• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ರಾಜ್ಯಪಾಲರಿಗೆ ಪತ್ರಿಕೆಗಳಿಂದ ಮುಖಭಂಗ...! ?

ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸದಿರುವ ತಿರ್ಮಾನವನ್ನು ಕೇಂದ್ರ ಸಚಿವ ಸಂಪುಟದ ರಾಜಕೀಯ ವ್ಯವಹಾರಗಳ ಉಪ ಸಮಿತಿ ಮೇ 22, 2011ರ ರಾತ್ರಿ 10.15ರ ಸುಮಾರಿಗೆ ಪ್ರಕಟಿಸಿತು. ಇದು ಮಾರನೇ ದಿನ ರಾಜ್ಯದ ಕನ್ನಡ ದಿನಪತ್ರಿಕೆಗಳಲ್ಲಿ ಸಹಜವಾಗಿ ಆದ್ಯತೆಯ ಸುದ್ದಿಯಾಗಿ ಪ್ರಕಟವಾಗಿದೆ. ಈ ಬೆಳವಣಿಗೆಯನ್ನು 'ರಾಜ್ಯಪಾಲರಿಗೆ ಎರಡನೇ ಬಾರಿಗೆ ಮುಖಭಂಗ' ಎಂದೇ ಎಲ್ಲ ಕನ್ನಡ ಪ್ರಮುಖ ದಿನಪತ್ರಿಕೆಗಳು ಹೇಳಿವೆ. ಮೇ 23, 2011ರ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡ್ಯೂರಪ್ಪ ಮಾಡಿದ ಆಗ್ರಹ ನೋಡಿ....
 'ರಾಜ್ಯಪಾಲರು ಎರಡನೇ ಸಲ ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡಿದ್ದರು. ಆದರೆ ಎರಡನೇ ಸಲವೂ ಕೇಂದ್ರ ಸರಕಾರ ಅವರ ವರದಿ ತಿರಸ್ಕರಿಸಿದೆ. ಇದರಿಂದ ರಾಜ್ಯಪಾಲ ಹಂಸರಾಜ್ ಭಾರಧ್ವಜ್ ಅವರಿಗೆ ಮುಖಭಂಗವಾಗಿದೆ. ಆದ್ದರಿಂದ ಅವರು ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ' ಮೇ 23ರಂದು ಬೆಳಿಗ್ಗೆ ಪ್ರಕಟಗೊಂಡ ಈ ಬೆಳವಣಿಗೆಯ ಬಗ್ಗೆ ಕನ್ನಡ ದಿನಪತ್ರಿಕೆಗಳಲ್ಲಿರುವ ವರದಿಗಳಲ್ಲಿರುವ ಧ್ವನಿಗೂ, ಸಿಎಂ ಯಡ್ಯೂರಪ್ಪ ಅವರ ಧ್ವನಿಗೂ ವ್ಯತ್ಯಾಸವಿದೆಯೇ....?
ಅಷ್ಟಕ್ಕೂ ಮುಖಭಂಗವಾಗುವಂಥ ಕೆಲಸವನ್ನು ರಾಜ್ಯಪಾಲ ಹಂಸರಾಜ್ ಮಾಡಿರುವುದಾದರೂ ಏನು...? ಇದು ಓರ್ವ ಪತ್ರಕರ್ತನಾಗಿ ನನ್ನನ್ನು ಕಾಡಿದ ಪ್ರಶ್ನೆ. ರಾಷ್ಟ್ರಪತಿ ಅವರು ಅಥವಾ ಕೇಂದ್ರ ಸಚಿವ ಸಂಪುಟ ರಾಜಕೀಯ ವ್ಯವಹಾರಗಳ ಉಪ ಸಮಿತಿ ಸದಸ್ಯರು  ರಾಜ್ಯಪಾಲರಿಗೆ ಛೀಮಾರಿ ಹಾಕಿದ್ದಾರೆಯೇ....? ರಾಜ್ಯಪಾಲರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆಯೇ...? ಈ ಪ್ರಶ್ನೆಗಳಿಗೆ ಇಲ್ಲ...ಇಲ್ಲ... ಎನ್ನುವ ಉತ್ತರವೇ ದೊರೆಯುತ್ತದೆ. ಅಕ್ಟೋಬರ್ 11, 2010ರಂದು ವಿಧಾನ ಸಭೆಯಲ್ಲಿ ಜರುಗಿದ ಘಟನಾವಳಿಗಳ ನಂತರ ಮತ್ತು ಮೇ 13, 2011ರಂದು ಸುಪ್ರೀಮ್ ಕೋರ್ಟ್ ತೀಪಿನ ನಂತರ ಉದ್ಭವಿಸಿದ ಕಾನೂನಾತ್ಮಕ ಸೂಕ್ಷ್ಮಗಳ ಸಂದರ್ಭದಲ್ಲಿ ರಾಜ್ಯಪಾಲರು ಇನ್ಯಾವ ರೀತಿ ನಡೆದುಕೊಳ್ಳಬೇಕಿತ್ತು...? ಏನೂ ಆಗಿಲ್ಲ ಎಂದು ಆಗುತ್ತಿರುವ ವಿದ್ಯಮಾನಗಳೆಲ್ಲವನ್ನೂ ನೋಡಿಕೊಂಡು ತೆಪ್ಪಗೆ ಕೂರಬೇಕಿತ್ತೆ. ಆ ರೀತಿ ಕೂರುವುದಾದರೆ ರಾಜ್ಯಪಾಲರ ಹುದ್ದೆ ಅಗತ್ಯವಾದರೂ ಏನು...?
   ರಾಜ್ಯದಲ್ಲಿ ಘಟಿಸುವ ಪ್ರಮುಖ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರಕಾರದ ಗೃಹ ಸಚಿವಾಲಯಕ್ಕೆ ಮತ್ತು ರಾಷ್ಟ್ರಪತಿ ಅವರಿಗೆ ವರದಿ ಕಳುಯಿಸುವುದು ರಾಜ್ಯಪಾಲರ ಕರ್ತವ್ಯ. ಅತಿ ಪ್ರಮುಖ ಮತ್ತು ಸಂವಿಧಾನಿಕ ಆಶಯಗಳಿಗೆ ವಿರುದ್ಧವಾದ ಬೆಳವಣಿಗೆಗಳಾದರೆ ವರದಿ ಕಳುಯಿಸುವುದರ ಜೊತೆಗೆ ಯಾವ ಕ್ರಮ ತೆಗೆದುಕೊಳ್ಳಬಹುದೆಂಬುದನ್ನು ಕೂಡ ಶಿಫಾರಸು ಮಾಡುತ್ತಾರೆ. ಇದು ಕೂಡ ಸರಕಾರದ ಒಂದು ವ್ಯವಸ್ಥೆ. ರಾಜ್ಯಪಾಲರು ಮಾಡುವ ಶಿಫಾರಸುಗಳನ್ನು ಕೇಂದ್ರ ಸರಕಾರ ಮತ್ತು ರಾಷ್ಟ್ರಪತಿ ಒಪ್ಪಲೇಬೇಕೆಂಬ ನಿಯಮವಿಲ್ಲ. ರಾಜಕೀಯ ಪರಿಸ್ಥಿತಿಗನುಗುಣವಾಗಿ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಕಳುಯಿಸಿದ ಶಿಫಾರಸನ್ನು ಒಪ್ಪಲಿಲ್ಲವೆಂದರೆ ಅದು ರಾಜ್ಯಪಾಲರಿಗಾದ ಮುಖಭಂಗವೆಂದು ಅರ್ಥೈಸುವುದು ಶುದ್ಧ ಮೂರ್ಖತನ. ಕೇಂದ್ರ ಸರಕಾರದ ಕೇಡರ್ ವ್ಯವಸ್ಥೆಗನುಗುಣವಾಗಿ ಇಂಥ ವರದಿ, ಶಿಫಾರಸುಗಳ ಪ್ರಕ್ರಿಯೆ ನಡಿಯುತ್ತಲೇ ಇರುತ್ತದೆ.

ಈ ಪ್ರಕರಣವನ್ನು ತುಂಬ ಸರಳವಾಗಿ ವಿವೇಚಿಸುವುದಕ್ಕೆ ಸಾಮಾನ್ಯ ಉದಾಹರಣೆ ತೆಗೆದುಕೊಳ್ಳೋಣ. ಗಂಭೀರವಾದ ಒಂದು ಸಿವಿಲ್ ಪ್ರಕರಣದ ವಿವಾದದ ಬಗ್ಗೆ ಕಂದಾಯಾಧಿಕಾರಿ, ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸುವುದರೊಂದಿಗೆ ಯಾವ ಕ್ರಮ ತೆಗೆದುಕೊಳ್ಳಬಹದೆಂದು ಶಿಫಾರಸ್ಸು ಮಾಡಿರುತ್ತಾರೆ. ಇದನ್ನು ರಾಜ್ಯ ಸರಕಾರ ಒಪ್ಪಲಿಲ್ಲವೆಂದರೆ ಅದು ಕಂದಾಯ ಅಧಿಕಾರಿಗಾದ ಮುಖಭಂಗವೆಂದು ಅರ್ಥೈಸಲು ಸಾಧ್ಯವೇ....

ಕೇಂದ್ರದಲ್ಲಿ ಕಾಂಗ್ರೇಸ್ ನೇತೃತ್ವದ ಸರಕಾರವಿದೆ. ರಾಜ್ಯಪಾಲರು ಕೂಡ ಓರ್ವ ಕಾಂಗ್ರೆಸ್ಸಿಗ. 'ತಾನು ಕಾಂಗ್ರೆಸ್ಸಿಗ  ಎನ್ನಲು ಹೆಮ್ಮೆ ಪಡುತ್ತೇನೆ' ಎಂದಿದ್ದಾರೆ. ಇದೆಲ್ಲ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕುಮ್ಮಕ್ಕಿನ ಫಲ. ಪೂರ್ವಾಗ್ರಹದಿಂದಲೇ ಇಂಥ ಶಿಫಾರಸ್ಸುಗಳನ್ನು ಮಾಡಿದ್ದಾರೆ ಎಂಬೆಲ್ಲ ವಾದಗಳು ಬರುತ್ತವೆ. ಹಾಗಿದ್ದರೆ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿದ ಇಂಥ ಬೆಳವಣಿಗೆಗಳ ಸಂದರ್ಭದಲ್ಲಿ ರಾಜ್ಯಪಾಲರು ಇಂಥ ಶಿಫಾರಸ್ಸು ಮಾಡದೇ ಇನ್ನೆಂಥ ಶಿಫಾರಸ್ಸು ಮಾಡಲು ಸಾಧ್ಯವಿತ್ತು. 'ಪ್ರಜಾವಾಣಿ' ಪತ್ರಿಕೆಯ ಮೇ 24, 2011ರ ಸಂಪಾದಕೀಯ ನೋಡಿ.

'ರಾಜಕೀಯ ಬಿಕ್ಕಟ್ಟು ನಿವಾರಣೆಯಾದರೂ ಈ ಸಂದರ್ಭದಲ್ಲಿ ಸಾಂವಿಧಾನಿಕವಾಗಿ ಎದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಕಳೆದ ಅಕ್ಟೋಬರ್ 10ರಂದು ಯಡ್ಯೂರಪ್ಪ ಸರಕಾರ ಬಹುಮತ ಗಳಿಸುವುದಕ್ಕಾಗಿ ಪಕ್ಷೇತರರು ಮತ್ತು ಬಿಜೆಪಿ ಬಂಡುಕೋರ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದನ್ನು ಅಸಿಂಧು ಎಂದು ಸುಪ್ರೀಮ್ ಕೋರ್ಟ್ ನೀಡಿದ ತೀರ್ಪು, ಆಗಿನಿಂದ ಮುಂದುವರೆದುಕೊಂಡು ಬಂದ ರಾಜ್ಯ ಸರಕಾರದ ಸಾಂವಿಧಾನಿಕ ಸ್ಥಿತಿ ಬಗ್ಗೆ ಏನನ್ನೂ ಹೇಳುವುದಿಲ್ಲ. ಬಹುಮತ ಸಾಬೀತು ಪಡಿಸುವುದಕ್ಕೆ ಸಾಂವಿಧಾನಿಕ ಸ್ಥಾನಗಳನ್ನು ದುರುಪಯೋಗ ಮಾಡಿದ್ದರ ಬಗ್ಗೆ ಯಾವ ಕ್ರಮವೆಂಬುದನ್ನೂ ಖಚಿತಪಡಿಸಿಲ್ಲ. ಈ ಕುರಿತಾಗಿ ಸುಪ್ರೀಮ್ ಕೋರ್ಟಿನಿಂದ ಸ್ಪಷ್ಟನೆ ಕೇಳುವ ಸಾಧ್ಯತೆಯನ್ನು ರಾಜಕೀಯ ಪಕ್ಷಗಳು ಪರಿಶೀಲಿಸಬೇಕು. ಸಂಸದೀಯ ಪ್ರಜಾಸತ್ತೆಯಲ್ಲಿ ಜನ ಪ್ರತಿನಿಧಿಗಳ ಸಮಯ ಸಾಧಕ ವರ್ತನೆ ಜನಾದೇಶವನ್ನು ನಿಷ್ಕ್ರೀಯಗೊಳಿಸುತ್ತಿರುವುದನ್ನು ತಡೆಯಲು ರೂಪಿಸಿದ್ದು ಪಕ್ಷಾಂತರ ನಿಷೇಧ ಕಾನೂನು. ಅದನ್ನು ನಿಷ್ಕ್ರೀಯಗೊಳಿಸುವಂತೆ ಆರಂಭವಾದದ್ದು 'ಆಪರೇಷನ್ ಕಮಲ'ದಂಥ ಅನೈತಿಕ ತಂತ್ರಗಾರಿಕೆ. ಕರ್ನಾಟಕದಲ್ಲಿ ತಲೆದೋರಿದ ರಾಜಕೀಯ ಬಿಕ್ಕಟ್ಟಿಗೆ ಇದೇ ಮೂಲ. ಪ್ರತಿಪಕ್ಷಗಳ ಸದಸ್ಯರನ್ನು ಆಮಿಷ ಒಡ್ಡಿ ಸೆಳೆದುಕೊಳ್ಳುವ ಅನೈತಿಕ ತಂತ್ರವನ್ನು ಕಾನೂನು ನಿಗ್ರಹಿಸದಿದ್ದರೆ ಪ್ರಜಾಸತ್ತೆಗೆ ಅಪಾಯ ಖಚಿತ. ಇದನ್ನು ಎಲ್ಲ ರಾಜಕೀಯ ಪಕ್ಷಗಳೂ ಅರ್ಥ ಮಾಡಿಕೊಳ್ಳಬೇಕು'

ಇಂಥ ಜಿಜ್ಞಾಸೆ ಮೂಡಿದ ದೆಶೆಯಿಂದಲೇ  ರಾಜ್ಯಪಾಲರು 356(1)ನೇ ವಿಧಿಯನ್ನು ಜಾರಿಗೊಳಿಸುವಂತೆ ಶಿಫಾರಸ್ಸು ಮಾಡಿರುವುದು ಎಂಬುದು ಸಾಧಾರಣ ವಿವೇಚನೆಯಿಂದಲೇ ತಿಳಿದು ಬರುತ್ತೆ. ಆದರೂ ನಮ್ಮ ಪತ್ರಿಕೆಗಳಿಗೆ 'ರಾಜ್ಯಪಾಲರಿಗೆ ಎರಡನೇ ಬಾರಿಗೆ ಮುಖಭಂಗ' ಎಂದು ಬರೆಯುವ ಅವಸರ.

ಕೇಂದ್ರ ಸರಕಾರದ ಸದ್ಯದ ನಿಲುವಿನಿಂದ ಈ ರಾಜಕೀಯ ಬೆಳವಣಿಗೆ ಗತಿ ನಿಂತು ಹೋಗುವುದಿಲ್ಲ. ಸುಪ್ರೀಮ್ ಕೋರ್ಟ್ ಅಂಗಳದಲ್ಲಿ 'ರಾಜ್ಯದಲ್ಲಿ ತಲೆದೋರಿರುವ ಸಾಂವಿಧಾನಿಕ ಬಿಕ್ಕಟ್ಟಿಗೆ ನೀವೇ ಪರಿಹಾರ ಸೂಚಿಸಿ' ಎಂದು ಪ್ರತಿಪಕ್ಷಗಳು ಮೊರೆ ಹೋಗಬಹುದು
                                           
ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಕೇಂದ್ರ ಸರಕಾರ ಒಪ್ಪದೇ ಹೋದರೂ ಮತ್ತೊಂದು ಗಂಭೀರ ಕ್ರಮಕ್ಕೆ ಮುಂದಾಗಿದೆ. ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಲವು ನಿರ್ದಿಷ್ಟ ಸೂಚನೆ-ಮಾರ್ಗದರ್ಶನ ನೀಡಿದೆ. ಸಾಮಾನ್ಯವಾಗಿ ಅಪರೂಪದ ಪ್ರಕರಣಗಳಲ್ಲಿ ಕೇಂದ್ರದ ಗೃಹ ಸಚಿವಾಲಯ ಆಯಾ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಈ ಸೂಚನೆ-ಮಾರ್ಗದರ್ಶನ ರವಾನಿಸುತ್ತದೆ. ಆದರೆ ಅತ್ಯಂತ ಅಪರೂಪದ ಈ ಸಂದರ್ಭದಲ್ಲಿ ನೇರ ಮುಖ್ಯಮಂತ್ರಿ ಯಡ್ಯೂರಪ್ಪ ಅವರಿಗೆ ಈ ಪತ್ರ ಕಳುಯಿಸಿಕೊಡಲಾಗಿದೆ. ಈ ನಿರ್ದೇಶನ ಸಂವಿಧಾನದ ಪರಿಚ್ಛೇದ 355ರ ಪ್ರಕಾರ ಈ ನಿರ್ದೇಶನಗಳನ್ನು ನೀಡಲಾಗಿದೆ.  ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಭಾವಿಸಿದ ಸಂದರ್ಭದಲ್ಲಿ ಮಾತ್ರ ಈ ಪರಿಚ್ಛೇದದಡಿ ಸೂಚನೆ ನೀಡಲಾಗುತ್ತದೆ. ಇದು ಕೂಡ ಒಂದು ರೀತಿಯ ಎಚ್ಚರಿಕೆ. ಈ ನಿರ್ದೇಶನಗಳನ್ನು ನೀಡಿರುವುದು ರಾಜ್ಯಪಾಲರು ಮೇ 15, 2011ರಂದು ಕಳುಯಿಸಿದ ವರದಿ ಆಧಾರದ ಮೇಲೆ. ಹೀಗಿರುವಾಗ ರಾಜ್ಯಪಾಲರಿಗೆ ಮುಖಭಂಗ ಆಗುವ ಪ್ರಶ್ನೆಯಾದರೂ ಎಲ್ಲಿ.....?

No comments:

Post a Comment