂದರು. ಆದರಿದು ಅರ್ಧಸತ್ಯ. ಏಕೆಂದರೆ ಯಡಿಯೂರಪ್ಪ ಅವರಿಗೆ ನೆರವಾಗಿದ್ದು ಅನುಕಂಪವಲ್ಲ. ಲಿಂಗಾಯಿತ ಸಮುದಾಯದ ಆಕ್ರೋಶ. ಇಡೀ ಕರ್ನಾಟಕದ ಜನತೆ ಮಮ್ಮಲ ಮರುಗಿದ್ದರೆ ವಿಧಾನ ಸಭೆಯ 224 ( ಒಂದು ಸ್ಥಾನ ನಾಮಕರಣಾಧಾರಿತ. ಒಟ್ಟು-225) ಸ್ಥಾನಗಳಲ್ಲಿ 180ಕ್ಕೂ ಸ್ಥಾನಗಳನ್ನಾದರೂ ಗೆಲ್ಲಬೇಕಿತ್ತು. ಹೀಗೆಂದರೆ ಇತರ ಸಮುದಾಯಗಳ ಜನರು ಬಿಜೆಪಿಗೆ ಮತವೇ ಹಾಕಲಿಲ್ಲ ಎಂದರ್ಥವಲ್ಲ. ಅದುವರೆಗೂ ಚದುರಿ ಹೋಗುತ್ತಿದ್ದ ಲಿಂಗಾಯಿತ ಸಮುದಾಯದ ಮತಗಳೆಲ್ಲ ಯಡಿಯೂರಪ್ಪ ಅವರಿಗಾದ ಅಪಮಾನದಿಂದಾಗಿ ಕೇಂದ್ರೀಕೃತಗೊಂಡವು. ಇವೆಲ್ಲದರ ಒಟ್ಟು ಪರಿಣಾಮ ಕೊರತೆಯಿದ್ದ ಬೆಂಬಲವನ್ನು ಪಕ್ಷೇತರರಿಂದ ತುಂಬಿಕೊಂಡು ಮುಖ್ಯಮಂತ್ರಿಯಾದರು. ಹೀಗೆ ತಮಗಾದ ಅಪಮಾನವನ್ನೇ ಶಕ್ತಿಯಾಗಿ ಪರಿವರ್ತಿಸಿಕೊಂಡ ಯಡಿಯೂರಪ್ಪ ಸರಿಯಾಗಿಯೇ ಕಾಯಿ ಉರುಳಿಸಿ ಗೆದ್ದರು. ಯಡಿಯೂರಪ್ಪ ಅವರಿಗೆ ಸರಿಯಾಗಿ ಟಾಂಗ್ ಕೊಟ್ಟೆವೆಂದು ಕೊಂಡ ಕುಮಾರ ಸ್ವಾಮಿ ಅಂಡ್ ಗ್ಯಾಂಗ್  ಮುಗ್ಗರಿಸಿ ಬಿದ್ದರು. ಯಡ್ಡಿ ಚದುರಂಗದಾಟ ಮುಂದುವರೆಸಿದರು.

ಮುಂದುವರೆಯುತ್ತದೆ....................

No comments:

Post a Comment