• ಮುಖಪುಟ
 • ಸಿನಿಮಾ
 • ದೇಗುಲ ಸರಣಿ
 • ರಾಜಕೀಯ
 • ಭಾಷೆ
 • ಸಾಹಿತ್ಯ
 • ಪರಿಸರ
 • ರಂಗ ಕಲೆ
 • ಮಾಧ್ಯಮ
 • ಪ್ರವಾಸ
 • ಜೀವನಶೈಲಿ
 • ನನ್ನ ಬಗ್ಗೆ
 • ಸಂಪರ್ಕಿಸಿ

ಬದಲಾವಣೆಗೆ ಬೇಕಾದ ಸನ್ನಿವೇಶಗಳ ನಿರ್ಮಾಣ

ಭ್ರಷ್ಟಾಚಾರದ ಗಂಗೋತ್ರಿಯಾದ ಈ ವ್ಯವಸ್ಥೆಯನ್ನು ಜನರ ಪ್ರಜ್ಞಾಪೂರ್ವಕ ಭಾಗೀದಾರಿಕೆ ಮತ್ತು ಸಮರಶೀಲ ಜನರ ಚಳವಳಿಯ ಮೂಲಕ ಬದಲಿಸುವ ಮೂಲಕ ಮಾತ್ರ ಭ್ರಷ್ಟಾಚಾರ ನಿಲ್ಲುತ್ತದೆಇದು 'ಅಣ್ಣಾ ಹಜಾರೆ- ಕೊನೆಗೂ ಯಾರ ಹರಕೆಯ ಕುರಿಯಾದರು? ಹಜಾರೆ ಗೆದ್ದರು..ಆದರೆ ಭ್ರಷ್ಟಾಚಾರ ಸೋಲಲಿಲ್ಲ!' ಲೇಖನದ ಕೊನೆ ವಾಕ್ಯಗಳು. ನಾನು ವೈಯಕ್ತಿಕವಾಗಿ ಅಪಾರವಾಗಿ ಗೌರವಿಸುವ ಮತ್ತು ಸಂಕೀರ್ಣತೆಗಳನ್ನು ಪರಿಹರಿಸಿ ಸೀದಾ ಸಾದಾ ಉತ್ತರವನ್ನು ನಮ್ಮ ಮುಂದಿಡಲು ಪ್ರಯತ್ನಿಸುವ ಶಿವಸುಂದರ್ ಅದೇಕೋ ಈ ಸಂದರ್ಭದಲ್ಲಿ ತುಂಬ ಗೊಂದಲದಲ್ಲಿದ್ದಾರೆ ಅನಿಸುತ್ತದೆ. ಜನರ ಪ್ರಜ್ಞಾಪೂರ್ವಕ ಭಾಗೀದಾರಿಕೆ ಮತ್ತು ಸಮರಶೀಲ ಜನರ ಚಳವಳಿಯ ಮೂಲಕ ಬದಲಿಸುವ ಮೂಲಕ ಮಾತ್ರ ಭ್ರಷ್ಟಾಚಾರ ನಿಲ್ಲುತ್ತದೆಎಂದಿದ್ದಾರೆ. ಹಾಗಿದ್ದರೆ ಭ್ರಷ್ಟಚಾರದ ವಿರುದ್ಧ ಇಂಡಿಯಾಎಂಬ ಸ್ವರೂಪವನ್ನು ತೆಗೆದುಕೊಳ್ಳುವ ಹಾದಿಯಲ್ಲಿ ಸಾಗುತ್ತಿರುವ ಚಳವಳಿಯಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿಸಿಕೊಂಡವರಿಲ್ಲವೇ. ಜನಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಚಳವಳಿಗೆ ಮಾಧ್ಯಮಗಳು ಯಾವುದೇ ಕಾರಣಕ್ಕಾದರೂ ಬೆಂಬಲ ನೀಡಿರಲಿ ಇದರಿಂದ ಬಹುಸಂಖ್ಯಾತರು ಈ ಮಸೂದೆ ಬಗ್ಗೆ ಮೇಲ್ಮಟ್ಟದಲ್ಲಾದರೂ ತಿಳಿವಳಿಕಸ್ಥರಾದರು ಎಂಬುದನ್ನು ನಿರಾಕರಿಸಲು ಸಾಧ್ಯವೇ...? 
ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಅನೇಕ ಬೋಧಕರು ಈ ಚಳವಳಿಯಲ್ಲಿ ಅಪ್ರಜ್ಞಾಪೂರ್ವಕವಾಗಿ ತೊಡಗಿಸಿಕೊಂಡಿದ್ದಾರೆ ಎನ್ನಲು ಸಾಧ್ಯವೇ. ಹಿಂಡಿ ಹಿಸುಕುತ್ತಿರುವ ಭ್ರಷ್ಟಾಚಾರದ ವಿರುದ್ಧ ಜನಸಾಮಾನ್ಯರಿಗೆ ಆಕ್ರೋಶವಿಲ್ಲವೇ. ಖಂಡಿತ ಇದೆ ಮತ್ತು ಚಳವಳಿಯಲ್ಲಿ ಭಾಗವಹಿಸಿದ ಬಹುತೇಕರು ಪ್ರಜ್ಞಾಪೂರ್ವಕವಾಗಿಯೇ ಈ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಆಂದೋಲನದ ಸಾಂಸ್ಥಿಕ ಸ್ವರೂಪದ ಜೊತೆಗೆ ಬೇರೆ ಬೇರೆ ಪ್ರತಿಭಟನೆ ಹೋಲಿಸುವುದು ಎಷ್ಟರ ಮಟ್ಟಿಗೆ ಸರಿ. ಭ್ರಷ್ಟಾಚಾರ ಪ್ರತಿಯೊಬ್ಬರಿಗೂ ಬಿಸಿ ಮುಟ್ಟಿಸಿದೆ, ವೈಯಕ್ತಿಕ ಸ್ತರಗಳಲ್ಲಿ ಅಪಾರ ನೋವುಂಟು ಮಾಡಿದೆ. ಇಂಥ ಸಂದರ್ಭದಲ್ಲಿ ಅಣ್ಣಾ ಹಜಾರೆ ಅವರಿಗೆಲ್ಲ ಧ್ವನಿಯಾದರು. ಇಂಥ ಧ್ವನಿ ಎದ್ದಿರುವುದು ಸ್ವಾಗತಾರ್ಹ.
ಸಮಾಜಶಾಸ್ತ್ರದ ವಿದ್ಯಾರ್ಥಿಯಾಗಿ ಮತ್ತು ಓರ್ವ ಪತ್ರಕರ್ತನಾಗಿ ಇದನ್ನು ನಾನು ಕ್ರಾಂತಿ ಎನ್ನುವುದಿಲ್ಲ. ಆದರೆ ಇದನ್ನೊಂದು ಕ್ರಾಂತಿ ಸ್ವರೂಪಕ್ಕೆ ಕೊಂಡೋಯ್ಯಬಹುದಾದ ಎಲ್ಲ ಕಿಡಿಗಳು ಇದರಲ್ಲಿವೆ. ಕಳೆದ ಆರು ದಶಕಗಳಿಂದ ಇಂಥದೊಂದು ಸನ್ನಿವೇಶ ನಿರ್ಮಾಣವಾಗಿರಲಿಲ್ಲ. ಜೆಪಿ ಚಳವಳಿಗೂ ಹೆಚ್ಚಿನ ಪ್ರಖರತೆ ಈ ಚಳವಳಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ನೋವುಂಡವರ ಮತ್ತು ವ್ಯವಸ್ಥೆ ಬಗ್ಗೆ ಕಿಡಿ ಕಾರುವವರ ಸಂಖ್ಯೆ ಹೆಚ್ಚಿರುವುದು ಜೊತೆಗೆ ಮಾಧ್ಯಮಗಳ ಮಹಾಪೂರದ ಸುದ್ದಿಗಳು. ಇದನ್ನೆಲ್ಲ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕಾಗಿದೆ. ಈಜಿಪ್ಟ್ ಮತ್ತು ಲಿಬಿಯಾದ ಚಳವಳಿಗಳಲ್ಲಿ ಎದುರು ವ್ಯವಸ್ಥೆಯಿಲ್ಲ. ವ್ಯಕ್ತಿಗಳಿದ್ದಾರೆ. ಅಲ್ಲಿ ಗುರಿಯಿರುವಂತೆ-ಶತ್ರುವಿರುವಂತೆ ಇಲ್ಲಿಯೂ ಗುರಿ ಮತ್ತು ಶತ್ರು ಎರಡೂ ಇದೆ. ಆ ಶತ್ರುವೇ ಭ್ರಷ್ಟಾಚಾರದ ವ್ಯವಸ್ಥೆ. ಇದರ ವಿರುದ್ಧ ಕೂಗು ಎದ್ದಿರುವುದು ಪ್ರಬಲ ಬೆಳವಣಿಗೆ. ಅಷ್ಟಕ್ಕೂ ಸಾಮಾನ್ಯವಾಗಿ ಎಲ್ಲ ಚಳವಳಿಗಳ ಮುಂಚೂಣಿಯಲ್ಲಿರುವವರು ಮಧ್ಯಮವರ್ಗದವರೇ. ವ್ಯವಸ್ಥೆ ಬದಲಿಸುವ ತಾಕತ್ತು ಇರುವುದು ಇವರಿಗೆ.
ಸಮರಶೀಲ ಜನರ ಚಳವಳಿಯ ಮೂಲಕ ಬದಲಿಸುವ ಮೂಲಕ ಮಾತ್ರ ಭ್ರಷ್ಟಾಚಾರ ನಿಲ್ಲುತ್ತದೆಹೀಗೆಂದರೆ ಏನು…? ಬಂದೂಕಿನ ನಳಿಗೆ ಮುಖಾಂತರವೇ ಬದಲಾವಣೆ ಆಗಬೇಕೆನ್ನವುದೆ...?. ಈಗ ನಡೆಯುತ್ತಿರುವ ಚಳವಳಿ ತನ್ನಷ್ಟಕ್ಕೆ ಶಾಂತಿಯುತ ಸಮರಶೀಲ ಸ್ವರೂಪ ಪಡೆದುಕೊಳ್ಳುತ್ತಿರುವುದು ಕಾಣುತ್ತಿದೆಯಲ್ಲವೇ. ಅಷ್ಟಕ್ಕೂ ಬದಲಾವಣೆ ಎನ್ನುವುದು ಧುತ್ತನೇ ಆಗುವುದಲ್ಲ. ಬದಲಾವಣೆಗೆ ಬೇಕಾದ ಸನ್ನಿವೇಶಗಳು ನಿರ್ಮಾಣವಾಗುತ್ತಿದೆ ಎಂದು ಆಶಿಸಬಾರದೇಕೆ...?

'ಅವಧಿ'ಯಲ್ಲಿ ( http://avadhimag.com )  ಪ್ರಕಟವಾದ    ಶಿವಸುಂದರ್ ಅವರ 'ಅಣ್ಣಾ ಹಜಾರೆ- ಕೊನೆಗೂ ಯಾರ ಹರಕೆಯ ಕುರಿಯಾದರು?
ಹಜಾರೆ ಗೆದ್ದರು..ಆದರೆ ಭ್ರಷ್ಟಾಚಾರ ಸೋಲಲಿಲ್ಲ! '  ಲೇಖನಕ್ಕೆ ನೀಡಿದ ಪ್ರತಿಕ್ರಿಯೆ.

No comments:

Post a Comment