• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ರೆಡ್ಡಿ ಬ್ರದರ್ಸ್ ಬಗ್ಗೆ ಸುಷ್ಮಾ ಸ್ವರಾಜ್ ಭಿನ್ನ ರಾಗ ತೆಗೆಯಲು ಕಾರಣವೇನು.....

'ರೆಡ್ಡಿ ಬ್ರದರ್ಸ್ ಸಚಿವ ಸಂಪುಟದಲ್ಲಿ ಸ್ಥಾನಗಿಟ್ಟಿಸಲು, ಪ್ರಭಾವಿ ರಾಜಕಾರಣಿಗಳಾಗಿ ಬೆಳೆಯುವುದರ ಹಿಂದೆ ತಮ್ಮ ಕೈವಾಡವೇನು ಇಲ್ಲ' ಇದು ಬಿಜೆಪಿಯ ಹಿರಿಯ ನಾಯಕಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಮಾತು. ಇದಷ್ಟೆ ಅಲ್ಲ 'ರೆಡ್ಡಿ ಸಹೋದರರನ್ನು ರಾಜ್ಯ ಸಂಪುಟಕ್ಕೆ ಸೇರಿಸುವಲ್ಲಿ ತನ್ನದೇನೂ ಪಾತ್ರವಿರಲಿಲ್ಲ. ಅವರನ್ನು ಮಂತ್ರಿಯನ್ನಾಗಿ ಮಾಡಿದಾಗ ಅರುಣ್ ಜೇಟ್ಲಿ ಅವರು ರಾಜ್ಯದ ಉಸ್ತುವಾರಿ ವಹಿಸಿದ್ದರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಹಿರಿಯರಾದ ಅನಂತ್ ಕುಮಾರ್ ಹಾಗೂ ವೆಂಕಯ್ಯ ನಾಯ್ಡು ಕೂಡ ಜತೆಗಿದ್ದರು. ಅದರಲ್ಲಿ ನನ್ನ ಕೆಲಸವೇನೂ ಇರಲಿಲ್ಲ.  ರೆಡ್ಡಿ ಸಹೋದರರೊಂದಿಗೆ ನನ್ನ ಸಂಪರ್ಕವೆಂದರೆ ವರ್ಷಕ್ಕೊಂದು ದಿನ ವರ ಮಹಾಲಕ್ಷ್ಮಿ ವ್ರತದ ದಿನ ಮಾತ್ರ. ಅಂದು ಬಳ್ಳಾರಿಗೆ ಹೋಗಿ ಪೂಜೆ ನೆರವೇರಿಸುತ್ತೇನೆ. ಅದು ಬಿಟ್ಟರೆ, ಉಳಿದ 364 ದಿನಗಳೂ ನನಗೆ ರೆಡ್ಡಿ ಸಹೋದರರ ಸಂಪರ್ಕವೂ, ಮಾತುಕತೆಯೂ ಇರುವುದಿಲ್ಲ. ವಾಸ್ತವವಾಗಿ, ಒಂದೇ ಕುಟುಂಬದ ಮೂವರನ್ನು ಮಂತ್ರಿಗಳನ್ನಾಗಿಸುವುದನ್ನು ನಾನೇ ವಿರೋಧಿಸಿದ್ದೆ. ಆದರೆ ಅವರಿಗೆ (ಜೇಟ್ಲಿ, ನಾಯ್ಡು, ಅನಂತ್) ರಾಜಕೀಯ ಬದ್ಧತೆಗಳಿದ್ದವು.  2009ರಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಒಡಕು ಇತ್ತು, ಸರಕಾರವು ಪತನದ ಅಂಚಿನಲ್ಲಿತ್ತು. ಆಗ ಪಕ್ಷದ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಹಾಗೂ ಉಸ್ತುವಾರಿಯಾಗಿದ್ದ ಜೇಟ್ಲಿ ಅವರು ಕೋರಿಕೊಂಡ ಮೇರೆಗೆ ತಾನು ರೆಡ್ಡಿ ಸಹೋದರರೊಂದಿಗೆ ಮಾತನಾಡಿ, ಅವರ ಆಕ್ರೋಶ ಶಮನ ಮಾಡಿದ್ದೆ' ಎಂದಿದ್ದಾರೆ.

ಈ ಮಾತುಗಳು ರೆಡ್ಡಿ ಬ್ರದರ್ಸ್ಗೆ ಆಘಾತ ಉಂಟು ಮಾಡಿದೆ. ಇಷ್ಟೇ ಮಟ್ಟದ ಆಶ್ಚರ್ಯ ಬಿಜೆಪಿಯಲ್ಲಿಯೂ ಮತ್ತು ಇತರ ಪಕ್ಷಗಳಲ್ಲಿಯೂ ಆಗಿದೆ. ಕಳೆದ 12 ವರ್ಷಗಳಿಂದ ರೆಡ್ಡಿ ಬ್ರದರ್ಸ್ ಬಗ್ಗೆ ಒಂದೇ ಒಂದು ನಕಾರಾತ್ಮಕ ಮಾತೂ ಆಡದ ಸುಷ್ಮಾ ಮೇಡಂ ಇದಕ್ಕಿದಂತೆ ಈ ರೀತಿ ಹೇಳಲು ಕಾರಣವೇನು ಎಂಬುದು ಎಲ್ಲರ ಚಿಂತನೆ. ಇಲ್ಲಿ ರೆಡ್ಡಿ ಬ್ರದರ್ಸ್ ಎಂದರೆ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಮತ್ತು ಸೋಮಶೇಖರ್ ರೆಡ್ಡಿ ಮಾತ್ರ ಎಂಬುದು ಗಮನಾರ್ಹ. ಅನೇಕರು ರೆಡ್ಡಿ ಬ್ರದರ್ಸ್ ಎಂದರೆ ಶ್ರೀರಾಮುಲು ಸಹ ಸೇರುತ್ತಾರೆ ಎಂದು ಭಾವಿಸಿದ್ದಾರೆ. ಇದಕ್ಕೆ ಕಾರಣ ಇವರ ನಡುವೆ ಇರುವ ಒಡನಾಟ ಮತ್ತು ಬಾಂಧವ್ಯ.  ಸಹೋದರರಾದ  ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಸಚಿವರಾಗಿದ್ದರೆ ಇವರ ಕಿರಿಯ ಸಹೋದರ ಸೋಮಶೇಖರ ರೆಡ್ಡಿ ಪ್ರತಿಷ್ಠಿತ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷರು. ಇವರಲ್ಲಿ ಜನಾರ್ದನ ರೆಡ್ಡಿ ಮಾತ್ರ ಜನರಿಂದ ನೇರವಾಗಿ ಆಯ್ಕೆ ಆದವರಲ್ಲ. ವಿಧಾನ ಪರಿಷತ್ತಿನ ಸದಸ್ಯರಾದ ಮೊದಲ ಬಾರಿಗೆ ಸಂಪುಟ ದರ್ಜೆ ಸಚಿವರಾಗುವ ಭಾಗ್ಯ. ಅದೇ ರೀತಿ ಬಳ್ಳಾರಿ ಸಂಸದರ ಸ್ಥಾನಕ್ಕೆ ರಾಜಿನಾಮೆ ನೀಡಿ ದಾವಣಗೆರೆ ಜಿಲ್ಲೆಗೆ ಸೇರಿದ (ಜಿಲ್ಲಾ ಪುನರ್ವಿಂಗಣೆ ಬಳಿಕ) ಹರಪ್ಪನಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಎಂ.ಪಿ. ಪ್ರಕಾಶ್ ಎದುರು ಗೆಲುವು 'ಕಂಡು' ಶಾಸಕರಾಗಿ ಆಯ್ಕೆ ಆದವರು ಕರುಣಾಕರ ರೆಡ್ಡಿ. ಇವರಿಗೂ ಶಾಸಕತ್ವದ ಪ್ರಥಮ ಅವಧಿಯಲ್ಲಿಯೇ ಸಚಿವರಾಗುವ ಸೌಭಾಗ್ಯ. ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದಿಂದ ಕಾಂಗೈನಿಂದ ಸ್ಪರ್ಧಿಸಿದ್ದ ಅನಿಲ್ ಲಾಡ್ ವಿರುದ್ಧ ಒಂದೇ ಒಂದು ಸಾವಿರ ಓಟುಗಳ ಅಂತರದಿಂದ ಪ್ರಯಾಸದ ಗೆಲುವು 'ಕಂಡವರು' ಸೋಮಶೇಖರ ರೆಡ್ಡಿ. ಬಳ್ಳಾರಿಯ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಏಳರಲ್ಲಿ ಬಿಜೆಪಿ ಗೆಲುವು 'ಕಂಡಿದೆ' 

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮೂಲಕ ಎರಡನೇ ಬಾರಿಗೆ ಶಾಸಕರಾದವರು ಶ್ರೀರಾಮುಲು. ಮೊದಲನೇ ಬಾರಿ ಬಳ್ಳಾರಿ ನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದರು. ಬಳ್ಳಾರಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಶಾಸಕರಾಗಿ ಆಯ್ಕೆಯಾಗಲು ಶ್ರೀರಾಮುಲು ಜನಪ್ರಿಯತೆಯೂ ಒಂದು ಪ್ರಮುಖ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ವಿವರಗಳು ಸದ್ಯ ಅತ್ತ ಇರಲಿ. ಸುಷ್ಮಾ ಸ್ವರಾಜ್ ಅವರು  'out look' ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಇದಕ್ಕಿದಂತೆ 'ರೆಡ್ಡಿ ಬ್ರದರ್ಸ್ ರಾಜಕೀಯವಾಗಿ ಬೆಳೆಯಲು ತಾವು ಕಾರಣರಲ್ಲ' ಎಂದಿದ್ದೇಕೆ ಎಂಬುದೇ ಪ್ರಸ್ತುತದ ಪ್ರಶ್ನೆ.

1999ರಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಬಳ್ಳಾರಿ ಸಂಸದ ಸ್ಥಾನಕ್ಕಾಗಿ ಸುಷ್ಮಾ ಸ್ವರಾಜ್ ಅವರು ಸೆಣೆಸಿದಾಗಿನಿಂದ ಇವರಿಗೆ ಪರಿಚಿತರಾದವರು ರೆಡ್ಡಿ ಬ್ರದರ್ಸ್. ಸುಷ್ಮಾ ಮೇಡಂ ಸೋತರೂ ಅವರ ಸಂಪರ್ಕವನ್ನೇನೂ ರೆಡ್ಡಿ ಬ್ರದರ್ಸ್ ಕಳೆದು ಕೊಳ್ಳಲಿಲ್ಲ. ದೆಹಲಿಯ ರಾಜಕಾರಣದಲ್ಲಿ ಸುಷ್ಮಾ ಮೇಡಂ ಪ್ರಭಾವ ಅಪಾರ ಎಂಬುದನ್ನು ಅರಿತುಕೊಂಡಿದ್ದೇ ಇದಕ್ಕೆ ಕಾರಣ. 2000ನೇ ಇಸವಿಯ ನಂತರ ರೆಡ್ಡಿ ಬ್ರದರ್ಸ್ ಸುಷ್ಮಾ ಸ್ವರಾಜ್ ಅವರನ್ನು ತಾಯಿ ಎಂದೇ ಕರೆಯತೊಡಗಿದರು. ರಾಜಕಾರಣದಲ್ಲಿ ಇವರು ಬೆಳೆಯಲು 'ಗಾಡ್ ಮದರ್' ಕೂಡ ಕಾರಣ ಬಿಜೆಪಿಯ ಯಾರನ್ನು ಕೇಳಿದರು ಹೇಳುತ್ತಿದ್ದ ಮಾತು. ಈಗ ಸುಷ್ಮಾ ಅವರ ದಿಢೀರ್ ಹೇಳಿಕೆಯಿಂದ ಇವರನ್ನು ರೆಡ್ಡಿ ಬ್ರದರ್ಸ್ 'ಗಾಡ್ ಮದರ್' ಎಂದು ಕರೆಯುವುದನ್ನು ಮುಂದುವರೆಸಬೇಕೆ ಬೇಡವೇ ಎಂಬ ದ್ವಂದ್ವ ಶುರುವಾಗಿದೆ.

ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮೈಸೂರಿನ ಶಂಕರಲಿಂಗೇಗೌಡ ಅಂಥವರಿಗೆ ಸಚಿವ ಸ್ಥಾನದ ಮಣೆ ಹಾಕದ ಬಿಜೆಪಿ ಒಂದೇ ಕುಟುಂಬದ ಇಬ್ಬರಿಗೆ ಸಚಿವ ಸ್ಥಾನ ದಯಪಾಲಿಸಿದ್ದನ್ನು ಕಂಡು ಸಾಮಾನ್ಯ ಜನತೆ ಹುಬ್ಬೇರಿಸಿದ್ದರು. ನಂತರ ಇವರಿಗೆ ಸಚಿವ ಸ್ಥಾನ ದೊರೆಯಲು ಏನೇನು ಕಾರಣಗಳು ಎಂದು ಅರಿತ ಮೇಲೆಯೇ ಅವರ ಹುಬ್ಬುಗಳು ಕೆಳಗಿಳಿದವು.  ಸಚಿವರಾಗಲು ಶ್ರೀರಾಮುಲು ಅವರು ಯೋಗ್ಯರು ಎಂಬುದರ ಬಗ್ಗೆ ಬಳ್ಳಾರಿ ಜನತೆಗೆ ಯಾವ ತಕರಾರು ಇರಲಿಲ್ಲ. ಹಿಂದುಳಿದ ವರ್ಗದ ಜನಪ್ರಿಯ ನಾಯಕರೆಂಬುದು ಇದಕ್ಕೆ ಪ್ರಮುಖ ಕಾರಣ. ಮೊದಲ ಬಾರಿಗೆ ಶಾಸಕರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಅವರಿಗೆ ಸಚಿವ ಸ್ಥಾನ ದೊರೆತಿದ್ದು ಬಿಜೆಪಿಯ ಹಿರಿಯ ಮುಖಂಡರನೇಕರಿಗೆ ಅಸಮಾಧಾನದ ಸಂಗತಿಯಾಗಿತ್ತು. ಇವರು ಸಚಿವರಾಗಲು ಇರುವ ಕಾರಣಗಳಲ್ಲಿ 'ಗಾಡ್ ಮದರ್' ಆಶೀರ್ವಾದವೂ ಕಾರಣ ಎಂಬುದೇ ಅನೇಕರ ಭಾವನೆ. ಆದರೆ ಇದನ್ನು ಸುಷ್ಮಾ ಅವರ ಹೇಳಿಕೆ ನಂತರ ಯಡಿಯೂರಪ್ಪ ಕೂಡ ನಿರಾಕರಿಸಿದ್ದಾರೆ.

2008ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ವಿವಿಧ ಮೂಲಗಳಿಂದ ದೊರೆತ 'ಲಕ್ಷೀ ಕಟಾಕ್ಷ'ದಲ್ಲಿ ಬಳ್ಳಾರಿ ರೆಡ್ಡಿ ಬ್ರದರ್ಸ್ ಅವರ ಕೊಡುಗೆಯೂ ಗಣನೀಯವಾಗಿತ್ತು. ಈ ನಂತರ ನಡೆದ ಆಪರೇಷನ್ ಕಮಲ ಕಾರ್ಯಾಚರಣೆಗೂ ರೆಡ್ಡಿ ಬ್ರದರ್ಸ್ 'ಲಕ್ಷೀ ಕಟಾಕ್ಷ' ಬೀರಿದ್ದರು ಎಂಬುದನ್ನೂ ಅವರ ಪಕ್ಷದವರ್ಯಾರು ಅಲ್ಲಗಳೆಯುವುದಿಲ್ಲ.  'ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ಅನಂತ್ ಕುಮಾರ್ ಅವರಿಗೆ  ರಾಜಕೀಯ ಬದ್ಧತೆಗಳಿದ್ದವು. ಇದರಿಂದಾಗಿಯೇ ರೆಡ್ಡಿ ಬ್ರದರ್ಸ್ ಸಚಿವರಾದರು' ಎನ್ನುವುದರ ಮೂಲಕ ಸುಷ್ಮಾ ಅವರು ಸಿಡಿಸಿದ ರಾಜಕೀಯ ಬಾಂಬ್ ಅವರ ಪಕ್ಷದೊಳಗೆ ಭಾರಿ ಕಂಪನಗಳನ್ನು ಉಂಟು ಮಾಡಿದೆ. ಇದರಿಂದ ರಾಜನಾಥ್ ಸಿಂಗ್, ನಿತೀನ್ ಗಡ್ಕರಿ, ಜೇಟ್ಲಿ, ವೆಂಕಯ್ಯ ನಾಯ್ಡು ಮತ್ತು ಅನಂತ ಕುಮಾರ್ ಅದುರಿದ್ದಾರೆ. ಇನ್ನೂ ಅವರ ಕಂಪನ ನಿಂತಿಲ್ಲ. ರಾಜನಾಥ್ ಸಿಂಗ್, ನಿತೀನ್ ಗಡ್ಕರಿ 'ರೆಡ್ಡಿ ಬ್ರದರ್ಸ್ ಸಚಿವರಾಗಲು ಪಕ್ಷದ ತೀರ್ಮಾನವೇ ಕಾರಣ' ಎಂದು ಹೇಳಿಕೆ ನೀಡಿದ್ದಾರೆ. ಪಕ್ಷವೆಂದರೆ ಇಲ್ಲಿ ಈ ಹಿರಿಯ ಮುಖಂಡರು ಮಾತ್ರವೇ ಎಂಬ ಪ್ರಶ್ನೆಯೂ ಎದುರಾಗಿದೆ. ರಾಜಕೀಯವಾಗಿ ಆಗಲಿ, ಜಾತಿ ಹಿನ್ನೆಲೆಯಿಂದ ಆಗಲಿ ಪ್ರಬಲರಲ್ಲದ ರೆಡ್ಡಿ ಬ್ರದರ್ಸ್ ಸಚಿವರಾಗಬೇಕು ಎಂದು ನಿರ್ಣಯಿಸುವುದಕ್ಕೆ ಪಕ್ಷಕ್ಕಿದ್ದ ಮಾನದಂಡವೇನು ಎಂಬ ಪ್ರಶ್ನೆ ಉದ್ಭವಿಸಿದೆ. 'ಲಕ್ಷ್ಮೀ ಕಟಾಕ್ಷ'ವೇ ಪ್ರಮುಖ ಮಾನದಂಡವೇ ಎಂಬುದು ಈಗ ಜನತೆಯಲ್ಲಿ ಮೂಡಿರುವ ಪ್ರಶ್ನೆ.

ಸುಷ್ಮಾ ಸ್ವರಾಜ್ ಅವರ ಹೇಳಿಕೆಯಿಂದ ಬಿಜೆಪಿಯಲ್ಲಿ ಅತ್ಯಂತ ಸಮಾಧಾನದ ನಿಟ್ಟುಸಿರು ಬಿಟ್ಟವರೆಂದರೆ ಯಡ್ಯೂರಪ್ಪ.  2009ರಲ್ಲಿ ಎರಡು ಬಾರಿ ಪ್ರಬಲ ಭಿನ್ನಮತೀಯ ಚಟುವಟಿಕೆ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೆ ಗಂಡಾಂತರ ತಂದಿಟ್ಟವರು ರೆಡ್ಡಿ ಬ್ರದರ್ಸ್. ಎರಡನೇ ಬಾರಿ ಭಿನ್ನಮತವಂತೂ ತಾರಕಕ್ಕೇರಿತ್ತು. ಇತರ ಗಣಿ ಧಣಿಗಳ ಸಹಕಾರದಿಂದ ಬಳ್ಳಾರಿ ಜಿಲ್ಲೆಯಲ್ಲಿ ವಸತಿ ನಿರ್ಮಿಸುವುದಕ್ಕೆ ಮೇಲ್ನೋಟ್ಟಕಾದರೂ ಯತ್ನಿಸಿದ ರೆಡ್ಡಿ ಬ್ರದರ್ಸ್ ಈ ನೆಪದಿಂದ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಸಮೀಪ ಏರ್ಪಡಿದ್ದ ಸಮಾರಂಭದಲ್ಲಿ ಬಹಿರಂಗವಾಗಿ ಯಡ್ಯೂರಪ್ಪರನ್ನು ಕಟುವಾಗಿ ತೆಗಳಿದ್ದರು. ನಂತರ ತಮ್ಮ ಷರತ್ತುಗಳನ್ನು ಈಡೇರಿಸುವವರೆಗೂ ವಿರಮಿಸಲಿಲ್ಲ. ಇವರ ಕಾಟದಿಂದಾಗಿಯೇ ದೆಹಲಿಯಲ್ಲಿ ಯಡ್ಯೂರಪ್ಪ ಬಹಿರಂಗವಾಗಿ ಕಣ್ಣಿರಿಟ್ಟರು.

ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಕಂಡಿರುವ ಅಧಿಕಾರಕ್ಕೆ ಮುಳುವಾಗುವ ರೀತಿ ರೆಡ್ಡಿ ಬ್ರದರ್ಸ್ ಭಿನ್ನಮತ ಮೊಳಗಿಸಿದಾಗಲೂ ಅವರ ವಿರುದ್ಧ ಏನೊಂದು ಮಾತನಾಡದ ಸುಷ್ಮಾ ಸ್ವರಾಜ್ ಈಗ ದಿಢೀರನೇ 'ರೆಡ್ಡಿ ಬ್ರದರ್ಸ್ ರಾಜಕೀಯ ಬೆಳವಣಿಗೆಗೆ ನಾನು ಕಾರಣ ಅಲ್ಲ' ಎಂದಿದ್ದೇಕೆ ಎಂಬ ಪ್ರಶ್ನೆ ಪದೇ ಉದ್ಭವಿಸುತ್ತಲೇ ಇದೆ.

ಎಲ್. ಕೆ. ಅಢ್ವಾಣಿ ಅವರ ನಂತರ ಬಿಜೆಪಿಯಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ಸೂಚಿತವಾಗುವ ಮಟ್ಟಕ್ಕೆ ಸುಷ್ಮಾ ಸ್ವರಾಜ್ ಬೆಳೆದಿದ್ದಾರೆ. ಇವರು ಒಂದೊಮ್ಮೆ ಪ್ರಧಾನಿ ಸ್ಥಾನಕ್ಕೆ ಹತ್ತಿರವಾದರೆ ಅಡ್ಡಿಯಾಗಬಲ್ಲ ಶಕ್ತಿಗಳು ಪಕ್ಷದಲ್ಲಿವೆ. ಇಂಥವರು ಯಾರು ಎಂಬುದನ್ನು ಸುಷ್ಮಾ ಅವರು ಸೂಚ್ಯವಾಗಿ ಹೇಳಿದ್ದಾರೆ. ಜೊತೆಗೆ ಆರ್. ಎಸ್. ಎಸ್. ಗೆ ತಾನು ಕ್ಲೀನ್ ಇಮೇಜ್ ಹೊಂದಿರುವ ರಾಜಕೀಯ ನಾಯಕಿ ಎಂದು ಬಿಂಬಿಸಿಕೊಳ್ಳಬೇಕಾದ ಅನಿರ್ವಾಯತೆಯೂ ಸುಷ್ಮಾ ಅವರಿಗಿದೆ. ಇವೆಲ್ಲದರ ಜೊತೆಗೆ ರೆಡ್ಡಿ ಬ್ರದರ್ಸ್ಗಳನ್ನು ದೂರವಿಡಲೂ ಬೇಕಾಗಿದೆ. ಇದರಿಂದಾಗಿಯೇ ಅವರು ಒಂದೇ ಬಾಣದ ಮೂಲಕ ಹಲವು ಗುರಿ ಸಾಧಿಸಲು ಪ್ರಯತ್ನಿಸಿದ್ದಾರೆ.


ಸುಷ್ಮಾ ಅವರ ಹೇಳಿಕೆ ರೆಡ್ಡಿ ಬ್ರದರ್ಸ್ ರಾಜಕೀಯ ಜೀವನದ ಪತನ ಆರಂಭಗೊಂಡಿದೆ ಎಂಬುದನ್ನು ಸೂಚಿಸಿದೆ. ಬಳ್ಳಾರಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಸತತವಾಗಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಕಾರಣವಾದ ಕಂಪನಿಗಳು ಯಾವುದು ಎಂದು ಸುಪ್ರೀಮ್ ಕೋರ್ಟಿನ ಉನ್ನತಾಧಿಕಾರ ಸಮಿತಿ ನೀಡಿರುವ ವರದಿಯಲ್ಲಿ ರೆಡ್ಡಿ ಬ್ರದರ್ಸ್ಗೆ ಸೇರಿದ ಮೂರು ಕಂಪನಿಗಳು ಪ್ರಮುಖವಾಗಿ ಉಲ್ಲೇಖಿತವಾಗಿವೆ. ಸರಮಾಲೆಯೋಪಾದಿಯಲ್ಲಿ ಗಣಿ ಹಗರಣಗಳು ರೆಡ್ಡಿ ಬ್ರದರ್ಸ್ ಸುತ್ತ ಸುತ್ತಿಕೊಂಡಿವೆ. ಇದು ಬಿಗಿಯಾಗುತ್ತಿರುವುದನ್ನೂ ಸುಷ್ಮಾ ಸ್ವರಾಜ್ ಅವರ ಹೇಳಿಕೆ ಸಾಂಕೇತಿಸುತ್ತದೆ. ಸ್ವತಃ ಸುಷ್ಮಾ ಅವರ ರಾಜಕೀಯ ತಳಮಳಗಳು ಮತ್ತು ಅವರ ಮುಂದಿನ ಹಾದಿ ಕಠಿಣ ಎಂಬುದನ್ನೂ ಕೂಡ.
    

1 comment:

 1. ಮಾನ್ಯರೆ, ಇಲ್ಲಿ 1 ಅಂಶ ಸ್ಪಷ್ಟವಾಗಬೇಕಿದೆ. ಸುಷ್ಮಾ ಸ್ವರಾಜ್ (ನಾನು ಕಂಡಂತೆ) ಒಬ್ಬ ಕ್ಲೀನ್ ಇಮೇಜ್ ಮತ್ತು ಪಾರದರ್ಶಕತೆ ಇರುವ ಮಹಿಳಾ ರಾಜಕಾರಣಿ. ಲಕ್ಷಕ್ಕೊಬ್ಬ ಭಕ್ತ;ಕೋಟಿಗೊಬ್ಬ ಶರಣ! ಻ನ್ನೋಹಾಗೆ ಸುಷ್ಮಾ ಸ್ವರಾಜ್ ರಾಜಕೀಯದಲ್ಲಿ ಕಂಡುಬರುವ ಻ಪರೂಪದ ವ್ಯಕ್ತಿತ್ವ. ಻ವರು ಸಹಜ ಮತ್ತು ಸಾಂದರ್ಭಿಕವಾಗಿ ನೀಡಿದ ಸ್ಪಷ್ಟನೆಗೆ ಕಪೋಲಕಲ್ಪಿತ ವಿಷ್ಲೇಶಣೆಗಳು ನಡೆಯುತ್ತಿವೆ ಅನ್ನೋದನ್ನು ನಾನು ನೋಡುತ್ತಿದ್ದೇನೆ. ಸಮಾಧಾನದ ಸಂಗತಿ ಎಂದರೆ ಇಲ್ಲಿ ಅಂತಹ ಻ತಿರೇಕ ಇಲ್ಲದ ನೈಜ ವರದಿ ಕೊಂಚ ಮನಸ್ಸಿಗೆ ಮುದ ನೀಡಿತು. ಕೂಲ್ ವರದಿಗೆ ಅಭಿನಂದನೆಗಳು

  ReplyDelete