• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ರಾಜ್ಯಪಾಲರನ್ನೇಕೆ ಅವಮಾನ ಮಾಡುತ್ತೀರಿ...?

ರಾಜ್ಯಪಾಲ ಹಂಸರಾಜ್ ಭಾರಧ್ವಜ್ ಅವರು ರಾಜ್ಯದಲ್ಲಿ ಸಂವಿಧಾನದ 356(1)ನೇ ವಿಧಿ ಜಾರಿಗೊಳಿಸುವಂತೆ  ಮೇ 15, 2011ರಂದು ಮಾಡಿದ್ದ ಶಿಫಾರಸ್ಸನ್ನು ಅಂಗೀಕರಿಸಲು ಕೇಂದ್ರ ಸರಕಾರ ವಿಫಲವಾಗಿದೆ. ಈ ಶಿಫಾರಸ್ಸನ್ನು ಜಾರಿಗೊಳಿಸಿದರೂ ರಾಜ್ಯಸಭೆಯಲಿ ಬಹುಮತವಿಲ್ಲದ ಕಾರಣ ಹಿನ್ನಡೆ ಉಂಟಾಗಬಹುದೆಂಬ ಒಂದೇ ಚಿಂತನೆ ಇದಕ್ಕೆ ಕಾರಣ. ಆದ್ದರಿಂದ 'ರಾಜ್ಯಪಾಲರ ಶಿಫಾರಸ್ಸನ್ನು ಕೇಂದ್ರ ತಿರಸ್ಕರಿಸಿದೆ' ಎಂದು ಹೇಳುವುದು ಸಮಂಜಸವಲ್ಲ. 'ರಾಜ್ಯಪಾಲರಿಗೆ ಸೋಲುಂಟಾಗಿದೆ; ಯಡ್ಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಗೆಲುವು' ಎಂದು ಅರ್ಥೈಸುವುದು ಕೂಡ ಬಾಲಿಶ. ಆದರೆ ಇಂಥ ಬಾಲಿಶತನ ಬಿಜೆಪಿಯಿಂದ ಬುದ್ದಿಪೂರ್ವಕವಾಗಿ ಪ್ರದರ್ಶಿಸಲ್ಪಡುತ್ತಿದೆ. ಆದರೆ ಇದು ಕರ್ನಾಟಕದ ರಾಜಕೀಯ ಪರಂಪರೆಗೆ ತಕ್ಕುದಲ್ಲ ಎನ್ನುವ ಸಂಗತಿಯನ್ನು ಬಿಜೆಪಿ ಮರೆತಿದೆ. ಇದು ದುರದೃಷ್ಟಕರ.


16 ಮಂದಿ ಶಾಸಕರ ಅನರ್ಹತೆಯನು ರದ್ದುಗೊಳಿಸಿ ಮೇ 13 ರಂದು ಸುಪ್ರೀಮ್ ಕೋರ್ಟ್ ತೀರ್ಪು ನೀಡಿದ ನಂತರವೂ ಬಿಜೆಪಿ ಸರಕಾರಕ್ಕೆ ಬಹುಮತವಿಲ್ಲ ಎಂಬ ನಿರ್ಣಯಕ್ಕೆ ರಾಜ್ಯಪಾಲರು ಬರಲಿಲ್ಲ. ಆದರೂ ಅವರು  ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಮಾಡಿದ ಶಿಫಾರಸ್ಸಿಗೆ ಕಾರಣ 'ರಾಜ್ಯದಲಿ ಸಂವಿಧಾನಿಕ ವ್ಯವಸ್ಥೆ ಕುಸಿದಿದೆ' ಎನ್ನುವುದು. ಸುಪ್ರೀಮ್ ಕೋರ್ಟಿನ ತೀರ್ಪು ಆಧರಿಸಿಯೇ ಅವರು ಈ ತಿರ್ಮಾನಕ್ಕೆ ಬಂದರು. ಆದರೆ ಬಿಜೆಪಿ, ಬೊಮ್ಮಾಯಿ ಪ್ರಕರಣ ಉಲ್ಲೇಖಿಸುತ್ತಾ ಕರ್ನಾಟಕದ ಜನತೆಯನ್ನು ದಾರಿ ತಪ್ಪಿಸುವ ಕೆಲಸ ಮಾಡಿತು. ರಾಜ್ಯಪಾಲರು, ರಾಷ್ಟ್ರಪತಿ ಅವರಿಗೆ ಕಳುಯಿಸಿದ ವರದಿ ಸಾರಾಂಶ ಏನು ಎಂದು ಅರಿಯುವ ಮೊದಲೇ ಪ್ರತಿಭಟನೆ ಹಾದಿಗಿಳಿಯಿತು. ಬಿಜೆಪಿಯ ರಾಜ್ಯನಾಯಕರು, ರಾಷ್ಟ್ರನಾಯಕರು ರಾಜ್ಯಪಾಲ ಹಂಸರಾಜ್ ಭಾರಧ್ವಜ್ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದರು. ಬಿಜೆಪಿಯ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಇವರೆಲ್ಲರಿಗಿಂತ ಅನೇಕ ಹೆಜ್ಜೆ ಮುಂದೆ. ರಾಜ್ಯ ಸರಕಾರದ ಮುಖ್ಯಸ್ಥರಾದ ಮತ್ತು ಸಂವಿಧಾನದ ನೇರ ಪ್ರತಿನಿಧಿಯಾದ ರಾಜ್ಯಪಾಲರ ವಿರುದ್ದ ಸರಕಾರ ಮತ್ತು ಆಳುವ ಪಕ್ಷವೇ ಬೀದಿಗಿಳಿಯಬಾರದು ಎನ್ನುವ ವಿವೇಚನೆಯ್ನೂ ಮರೆತರು. 

'ರಾಜ್ಯಪಾಲ ಹಟಾವೋ, ಕರ್ನಾಟಕ ಬಚಾವೋ' ಎಂಬ ಘೋಷಣೆಯೊಂದಿಗೆ ರಾಜ್ಯದ್ಯಂತ ಪ್ರತಿಭಟಿಸತೊಡಗಿದರು. ಅಷ್ಟಕ್ಕೂ ಈ ಘೋಷಣೆ ಕೂಗಲು ಹಂಸರಾಜ್ ಮಾಡಿರುವ ತಪ್ಪಾದರೂ ಏನು...? ಕ್ರಿಯಾಶೀಲ ರಾಜ್ಯಪಾಲರಾಗಿ ಸರಕಾರದ ತಪ್ಪು ಹೆಜ್ಜೆಗಳನ್ನು  ಟೀಕಿಸಿದ್ದು, ಜಾತ್ಯತೀತ ಧೋರಣೆಗೆ ಧಕ್ಕೆ ಉಂಟು ಮಾಡುವ ನಿರ್ಧಾರಗಳಿಗೆ ಅಂಗೀಕಾರ ಹಾಕದೇ ಇರುವುದು ತಪ್ಪೇ...? ಬಿಜೆಪಿಯ ಇಂಥ ಮನಸ್ಥಿತಿ ಡಿಕ್ಟೇಟರ್ ಮನೋಭಾವದ ವ್ಯಕ್ತತೆ. ಸಂವಿಧಾನದ ಆಶಯಗಳಿಗೆ ತಾವು ಬದ್ಧರಲ್ಲ ಎನುವುದನ್ನು ತೋರ್ಪಡಿಸುವ ಮನೋಭಾವ.

'ಸರಕಾರ ಬಹುಮತ ಕಳೆದುಕೊಂಡಿದೆ ಎಂಬ ಸಂದರ್ಭದಲ್ಲಿ ಮಾತ್ರ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು ಹೇಳುವುದಕ್ಕಷ್ಟೇ ಸಂವಿಧಾನದ 356(1)ನೇ ಪರಿಚ್ಛೇದ ಸೀಮಿತಗೊಂಡಿಲ್ಲ. ಸಂವಿಧಾನಿಕ ವ್ಯವಸ್ಥೆ ಕುಸಿದು ಬಿದ್ದರೆ ಅಥವಾ ಸಂವಿಧಾನಿಕ ನಡವಳಿಕೆಗಳಿಗೆ ಧಕ್ಕೆಯಾದರೂ ರಾಜ್ಯಪಾಲರು 356(1)ನೇ ಅನುಚ್ಛೇದದ ಅನ್ವಯ ಮಧ್ಯ ಪ್ರವೇಶಿಸಬಹುದು' ಎಂಬುದನ್ನು ರಾಜ್ಯಪಾಲ ಹಂಸರಾಜ್ ಸ್ಪಷ್ಟಪಡಿಸಿದರು. ಈ ನಂತರವೂ ಬಿಜೆಪಿ ಅಪಪ್ರಚಾರ ಮುಂದುವರೆಸಿತು ಎನ್ನುವುದು ಕಳವಳಕಾರಿ.

ಅಕ್ಟೋಬರ್ 11ರಂದು ಕರ್ನಾಟಕದ ವಿಧಾನಸಭೆಯಲಿ ನಡೆದ ವಿದ್ಯಮಾನಗಳೇನು ಎನ್ನುವುದನ್ನು ರಾಜ್ಯದ ಜನತೆ ಟಿವಿ ಮಾಧ್ಯಮಗಳ ಮುಖಾಂತರ ವೀಕ್ಷಿಸಿದೆ. ಅತ್ಯಂತ ಪ್ರಬುದ್ಧ ಸಂಸದೀಯ ನಡವಳಿಗೆ ಹೆಸರಾದ ರಾಜ್ಯ ವಿಧಾನಸಭೆ ಇತಿಹಾಸಕ್ಕೆ ಕುಂದುಂಟು ಮಾಡಿದ ಘಟನೆಗಳು ನಡೆದವು. ಈ ಘಟನೆಗಳ ಆಧಾರದ ಮೇಲೆ ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಮಾಡಿದ ಶಿಫಾರಸ್ಸನ್ನು ಆಗಲೂ ಕೇಂದ್ರ ಅಂಗೀಕರಿಸಲಿಲ್ಲ. ಇದರ ಬದಲು ಎರಡನೇ ಬಾರಿ ಯಡ್ಯೂರಪ್ಪ ಸರಕಾರಕ್ಕೆ ವಿಶ್ವಾಸ ಮತ ಕೋರುವ ಅವಕಾಶ ನೀಡುವಂಥ ಒತ್ತಡಕ್ಕೆ ರಾಜ್ಯಪಾಲರು ಒಳಗಾದರು. 16 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ತಿರ್ಮಾನವನ್ನು ಹೈಕೋರ್ಟ್ ಎತ್ತಿಹಿಡಿಯಿತಾದರೂ ರಾಷ್ಟ್ರದ ಸರ್ವೋಚ್ಚ ನ್ಯಾಯಲಯ, ಸ್ಪೀಕರ್ ಆದೇಶ ರದ್ದುಗೊಳಿಸಿದೆ. ಇದಕ್ಕೆ ಬಿಜೆಪಿ ತಲೆಬಾಗಿ ಸ್ಪೀಕರ್ ಬೋಪಯ್ಯ ಮತ್ತು ಸಿಎಂ. ಯಡ್ಯೂರಪ್ಪ ರಾಜಿನಾಮೆ ಪಡೆಯಬೇಕಿತ್ತು. ಆದರೆ ಇದಾಗಲಿಲ್ಲ. ಶಿಸ್ತಿನ ಪಕ್ಷವೆಂದೇ ಹೆಸರು ಗಳಿಸಿದ್ದ ಬಿಜೆಪಿಯಿಂದ ಇಂಥ ನಡಾವಳಿಗಳನ್ನು ರಾಜ್ಯದ ಪ್ರಬುದ್ಧ ಮತದಾರರು ನಿರೀಕ್ಷೆ ಮಾಡಿರಲಿಲ್ಲ.

ಅಷ್ಟಕ್ಕೂ ಬಿಜೆಪಿ ಮಾತ್ರವಲ್ಲದೇ ಕೇಂದ್ರ ಸರಕಾರ ಕೂಡ ರಾಜ್ಯಪಾಲರಿಗೆ ಅವಮಾನ ಮಾಡಿದೆ. ಇಂಥ ಶಿಫಾರಸ್ಸುಗಳನ್ನು ಅಂಗೀಕರಿಸುವ ಪರಿಸ್ಥಿತಿ ಇಲ್ಲದಿದ್ದ ಮೇಲೆ ಇಂಥ ಶಿಫಾರಸ್ಸನ್ನು ಕಳುಯಿಸಲೇಬೇಡಿ ಎಂಬ ಸೂಚನೆ ನೀಡಿಬಿಟ್ಟಿದ್ದರೆ ಇಷ್ಟೆಲ್ಲ ಪ್ರಹಸನಗಳಿಗೆ ಆಸ್ಪದ ಇರುತ್ತಿರಲಿಲ್ಲ. ಆದರೆ ಇಷ್ಟೆಲ್ಲ ಘಟನೆಗಳ ಸರಮಾಲೆ ಮುಂಬರುವ ದಿನಗಳು ಹೇಗಿರಬಹುದು ಎಂಬ ಚಿತ್ರಣವನ್ನು ಸ್ಪಷ್ಟವಾಗಿ ನೀಡುತ್ತಿವೆ.

No comments:

Post a Comment