• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪ ಆಡುತ್ತಿರುವ ಚದುರಂಗದಾಟ.....!

.ಕರ್ನಾಟಕ ರಾಜ್ಯ ರಾಜಕಾರಣದ ಹಾದಿಯಲ್ಲಿ ಬೂಕನಕರೆ ಸಿದ್ದಲಿಂಗಪ್ಪ ಯಡಿಯೂರಪ್ಪ ನಡೆದು ಬಂದ ಹಾದಿ ಸುಧೀರ್ಘವಾಗಿದೆ. ಈ ಹಾದಿ ನೋಡಿದಾಗ ಅಧಿಕಾರದ ಗದ್ದುಗೆ ಏರಲು ಇವರು ನಡೆಸಿದ ಹೋರಾಟ ಅರಿವಿಗೆ ಬರುತ್ತದೆ. ಏನಾದರೂ ಆಗಲಿ ಮಂತ್ರಿಯಾಗಿ ಬಿಡಬೇಕು ಎಂದು ಹಾತೊರೆದಿದ್ದರೆ ಅದೇನೂ ಅಸಾಧ್ಯದ ಕಾರ್ಯವಾಗುತ್ತಿರಲಿಲ್ಲ. ಪಕ್ಷಾಂತರ ಮಾಡಿದ್ದರೆ ಇದು ಸುಲಭದಲ್ಲಿ ಈಡೇರಿಕೆಯಾಗುತ್ತಿತ್ತು. ಆದರೆ ತಾನಿರುವ ಪಕ್ಷದ ಸಮೇತ ಅಧಿಕಾರಕ್ಕೇರಬೇಕೆಂಬ ಅವರ ಛಲ ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂಬುದನ್ನು ಮರೆಯುವಂತಿಲ್ಲ. ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿದ ಮತ್ತು ಅಧಿಕಾರಕ್ಕೆ ತಂದ ಶ್ರೇಯಸ್ಸು ನಿಸ್ಸಂದೇಹವಾಗಿ ಅವರಿಗೆ ಸಲ್ಲುತ್ತದೆ. ವಿಧಾನಸಭೆಯಲ್ಲಿ  ಬಿಜೆಪಿ ಶಾಸಕರ ಸಂಖ್ಯೆ ೧೧೦ಕ್ಕೇರಲು (೨೦೦೮ರ ಚುನಾವಣೆ) ಅವರು ಪಟ್ಟ ಕಷ್ಟ ಸಾಕಷ್ಟು. ಪಕ್ಷೇತರರ ನೆರವಿನಿಂದ ರಚನೆಯಾದ ಸರಕಾರದ ಮುಖ್ಯಮಂತ್ರಿಯಾದರೂ ಅವರ ಹೋರಾಟ ಮುಂದುವರೆಯುತ್ತಲೇ ಸಾಗಿದೆ.. ರಾಜಕೀಯ ನೆಮ್ಮದಿ ಎಂಬುವುದು ಅವರಿಗೆ ಮರೀಚಿಕೆ. ನಾನಾ ಸರ್ಕಸ್ ಗಳ ನಂತರ ಪಕ್ಷದ ಸದಸ್ಯರ ಬಲವನ್ನು ೧೨೦ಕ್ಕೆ ತಂದರೂ ನಿರಾತಂಕ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಇಂಥ ಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿ ಮೂರು ವರ್ಷ ಪೂರೈಸಿದ್ದಾರೆ. ಈ ಸಣ್ಣ ಅವಧಿಯಲ್ಲಿ  ವೈಯಕ್ತಿಕ ನೆಲೆಯಲ್ಲಿ ಯಡಿಯೂರಪ್ಪ ವೃದ್ಧಿಸಿಕೊಂಡಿರುವ ರಾಜಕೀಯ ಬಲ ಅಪಾರ. ಇದು ಅವರಿರುವ ಪಕ್ಷಕ್ಕೆ ಸಮೂಹ ಶಕ್ತಿಯೂ ಆಗಿದೆ. ಆದ್ದರಿಂದಲೇ ಭಾರತೀಯ ಜನತಾ ಪಕ್ಷ, ಎದುರಾಳಿ ಪಕ್ಷಗಳಲ್ಲಿ ತಲ್ಲಣ ಉಂಟು ಮಾಡುವಷ್ಟು ಶಕ್ತಿ ಗಳಿಸಿಕೊಂಡಿದೆ. ಇದರ ಹಿಂದಿನ ತಂತ್ರಗಾರಿಕೆ ಮಾತ್ರ ನಿಸ್ಸಂದೇಹವಾಗಿ ಯಡಿಯೂರಪ್ಪ ಅವರದೇ..... ಅಧಿಕಾರಕ್ಕೆ ಬಂದ ಹೊಸತರಲ್ಲಿ ಅತಿ ದುರ್ಬಲ ಮುಖ್ಯಮಂತ್ರಿಯಂತೆ ಗೋಚರಿಸುತ್ತಿದ್ದ ಯಡಿಯೂರಪ್ಪ  ಇಷ್ಟು ಸಬಲರಾಗಿದ್ದು ಹೇಗೆ.....ಅದೂ ಅವರದೇ ಪಕ್ಷದ ಹೈ ಕಮಾಂಡ್ ಕೂಡ ದನಿಯೆತ್ತಲಾರದಷ್ಟು........?

ಭಾರತೀಯ ಜನತಾ ಪಾರ್ಟಿ, ರಾಜ್ಯದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಹೊಸತು. ನಾನಾಗ  ಸುವರ್ಣನ್ಯೂಸ್ ವಾಹಿನಿಯ ಬಳ್ಳಾರಿ ಬ್ಯೂರೋ ಚೀಫ್. ಬಳ್ಳಾರಿಯ ಜಿಂದಾಲ್ ಏರ್ ಫೋರ್ಟಿಗೆ ಯಡಿಯೂರಪ್ಪ ಬರುತ್ತಾರೆಂದರೆ ಸಾಕು,  ಗಂಟೆಗಳಿಗೆ ಮುನ್ನ ರೆಡ್ಡಿ ಬ್ರದರ್ಸ್ ಮತ್ತು ಅವರ ಪಟಾಲಂನವರು ಹಾರ ತುರಾಯಿಗಳೊಂದಿಗೆ ಏರ್ ಪೋರ್ಟಿಗೆ ಆಗಮಿಸಿ ಕಾಯುತ್ತಿದ್ದರು. ಯಡಿಯೂರಪ್ಪ ಸಹ ಅತ್ಯಾಪ್ತವಾಗಿ  ಸಚಿವರಾಗಿದ್ದ ರೆಡ್ಡಿ ಬ್ರದರ್ಸ್ ಹೆಗಲ ಮೇಲೆ ಕೈ ಹರವಿ ಜನಜಂಗುಳಿಯಿಂದ ತುಸು ದೂರ ಹೋಗಿ ಪಿಸಪಿಸ-ಗುಸಗುಸ ಮಾತನಾಡುತ್ತಿದ್ದರು. ಪತ್ರಕರ್ತರೇನಾದರೂ ಯಡ್ಡಿ ಅವರಿಗೆ ಹೆಚ್ಚು ಪ್ರಶ್ನೆ ಕೇಳಿದರೆ ರೆಡ್ಡಿಸ್ ಗರಂ ಆಗುತ್ತಿದ್ದರು. ಆದರೆ ಈ ಚಿತ್ರಣ ಕೆಲವೇ ತಿಂಗಳಲ್ಲಿ ಬದಲಾಯಿತು. 


೨೦೦೯, ಆರೋಗ್ಯ ಸಚಿವ ಶ್ರೀರಾಮುಲು ಅವರ ಸೋದರಳಿಯ,  ಬಳ್ಳಾರಿಯ ಕಂಪ್ಲಿ ಕ್ಷೇತ್ರದ ಶಾಸಕ ಸುರೇಶ್ ಬಾಬು ಮದುವೆ ದಿನ. ಬೆಂಗಳೂರಿನಿಂದ ಸಚಿವರ ದಂಡೇ ಬಂದಿಳಿಯಿತು. ಪ್ರತ್ಯೇಕ ಹೆಲಿಕ್ಯಾಪ್ಟರ್ ಗಳಲ್ಲಿ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆಗಿನ ಗೃಹ ಸಚಿವ ಆಚಾರ್ಯ ಬಂದಿಳಿದರು. ಅರೇ ರೆಡ್ಡಿ ಸಚಿವರಿಬ್ಬರೂ ಅಲ್ಲಿಗೆ ಬರಲೇ ಇಲ್ಲ. ಏಕೋ ಬಿಜೆಪಿ ರಾಜಕಾರಣದ ಹವಾಮಾನ ಸರಿಯಿಲ್ಲವೆನಿಸಿತು. ಹಿಂದಿನ ದಿನ ಮಾಹಿತಿ ಮೂಲಗಳು 'ಯಡ್ಡಿ-ರೆಡ್ಡಿಗಳ ನಡುವೆ ವಿರಸ ಶುರುವಾಗಿದೆ' ಎಂದು ಹೇಳಿದ್ದು ನಿಜವಿರಬಹುದು ಎನಿಸಿತು. ಮುಖ್ಯಮಂತ್ರಿ ಅವರ ಹಿಂದೆಯೇ ತಾತ್ಕಲಿಕವಾಗಿ ನಿರ್ಮಿಸಲಾಗಿದ್ದ ಅದ್ದೂರಿ ಕಲ್ಯಾಣ ಮಂಟಪ ಪ್ರವೇಶಿಸಿದೆ. ಅಲ್ಲಿಯೂ ಯಡ್ಡಿ-ರೆಡ್ಡಿಗಳು ಮುಖಕ್ಕೆ ಮುಖ ಕೊಟ್ಟು ಮಾತನಾಡಲಿಲ್ಲ. ಸಚಿವ ಬಸವರಾಜ ಬೊಮ್ಮಾಯಿ ಅವರು ಜನಾರ್ದನ ರೆಡ್ಡಿ ಅವರನ್ನು ಪದೇಪದೇ ಮಾತನಾಡಿಸಲು ಯತ್ನಿಸಿದರೂ ರೆಡ್ಡಿ ಅವರದು ನಿರಾಸಕ್ತಿ-ಉದಾಸೀನದ ಮನೋಭಾವ. ಬಿಜೆಪಿಯ ಸದಾನಂದ ಗೌಡರು ತಮ್ಮ ಎಂದಿನ ಕೋಲ್ಗೇಟ್ ನಗೆ ತುಳುಕಿಸುತ್ತಿದ್ದರೂ ಅದು ಕಾಂತಿಹೀನವಾಗಿತ್ತು. ಅಲ್ಲಿಂದಾಚೆಗೆ ಭಿನ್ನಮತ ಶಮನವಾಗುವವರೆಗೂ ಕೆಲವಾರು ಸಲ ಯಡಿಯೂರಪ್ಪ ಅವರಿರುವ ಹೆಲಿಕ್ಯಾಪ್ಟರ್ ಜಿಂದಾಲ್ ಏರ್ ಪೋರ್ಟಿನಲ್ಲಿ ಟೆಕ್ನಿಕಲ್ ಹಾಲ್ಟ್ ಮಾಡಿದರೂ ರೆಡ್ಡೀಸ್ ಇರಲಿ, ಬಳ್ಳಾರಿ ಬಿಜೆಪಿಯ ಒಬ್ಬನೇ ಒಬ್ಬ ಕಾರ್ಯಕರ್ತ ಕೂಡ ಸ್ವಾಗತಿಸಲು ಬರುತ್ತಿರಲಿಲ್ಲ. ಕಾರ್ಯಕರ್ತರೇಕೆ ಜಿಲ್ಲಾಧಿಕಾರಿ ಕೂಡ ಬರುತ್ತಿರಲಿಲ್ಲ...! ರಾಜೀ ಸೂತ್ರದ ನಂತರ ಆ ಬಾರಿಯ ಭಿನ್ನಮತ ಶಮನವಾಯಿತು. ಮತ್ತೆ ಬಳ್ಳಾರಿಗೆ ಯಡ್ಡಿ ಬಂದಾಗಲೆಲ್ಲ ತಮ್ಮ ಪಟಾಲಂ ಸಹಿತ ರೆಡ್ಡೀಸ್ ಹಾಜರ್....

೨೦೦೯ರ ಅಂತಿಮ ಘಟ್ಟ.  ಅದುವರೆಗೂ ಕಂಡರಿಯದ ನೆರೆ ಹಾವಳಿಗೆ  ಉತ್ತರ ಕರ್ನಾಟಕ ತುತ್ತಾಯಿತು. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ, ಸಿರುಗುಪ್ಪ ತಾಲೂಕುಗಳಲ್ಲಿ ಭಾರಿ ನಷ್ಟ ಉಂಟಾಯಿತು. ಸಿರುಗುಪ್ಪ ತಾಲೂಕಿನಲ್ಲಿಯಂತೂ ನೆರೆ ಉಂಟು ಮಾಡಿದ ಅನಾಹುತ ಅಪಾರ.  ಮುಖ್ಯಮಂತ್ರಿ ಯಡಿಯೂರಪ್ಪ ವೈಮಾನಿಕ ಸಮೀಕ್ಷೆಯನ್ನು ಬಳ್ಳಾರಿಯಿಂದಲೇ ಆರಂಭಿಸಿದರು. ಬಳ್ಳಾರಿ ಸರಕಾರಿ ಅತಿಥಿ ಗೃಹಕ್ಕೆ ಬಂದರು. ಎಂದಿನಂತೆ ರೆಡ್ಡೀಸ್ ಹಾಜರ್. ಯಡಿಯೂರಪ್ಪ, ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಾನು ಇವರ ವಿಶೇಷ ಸಂದರ್ಶನ ಮಾಡಿದೆ. ಬಳಿಕ ಯಡ್ಡಿ ಅವರನ್ನು ಏರ್ ಪೋರ್ಟಿನಲ್ಲಿ ರೆಡ್ಡೀಸ್ ಏರ್ ಪೋರ್ಟಿನಲ್ಲಿ ಬಿಳ್ಕೊಟ್ಟರು. ಸಿಎಂ ಅವರು ನಡೆಸುವ ವೈಮಾನಿಕ ಸಮೀಕ್ಷೆಗೆ ಕಂದಾಯ ಸಚಿವ ಕರುಣಾಕರ ರೆಡ್ಡಿ ಸಾಥ್ ನೀಡಿದರು. ಇದಾದ ಕೆಲವೇ ದಿನಗಳಲ್ಲಿ ಈಶ್ವರಪ್ಪ ಅವರು ನೆರೆ ಹಾವಳಿ ಸಮೀಕ್ಷೆಗೆಂದು ಬಂದರು. ನಂತರ ಸಿರುಗುಪ್ಪದ ಸರಕಾರಿ ಅತಿಥಿ ಗೃಹದಲ್ಲಿ ಕಿರು ಪತ್ರಿಕಾಗೋಷ್ಠಿ ನಡೆಸಿ ತೆರಳಿದರು. ಆ ನಂತರ ಜನಾರ್ದನ ರೆಡ್ಡಿ ಅವರು ಮತ್ತೆ ಭಿನ್ನಮತ ಆರಂಭವಾಗಿರುವ ಕುರಿತು ಸುಳಿವು ನೀಡಿದರು. ಈ ಬಾರಿಯ ಭಿನ್ನಮತ ಆರಂಭವಾಗಲು ಕಾರಣವಾದ ವಿಷಯಗಳೇನು ಎಂದು ತಿಳಿಯಿಲು ನಾನು ವಿಶೇಷ ಸಂದರ್ಶನಕ್ಕೆ ಮುಂದಾದೆ. ' ಸದ್ಯಕ್ಕೆ ಸಿಎಂಗೆ ಇಷ್ಟು ಹೇಳಿರುವುದೇ ಸಾಕು ಕುಮಾರ್' ಎಂದರು. ಮಾಧ್ಯಮಗಳಲ್ಲಿ ಈ ವಿಷಯ ಬಿತ್ತರಗೊಳ್ಳುತ್ತಿದ್ದಂತೆ ಭಿನ್ನಮತ ತಾರಕಕ್ಕೇರಿತು. ಮತ್ತೆ ಬಳ್ಳಾರಿ ಜಿಂದಾಲ್ ಏರ್ ಪೋರ್ಟಿಗೆ  ಯಡ್ಡಿ ಬಂದಾಗಲೆಲ್ಲ ರೆಡ್ಡೀಸ್ ಗೈರುಹಾಜರು. ದಿನೇದಿನೇ ಭಿನ್ನಮತ ಉಲ್ಬಣಿಸುತ್ತಲೇ ತೊಡಗಿತು.

 ಆ ದಿನಗಳಲ್ಲಿಯೇ ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತ ಪ್ರದೇಶದಲ್ಲಿ ಪ್ರವಾಸ ಮಾಡತೊಗಿದ ಸಿಎಂ ಯಡಿಯೂರಪ್ಪ ರಾತ್ರಿ ಜಿಂದಾಲ್ ಏರ್ ಪೋರ್ಟಿನಲ್ಲಿ ವಾಸ್ತವ್ಯ ಹೂಡುತ್ತಾರೆ ಎಂದು ಮಾಹಿತಿ ಬಂತು. ಕ್ಯಾಮರಾಮನ್ ಲೋಕೇಶ್ ಗೆ ನಾಳೆ ಬೆಳಿಗ್ಗೆ ನಾಲ್ಕು ಗಂಟೆಗೆ ರೆಡಿಯಾಗಿರು. ಜಿಂದಾಲ್ ಗೆ ಹೋಗಬೇಕು ಬಂದು ಕರೆದುಕೊಂಡು ಹೋಗುತ್ತೇನೆ ಎಂದೆ. ರಾತ್ರಿ ೪ ಗಂಟೆಗೆ ಸರಿಯಾಗಿ ಬಳ್ಳಾರಿ ಬಿಟ್ಟೆವು. ಅತ್ಯಂತ  ದುಸ್ಥಿತಿಯ  ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ೪೦ ಕಿಲೋಮೀಟರ್ ದೂರವಿರುವ ಜಿಂದಾಲ್ ಗೆಸ್ಟ್ ಹೌಸ್ ತಲುಪಲು ಬರೋಬ್ಬರಿ ಒಂದೂವರೆ ಗಂಟೆ ಅವಧಿ ತಗುಲಿತು. ಅಷ್ಟರಲ್ಲಗಲೇ ಸಿಎಂ ಎದ್ದಿದ್ದರು. ಇವರ ವಿಶೇಷಾಧಿಕಾರಿ ಕೃಷ್ಣಯ್ಯ ಅವರೊಂದಿಗೆ ಬಂದಿರುವ ವಿಷಯ ಪ್ರಸ್ತಾಪಿಸಿದೆ. ಇಷ್ಟರಲ್ಲಾಗಲೇ ಸಿಎಂ ಅವರರೊಂದಿಗೆ ಎರಡು ಬಾರಿ ವಿಶೇಷ ಸಂದರ್ಶನ ಮಾಡಿದ್ದರಿಂದ ಕೃಷ್ಣಯ್ಯ ಮತ್ತು ಎಸ್.ಪಿ. ವೆಂಕಟೇಶ್ ಅವರ ಪರಿಚಯ ಚೆನ್ನಾಗಿ ಆಗಿತ್ತು. ಭರವಸೆ ಕೊಡಲಾಗುವುದಿಲ್ಲ. ನೋಡೋಣ ಎಂದರು. ಹೊರಗೆ ಕುಳಿತು ಕಾಯತೊಡಗಿದೆವು. ಸರಿಯಾಗಿ ಆರು ಗಂಟೆಗೆ ಹೊರಬಂದ ಸಿಎಂ ಅಲ್ಲಿದ್ದ ವಿಶಾಲ ಲಾನ್ ನಲ್ಲಿ ವಾಕ್ ಮಾಡತೊಡಗಿದರು. ಸಿಎಂ ಅವರಿಗೆ ಬೆಳಗಿನ ವೃತ್ತ ಪತ್ರಿಕೆಗಳನ್ನು ತಂದುಕೊಡುವ ತರಾತುರಿಯಲ್ಲಿ ಸಿಬ್ಬಂದಿ ತೊಡಗಿದ್ದರು. ಹೊಸಪೇಟೆ-ಸಂಡೂರು ಸರ್ಕಲ್ ಇನ್ಸ್ಪೆಕ್ಟರ್ ಗಳಿಗೆ ಈ ಜವಾಬ್ಧಾರಿ. ಅಷ್ಟು ಬೆಳಿಗ್ಗೆ ಎಲ್ಲ ಪ್ರಮುಖ ದಿನಪತ್ರಿಕೆಗಳು ಬಂದಿರಲಿಲ್ಲ. ಸುಮಾರು ಅರ್ಧ ತಾಸು ವಾಕ್ ಮಾಡಿದ ಸಿಎಂ, ಲಾನ್ ನಲ್ಲಿಯೇ ಛೇರ್ ಹಾಕಿಸಿ ಕುಳಿತುಕೊಂಡು ತಂದಿಟ್ಟ ಪ್ರಮುಖ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳನ್ನು ನೋಡತೊಡಗಿದರು. ಆಗಾಗ ಪೆನ್ನಿನಿಂದ ಓದುತ್ತಿದ್ದ ಪೇಪರ್ ಮೇಲೆ ಮಾರ್ಕ್ ಮಾಡತೊಗಿದರು. ಅರ್ಧ ಗಂಟೆ ಕಳೆಯಿತು. ನಾನು ಕೊಟ್ಟ ಚೀಟಿಯನ್ನು ಕೃಷ್ಣಯ್ಯ ಅವರು ಸಿಎಂಗೆ ನೀಡಿದರು. ಕೂಡಲೇ ಸಿಎಂ ಬರ ಹೇಳಿದರು. ಹೋದೆವು. ವಿಷ್ ಮಾಡಿದೆ. ದುಗುಡದಿಂದಲೇ ಸಿಎಂ ಮರು ವಿಷ್ ಮಾಡಿದರು. ಎರಡೇ ನಿಮಿಷ ಅವಕಾಶವಷ್ಟೆ ಎಂದು ಕೃಷ್ಣಯ್ಯ ಹೇಳಿದರು. ಆದರೆ ಬರೋಬ್ಬರಿ ಅರ್ಧ ತಾಸು ಸಿಎಂ ನನ್ನೊಂದಿಗೆ ಮಾತನಾಡಿದರು. ಭಿನ್ನಮತಕ್ಕೆ ಕಾರಣವಾದ ವಿಷಯಗಳ ಬಗ್ಗೆ ಸಾಕಷ್ಟು ಸುಳಿವು ನೀಡಿದರು. ಥ್ಯಾಂಕ್ಸ್ ಹೇಳಿದೆ. ವಾಪ್ಪಸ್ಸು ಬರುವಾಗ  ಏರ್ ಪೋರ್ಟಿನಲ್ಲಿ ಬಳ್ಳಾರಿಯ ಪತ್ರಕರ್ತ ಗೆಳೆಯರು ಸಿಎಂ ಬರವಿಗಾಗಿ ಕಾಯತೊಗಿದರು. ಯಾವುದಕ್ಕೂ ಇರಲೆಂದು ಕ್ಯಾಮರಾಮನ್ ಲೋಕೇಶ್ ನನ್ನು ಅಲ್ಲಿ ಇಳಿಸಿದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಬಳ್ಳಾರಿಯ ನಮ್ಮ ಕಚೇರಿ ತಲುಪಬೇಕೆಂದು ತಿಳಿಸಿದೆ. ಹಳ್ಳಕೊಳ್ಳಗಳನ್ನು ಲೆಕ್ಕಿಸದೇ ಧಾವಿಸತೊಡಗಿದ ಟಾಟಾಸುಮೋ ಆಫೀಸಿನ ಮುಂದೆ ನಿಂತ ಕೂಡಲೇ ಜಿಗಿದು ಹೋಗಿ ಕ್ಯಾಸೆಟ್ ಅನ್ನು ಬೆಂಗಳೂರು ಕಛೇರಿಗೆ ಫೀಢ್ ಮಾಡಿದೆ.

ಇದಾದ ನಂತರ ನವದೆಹಲಿಗೆ ಭಿನ್ನರೊಂದಿಗೆ ಸಂಧಾನಕ್ಕೆಂದು ತೆರಳಿದ್ದ  ಸಂದರ್ಭದಲ್ಲಿ ಸಿಎಂ ಕಣ್ಣೀರು ಸುರಿಸಿದ್ದರು. ಆಪ್ತರನ್ನು ಸಂಪುಟದಿಂದ ಕೈ ಬಿಟ್ಟ ಬಗ್ಗೆ ಶೋಕಿಸಿದ್ದರು. ಬಿಜೆಪಿಯ ಹಿರಿಯ ಮುಖಂಡರ ಮುಂದೆ ಯಡ್ಡಿ-ರೆಡ್ಡೀಸ್ ನಡುವೆ ಕದನ ವಿರಾಮ ಘೋಷಣೆಯಾಯಿತು. ಮುಂದೆ ಬಳ್ಳಾರಿಗೆ ಯಡ್ಡಿ ಬಂದಾಗಲೆಲ್ಲ ರೆಡ್ಡೀಸ್ ಹಾಜರು
(ಚಿತ್ರಗಳು ಇಂಟರ್ನೆಟಿನಿಂದ)
ಮುಂದುವರೆಯುತ್ತದೆ...............................

No comments:

Post a Comment