• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಮೀಡಿಯಾ ಮಿರ್ಚಿ; ಗುಮಾಸ್ತಗಿರಿ ಪತ್ರಿಕಾ ರಂಗಕ್ಕೆ ಚುರುಕು ಮೆಣಸಿನ್ಕಾಯ್...!


ಭಾರತೀಯ ಪತ್ರಿಕೋದ್ಯಮ ಅರ್ಥೈಸಿಕೊಳ್ಳುವುದಕ್ಕೆ ಪಾಶ್ಚತ್ಯ ಅಳತೆ ಪಟ್ಟಿಗಳು. ಅರ್ಥಾತ್ ಸಿದ್ಧಾಂತ. ಸ್ವಂತಿಕೆ ದೃಷ್ಟಿಕೋನ ಹೊಂದದ ಕಾರಣಕ್ಕಾಗಿಯೇ ಭಾರತೀಯ ಪತ್ರಿಕಾ ರಂಗ (ಟೆಲಿವಿಷನ್ ಸೇರಿದಂತೆ) ವಸಾಹತುಶಾಹಿ ಮನೋ ಸ್ಥಿತಿಯಲ್ಲಿಯೇ ಇದೆ. ಇದಕ್ಕೊಂದು ಉದಾಹರಣೆ; ಇಂಗ್ಲೇಡ್ ರಾಜ ಮನೆತನದ ವಿಲಿಯಂ-ಕೇಟ್ ಮದುವೆಯನ್ನು ಇಲ್ಲಿ ಸಂಭ್ರಮಿಸಿದ್ದು. ಈ ಕಾರಣದಿಂದಲೇ ಅಭಿವೃದ್ಧಿ ಪತ್ರಿಕೋದ್ಯಮವನ್ನು ಪೂರ್ಣ ಅಳವಡಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ತನ್ನ ನೆಲೆಯಾದರೂ ಏನು ಎಂಬುವುದನ್ನು ಕಂಡು ಕೊಳ್ಳುವುದಕ್ಕೂ ಆಗಿಲ್ಲ. ಆದ್ದರಿಂದಲೇ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪಠ್ಯ,  ಪಾಶ್ಚಿಮಾತ್ಯ ದೃಷ್ಟಿಕೋನಗಳಿಂದಲೇ ರೂಪಿತ. ಇಂಥ ಕಲಿಕೆ ಪತ್ರಿಕಾ ರಂಗದ ಹೊಸ್ತಿಲಿಗೆ ತಂದು ನಿಲ್ಲಿಸುತ್ತದೆಯೇ ಹೊರತು ವಾಸ್ತವವಾದಿ ನೆಲೆಯಲಿ ಈಸಾಡುವುದನ್ನು ಕಲಿಸುವುದಿಲ್ಲ. ಹಲವೊಮ್ಮೆ ಇದು ಹೇಗಿರುತ್ತೆಂದರೆ ಪ್ರವಾಹದ ಎದುರು ಈಸಲೇಬೇಕಾದ ಇಲ್ಲ ಸೋತು ದಡ ಸೇರಬೇಕಾದ ಸ್ಥಿತಿ. ಇಂಥ ಪರಿಸ್ಥಿತಿಯನ್ನು 'ಮೀಡಿಯಾ ಮಿರ್ಚಿ' ಅನಾವರಣಗೊಳಿಸತ್ತಾ; ಸಿದ್ಧತೆ ಹೇಗಿರಬೇಕು ಎನುವುದನ್ನು ವಿವರಿಸುತ್ತಾ  ಹೋಗುತ್ತದೆ


'ಪೇಪರ್ ಬದಲಾಗಿವೆ, ಟಿವಿ ಬದಲಾಗಿವೆ, ರೇಡಿಯೋ ಬದಲಾಗಿವೆ. ಏನು ಬದಲಾಗಿವೆ, ಯಾಕೆ ಬದಲಾಗಿವೆ ಅನ್ನೋದೆ ಗೊತ್ತಾಗದೆ ತಬ್ಬಿಬ್ಬಾಗಿದ್ದೇವೆ. ನಾನು ಬೆಂಗಳೂರು ಯೂನಿವರ್ಸಿಟಿಲಿ ಜರ್ನಲಿಸಂ ಓದುವಾಗ ಕನ್ನಡ ಪೇಪರ್ ಗಳಲ್ಲಿ ಕೆಲಸ ಮಾಡೋದು ಹೇಗೆ ಅಂತ ಕಲಿಸಲಿಲ್ಲ. ಅಮೆರಿಕಾ, ಇಂಗ್ಲೆಂಡ್ ಪೇಪರ್ ಹೇಗಿರುತ್ತೆ ಅಂತ ಕಲಿಸಿಬಿಟ್ಟರು. ಇನ್ನು ಮೀಡಿಯಾ ಅಂದ್ರೇನು, ಅದನ್ನ ಹೇಗೆ ನೋಡಬೇಕು ಮತ್ತು ಹೇಗೆ ವಿಮರ್ಶಿಸಬೇಕು ಅನ್ನೋದನ್ನಾದ್ರೂ ಅವ್ರು ಹೇಗೆ ಹೇಳಿ ಕೊಡ್ತಾರೆ'....?  


ಎರಡೂವರೆ ದಶಕದ ನಂತರವಾದ್ರೂ ಜಿ.ಎನ್.ಮೋಹನ್ ಹೇಳಿದ ಸತ್ಯ ಬದಲಾಗಿದೆಯೇ...? ಖಂಡಿತಾ ಇಲ್ಲ. ಇವತ್ತಿಗೂ 'ನಾನು' ಎನುವ ಪದದಲಿ ಯಾರೂ ಬೇಕಾದರೂ ಕೂರಬಹುದು. ಯೂನಿವರ್ಸಿಟಿ ಹೆಸರುಗಳು ಬದಲಾಗಬಹುದು. ಆದರೆ ಪತ್ರಿಕೋದ್ಯಮ ಕಲಿಕೆ ಮಾತ್ರ ಸ್ಥಾವರವಾಗಿಯೇ ಉಳಿದಿದೆ.


ಸ್ವತಃ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ; ನಂತರ ಪತ್ರಿಕಾ ರಂಗದಲಿ ಈಸು ಹೊಡೆಯುತಾ ಅನೇಕ ಸಿಹಿ-ಕಹಿ ಸತ್ಯಗಳಿಗೆ ಮುಖಾಮುಖಿಯಾದ ಕಾರಣದಿಂದಲೇ ಮೋಹನ್ ಅವರಿಗೆ ಪತ್ರಿಕೋದ್ಯಮ ಅಂದರೆ ಹೇಗಿರಬೇಕು ಎಂದು ಹೇಳುವ ಅಥೆಂಟಿಸಿಟಿ ಲಭಿಸಿದೆ. ಆದ್ದರಿಂದಲೇ ನಾಲ್ಕೈದು ಪುಸ್ತಕಗಳಿಂದ ಸರಕುಗಳನ್ನು ತೆಗೆದು ಬರೆದ ಪುಸ್ತಕಕ್ಕಿಂತ 'ಮೀಡಿಯಾ ಮಿರ್ಚಿ' ಭಿನ್ನವಾಗಿದೆ.'ನಾಳೆ ಏನಾಗುತ್ತೆ  ಅನ್ನೋದನ್ನ ಮಾಧ್ಯಮಗಳು ಯೋಚಿಸಬೇಕು ಜೊತೆಗೆ ಅದನ್ನು ಹೇಗೆ ಮಂಡಿಸಬೇಕು ಅಂತಲೂ ಗೊತ್ತಿರಬೇಕು' ಎಂದು ಖಡಕ್ಕಾಗಿ ಹೇಳುವುದಕ್ಕೂ ಸಾಧ್ಯವಾಗಿದೆ


ಫೀಲ್ಡಿನಲಿರುವ ಪತ್ರಕರ್ತ ಎಷ್ಟು ಚುರುಕಾಗಿರಬೇಕೆಂದರೆ ನಾಲ್ಕೂ ನಿಟ್ಟಿನಿಂದಲೂ ನಡೆಯುವ ಸುದ್ದಿಗಳ ಸುಳಿವು ನಿರಂತರ ಲಭಿಸುತ್ತಲೇ ಇರಬೇಕು. ಇದಿಲ್ಲದಿದ್ದರೆ ಆಗುವ ಅನಾಹುತವೇನು...? ಇದರ ಬಗ್ಗೆ ಮೀಡಿಯಾ ಮಿರ್ಚಿ ವಿವರಿಸುತ್ತದೆ. ' ಪತ್ರಿಕೋದ್ಯಮಕ್ಕೆ ಬರುವವರಿಗೆ ಸುದ್ದಿ ನಾಸಿಕ ಇರಬೇಕು. ಎಲ್ಲೇ ಸುದ್ದಿ ಆಗಲಿ ಅದು ಅವರಿಗೆ ಬಡಿಲೇಬೇಕು ಅಂತಾರೆ. ಆದರೆ ಈಗ ಆ ಮೂಗುಗಳಿಗೆ ಏನಾಗಿದೆ? ವಾಸನೆ ಹಿಡಿಯಲಾಗದ ರೋಗವೂ ಒಂದಿದೆ. ಅದಕ್ಕೆ ansomia ಅಂತಾರೆ. ಒಂದು ವೈಯಕ್ತಿಕ ಕಾರಣದ ಆತ್ಮಹತ್ಯೆಗೂ ರೈತರ ಆತ್ಮಹತ್ಯೆಗೂ ಇರುವ ವ್ಯತ್ಯಾಸ ಅಳಿಸಿಹೋಗುತ್ತಿದೆ. ಪತ್ರಿಕೋದ್ಯಮ ರೈತರ ಆತ್ಮಹತ್ಯೆಯನ್ನೂ ಒಂದು ಕ್ರೈಂ ವರದಿಯಂತೆ ನೋಡುತ್ತಾ ಬಂದು ಸಾಕಷ್ಟು ಕಾಲವಾಯಿತು. ಎಫ್ ಐ ಆರ್ ಗಳಲ್ಲಿ ರೈತರ ಸಾವಿಗೆ ಉತ್ತರ ಸಿಗುವುದಿಲ್ಲ. ರೈತರ ಸಾವು ಧುತ್ತನೇ ಎರಗಿಬರುವುದಲ್ಲ. ನಿಧಾನಕ್ಕೆ ಹೊಂಚಿ ಹಾಕುತ್ತಾ ಬರುತ್ತದೆ ಎಂಬುದು ಗೊತ್ತಾಗುತ್ತಲೇ ಇಲ್ಲ. ರೈತರ ಆತ್ಮಹತ್ಯೆ ಒಂದು ಸಮಾಜವೇ ನರಳುವಿಕೆಯಲ್ಲಿರುವುದರ ಸೂಚನೆ ಎಂದು ಗ್ರಹಿಸಬೇಕು'

ಧುತ್ತೆಂದು ಬಂದು ಎರಗುವ ಘಟನೆ-ದುರ್ಘಟನೆಗಳಿಗೆ ಮುಖಾಮುಖಿಯಾಗಲು ಮುದ್ರಣ ಮತ್ತು ಟೆಲಿವಿಷನ್ ಮಾಧ್ಯಮಗಳು ಹೇಗೆ ಸಿದ್ಧವಾಗಿರಬೇಕು ಎಂಬುದನ್ನು ಅನುಭವಾಧರಿತ ಘಟನೆಗಳಿಂದಲೇ ವಿವರಿಸುತ್ತಾ ಹೋಗುತ್ತಾರೆ. ಆವಿಷ್ಕಾರವಾಗುತ್ತಲೇ ಇರುವ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಬಗ್ಗೆಯೂ ತಿಳಿಸುತ್ತಾರೆ. 


'ಮೀಡಿಯಾ ಮಿರ್ಚಿಯಲಿ ಪಿ. ಸಾಯಿನಾಥ್, ರಾಮೋಜಿರಾವ್ ಮತ್ತು ಟೆಡ್ ಟರ್ನರ್ ಇತ್ಯಾದಿ ಮಾಧ್ಯಮ ಘಟಾನುಘಟಿಗಳೆಲ್ಲ ಸಂದರ್ಭನುಸಾರವಾಗಿ ಬಂದು ಹೋಗುತ್ತಾರೆ. ಇವರೆಲ್ಲರ ಅನುಭವಗಳನ್ನು ಅರಿತುಕೊಂಡ ಮೋಹನ್ ಹೇಳುವುದು ' ಇವತ್ತು ಜರ್ನಲಿಸಂ ಅನ್ನೋದು ಉಲ್ಟಾ-ಪಲ್ಟಾ ಆಗೋಗಿದೆ. ಜನರ ಸುದ್ದಿ ರಾಜಕಾರಣಿಗಳಿಗೆ ತೋರಿಸಬೇಕಿತ್ತು. ಆದ್ರೆ ರಾಜಕಾರಣಿಗಳ ಸುದ್ದಿ ಜನರಿಗೆ ತೋರಿಸ್ತಾ ಕೂತಿದೀವಿ'......! ಪ್ರಜೆಗಳಿಗೆ ನಿಷ್ಠನಾದ ಪತ್ರಕರ್ತ ಮಾತ್ರ ಹೀಗೆ ಹೇಳೋದಿಕ್ಕೆ ಸಾಧ್ಯ ಅಲ್ಲವೇ....?

ವಿಜಯ ಕರ್ನಾಟಕ ಪತ್ರಿಕೆಯಲಿ ಸಾಪ್ತಾಹಿಕ ಅಂಕಣವಾಗಿ ಪ್ರಕಟವಾಗುತ್ತಿದ್ದ 'ಮೀಡಿಯಾ ಮಿರ್ಚಿಯನು ಪುಸ್ತಕ ರೂಪದಲ್ಲಿ ಓದುವುದೂ ಸೊಗಸು. ಪತ್ರಿಕಾ ರಂಗದ ಅನುಭವಗಳಿಗೆ ಮುಖಾಮುಖಿಯಾಗಲು ಬಯಸುವ ಭವಿಷ್ಯದ ಪತ್ರಕರ್ತರು ಮತ್ತು ವರ್ತಮಾನದ ಪತ್ರಕರ್ತರೂ ಓದಲರ್ಹವಾಗಿದೆ 'ಮೀಡಿಯಾ ಮಿರ್ಚಿ'

ಪ್ರತಿ ಅಧ್ಯಾಯದ ಕೊನೆಯಲಿ ಸುದ್ದಿಗೆ ಗುದ್ದು; ಓದುಗರಲಿ ಮುಗುಳ್ನಗೆ ಮೂಡಿಸುವ; ಹುಬ್ಬೇರಿಸುವಂಥ ಕೆಂಪು ಮೆಣಸಿನ್ಕಾಯ್ ಇದೆ. ಅಂಥದೊಂದು.......


ಹಿರಿಯ ಪತ್ರಕರ್ತ, ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹದ ಸಿ.ಎಂ.ರಾಮಚಂದ್ರ ಅವರು ಬರಾಕ್ ಒಬಾಮ ಬಗ್ಗೆ ಒಂದು ಪುಸ್ತಕ ಬರೆದಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಅದನ್ನ ಒಬಾಮಗೆ ಕೊಟ್ಟು ಬರೋದಿಕ್ಕೆ ಸರ್ಕಾರದಿಂದ ಹಣ ಕೊಟ್ಟು ರಾಮಚಂದ್ರ ಅವರನ್ನು ಅಮೆರಿಕಾಗೆ ಕಳಿಸ್ತೀನಿ ಅಂತ ಘೋಷಿಸಿದ್ದಾರೆ.
ನಾನು ಅಂಜಲೀನಾ ಜೋಲಿ ಬಗ್ಗೆ ಪುಸ್ತಕ ಬರೀಬೇಕು ಅಂತ ಇದ್ದೀನಿ. ಮುಖ್ಯಮಂತ್ರಿಗಳೇ ಬಿಡುಗಡೆ ಮಾಡ್ಬೇಕು ಅನ್ನೋದು ನನ್ನ ಆಸೆ.......!

2 comments:

 1. nimma aase eederali haage maattondu vishya nimma jothe ge maatobbarannu karedoyyuva avakaasha sikre nannanu mareye bedi ;)

  ReplyDelete